
ಹೊಲಗಳೆಂದರೆ ಅವು ಗೀಜಗನ ಗೂಡು; ಜೀವವೈವಿಧ್ಯತೆಯ ಬದುಕಿನ ಬೀಡು. ಒಂದೊಂದೇ ಹೊಸ ಹುಟ್ಟಿನ ಹುಟ್ಟಾಣಿಕೆಯ ಕಾಣುವ ಸೋಜಿಗಗಳ ತಾಣಗಳು ಹೊಲ. ಬೀಜಗಳು ಮೊಳೆಯುತ್ತವೆ, ಬಳ್ಳರಿಯುತ್ತವೆ ಬೀಜಗಳು ಹುಟ್ಟಿ ಹಲವಾರು.
ಹಕ್ಕಿಗಳು ಉಣ್ಣಲು ಬಂದು ಗಿಡಗಳ ಬುಡಗಳನ್ನೇ ತಾವು ಮಾಡಿಕೊಂಡು ಹುಲ್ಲು ಗರಿ ಗೂಡು ಎಣೆದು ಮೊಟ್ಟೆಗಳನ್ನು ಇಟ್ಟು ಮರಿ ಮಾಡುತ್ತಿರುತ್ತವೆ ಕಾವಿಗೆ ಕೂತು, ಅಕ್ಕೆಅಕ್ಕೆಗೂ ಕಾವು ಕೊಟ್ಟು. ಹಕ್ಕಿ ಗೂಡುಗಳ ಮನೆಯಿಂದ ಮನೆಗೆ ಮೂಸಿರಿಯುತ್ತಾ, ಮುಸುಣಿ ಇಕ್ಕಿ ಮೊಟ್ಟೆ ಹುಡುಕಿ ಮಸಕಾಡಿ ಹರಿಯುವ ಸಿಗುಳು ನೀರಿನ ಹಾಗೆ ಹರಿದಾಡುವ ಹಾವುಗಳು, ಹೂ ಮರಿಗಳ ಮೇಲೆ ಹದ್ದಿನ ಕಣ್ಣು ಬಿದ್ದು ಹಾರಿ ಬರುವ ಲಗಡಗಳು, ಬದುಗಳ ಮೇಲೆ ಆಗಾಗ ಯುದ್ದಕ್ಕೆ ಬೀಳುವ ಹಾವು ಮುಂಗುಸಿಗಳು. ಸರಸಕ್ಕಿಳಿದ ಯಣೆ ಹಾವುಗಳು. ಯಾವಾಗಲೋ ಹೊಳಪಾದ ಪೊರೆ ಬಿಟ್ಟು ಹೋದ ಬಿಸಿಲಿನ ಹೊಳೆಗೆ ಮಿನುಗುಟ್ಟುವ ಹರಿದು ಹೋದ ಹಾವಿನ ಮೊರೆಯ ಚೆಲ್ಲಾಪಿಲ್ಲಿಯಾದ ತುಂಡು ತಂಡಾದ ಉದ್ದನೆಯ, ತುಂಡನೆಯ ತುಣುಕುಗಳು ಹೀಗೆ ವೈವಿಧ್ಯಮಯ ದರ್ಶನಗಳ ನಡುವೆ ಹೊಲಗಳಲ್ಲಿ ಫಸಲು ಬೆಳೆಕಟ್ಟುತ್ತಿರುತ್ತದೆ.
ಹುಲ್ಲಿನ ಜೊತೆಯಲ್ಲಿ ಯಳೆಯ ಸಿಡಿಕಾಳು ಗಿಡಗಳನ್ನೂ ಹೊರೆಯೊಳಗೆ ತರುತಿದ್ದೆವು. ಕಾಯಿ ಬಲಿತ ಸಿಡಿಕಾಳು ಗಿಡಗಳನ್ನು ಕಂತೆ ಕಟ್ಟಿ ಮನೆಯ ಮೇಲ್ಚಾವಣಿಯಲ್ಲಿ ಇಡುತಿದ್ದೆವು. ಒಣಗಿದಾಗ ಎಳ್ಳು ಕಾಯಿ ಕೊಡವಿಕೊಳ್ಳುವ ಹಾಗೆ ಸುಳುಪೆ ಕಡ್ಡಿಯಲ್ಲಿ ಬಡಿದು ಕಡವಿಕೊಂಡರೆ ಸ್ಯಾರೆ, ಬೊಗಸೆ ಸಿಡಿಕಾಳು ಹೊರಡುತಿದ್ದವು. ಹೊಲಕ್ಕೆ ಬಿತ್ತದೆಯೂ ಕಾಲದಿಂದಲೂ ಸಿಡಿಕಾಳು ಅದರ ಕಾಲಕ್ಕೆ ಅದು ನಮ್ಮ ಹೊಲಗಳಲ್ಲಿ ಈಗಲೂ ಹುಟ್ಟುವುದು. ಪಗುಸಟ್ಟೆ ನಮ್ಮ ಹೊಲಗಳಲ್ಲಿ ಬಿತ್ತದೆಯೂ ಬೆಳೆಯುವ ಬೆಲೆಬಾಳುವ ಬೆಳೆ. ಅದೇಗೋ ಎಂಬಂತೆ ಬೆಳೆಯೊಂದಿಗೆ ಹೊಲಗಳಲ್ಲಿ ಅಲ್ಲೊಂದು ಇಲ್ಲೊಂದು ಬೆಳೆಯುತ್ತದೆ. ನಾಟಿ ಮಾಡಿದ್ದರ ಹಾಗೆ ನೆಲದೊಳಗೆ ಉಳಿದು ಬೆಳೆಯುವ ಸಸ್ಯ.
ತಿಳಿ ನೀಲಿ ಹೂ ಬಿಡುವ ಸಿಡಿಕಾಳುಗಿಡ ಒಳ್ಳೆಯ ವರವಾದ ನೆಲದಲ್ಲಿ ಒದೆಯಾಗಿ, ಗಿಡ ಪುಷ್ಟಿಯಾಗಿ ಬೆಳೆಯುತ್ತದೆ ಒಳ್ಳೆಯ ಕಳಕಳವಾಗಿ. ಹೂವಾಗುವ ಕಾಲಕ್ಕೆ ಹೊಲಗಳಲ್ಲಿ ಅದೊಂದು ಅಪರೂಪದ ಸೊಗಸು. ಇದರ ಹುಟ್ಟಾಣಿಕೆ ಇತ್ತೀಚೆಗೆ ಕಮ್ಮಿಯಾಗಿದೆ. ಇದೇ ತರವಾಗಿ ಒಂದು ಪುಟ್ಟ ಗಿಡ ಈಗೀಗ ಹೊಲಗಳಲ್ಲಿ ಹೆಚ್ಚು ಹೆಚ್ಚಾಗಿ ಬೆಳೆಯನ್ನು ಮಗ್ಗಲು ಮಾಡಿ ಬೆಳೆಯುತ್ತದೆ, ಅದು ಕೋಳಿ ಕಾಲಿನ ಗಿಡ.
ಸಿಡಿಕಾಳು ಗಿಡವನ್ನು ರಾಸುಗಳು ಎಳೆಯದಾಗಿದ್ದಾಗ ತಿನ್ನುತ್ತವೆ. ಆದರೆ, ಇದನ್ನು ಬೀಜ ಮಾಡಿ ಮಡಗುವುದು ಸಿಡಿಯಾಕುವುದಕ್ಕೆ ಮಾತ್ರ. ಉಳಿದ ಹಾಗೆ ಬಿತ್ತದಿದ್ದರೂ ಭೂಮಿಯೊಳಗೆ ಉಳಿದು ಅದರ ಕಾಲಕ್ಕೆ ಅದು ಬೆಳೆದು ಪಸಲು ನೀಡುವುದು. ಬೀಜ ಭೂಮಿಯಲ್ಲೇ ಉಳಿದು ಮಳೆಗಾಲದಲ್ಲಿ ಬೆಳೆದು ಕೊಯ್ಲು ಆಗುವಾಗ ಬಲಿಯುತ್ತದೆ ಕಾಯ್ದುಕೊಂಡು ವಾರ ಒಣಗಿಸಿ ಬಡಿದು ಕೊಡವಿಕೊಳ್ಳುವ ಹಾಗೆ. ಅಡುಗೆ ಮತ್ತು ಔಷಧಕ್ಕೆ ಸಿಡಿಕಾಳು ಹಳ್ಳಿ ಮನೆಗಳಲ್ಲಿ ಇಂದಿಗೂ ಬಳಕೆಯಾಗುತ್ತದೆ.
ಈಗ, ತೀರಾ ಕಮ್ಮಿಯಾದರೂ ಹಿಂದೆಲ್ಲಾ ಇದನ್ನು ಕೂಳೆ ಕಾಲದಲ್ಲಿ ಹೆಚ್ಚು ಹೆಚ್ಚು ಬೇರುಮುಂಟ ಕಿತ್ತು ಒಣ್ಣಾಕಿಕೊಳ್ಳುತಿದ್ದರು. ಪಾವು, ಸೇರು ಸಿಡಿಕಾಳು ಮಾಡಿಕೊಂಡು ಬಳಸುವ ಮೂಲಕ ಇಟ್ಟುಕೊಳ್ಳಲು ಬಯಸುವುದು ವಾಡಿಕೆ.