ಬೆಳೆಗಳಿಗೆ ಮಂಗಗಳ ಹಾವಳಿ ಅತಿಯಾಗಿದೆ. ಇದು ಎಷ್ಟರ ಮಟ್ಟಿಗೆ ಹೆಚ್ಚಿದೆಯೆಂದರೆ ಕೆಲವೊಂದು ಭಾಗಗಳಲ್ಲಿ ಕೃಷಿಕರು ಬೇಸಾಯ ಮಾಡುವುದನ್ನೇ ಬಿಟ್ಟಿದ್ದಾರೆ. ಇದು ಆಶ್ಚರ್ಯ. ಆದರೆ ನಿಜ. ವರ್ಷದ ಎಲ್ಲ ಋತುಮಾನಗಳಲ್ಲಿಯೂ ಇವುಗಳ ಕಾಟ. ಇದು ಎಷ್ಟರ ಮಟ್ಟಿಗೆ ಎಂದರೆ ಹಲವೆಡೆ ಬಿತ್ತನೆ ಮಾಡಿದ ಬೀಜಗಳನ್ನೂ ಅವುಗಳು ಕೆದಕಿ ತಿನ್ನುತ್ತವೆ. ಅವುಗಳ ಕಾಟ ನಿಯಂತ್ರಿಸಲು ಮಾಡಿದ ಉಪಾಯಗಳು ವಿಫಲವಾಗಿರುವಾಗ ಲೇಸರ್ ಗನ್ ಭರವಸೆಯಂತೆ ಕಾಣುತ್ತಿದೆ.
ವಿವಿಧ ಉಪಾಯಗಳು: ಮಂಗಗಳನ್ನು ಹಿಡಿಯಲು ಬೋನು ಹಿಡಿಯುವುದು, ಕುಡಿಕೆಯಲ್ಲಿ ಕಳಿತ ಹಣ್ಣು ತುಂಬಿ ಸತ್ತ ಹಾವು ಇಡುವುದು, ಗರ್ನಾಲು ಸಿಡಿಸುವುದು, ರೈಫಲ್ ನಿಂದ ಹಿಂಡಿನತ್ತ ಗುಂಡು ಹಾರಿಸುವುದು, ಪರಿಣಿತರಿಂದ ಅವುಗಳನ್ನು ಹಿಡಿಸಿ, ಕಾಡಿಗೆ ಬಿಡುವುದು, ಹುಲಿ ಪ್ರತಿಮೆ ಇಡುವುದು, ನಾಯಿಗಳಿಗೆ ಹುಲಿ ವೇಷ ಬಳಿದು ತಿರುಗಾಡಲು ಬಿಡುವುದು ಹೀಗೆ ನಾನಾ ಉಪಾಯಗಳನ್ನು ಕೃಷಿಕರು ಮಾಡಿದ್ದಾರೆ, ಮಾಡುತ್ತಿದ್ದಾರೆ. ಆದರೆ ಅವುಗಳು ಸ್ವಲ್ಪಕಾಲ ಪ್ರಯೋಜನಕಾರಿ ಎನ್ನಿಸುತ್ತವೆ. ನಂತರ ಅವುಗಳಿಗೆ ಹೆದರುವುದನ್ನು ಮಂಗಗಳು ಬಿಡುತ್ತವೆ.


ಮೊದಲಿಗೆ ಕಾಡಿನಂಚಿನ ಹಳ್ಳಿಗಳಿಗೆ ಮಂಗಗಳು ದಾಳಿ ಇಡುತ್ತಿದ್ದವು. ಕಾಡಿನಲ್ಲಿ ಅವುಗಳಿಗೆ ಬೇಕಾದ ಆಹಾರದ ಕೊರತೆಯೇ ಅದಕ್ಕೆ ಕಾರಣವಾಗಿತ್ತು. ಆದರೀಗ ನಾಡಿನ ಎಲ್ಲೆಡೆ ಅವುಗಳ ಬಾಧೆ ಇದೆ. ಗ್ರಾಮೀಣ ಪ್ರದೇಶಗಳಿಗೆ ಮಾತ್ರ ಅವುಗಳ ಕಾಟ ಸೀಮಿತವಾಗಿಲ್ಲ. ನಗರ-ಪಟ್ಟಣ ಪ್ರದೇಶಗಳಿಗೂ ಹರಡಿಕೊಂಡಿದೆ. ಇದರಿಂದ ಅಲ್ಲಿನ ನಿವಾಸಿಗಳು ಸದಾ ಮನೆಯ ಕಿಟಕಿ ಬಾಗಿಲು ಹಾಕಿಕೊಂಡು ಇರುವಂತಾಗಿದೆ.
ಹೆದರುವುದಿಲ್ಲ; ಹೆದರಿಸುತ್ತವೆ: ಕಾಡಿನಿಂದ ನಾಡಿಗೆ ಬಂದ ಹೊಸದರಲ್ಲಿ ಮನುಷ್ಯರು ಗದರಿದರೆ ಇವುಗಳು ಹೆದರುತ್ತಿದ್ದವು. ಆದರೆ ಈಗ ಹಿಂಡುಗಟ್ಟಲೆ, ಹಾಡುಹಗಲೇ ತಿರುಗಾಡುತ್ತವೆ. ರಸ್ತೆಗಳಲ್ಲಿಯೂ ಇವುಗಳನ್ನು ಕಾಣಬಹುದು. ಪಾದಚಾರಿಗಳು, ವಾಹನ ಸವಾರರು ಇವುಗಳಿಗೆ ಹೆದರಿಕೊಂಡೇ ಓಡಾಡುವಂತಾಗಿದೆ. ಮಂಗಗಳು ಅಟ್ಟಿಸಿಕೊಂಡು ಬಂದ ಕಾರಣ ಬೈಕ್ ನಿಂದ ಬಿದ್ದು ಗಾಯ ಮಾಡಿಕೊಂಡ ಸವಾರರ ಸಂಖ್ಯೆಯೂ ಅಪಾರ
ಸಾಮಾನ್ಯವಾಗಿ ತೋಟಗಳು ಹೆಚ್ಚಿರುವ ಪ್ರದೇಶದಲ್ಲಿ ಮಂಗಗಳ ಹಾವಳಿ ಅಧಿಕ. ಆದರೆ ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರಬೆಳೆಗಳಿಗೂ ಅವುಗಳು ದಾಳಿ ಇಡುತ್ತಿವೆ. ಕೊಯ್ಲಾಗಬೇಕಿದ್ದ ಫಸಲನ್ನು ತಿಂದು ಹಾಳು ಮಾಡುತ್ತವೆ. ಇವುಗಳು ತಿನ್ನುವ ಪ್ರಮಾಣಕ್ಕಿಂತ ಕಿತ್ತು ಹಾಕಿ ವ್ಯರ್ಥವಾಗುವಂತೆ ಮಾಡುವ ಫಸಲಿನ ಪ್ರಮಾಣವೇ ಅತ್ಯಧಿಕ.
ಭಾರಿಸದ್ದಿಗೂ ಬೆದರುತ್ತಿಲ್ಲ: ಮಂಗಗಳನ್ನು ದೂರ ಅಟ್ಟಲು ಕೃಷಿಕರು ಸಾಕಷ್ಟು ಉಪಾಯಗಳನ್ನು ಮಾಡಿದ್ದಾರೆ. ಮೊದಲಿಗೆ ಮಲೆನಾಡು ಪ್ರದೇಶದ ವ್ಯಕ್ತಿಗಳನ್ನು ಕರೆಯಿಸಿ ಅವರಿಂದ ಮಂಗಗಳನ್ನು ಹಿಡಿಸಿ ದೂರ ಪ್ರದೇಶಕ್ಕೆ ಬಿಡುತ್ತಿದ್ದರು. ಆದರೆ ಅವುಗಳು ಒಂದೆರಡು ದಿನ ಕಳೆಯುವುದರೊಳಗೆ ತೋಟದೊಳಗೆ ಮತ್ತೆ ಪ್ರತ್ಯಕ್ಷವಾಗುತ್ತಿದ್ದವು. ಇತ್ತೀಚೆಗೆ ಪ್ಲಾಸ್ಟಿಕ್ ಪೈಪ್ ಗಳು ಮಂಗಗಳನ್ನು ಓಡಿಸಲು ಬಳಕೆಯಾಗುತ್ತಿವೆ. ಆದರೆ ಕೆಲವೆಡೆ ಅವುಗಳಿಗೂ ಮಂಗಗಳು ಬೆದರುತ್ತಿಲ್ಲ.

ಪರಿಹಾರ ದೊರಕುವುದು ಕಷ್ಟ: ಮಂಗಗಳಿಂದ ಬೆಳೆ ಹಾಳಾದರೂ ಅದಕ್ಕೆ ಪರಿಹಾರ ಪಡೆಯುವುದು ಸುಲಭವಲ್ಲ. ಇದಕ್ಕಾಗಿ ಸೂಕ್ತವಾದ ಯೋಜನೆ ರೂಪುಗೊಂಡಿಲ್ಲ ಎನ್ನುತ್ತಾರೆ ಕೃಷಿಕರು. ಅತ್ತ ಬರ, ಇತ್ತ ಮಂಗಗಳ ಕಾಟ. ಒಂದು ವೇಳೆ ಅಲ್ಪ ಪ್ರಮಾಣದ ನೀರು ಬೆಳೆಸಿ, ಸಾಲಸೋಲ ಮಾಡಿ ಬೆಳೆ ಬೆಳೆದರೂ ಇವುಗಳ ಕಾಟದಿಂದ ಫಸಲು ದಕ್ಕುತ್ತಿಲ್ಲ. ಇದರಿಂದ ಕೃಷಿಕರ ಪರಿಸ್ಥಿತಿ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಇದರಿಂದ ಅವರು ಕಂಗಾಲಾಗಿ, ಹೊಸ ಉಪಾಯಗಳನ್ನು ಅರಸುತ್ತಾರೆ. ಹೀಗೆ ಮಾಡುವಾಗ ಕಂಡುಕೊಂಡ ಉಪಾಯವೇ ಲೇಸರ್ ಗನ್.
ಮೊದಲು ಕಾಡಾನೆ ಕಾಟ; ಈಗ ಮಂಗಬಾಧೆ: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶವೂ ಇದೆ. ಇಂಥಲ್ಲಿ ಕೃಷಿಕರು ಸಾಕಷ್ಟು ಸಾಹಸದಿಂದ ಕೃಷಿ ಮಾಡುತ್ತಾ ಬಂದಿದ್ದಾರೆ. ಮೊದಲು ಆನೆ, ಕಾಡು ಹಂದಿ, ಕಾಡೆಮ್ಮೆಗಳ ದಾಳಿಯಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪ್ರಯಾಸ ಪಡುತ್ತಿದ್ದರು. ಇತ್ತೀಚೆಗೆ ಅವುಗಳ ಬಾಧೆ ಅತ್ಯಂತ ಕಡಿಮೆಯಾಗಿದೆ. ಆದರೆ ಮಂಗಗಳ ಹಾವಳಿ ಹೆಚ್ಚಾಗಿದೆ.ಭತ್ತ, ಅಡಿಕೆ, ತೆಂಗು, ಏಲಕ್ಕಿ, ಗೇರು, ಮಾವು, ಕಾಫಿ ಮತ್ತು ತರಕಾರಿಗಳನ್ನು ಬೆಳೆಯುವ ಪ್ರದೇಶದಲ್ಲಿ ಮಂಗಗಳ ಹಾವಳಿ ಅತ್ಯಧಿಕ. ಸುಳ್ಯ ಭಾಗದಲ್ಲಿ ಈ ಬೆಳೆಗಳ ಕೃಷಿ ಇದೆ. ಕಾಫಿಕೃಷಿ ಕಡಿಮೆಯಾದರೂ ಕೆಲವು ಪ್ರಯೋಗಾತ್ಮಕ ರೈತರು ಇದನ್ನು ಬೆಳೆಯುವುದುಂಟು. ಇಂಥ ರೈತರಲ್ಲಿ ಶಿವ ಸುಬ್ರಮಣ್ಯ ಅವರೂ ಒಬ್ಬರು.

ಪುತ್ತೂರು- ಸುಳ್ಯ ನಡುವೆ ಪೆಲತಡ್ಕ ಇದೆ. ಇದು ಅನೇಕ ಸಣ್ಣಸಣ್ಣ ಗ್ರಾಮಗಳ ಸಮೂಹ. ಇಲ್ಲಿನ ಪಾಲ್ತಾಡ್ ಎಂಬಲ್ಲಿ ಶಿವ ಸುಬ್ರಮಣ್ಯ ಅವರು ಕೃಷಿ ಮಾಡುತ್ತಾ ಬಂದಿದ್ದಾರೆ. ಇವರ ಹಿರಿಯರು ಮೊದಲು ಭತ್ತವನ್ನೂ ಬೆಳೆಯುತ್ತಿದ್ದರು. ನಂತರ ತೋಟಗಾರಿಕೆ ಮಾಡಲು ತೋಡಗಿದರು. ಶಿವ ಸುಬ್ರಮಣ್ಯ ಅವರು ಪ್ರಧಾನವಾಗಿ ಅಡಿಕೆ-ತೆಂಗು-ಬಾಳೆ ಮತ್ತು ಮೆಣಸು ಬೆಳೆಯುತ್ತಾರೆ. ಬಹು ಮಹಡಿ ಕೃಷಿ ಪದ್ದತಿಯಲ್ಲಿ ಕೊಕ್ಕೊ, ಕಾಫಿ ಬೆಳೆಯುತ್ತಿದ್ದರು. ಆದರೆ ಇವುಗಳು ಪ್ರಧಾನ ಬೆಳೆಗೆ ಅಡ್ಡಿ ಉಂಟು ಮಾಡುತ್ತಿವೆ ಎನ್ನಿಸಿದ್ದರಿಂದ ಅವುಗಳನ್ನು ಕಡಿದು ಹಾಕಿದ್ದಾರೆ. ತೋಟದಲ್ಲಿಯೇ ಕಳಿಯಲು ಬಿಟ್ಟಿದ್ದಾರೆ
ಇವರು ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಹೀಗೆ ಮಾಡುವುದರಿಂದ ನೆಲ-ಜಲ-ವಾಯು ಮಾಲಿನ್ಯವಾಗದಂತೆ ನೋಡಿಕೊಳ್ಳಬಹುದು. ಆದ್ದರಿಂದ ಕಿಂಚಿತ್ತೂ ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನು ಬಳಕೆ ಮಾಡುವುದಿಲ್ಲ. ಹೀಗೆ ಮಾಡಿದರೆ ಪ್ರಕೃತಿಯಲ್ಲಿರುವ ಜೀವ ಸರಪಳಿಗೆ ಹಾನಿಯಾಗುತ್ತದೆ ಎಂದು ಭಾವಿಸಿದ್ದಾರೆ. ತೋಟಗಾರಿಕೆಯಲ್ಲಿ ಏಕಬೆಳೆ ಆಶ್ರಯಿಸಿದರೆ ನಷ್ಟ ಆಗುವ ಸಾಧ್ಯತೆ ಅತ್ಯಧಿಕ. ಆದ್ದರಿಂದ ಬೇರೆಬೇರೆ ಬೆಳೆಗಳನ್ನು ಬೆಳೆಯಬೇಕು. ಹೀಗೆ ಮಾಡಲು ಬಹು ಮಹಡಿ ಕೃಷಿ ಪದ್ಧತಿ ಅನುಕೂಲ. ಇದು ಅತ್ಯಂತ ವೈಜ್ಞಾನಿಕ. ಇದರಲ್ಲಿನ ಬೆಳೆ ಸಂಯೋಜನೆ ಲೆಕ್ಕಾಚಾರದಿಂದ ಕೂಡಿರುತ್ತದೆ. ಯಾವೊಂದು ಬೆಳೆಯೂ ಮತ್ತೊಂದು ಬೆಳೆಯ ಬೆಳವಣಿಗೆಗೆ ಅಡ್ಡಿಯಾಗದಂತೆ ಯೋಜನೆ ಮಾಡಲಾಗಿರುತ್ತದೆ. ಇದನ್ನು ಶಿವಸುಬ್ರಮಣ್ಯ ಅವರು ಅನುಕರಿಸುತ್ತಿದ್ದಾರೆ.
ಕೃಷಿಕ ಶಿವಸುಬ್ರಮಣ್ಯ ಅವರ ನೆಮ್ಮದಿಗೆ ಕಂಟಕ ಬಂದಿದ್ದು ಮನುಷ್ಯರಿಂದಲ್ಲ. ಮಂಗಗಳಿಂದ. ಇವುಗಳಿಂದ ತೋಟಗಾರಿಕೆ ಬೆಳೆಗಳನ್ನು ರಕ್ಷಿಸಿಕೊಳ್ಳು ಇವರು ಮಾಡದ ಉಪಾಯಗಳೇ ಇರಲಿಲ್ಲ. ಕೆಲವು ಸಮಯ ಕೆಲಸ ಮಾಡುತ್ತಿದ್ದ ಅವುಗಳು ನಂತರ ನಿಷ್ಪ್ರಯೋಜಕವಾಗುತ್ತಿದ್ದವು. ಈ ಕೃಷಿಕರು, ಸಮಸ್ಯೆಗಳು ಎದುರಾದರೆ ಅವುಗಳ ಪರಿಹಾರದ ಬಗ್ಗೆ ಅನ್ವೇಷಣೆ ನಡೆಸುತ್ತಿರುತ್ತಾರೆ. ಹೀಗೆ ಮಾಡುವಾಗ ಅವರಿಗೆ ಮಂಗಗಳನ್ನು ಹತೋಟಿ ಮಾಡಲು ಲೇಸರ್ ಗನ್ ಪರಿಣಾಮಕಾರಿ ಎಂದು ತಿಳಿಯಿತು. ಅದು ಸ್ಥಳೀಯವಾಗಿ ದೊರೆಯದ ಕಾರಣ ಆನ್ ಲೈನ್ ಮೂಲಕ ತರಿಸಿಕೊಂಡರು. ಅದಕ್ಕೂ ಮುನ್ನ ಅದರ ಸಾಧಕ-ಬಾಧಕಕಗಳ ಬಗ್ಗೆ ಅಧ್ಯಯನ ಮಾಡಿದ್ದರು.
ಇದು ಗುಂಡು ಸಿಡಿಸುವ ಗನ್ನಲ್ಲ: ಲೇಸರ್ ಗನ್ ಎಂದ ತಕ್ಷಣ ನಮ್ಮ ಕಲ್ಪನೆಗೆ ಬರುವುದೇ ಬೇರೆ. ಇದು ಸಣ್ಣ ಟಾರ್ಚ್ ಮಾದರಿ ಇದೆ.

ಆದರೆ ಇದರ ಸಾಮರ್ಥ್ಯ ದೊಡ್ಡದು. ಸುಮಾರು ಒಂದು ಕಿಲೋ ಮೀಟರ್ ಗಳಿಗಿಂತಲೂ ಹೆಚ್ಚು ದೂರ ಇದರ ಬೆಳಕು ಹಾಯುತ್ತದೆ. ಇದು ಕಾರ್ಯ ನಿರ್ವಹಿಸುವಂತೆ ಮಾಡಲು ಶೆಲ್ ಗಳನ್ನು ಬಳಸಬೇಕು. ಇದು ರೀ ಛಾರ್ಜಬಲ್. ಈ ಕುಟುಂಬದವರು ಮಂಗ ಓಡಿಸಲು ಬೇರೆಬೇರೆ ವಿಧಾನಗಳನ್ನು ಬಳಸಿ ನಿರಾಶೆಗೊಂಡಿದ್ದರು. ಲೇಸರ್ ಗನ್ ಬಳಕೆ ಬಗ್ಗೆಯೂ ಅವರಿಗೆ ವಿಶ್ವಾಸ ಇರಲಿಲ್ಲ. ಆದರೆ ಬೆಳ್ಳಂಬೆಳಗ್ಗೆ ತೋಟಕ್ಕೆ ದಾಳಿ ಇಟ್ಟಿದ್ದ ಮಂಗಗಳ ಗದ್ದಲ ಕಂಡು ಲೇಸರ್ ಗನ್ ಹಿಡಿದು ಅತ್ತ ಧಾವಿಸಿದರು. ಇದರಿಂದ ಬೆಳಕು ಚಿಮ್ಮುತ್ತಿದಂತೆ ಗಾಬರಿಗೊಂಡ ಮಂಗಗಳು ಪರಾರಿಯಾದವು.
ಮಂಗಗಳನ್ನು ಬೆದರಿಸಿ ಓಡಿಸಲು ಬೇರೆಬೇರೆ ಉಪಾಯಗಳನ್ನು ಬಳಸಿ ಅವುಗಳು ವಿಫಲವಾದ ನಂತರ ಹೈರಾಣಾಗುತ್ತಿದ್ದ ಶಿವ ಸುಬ್ರಮಣ್ಯ ಅವರು ಈಗ ಖುಷಿಯಾಗಿದ್ದಾರೆ. ತೋಟದಲ್ಲಿ ಅಡ್ಡಾಡುವಾಗ ಕೈಯಲ್ಲಿ ಲೇಸರ್ ಗನ್ ಹಿಡಿದುಕೊಂಡೆ ತಿರುಗಾಡುತ್ತಾ ಇರುತ್ತಾರೆ. ಇದು ಬಂದ ನಂತರ ಅವರ ಮೊಗದಲ್ಲಿ ಬೆಳೆಗಳು ಸಂರಕ್ಷಿತವಾಗುತ್ತಿರುವುದರ ಬಗ್ಗೆ ನೆಮ್ಮದಿ ಭಾವ ಮೂಡಿದೆ ಮಂಗಗಳು ತೋಟಕ್ಕೆ ಬಂದರೆ ಅವುಗಳ ದಾಳಿಯಿಂದ ಸದ್ದು ಹೆಚ್ಚಾಗುತ್ತದೆ. ಆಗ ಮನೆಯಿಂದ ಲೇಸರ್ ಗನ್ ಹಿಡಿದು ಕೂಗಿಕೊಂಡು ಅವುಗಳ ಕಡೆ ಧಾವಿಸುತ್ತಾರೆ. ಹಿಂಡಿನ ಸಮೀಪ ಹೋಗುವುದು ಅಪಾಯಕಾರಿ. ಲೇಸರ್ ಗನ್ ಬೆಳಕು ಬಹುದೂರದವರೆಗೂ ಬೀಳುವುದರಿಂದ ದೂರ ನಿಂತು ಲೈಟ್ ಆನ್ ಮಾಡಬೇಕು. ಪ್ರಖರ ಹಸಿರು ಬೆಳಕು ಚಿಮ್ಮುತ್ತದೆ. ಅದನ್ನು ಹಿಂಡಿನತ್ತ ಗುರಿ ಮಾಡಿ ಅತ್ತಿತ್ತ ಆಡಿಸಿದರೆ ಬೆಳಕಿನ ನರ್ತನಕ್ಕೆ ಮಂಗಗಳು ಪರಾರಿ.


ವೈಜ್ಞಾನಿಕ ಕಾರಣ ಗೊತ್ತಿಲ್ಲ: ಲೇಸರ್ ಗನ್ ನಿಂದ ಅತಿ ಪ್ರಖರ ಹಸಿರು ಬೆಳಕು ಚಿಮ್ಮುತ್ತದೆ. ದೂರದಿಂದ ನೋಡಿದರೆ ಪಾರದರ್ಶಕ ಚೂಪಾದ ಹಸಿರುಕಡ್ಡಿ ಅಲ್ಲಾಡುತ್ತಿರುವಂತೆ ಭಾಸವಾಗುತ್ತದೆ. ಇದರ ಬೆಳಕಿಗೆ ಮಂಗಗಳು ಏಕೆ ಹೆದರುತ್ತಿವೆ ಎಂಬ ವೈಜ್ಞಾನಿಕ ಹಿನ್ನೆಲೆ ಶಿವ ಸುಬ್ರಮಣ್ಯ ಅವರಿಗೆ ತಿಳಿದಿಲ್ಲ. ಆದರೆ ಇದು ಮಂಗಗಳನ್ನು ಬೆದರಿಸಿ, ಓಡಿಸಲು ಸಹಾಯಕವಾಗುತ್ತಿದೆಯಲ್ಲ ಎಂಬ ಸಮಾಧಾನ ಅವರದು.
ಬಳಕೆಯಲ್ಲಿ ಎಚ್ಚರವಿರಲಿ: ಲೇಸರ್ ಗನ್ ಬೇರೆಬೇರೆ ಆಕಾರ, ಬೆಲೆಗಳಲ್ಲಿ ದೊರೆಯುತ್ತದೆ. ಆನ್ ಲೈನ್ ಮಾರಾಟ ತಾಣಗಳಲ್ಲಿ ಇದು ದೊರೆಯುತ್ತದೆ. ಇದನ್ನು ತರಿಸಿಕೊಂಡ ನಂತರ ಬಳಕೆ ಮಾಡುವಾಗ ತುಂಬ ಎಚ್ಚರದಿಂದಿರಬೇಕು. ಯಾವುದೇ ಕಾರಣಕ್ಕೂ ತಮ್ಮ ಕಣ್ಣುಗಳಿಗಾಗಲಿ ಅಥವಾ ಇತರರ ಕಣ್ಣುಗಳಿಗಾಗಲಿ ಇದರ ಬೆಳಕನ್ನು ಹಾಯಿಸಬಾರದು. ಇದು ತುಂಬ ತೀಷ್ಣವಾಗಿರುವುದರಿಂದ ಕಣ್ಣು ಕುರುಡಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

4 COMMENTS

  1. ಸರ್ ನಮ್ಮ ತೊಟದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ ತಡೆಯಲು ಪರಿಹಾರ ತಿಳಿಸಿ ಮತ್ತು ಲೇಸರ್ ಗನ್ ಎಲ್ಲಿ ದೊರೆಯುತ್ತದೆ ದಯವಿಟ್ಟು ಮಾಹಿತಿ ನೀಡಿ ಧನ್ಯವಾದಗಳು

    • ಲೇಸರ್ ಟಾರ್ಚ್ ಅಥವಾ ಗನ್ ಎಲ್ಲ ಪ್ರಮುಖ ಆನ್ ಲೈನ್ ಮಾರಾಟ ತಾಣಗಳಲ್ಲಿ ವಿವಿಧ ಬೆಲೆಗಳಲ್ಲಿ ದೊರೆಯುತ್ತದೆ. ಪರಿಶೀಲಿಸಿ….

LEAVE A REPLY

Please enter your comment!
Please enter your name here