ಬೇಧಿಯನ್ನೂ ಥಟ್ಟನೆ ನಿಲ್ಲಿಸುವ ಕಾಯಿ !

0

“ನಾಡವೈದ್ಯರಿಗೆ ಗಿಡಮೂಲಿಕೆಗಳ ಬಗ್ಗೆ ಇದ್ದ ಜ್ಞಾನ ಅಪಾರ. ಆದರೆ ಅದೆಷ್ಟೋ ಅಮೂಲ್ಯ ಮಾಹಿತಿ ದಾಖಲೀಕರಣವಾಗಿಲ್ಲ” ಎಂದು ಪರಿಸರ ತಜ್ಞ ಪೂರ್ಣಚಂದ್ರ ತೇಜಸ್ವಿ ವಿಷಾದಿಸುತ್ತಿದ್ದರು. ಅರಣ್ಯದಲ್ಲಿನ ಔಷಧಯುಕ್ತ ಗಿಡಗಂಟೆ, ಬೇರುಬಳ್ಳಿಗಳ ಬಗ್ಗೆ ಇವರುಗಳಿಗೆ ತಿಳಿದಿತ್ತು. ಯಾವುದು ಯಾವ ಕಾಯಿಲೆಗೆ ಮದ್ದು ಎಂದು ಪಾರಂಪಾರಿಕ ತಿಳಿವಳಿಕೆಯಿಂದ ಅರಿತು ಚಿಕಿತ್ಸೆ ನೀಡುತ್ತಿದ್ದರು.

ನಾಡಿನಲ್ಲಿದ್ದು ಕಾಡಿಗೆ ಬರುವ ನಾಡವೈದ್ಯರಿಗೆ ಈ ಪರಿಯ ಅರಿವು ಇರುವಾಗ ಇನ್ನು ಕಾಡಿನಲ್ಲಿಯೇ ಸಾವಿರಾರು ವರ್ಷಗಳಿಂದ ಜೀವನ ಮಾಡಿಕೊಂಡು ಬಂದಿರುವ ಆದಿವಾಸಿಗಳಿಗಿರುವ ಜ್ಞಾನ ಅಪಾರ. ಆದರೆ ಈ ಜ್ಞಾನದಲ್ಲಿ ದಾಖಲಾಗಿರುವುದಕ್ಕಿಂತ ದಾಖಲಾಗದೇ ಉಳಿದಿರುವುದೇ ಹೆಚ್ಚು ಎನಿಸುತ್ತದೆ. ಬಹುಶಃ ಇದಕ್ಕೆ ಆಧುನಿಕ ವೈದ್ಯಲೋಕಕ್ಕೆ ಇದ್ದಿರಬಹುದಾದ “ಅವರಿಗೇನು ಗೊತ್ತು” ಎಂಬ ಭಾವವೂ ಕಾರಣವಿರಬಹುದು.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಜವರಸಿದ್ಧ, ಗುರುಸ್ವಾಮಿ ಮತ್ತು ಶಿವಾನಂದ ಜಡೆನ್ನವರ್ ಜೊತೆ ಕಾಡು ಸುತ್ತುತ್ತಿದ್ದೆ. ಇವರಲ್ಲಿ ಜವರಸಿದ್ಧ ಮತ್ತು ಗುರುಸ್ವಾಮಿ ಸ್ಥಳೀಯರು. ದಟ್ಟಡವಿಯಲ್ಲಿ ಹೋಗುತ್ತಿರುವಾಗ ಗುರುಸ್ವಾಮಿ ಜೀಪು ನಿಲ್ಲಿಸಿದರು. ” ಅಲ್ನೋಡಿ.. ಆ ಹಳದಿಕಾಯಿಗಳಿವೆಯಲ್ಲ, ಅವುಗಳ ಬಗ್ಗೆ ನಿಮಗೆ ಗೊತ್ತೆ” ಎಂದರು. ಅವರು ತೋರಿದತ್ತ ಕಣ್ಣು ಹಾಯಿಸಿದೆ. ಹಳದಿಬಣ್ಣದ ಕಾಯಿಗಳು. ದೂರದಿಂದ ಅವುಗಳ ಬಣ್ಣ ನೋಡಿದರೆ ಮಾಗಿರಬಹುದೇನೋ ಎನಿಸಿತು. ಜೀಪಿಳಿದು ಅವುಗಳತ್ತ ಸಾಗಿದೆವು.

“ಇದರ ಹೆಸರು “ಬೋರುಗರೆಕಾಯಿ” ಔಷಧಯುಕ್ತ. ಎಂಥಾ ಬೇಧಿಯನ್ನಾದರೂ ನಿಲ್ಲಿಸಿ ಜೀವ ಉಳಿಸುವ ತಾಕತ್ತು ಇವುಗಳಿಗಿದೆ. ಆದರೆ ಬಳಕೆಯ ಸೂಕ್ತ ವಿಧಾನಗಳು ಗೊತ್ತಿರಬೇಕು. ಇಲ್ಲದೇ ಇದ್ದರೆ ಪರಿಣಾಮವಾಗುವುದಿಲ್ಲ” ಎಂದು ಗುರುಸ್ವಾಮಿ ವಿವರಿಸಿದರು. ನನಗೆ ಅಪಾರ ಕುತೂಹಲವಾಯಿತು. ಈ ಕಾಯಿಗಳಿದ್ದ ಮರಗಳು ಕಾಡಿನ ಎಲ್ಲೆಡೆ ಇರಲಿಲ್ಲ. ನಾವು ನಿಂತಿದ್ದ ಜಾಗದಲ್ಲಿ ಚೆದುರಿದಂತೆ ಅಲ್ಲಲ್ಲಿ ಇದ್ದವು. ದೊಡ್ಡಗಿಡಗಳ ರೀತಿ ಇದ್ದ ಮರಗಳಿವು. ತುಸು ಎಗರಿದರೆ ಕಾಯಿಗಳು ಸಿಗುತ್ತಿದ್ದವು.

ಮಾಗಿದ ಹೊರತೊಗಟೆಯುಳ್ಳ ಅಡಿಕೆಕಾಯಿಗಳ ಥರವೇ ಇದ್ದರೂ ಗಾತ್ರ ಮಾತ್ರ ಅವುಗಳಿಂತ ಹೆಚ್ಚಿತ್ತು. ಇದರ ಬಗ್ಗೆ ಮತ್ತಷ್ಟೂ ಕೆದಕಿದೆ. ಕಾಡು ಮತ್ತು ಕಾಡಿನ ಅಂಚಿನಲ್ಲಿರುವ ನಿವಾಸಿಗಳು ಜಡ್ಡಾದರೆ (ಕಾಯಿಲೆ ಬಿದ್ದರೆ) ಬೇಧಿಯಾದರೆ ಸ್ಥಳೀಯವಾಗಿ ದೊರೆಯುವ ಗಿಡಗಂಟೆ-ಬೇರು ಬಳಸಿ ಔಷಧ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಬೇಧಿಯಾದಾಗ ಅದು ಉಲ್ಬಣಿಸಲು ಬಿಟ್ಟರೆ ಜೀವಕ್ಕೆ ತೊಂದರೆ. ಇಂಥ ಸಂದರ್ಭಗಳಲ್ಲಿ ಇವರು ಈ ಕಾಯಿಯನ್ನು ತಿನ್ನುತ್ತಾರೆ ಎಂಬ ಮಾಹಿತಿ ತಿಳಿಯಿತು.

ಮೊದಲೇ ಈ ಕಾಯಿಯನ್ನು ಬಳಸುವ ವಿಧಾನ ಗೊತ್ತಿದ್ದರೆ ಮಾತ್ರ ಉಪಯೋಗಿಸಬೇಕು ಎಂದಿದ್ದರಿಂದ ಬಳಸುವ ವಿಧಾನ ಹೇಗೆ ಎಂದು ಕೇಳಿದೆ. ಕಾಯಿಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು. ನಂತರ ಕೊಯ್ದು ಬೀಜ ತೆಗೆದು ತಿನ್ನಬೇಕು. ಜಾಸ್ತಿಯೇನೂ ತಿನ್ನಬೇಕಿಲ್ಲ. ಒಂದೆರಡು ಹೋಳು ತಿನ್ನಬೇಕು. ಕಾಯಿಯನ್ನು ಹಸಿಯಾಗಿರುವಾಗಲೇ ಕೊಯ್ದು, ಹೋಳುಗಳನ್ನು ಒಣಗಿಸಿಯೂ ತಿನ್ನಬಹುದು. ಆದರೆ ಬೀಜ ಮಾತ್ರ ತಿನ್ನಬಾರದು” ಎಂದು ಗುರುಸ್ವಾಮಿ ಒತ್ತಿ ಹೇಳಿದರು.

ಆಮೇಲೆ ನಗುತ್ತಾ “ಬೇಧಿ ಇಲ್ಲದಿರುವಾಗ ತಿಂದರೆ ಮೂರ್ನಾಲ್ಕು ದಿನ ಮಲವಿಸರ್ಜನೆಯೇ ಆಗುವುದಿಲ್ಲ’ ಎಂದರು. ಅವರು ಹೇಳಿದ ರೀತಿಗೆ ನಗು ಬಂತು. ಮನೆಗೆ ತೆಗೆದುಕೊಂಡು ಹೋಗಿ ಉಪಯೋಗವಾಗಬಹುದು ಎಂದು ಒಂದಿಷ್ಟು ಕಾಯಿ ಕೊಟ್ಟರು. ಸಾಮಾನ್ಯವಾಗಿ ಆಯುರ್ವೇದ ಔಷಧವನ್ನೇ ಹೆಚ್ಚು ಬಳಸುವ ನಾನು ಯಾವುದಕ್ಕೂ ಇರಲಿ ಎಂದು ಮನೆಗೆ ತಂದು ಇಟ್ಟಿದ್ದೇನೆ !!

LEAVE A REPLY

Please enter your comment!
Please enter your name here