ಕಾರಲು ರೋಗ, ಈರೇ ಬೇನೆ ಅಥವಾ ಜಿಗಳಿ ರೋಗ ಇದು ನೀರಾವರಿ ಪ್ರದೇಶ ಅಥವಾ ಕೆರೆ, ಕುಂಟೆ, ಜೌಗು ಪ್ರದೇಶಗಳಲ್ಲಿ ಮೇಯುವ ಜಾನುವಾರುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಸವನ ಹುಳು ಈ ರೋಗಕ್ಕೆ ವಾಹಕ. ಅಥವಾ ಮಧ್ಯವರ್ತಿ.
ರೋಗ ಪೀಡಿತ ಜಾನುವಾರು, ಮೇಯುವ ಸಮಯದಲ್ಲಿ ವಿಸರ್ಜಿಸುವ ಮಲದಲ್ಲಿರುವ ಜಿಗಳಿ ಮೊಟ್ಟೆಗಳನ್ನು ಬಸವನ ಹುಳು ಸೇವಿಸುವ ಕಾರಣ, ಜಿಗಳಿ ಮೊಟ್ಟೆ ಮುಂದಿನ ಹಂತಕ್ಕೆ ಬೆಳವಣಿಗೆಯಾಗುತ್ತದೆ.
ಬಸವನ ಹುಳು ವಿಸರ್ಜಿಸುವ ಮಲದಿಂದ ಹೊರಬರುವ ಮುಂದಿನ ಹಂತದ ಜಿಗಳಿ ಮೊಟ್ಟೆ, ಅಲ್ಲಿರುವ ಹಸಿರು ಹುಲ್ಲಿನ ಗರಿಗಳು ಮೇಲೆ ಅಂಟಿಕೊಳ್ಳುತ್ತದೆ, ಇಲ್ಲವೇ ನೀರನ್ನು ಸೇರುತ್ತವೆ.
ಆರೋಗ್ಯವಂತ ಜಾನುವಾರು ಈ ಭಾಗದಲ್ಲಿ ಹುಲ್ಲನ್ನು ಮೇಯುವ ಕಾರಣ , ಮೇವಿನ ಮೂಲಕ ಜಠರ, ಕರುಳನ್ನು ಸೇರುತ್ತದೆ. ಅಲ್ಲಿ ಮುಂದಿನ ಹಂತಕ್ಕೆ ಬದಲಾವಣೆಯಾಗಿ , ರಕ್ತನಾಳಗಳ ಮೂಲಕ ಯಕೃತ್ತನ್ನು ( ಈರೆ) ಸೇರಿ ಅಲ್ಲಿ, ಈರೆಯ ಅಂಗಾಂಶವನ್ನು ಮೆಯ್ದು, ಈ ಜಿಗಳಿ ರೂಪದ ಹುಳು ಬೆಳವಣಿಗೆಯಾಗುತ್ತದೆ. ಈ ಹಂತದಲ್ಲಿ ಇದು ಈರೆ (ಲಿವರ್) ಹಾಳುಮಾಡುತ್ತದೆ.
ಈರೆ, ಇದು ಯಾವುದೇ ಪ್ರಾಣಿಯಲ್ಲಿ ಅತಿ ಪ್ರಮುಖ ಅಂಗ. ಈ ಅಂಗವು ಹಾಳಾಗುವ ಕಾರಣ, ಜೀರ್ಣ ಕ್ರಿಯೆಯಲ್ಲಿ ವೆತ್ಯಯವಾಗುತ್ತದೆ. ರಕ್ತಹೀನತೆ ಉಂಟಾಗುತ್ತದೆ, ಕಾಮಾಲೆ ಉಂಟಾಗುತ್ತದೆ. ಬೇಧಿಯುಂಟಾಗುತ್ತದೆ. ಜಾನುವಾರು ಬಡಕಲಾಗುತ್ತದೆ. ರೋಗದ ತೀವ್ರತೆ ಹೆಚ್ಚಾದರೆ, ರಾಸು ಮರಣವನ್ನಪ್ಪುತ್ತದೆ.
ರೋಗ ಲಕ್ಷಣಗಳು:
* ಆಹಾರ ಸೇವನೆಯಲ್ಲಿ ನಿರಾಸಕ್ತಿ.
* ನೀರಾಧ, ವಾಸನೆಯುಕ್ತ ಬೇಧಿ.
* ಕಾಮಾಲೆ.
* ರಕ್ತಹೀನತೆ.
* ಬಡಕಲಾಗುವಿಕೆ.
* ನಿಶ್ಯಕ್ತಿ.
* ಉತ್ಪಾದನೆ ಕುಂಠಿತವಾಗುತ್ತದೆ.
ಚಿಕಿತ್ಸೆ:
ಕಾರಲು ಹುಳು ನಾಶಕ ಔಷಧಿಯನ್ನು ಪಶುವೈದ್ಯರ ಸಲಹೆಯ ಮೇರೆಗೆ ಕುಡಿಸಬೇಕು.
ಆಕ್ಸಿಕ್ಲಾಸನೈಡ್, ಕ್ಲೊಸೆಂಟಾಲ್ ಮುಂತಾದವು.
ವಿ.ಸೂ. ( ಪಶುವೈದ್ಯರ ಸಲಹೆ ಪಡೆದು ಕುಡಿಸಬೇಕು).
* ಯಕೃತ್ತು ಆರೋಗ್ಯ ಸರಿಪಡಿಸಲು ಲಿವರ್ ಸ್ಟುಮುಲೆಂಟ್ ಟಾನಿಕ್) ಇಂಜೆಕ್ಷನ್.
ತಡೆಗಟ್ಟುವ ಕ್ರಮಗಳು:
ಜೌಗು ಪ್ರದೇಶದಲ್ಲಿ, ಕೆರೆ ಕುಂಟೆ, ನೀರಾವರಿ ಪ್ರದೇಶಗಳಲ್ಲಿ ಮೇಯಲು ಬಿಡಬಾರದು.
ಅನಿವಾರ್ಯವಾಗಿ ಬಿಡಲೆ ಬೇಕಾದ ಸಂದರ್ಭಗಳಲ್ಲಿ, ಬಸವನ ಹುಳು ನಿರ್ಮೂಲನೆ ಮಾಡುವ ಕ್ರಮ ಅನುಸರಿಸಬೇಕು.
*ನಿಯಮಿತವಾಗಿ ಕಾರಲು ರೋಗ ನಿರೋಧಕ ಔಷಧಿ ಕುಡಿಸಬೇಕು