ಹಲಸು ( jackfruit ) ಒಂದು ಕಾಲದಲ್ಲಿ ಬಡವರ ಪಾಲಿನ ಆಹಾರದ ಬೆಳೆ. ನಿಸರ್ಗ ( Nature) ದ ಕೊಡುಗೆ. ಈ ಕುರಿತಂತೆ ಹಲವರು ತಮ್ಮ ವಿಶಿಷ್ಟ ಅನುಭವಗಳನ್ನು ಹಂಚಿಕೊಳ್ಳಬಲ್ಲರು. ಈ ದಿಶೆಯಲ್ಲಿ ನನ್ನದು ಹಲಸಿನ ಬಗ್ಗ ಹಲವು ಅನುಭವ
ಮದುವೆಯಾದ ಹೊಸದರಲ್ಲಿ ನನ್ನ ಹಲಸು ತಿನ್ನುವ ಸಾಮರ್ಥ್ಯ ನನ್ನಾಕೆಗೆ ಅಚ್ಚರಿ ಮೂಡಿಸಿತ್ತು. ಕಾಯಿ ಇರಲಿ ಹಣ್ಣಿರಲಿ ಕಡಿದು ತಿನ್ನಲು ಕುಳಿತರೆ ಹೊಟ್ಟೆ ತುಂಬಿ ಒಂದು ತೇಗು ಬಂದಮೇಲೆಯೇ ಮೇಲೇಳುವುದು ನನ್ನ ಪದ್ಧತಿ. ಅವಳೋ ನಾಲ್ಕು ತೊಳೆ ಬಿಡಿಸಿ ನಾಜೂಕಾಗಿ ರುಚಿ ನೋಡುತ್ತಾ ಚೆನ್ನಾಗಿ ಜಗಿದು ತಿಂದು ಎದ್ದುಬಿಡುತ್ತಿದ್ದಳು.
” ಎಂತಾ ತಿಂತೀರಿ, ದನ ತಿಂದಾಂಗೆ. ಸಾಕು ಬಿಡಿ. ಹೊಟ್ಟೆ ನೋವಾದೀತು” ಎಂಬ ಅವಳ ಮಾತಿಗೆ ” ನಂಗೆ ಯಂತಾ ಆಗೋದಿಲ್ಲ ಬಿಡು. ಒಂದು ಕಾಲದಲ್ಲಿ ನನ್ನ ಮುಖ್ಯ ಆಹಾರವೇ ಇದು. ನನ್ನ ಶರೀರದ ಬಹುತೇಕ ರಕ್ತ ಮಾಂಸ ಖಂಡಗಳ ರಚನೆ ಆಗಿದ್ದೇ ಇದರಿಂದ ” ಎಂಬ ಉತ್ತರ ಸಿದ್ಧವಾಗೇ ಇರುತ್ತಿತ್ತು.
ಹಸಿವನ್ನು ಹೇಳಿಕೊಳ್ಳಲು ಯಾರೂ ಇರದ ಬಾಲ್ಯದಲ್ಲಿ ಹಸಿವು ನೀಗಿಸಲು ಹಲಸಿನ ಮರ (Jackfruit trees)ಗಳಂತೂ ಬೇಕಾದಷ್ಟು ಇದ್ದವು. ವರ್ಷದ ನಾಲ್ಕೈದು ತಿಂಗಳು ಸಮೃದ್ಧವಾಗಿ ಕಾಯಿಯೋ ಹಣ್ಣೋ ಬೀಜವೋ ಕೊಡುತ್ತಾ ಅಷ್ಟರಮಟ್ಟಿಗೆ ಅಪ್ಪ ಅಮ್ಮನ ಸ್ಥಾನ ತುಂಬಲು ಹೆಣಗಾಡುತ್ತಿದ್ದವು.
ಗೊಬ್ರಗುಂಡಿ ಮರದಲ್ಲಿ ಶಿವರಾತ್ರಿ ಹೊತ್ತಿಗೇ ಬೆಳೆದ ಕಾಯಿಗಳು ಸಿಕ್ಕಿದರೆ ಹಳ್ಳದಂಡೆಯ ಮರದಲ್ಲಿ ಗೌರಿ ಹಬ್ಬದ ವರೆಗೂ ಹಣ್ಣುಗಳು ಇರುತ್ತಿದ್ದವು. ಉಳಿದಂತೆ ಒಳಕಡೆ ಮರ, ದೋಟಿ ಮರ, ಬಿಳುವನ ಮರ,ಗದ್ದೆ ಅಂಚಿನ ಮರ, ಒಡೆಭಕ್ಕೆ ಮರಗಳು ನಡುವಿನಲ್ಲಿ ಹೊಟ್ಟೆ ತುಂಬಿಸುತ್ತಿದ್ದವು. ಅವೂ ಸಾಲದಾದಾಗ ಕೆರೆಹೊಂಡ ಕಾಡಿನಿಂದಲೋ, ಹುಲಿಮನೆ ಗುಡ್ಡದಿಂದಲೋ ಹುಡುಕಿ ತರುವುದಿತ್ತು.
ಚೋಟುದ್ದದ ನಾನು ಮಳೆ ಜಾರಿಕೆಯ ಪಾಚಿ ಕಟ್ಟಿದ ಎತ್ತರೆತ್ತರದ ಮರಗಳನ್ನು ಹತ್ತಿ ಹಣ್ಣು ಕೆಡವುವಾಗ ಇಂದಿರಕ್ಕ ದೇವರನ್ನು ಪ್ರಾರ್ಥಿಸುತ್ತಾ ನಿಂತಿರುತ್ತಿದ್ದಳು.ಒಮ್ಮೆ ಕೆರೆಹೊಂಡ ಕಾಡಿನ ಎತ್ತರದ ಮರ ಏರಿ ಕಾಯಿ ಕೆಡವಿದವ ಕೆಳಗಿಳಿಯಲಾರದೇ ಒದ್ದಾಡಿದ್ದೆ. ಬೀಳುತ್ತಿದ್ದ ಆ ದೊಡ್ಡ ಕಾಯಿ ಕೆಳಗಿನ ಚಿಕ್ಕ ರೆಂಬೆಯೊಂದನ್ನು ಮುರಿದು ಹಾಕಿತ್ತು. ಇಳಿಯುವಾಗ ಕೈ ಆಸರೆಗೆ ಆ ರೆಂಬೆ ಅಗತ್ಯವಾಗಿತ್ತು.
ತಬ್ಬಿ ಹಿಡಿದು ಇಳಿಯುವಂತೆಯೂ ಇರದಷ್ಟು ದಪ್ಪ ಕಾಂಡ ಅದರದ್ದು. ಮಳೆಗಾಲ, ಜಾರಿಕೆ ಬೇರೆ. ದಿಕ್ಕು ತೋಚದೆ ಕೆಲಹೊತ್ತು ಅಲ್ಲೇ ಕೂರುವಂತಾಗಿತ್ತು. ನಾನು ಅಳತೊಡಗಿದಾಗ ಅಕ್ಕ ಸಮಾಧಾನ ಹೇಳಿ ದೈರ್ಯ ತುಂಬಿದ್ದಳು. ಅನ್ಯ ಮಾರ್ಗವೂ ಇರಲಿಲ್ಲ ಬಿಡಿ. ಆ ಕಾರಣದಿಂದ ಆ ಮರಕ್ಕೆ ದೆವ್ವದ ಮರ ಎಂದು ಹೆಸರು ಕೊಡಲಾಯಿತು.
ದೂರದ ಕಾಡಿ (Forest )ನಿಂದ ತರುವಾಗ ಇಡೀ ಕಾಯನ್ನು ಹೊರಲಾರದೇ ತುಂಡುಮಾಡಿ ತರುತ್ತಿದ್ದೆವು. ಕೊಳೆತ ಹಣ್ಣು ಸಿಕ್ಕಿದರೂ ಬಿಟ್ಟು ಬರುವಂತಿರಲಿಲ್ಲ. ಭಾರೀ ಹೊಟ್ಟೆಯ ಎಮ್ಮೆ ( Buffalo ) ಕುಮ್ಮಿಗೆ ಆಹಾರ ಒದಗಿಸುವ ಜವಾಬ್ದಾರಿಯೂ ಇತ್ತಲ್ಲಾ.
ಅಕ್ಕಿ ಉಳಿಸಲೂ ಹಲಸು ಸಹಕಾರಿಯಾಗಿತ್ತು. ಅದು ಅಂದಿನ ಅನಿವಾರ್ಯ ಕೂಡಾ. ಹಣ್ಣು ಅಥವಾ ಕಾಯಿಯ ಭರ್ತಿ ತೊಳೆಗಳನ್ನು ಅತಿ ಕಡಿಮೆ ಅಕ್ಕಿಯೊಂದಿಗೆ ರುಬ್ಬಿ ಕಡುಬು ಮಾಡುವ ವಿಧಾನ ಅಕ್ಕನಿಗೆ ಕರಗತವಾಗಿತ್ತು. ದೊಡ್ಡ ಒರಳು ಕಲ್ಲಲ್ಲಿ ತುಂಬಿ ತುಳುಕುವಷ್ಟು ಹಿಟ್ಟು ರುಬ್ಬುವುದು ಎಳೆಯಳೇ ಆಗಿದ್ದ ಅವಳಿಗೆ ಕಷ್ಟವೇನೂ ಆಗಿರಲಿಲ್ಲ. ಎರಡನೇ ತರಗತಿಗೇ ಶಾಲೆ ಬಿಡಿಸಿ ಸಾಹುಕಾರರ ಮನೆಯ ಕಸ ಮುಸುರೆ ಚಾಕರಿಗೆ ಹಾಕಿದ್ದರಿಂದ ಗಟ್ಟಿಗಿತ್ತಿಯೂ ಆಗಿದ್ದಳು. ಆದರೂ ಬೇಗನೇ ನಮ್ಮನ್ನು ಬಿಟ್ಟು ಹೊರಟು ಹೋಗಿಬಿಟ್ಟಳು.
ಇವತ್ತು ನಮ್ಮ ಮನೆಯಲ್ಲಿ ಹಲಸಿನ ಕಾಯಿ ಕಡುಬು. ಇದು ಮಾಡಿದಾಗೆಲ್ಲಾ ಬೇಡ ಬೇಡವೆಂದರೂ ಯಾಕೋ ಆ ಅಕ್ಕನೂ ಬಾಲ್ಯದ ದಿನಗಳೂ ನೆನಪಾಗಿಬಿಡುತ್ತವೆ.