ಲೇಖಕರು: ಪ್ರಸಾದ್ ರಕ್ಷಿದಿ, ರಂಗಭೂಮಿ ತಜ್ಞರು, ಕಾಫಿ ಬೆಳೆಗಾರರು

ವನ್ಯಪ್ರಾಣಿಗಳಿಂದ ದಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನಜಿಲ್ಲೆಯೊಂದರಲ್ಲೇ ಇದುವರೆಗೆ ಇವುಗಳಿಂದ ಹತರಾದವರ ಸಂಖ್ಯೆ ಅರುವತ್ತು ದಾಟಿದೆ. ನಗರ ಪ್ರದೇಶಕ್ಕೆ ಇವುನೆಗಳು ಬಂದು ದಾಂಧಲೆ ಮಾಡಿದಾಗ ಮಾದ್ಯಮಗಳಲ್ಲಿ ಸಿಕ್ಕುವ ಪ್ರಚಾರ, ಕೂಲಿ ಕಾರ್ಮಿಕರು ಮಡಿದಾಗ ರೈತರ ಬೆಳೆ ನಾಶವಾದಾಗ ಸಿಕ್ಕುವುದಿಲ್ಲ. ಬದಲಿಗೆ ಇದೊಂದು ಮಾಮೂಲಿ ಪುಟ್ಟದೊಂದು ಸುದ್ದಿಯಾಗುತ್ತದೆ ಅಷ್ಟೆ.
ಕೇವಲ ಮೂವತ್ತು ವರ್ಷಗಳ ಹಿಂದಿನ ವಿದ್ಯಮಾನ ಗಮನಿಸಿದರೆ ಆನೆದಾಳಿಯೆಂಬ ವಿಚಾರವೇ ಕಂಡುಬರುವುದಿಲ್ಲ. ಅಪರೂಪಕ್ಕೊಮ್ಮೆ ಇವುಗಳು ದಾರಿತಪ್ಪಿ ಬಂದಾಗಲೋ ಇಲ್ಲವೇ ಮದವೇರಿದವು ಮಾಡಿದ ಹಾವಳಿ ಬಿಟ್ಟರೆ ಈ ರೀತಿ ವ್ಯಾಪಕವಾಗಿ ಮತ್ತು ನಿರಂತರವಾಗಿ ಜನವಸತಿಗಳತ್ತ ಬಂದುದೇ ಇಲ್ಲ. ಇದೀಗ ಹದಿನೈದು ವರ್ಷಗಳಿಂದ ಹಾವಳಿ ಹೆಚ್ಚಾಗಿದೆ.
ಈ ರೀತಿ ಉಪಟಳ ನೀಡುವ ಆನೆಗಳಲ್ಲಿ ಎರಡು ವಿಧ. ಮೊದಲನೆಯವು ಹೆಚ್ಚು ತೊಂದರೆ ಕೊಡುವ, ಮತ್ತು ಯಾವಾಗಲೂ ಜನವಸತಿಗಳ ಪಕ್ಕದಲ್ಲೇ ಇರುವ<ಥ ಗುಂಪು. ಇವು ಬಯಲುಸೀಮೆಗೂ ಧಾಳಿಮಾಡುತ್ತವೆ. ಹಗಲು ಹತ್ತಿರದಲ್ಲಿರುವ ಕಾಡಿನಲ್ಲಿ ಆಶ್ರಯ ಪಡೆದು ರಾತ್ರಿವೇಳೆ ಆಹಾರ ಅರಸಿ ಹೊರಡುತ್ತವೆ. ಈ ವಿದ್ಯಮಾನ ನಮ್ಮ ನೀರಾವರಿ ಯೋಜನೆಗಳ ಕೊಡುಗೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಲಾಶಯಗಳ ನಿರ್ಮಾಣವಾದಾಗಲೆಲ್ಲ ಆನೆಗಳ ಆಶ್ರಯ ತಾಣಗಳ ಕೆಲವು ಪ್ರದೇಶಗಳು ಮುಳುಗಡೆಯಾಗುತ್ತವೆ. ಅವುಗಳು ಸ್ಥಳಾಂತರಗೊಳ್ಳುತ್ತವೆ. ಹಾಸನ-ಕೊಡಗಿನ ಗಡಿಭಾಗಗಳಲ್ಲಿ, ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಹಿಂಡು ಈ ಬಗೆಯವು. ತಮ್ಮ ಸಹಜ ನೆಲೆಗಳನ್ನು ಕಳೆದುಕೊಂಡು ಅನಿವಾರ್ಯವಾಗಿ ಹಳ್ಳಿಗಳತ್ತ ಬಂದು ಸುಲಭದಲ್ಲಿ ಸಿಗುವ ಬೆಳೆಗಳನ್ನು ತಿಂದು ಬದುಕುವುದನ್ನು ಕಲಿತುಬಿಟ್ಟಿವೆ. ಕಾಡಿನಲ್ಲಿ ಅಲೆದು ಆಹಾರ ಸಂಪಾದಿಸುವುದನ್ನು ಸಂಪೂರ್ಣವಾಗಿ ಮರೆತಿರುವ ಇಂಥವು ತುಂಬ ಅಪಾಯಕಾರಿ.
ಇವು ಸಾಮಾನ್ಯವಾಗಿ ರಾತ್ರಿ ವೇಳೆ ಬೆಳೆತಿಂದು- ನಾಶಮಾಡಿ ಬೆಳಗಿನ ಜಾವ ತಮ್ಮ ಅಡಗುದಾಣ ಸೇರುತ್ತವೆ. ಕಾಡಾನೆಗಳು ಆಹಾರಕ್ಕಾಗಿ ದಿನವೊಂದಕ್ಕೆ ಹತ್ತು ಹದಿನೈದು ಕಿ.ಮೀಗಳಷ್ಟು ಸಂಚರಿಸುತ್ತವೆ. ಅಷ್ಟು ವಿಸ್ತಾರವಾದ ಪ್ರದೇಶ ಅಡಗುತಾಣಗಳಲ್ಲಿ ಇಲ್ಲ. ಇವು ಮುಂಜಾನೆ ಸ್ವಸ್ಥಾನ ಸೇರುವ ತವಕದಲ್ಲಿರುವಾಗ ಅಡ್ಡ ಸಿಕ್ಕಿದ ಯಾವುದೇ ಪ್ರಾಣಿ ಅಥವಾ ಮನುಷ್ಯರ ಮೇಲೆ ಧಾಳಿ ಮಾಡುತ್ತವೆ. ಯಂತ್ರೋಪಕರಣಗಳನ್ನೂ ಹಾಳುಮಾಡುತ್ತವೆ. ಆ ಹೊತ್ತಿನಲ್ಲಿ ಹೊಲಗಳತ್ತ ಹೊರಟ ರೈತ ಕಾರ್ಮಿಕರೇ ಹೆಚ್ಚಾಗಿ ಇವುಗಳಿಂದ ದಾಳಿಗೊಳಗಾಗಿದ್ದಾರೆ.
ಈ ಆನೆಗಳನ್ನು ಹಿಡಿದು ಸ್ಥಳಾಂತರಿಸಿದರೂ ಅವು ಮರಳಿ ಬರುತ್ತವೆ. ಇಂತಹ ಇಂಥವುಗಳನ್ನು ಪುಂಡಾನೆಗಳೆಂದು ಕರೆಯುತ್ತಾರೆ. ಆದ್ದರಿಂದ ಇವುಗಳನ್ನು ಹಿಡಿದು, ವಿಶೇಷಧಾಮಗಳನ್ನು ನಿರ್ಮಿಸಿ ಅಲ್ಲಿಗೆ ಸಾಗಿಸುವುದೊಂದೇ ಪರಿಹಾರದ ದಾರಿ. ಇವುಗಳ ಸಂತಾನ ಶಕ್ತಿ ಹರಣ ಮಾಡಿ ಇವುಗಳ ಸಂಖ್ಯೆಯನ್ನು ನಿಯಂತ್ರಿಸುವುದು ಸಾಧ್ಯ ಆದರೆ ಇದಕ್ಕೆ ದೀರ್ಘಾವಧಿ ಯೋಜನೆಯಾಗಬೇಕು. ತತ್ಕಾಲಕ್ಕೆ ಫಲ ನೀಡದು.
ಎರಡನೆಯ ವಿಧದ ಆನೆಗಳು ಈ ರೀತಿಯವಲ್ಲ. ಅಪರೂಪಕ್ಕೊಮ್ಮೆ ದಟ್ಟ ಅರಣ್ಯಗಳಿಂದ ಹೊರಬಂದು ಹಿಂದಿರುಗುವ ಇವುಗಳಿಗೆ ಬಾಳೆ- ಬೈನೆಗಳಂತಹ ಸಸ್ಯಗಳೇ ಸುಲಭದ ತುತ್ತು. ಇವುಗಳು ಇತರೆ ಬೆಳೆಗಳನ್ನು ನಾಶಮಾಡುವುದು ಕಡಿಮೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ದಾರಿ ತಪ್ಪಿ ಬರುತ್ತವೆ. ಸಾಮಾನ್ಯ ಪರಿಸ್ಥಿತಿಯಲ್ಲಿ ಇವು ನೇರವಾಗಿ ಮನುಷ್ಯನನ್ನೇ ಗುರಿಯಾಗಿಸಿ ಧಾಳಿ ಮಾಡುವುದಿಲ್ಲ. ಕೆಲವುಬಾರಿ ಇವುಗಳನ್ನು ಓಡಿಸಲೆಂದು ಮಾಡಿದ ಗಲಾಟೆಯಿಂದ ಸಿಟ್ಟಿಗೆದ್ದು ಅಥವಾ ಇವುಗಳನ್ನು ಗಾಯಗೊಳಿಸಿದ ಸಂದರ್ಭಗಳಲ್ಲಿ ರೊಚ್ಚಿಗೆದ್ದು ಧಾಳಿ ಮಾಡಿವೆ. ಇವು ಹಿಂಡು ಹಿಂಡಾಗಿ ಬರುವುದು ಕಡಿಮೆ.
ಮಲೆನಾಡಿನಲ್ಲಿ ಕಾಡು ಪ್ರಾಣಿಗಳು ಅರಣ್ಯದ ಅಂಚಿನ ಹಳ್ಳಗಳಿಗೆ ಬಂದುಹೋಗುವುದು ಅನೇಕ ವರ್ಷಗಳಿಂದಲೂ ಮಾಮೂಲಾದ ಸಂಗತಿಯಾಗಿತ್ತು. ಮಲೆನಾಡಿನ ಜನ ಕಾಡುಪ್ರಾಣಿಗಳ ಜೊತೆಗೆ ಸಹಬಾಳ್ವೆಯನ್ನು ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಮಲೆನಾಡಿನ ತಾಲ್ಲೂಕುಗಳ ದಟ್ಟ ಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಸಕಲೇಶಪುರ ತಾಲ್ಲೂಕಿನ ಚಂದ್ರಮಂಡಲ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆಗೂಡು, ಎಂಬ ಹೆಸರಿನ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದು ಕೂಡಾ ಜನವಸತಿಯಿರುವ ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯುತ್ತದೆ.


ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಘಟ್ಟಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮನುಷ್ಯನನ್ನೂ ಬದಲಿಸಿಬಿಟ್ಟಿವೆ. ಅರಣ್ಯದ ನಡುವೆ ಹಾದು ಹೋಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತಿವೆ. ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸುತ್ತಿದ್ದಾರೆ. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋಗಿವೆ. ಪರಂಪರಾಗತ ಆನೆದಾರಿಗಳು ತುಂಡರಿಸಿಹೋಗಿವೆ.
ಇಷ್ಟೆಲ್ಲ ಸಮಸ್ಯೆಗಳಿಗೆ, ಅನಾಹುತಗಳಿಗೆ ಸೇರ್ಪಡೆಯಾಗಿ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯೆತ್ತಿರುವ, ರೆಸಾರ್ಟು, ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸ್ವಲ್ಪಮಟ್ಟಿಗೆ ಇದೆ. ಇವುಗಳಿಂದಾಗಿ ಅರಣ್ಯ ಪ್ರದೇಶದೊಳಗೆ ವ್ಯಾಪಕ ಜನಸಂಚಾರ, ವಾಹನ ಸಂಚಾರ ಹೆಚ್ಚಿರುವುದು ಮಾತ್ರವಲ್ಲ, ಕೆಲವೊಮ್ಮೆ ಮೋಟಾರ್ ರ್ಯಾಲಿಗಳು ಕೂಡ ಈ ಪ್ರದೇಶದಲ್ಲಿ ನಡೆಯುತ್ತವೆ. ಗಾಂಜಾ ಬೆಳೆ ಮತ್ತು ಕಳ್ಳನಾಟಾ ದಂಧೆಯಂತಹ ಕಾನೂನುಬಾಹಿರ ಕೃತ್ಯಗಳೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳಿಗೆ ದೊಡ್ಡ ಪ್ರಮಾಣದಲ್ಲಿ ತೊಂದರೆ ಮಾಡುತ್ತಿವೆ.
ಕಾಡುಪ್ರಾಣಿಗಳು ನಾಡಿಗೆ ಬರಲು ಇನ್ನೊಂದು ಮುಖ್ಯ ಕಾರಣವೆಂದರೆ ಅರಣ್ಯಪ್ರದೇಶದ ಹುಲ್ಲುಗಾವಲು ಮತ್ತು ಶೋಲಾಗಳಲ್ಲಿ ಮೇವಿನ ಕೊರತೆ. ಉದಾಹರಣೆಗೆ ಪಶ್ಚಿಮಘಟ್ಟದ ಹುಲ್ಲುಬೆಳೆಯುವ ಪ್ರದೇಶದಲ್ಲಿ ವ್ಯಾಪಕವಾಗಿ ಹಬ್ಬಿರುವ ನಿಂಬೆ ಹುಲ್ಲು(ಸಿಟ್ರೋನೆಲ್ಲಾ) ಇದನ್ನು ಸುಗಂಧ ಎಣ್ಣೆ ತೆಗೆಯಲೆಂದು ಕೇರಳದವರು ತಂದು ಘಟ್ಟ ಪ್ರದೇಶದಲ್ಲಿ ಬೆಳೆಯಲು ಪ್ರಾರಂಭಿಸಿ ಈಗ ಇಡೀ ಅರಣ್ಯಕ್ಕೆ ಹಬ್ಬಿ ಪ್ರಾಣಿಗಳಿಗೆ ಮೇವಿಲ್ಲದಂತಾಗಿದೆ. ಇದನ್ನು ಪ್ರಾಣಿಗಳು ಮೇಯುವುದಿಲ್ಲ.. ಸಾವಿರಾರು ಎಕರೆ ವ್ಯಾಪಿಸಿರುವ ಇದರ ನಾಶವೂ ಬಹಳ ಕಷ್ಟ. ಇದನ್ನು ನಾಶಮಾಡಿ ಮತ್ತೆ ಕಾಡಿನಲ್ಲಿ ನೈಸರ್ಗಿಕ ಮೇವು ದೊರೆಯುವಂತಾಗಬೇಕು.
ಆನೆಗಳು ಧಾಳಿ ಮಾಡಿದಾಗ ಮಾಮೂಲಿನಂತೆ ಜನರು ತಮಗೆ ಪ್ರತ್ಯಕ್ಷ ಹೊಣೆಗಾರರಾಗಿ ತೋರುವ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಆಕ್ರೋಶ ತೋರುತ್ತಾರೆ. ಅವರಲ್ಲಿ ಈ ಸಮಸ್ಯೆಯ ನಿವಾರಣೆಗೆ ಅಗತ್ಯವಾದ ಖಚಿತ ಕಾರ್ಯಯೋಜನೆಯಾಗಲೀ ಸಿಬ್ಬಂದಿಯಾಗಲೀ ಇಲ್ಲವಾದ್ದರಿಂದ ತೇಪೆ ಹಚ್ಚಿದಂತ ಕೆಲಸಗಳಾಗುತ್ತಿವೆ.
ಆ ಆನೆಯನ್ನು ಬೆದರಿಸಿಯೋ ಅರಿವಳಿಕೆ ನೀಡಿಯೋ ಇನ್ನೊಂದೆಡೆ ಸಾಗಹಾಕಿ ಸದ್ಯಕ್ಕೆ ಬಚಾವಾದೆವೆಂದು ಸುಮ್ಮನಾಗುತ್ತಾರೆ. ಸಾಗಿಸಲ್ಪಟ್ಟ ಆನೆಗಳು ಕೆಲವೇ ದಿನಗಳಲ್ಲಿ ಅದೇ ಸ್ಥಳಕ್ಕೆ ಹಿಂದಿರುಗುತ್ತವೆ. ಈಗ ಸರ್ವೋಚ್ಛ ನ್ಯಾಯಾಲಯ ಅದಕ್ಕೂ ತಡೆ ನೀಡಿದ್ದರಿಂದ ಅದೂ ನಿಂತಿದೆ. ಆನೆಗಳು ತಾವಾಗಿಯೇ ಬೇರೆಡೆಗೆ ಹೋಗುತ್ತವೆ. ಅಲ್ಲಿಯವರೆಗೆ ತಾಳ್ಮೆಯಿಂದಿರಲು ಹೇಳುತ್ತಾರೆ. ಆದರೆ ಅವು ಹೋಗುವುದಾದರೂ ಎಲ್ಲಿಗೆ?
ಅರಣ್ಯ ಇಲಾಖೆಯಲ್ಲಿಯೂ ಸಮಸ್ಯೆಯ ಸಮಗ್ರ ಜ್ಞಾನ ಇರುವ ಮತ್ತು ಪರಿಸರ ಕಾಳಜಿಯೂ ಇರುವ ಅಧಿಕಾರಿಗಳಿದ್ದಾರೆ. ಆದರೆ ಅಭಿವೃದ್ಧಿಯ ಮಂತ್ರದ ಮುಂದೆ ಅವರು ಮೂಕರಾಗಬೇಕಾದ ಸ್ಥಿತಿ ಇದೆ. ಇದು ಅಧಿಕಾರಿಗಳೊಡನೆ ನಡೆದ ಹಲವಾರು ಸಭೆಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ಯಾರೂ ನೇರವಾಗಿ ಮಾತಾಡುವ ಸ್ಥಿತಿಯಲ್ಲಿ ಇಲ್ಲ.
ಇತ್ತೀಚಿನ ದಿನಗಳಲ್ಲಿ ಪರಿಸರನಾಶ ಮತ್ತು ಆನೆಗಳ ಉಪಟಳಗಳ ಬಗ್ಗೆ ಜನರಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಕಂಡುಬರುತ್ತಿರುವುದರಿಂದ ಕೇಂದ್ರ -ರಾಜ್ಯ ಸರ್ಕಾರಗಳು ಆನೆದಾರಿಯನ್ನು ನಿರ್ಮಿಸುವ ಯೋಜನೆಯನ್ನು ಮುಂದಿಟ್ಟಿವೆ. ಆನೆಗಳು ಪರಂಪರಾಗತವಾಗಿ ಬಳಸುತ್ತಿರುವ ಹಲವಾರು ದಾರಿಗಳನ್ನು ಮತ್ತೆ ಅವುಗಳಿಗೆ ಮುಕ್ತಗೊಳಿಸುವ ಮಾತನ್ನು ಯಾವ ಸರ್ಕಾರವೂ ಆಡುತ್ತಿಲ್ಲ. ಬದಲಿಗೆ elephant corridor ಗಳನ್ನು“ನಿರ್ಮಿಸುವ” ಮಾತಾಡುತ್ತಿವೆ. ಸರ್ಕಾರ ನಿರ್ಮಿಸಿದ ದಾರಿಯನ್ನು ಅನೆಗಳು ಯಾಕೆ ಒಪ್ಪಿಕೊಳ್ಳಬೇಕೆಂಬ ಪ್ರಶ್ನೆಗೆ ಯಾವ ಸಚಿವರೂ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ.
ಈಗಾಗಲೇ ಸಾಕಷ್ಟು ಸಮಯ ಕಳೆದುಹೋಗಿದೆ. ನಮ್ಮ ‘ಅಭಿವೃದ್ಧಿ ಯೋಜನೆ’ಗಳ ಪರಿಣಾಮವಾಗಿ ಅಂಡಲೆಯುತ್ತಿರುವ ಕಾಡಾನೆಗಳು ಈಗ ಪುಂಡಾನೆಗಳಾಗಿ ಪರಿವರ್ತನೆಯಾಗುತ್ತಿವೆ. ಆದರೆ ಸರ್ಕಾರ ಅವುಗಳಿಗೆ ದಾರಿ ನಿರ್ಮಿಸುತ್ತೇನೆಂದು ಹೇಳುತ್ತಾ ಅರಣ್ಯದ ಅಂಚಿನಲ್ಲಿರುವ ನೂರಾರು ಕೃಷಿಕರ ಜಮೀನನ್ನು ವಶಪಡಿಸಿಕೊಳ್ಳುವ ಮಾತಾಡುತ್ತಿದೆ. ಇವರಲ್ಲೂ ಸರಿಯಾಗಿ ದಾಖಲೆಗಳಿರುವವರು, ಇಲ್ಲದವರು, ಒತ್ತುವರಿದಾರರರು, ಎಲ್ಲರೂ ಇದ್ದಾರೆ. ಅರಣ್ಯ ಭೂಮಿಯಾಗಲೀ, ಕಂದಾಯ ಭೂಮಿಯಾಗಲೀ ಒತ್ತುವರಿಯಾಗಿ ಕೃಷಿಗೊಳಪಟ್ಟಿರುವ ವಿದ್ಯಮಾನ ನಾಲ್ಕೈದು ದಶಕಗಳಿಂದ ನಡೆದೇ ಇದೆ. ಒತ್ತುವರಿ ಸರಿಯೆಂದು ನನ್ನ ವಾದವಲ್ಲ. ತನ್ನ ಜಮೀನನ್ನು ಕಾಯ್ದುಕೊಳ್ಳುವುದು ಸರ್ಕಾರದ ಕರ್ತವ್ಯ. ಆದರೆ ಆಗ ಇರದಿದ್ದ ಹಾವಳಿ ಈಗೇಕೆ ಉಲ್ಭಣವಾಗಿದೆಯೆಂಬ ಸರಳ ಸತ್ಯ ಯಾರಿಗಾದರೂ ತಿಳಿಯುವಂಥದ್ದೇ ಆಗಿದೆ.
ಇವರೆಲ್ಲ ಹೇಳುವ “ಆನೆದಾರಿಗಳಲ್ಲಿ ಕೃಷಿಮಾಡಿಕೊಂಡಿರುವ ರೈತರನ್ನೆಲ್ಲ ಪರಿಹಾರ ನೀಡಿ ಸ್ಥಳಾಂತರಿಸಿ ತೆರವುಗೊಳಿಸುತ್ತೇವೆ” ಎನ್ನುವ ಮಾತೇ ದಾರಿ ತಪ್ಪಿಸುವಂತದ್ದು. ಸರ್ಕಾರ ನಿರ್ಮಾಣ ಮಾಡಲು ಬಯಸುವ ‘ಆನೆದಾರಿ’ ಅವುಗಳ ಪರಂಪರಾಗತ ಮಾರ್ಗದಲ್ಲಿ ಇಲ್ಲ. ಬದಲಿಗೆ ಅವೈಜ್ಞಾನಿಕವಾಗಿ ಮಾಡಲಿರುವ ಹೊಸ ದಾರಿಗಳಿವು. ನಿಜಸಂಗತಿಯೆಂದರೆ ಹಳೆಯ ಆನೆದಾರಿಗಳಲ್ಲಿ ಯಾರೂ ಕೃಷಿ ಮಾಡಿಕೊಂಡಿಲ್ಲ.
ಅವುಗಳನ್ನು ತುಂಡರಿಸಿರುವುದು ನಮ್ಮ ಅಭಿವೃದ್ಧಿ ಯೋಜನೆಗಳು. ಈಗ ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡಿದ ಆನೆದಾರಿಗಳಿಗೆ ಬದಲಾಗಿ ಇನ್ನೆಲ್ಲೋ ಮಾರ್ಗ ನಿರ್ಮಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಕೃಷಿಕರನ್ನು ಹೊರದಬ್ಬಿ ಮತ್ತಷ್ಟು ‘ಅಭಿವೃದ್ಧಿ’ ಗಾಗಿ ಜಲವಿದ್ಯುತ್ ಕಂಪೆನಿಗಳಿಗೆ ಭೂಮಿ ನೀಡುವ ಹುನ್ನಾರದ ಭಾಗವಷ್ಟೇ ಆಗಿದೆ.
ಆನೆದಾರಿಗಾಗಿ ತಮ್ಮ ಜಮೀನನ್ನು ಬಿಟ್ಟುಕೊಡಲು ಅನೇಕ ರೈತರು ಸಿದ್ಧರಿದ್ದಾರೆಂದು ಸ್ಥಳ ಪರಿಶೀಲನೆ ನಡೆಸಿದ ರಾಜ್ಯದ ಸಚಿವರು ಹೇಳಿಕೆಯಿತ್ತರು. ಆನೆ ದಾರಿಯೇನು ವಿದ್ಯುತ್ ಯೋಜನೆಯಿರಲಿ, ಗಣಿಗಾರಿಕೆಯಿರಲಿ, ಯಾವುದೇ ಉದ್ಯಮಕ್ಕಾದರೂ ಸರಿ ದೇಶದ ಪ್ರಗತಿಯನ್ನು ಬಯಸುವ ಅಭಿವೃದ್ಧಿಪರ ರೈತರು ತಮ್ಮ ಜಮೀನನ್ನು ಬಿಟ್ಟುಕೊಡಲು ತಯಾರಿದ್ದಾರೆಂಬ ಹೇಳಿಕೆಯನ್ನು ಅಧಿಕಾರದಲ್ಲಿರುವ ಪ್ರತಿಯೊಂದು ಸರ್ಕಾರವೂ ಪಕ್ಷಭೇದವಿಲ್ಲದೆ ನೀಡುತ್ತಲೇ ಇರುತ್ತವೆ. ಇದು ವ್ಯಾಪಾರಿ ಸಂಸ್ಕೃತಿಯ ಕೊಡುಗೆಯಾದ ಜಾಗತಿಕ ವಿದ್ಯಮಾನ.
ಆದರೆ ಈ ವಿಚಾರವನ್ನು ಆನೆದಾರಿ ನಿರ್ಮಾಣದ ಪ್ರಸ್ತಾಪವಾಗುತ್ತಿರುವ ಘಟ್ಟ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಿ ಹೇಳುವುದಾದರೆ, ಮುಖ್ಯವಾಗಿ ಇಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿ ಹೋಗಿದ್ದಾರೆ. ಯಾವ ಕೃಷಿಯೂ ನಿರಂತರ ಲಾಭದಾಯಕವಾಗದೇ ಸಾಲದಲ್ಲಿ ಮುಳುಗಿದ್ದಾರೆ. ಸರ್ಕಾರಗಳು ನೀಡಿದ ಯಾವುದೇ ಪ್ಯಾಕೇಜ್ ಅವರಿಗೆ ಭರವಸೆ ತಂದಿಲ್ಲ.
ಈಗಾಗಲೇ ಹಣದ ಅವಶ್ಯಕತೆಗಳಿಗಾಗಿ ಬಹುತೇಕರು ತಮ್ಮ ಜಮೀನಿನಲ್ಲಿದ್ದ ಅಲ್ಪಸ್ವಲ್ಪ ಮರಗಳನ್ನು ಮಾರಾಟ ಮಾಡಿದ್ದಾರೆ, ಇದರಿಂದ ಭೂ ಸವಕಳಿ ಉಂಟಾಗಿದೆ. ಈ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಘಟ್ಟ ಪ್ರದೇಶದ ಭಾಗದಲ್ಲಿರುವ ರೈತ ಇಲ್ಲಿನ ಪಾರಂಪರಿಕ ಬೆಳೆಗಳನ್ನು ಬೆಳೆಯಲಾರದ ಸ್ಥಿತಿ ತಲಪಿದ್ದಾನೆ. ತಮ್ಮ ನೆಲೆಯಿಂದ ಕದಲಿ ಹೋಗಿರುವ ಆನೆಗಳು ಮಾತ್ರವಲ್ಲ ಇವುಗಳ ಜೊತೆ ಇತ್ತೀಚೆಗೆ ಕಾಟಿ (ಕಾಡುಕೋಣ) ಚಿರತೆಗಳೂ ಬರುತ್ತಿವೆ. ಮಂಗಗಳ ಹಾವಳಿಯೂ ಮಿತಿ ಮೀರಿದೆ.
ಇವೆಲ್ಲದರ ಜೊತೆ ಕೂಲಿಕಾರ್ಮಿಕರು ಸಿಗದಿರುವುದರಿಂದ ಕೃಷಿಕರು ಇನ್ನಷ್ಟು ಸೋತು ಹೋಗಿದ್ದಾರೆ. ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೂ, ಕೊಳ್ಳುವವರಿಲ್ಲದೆ ನಿರಾಶನಾಗಿ ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವರಿಗೆ ಹೊಸ ಆಸೆಗಳನ್ನು ತರುತ್ತದೆ. ಹೇಗೂ ಮಾರಲು ಅಸಾಧ್ಯವಾಗಿರುವ ಜಮೀನಿಗೆ ಒಳ್ಳೆಯ ಪರಿಹಾರಧನ ದೊರಕಿ ತಾನು ಇಲ್ಲಿಂದ ಮುಕ್ತಿ ಪಡೆಯಬಹುದು ಎಂಬ ಆಸೆ ಸಹಜವಾಗಿ ಇರುತ್ತದೆ.
ಪ್ರತೀಬಾರಿ ಈ ಯೋಜನೆಗಳ ವಿಚಾರ ಕುರಿತ ಜನಾಭಿಪ್ರಾಯ ಸಂಗ್ರಹ ಸಭೆಗಳಲ್ಲಿ, ಮಾದ್ಯಮಗಳಲ್ಲಿ ಇವರು ತಮ್ಮ ಅಸಹಾಯಕತೆ ಮತ್ತು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಇವರಲ್ಲಿ ಕೆಲವರ ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹಿಡಿದು ಈಗಾಗಲೇ ದೂರವಾಗಿದ್ದಾರೆ.
ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಪ್ರಬಲವಾಗಿ ಸಮರ್ಥಿಸುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಂಡು, ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿ ಕೊಡಬೇಕು. ದೊಡ್ಡ ಕೈಗಾರಿಕೆಗಳಿಗೆ ಸರ್ಕಾರಗಳು ಕೊಡುತ್ತಿರುವ ರಿಯಾಯಿತಿಗಳ ಮುಂದೆ ಈ ಮೊತ್ತ ನಗಣ್ಯವಾದುದು.
ಕೂಲಿ ಕಾರ್ಮಿಕರಾದರೂ ಅಷ್ಟೆ ಹೆಚ್ಚಿನವರು ಅಧಿಕ ಕೂಲಿ ದೊರೆಯುವ ಇತರ ಪ್ರದೇಶಗಳಿಗೋ, ನಗರಗಳಿಗೋ ಹೋಗಿದ್ದಾರೆ. ಇಲ್ಲಿ ಉಳಿದವರು ಹೊಸ ಯೋಜನೆಗಳೇನಾದರೂ ಬಂದರೆ ಇನ್ನೂ ಉತ್ತಮ ಕೂಲಿ ದೊರೆಯುವ ನಿರೀಕ್ಷೆಯಲ್ಲಿ ಇದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರು ಇದೇ ಮನಸ್ಥಿತಿಯಲ್ಲಿದ್ದಾರೆ. ಇವರೆಲ್ಲ ಯಾವುದೇ ದೂರಗಾಮಿ ಪರಿಣಾಮಗಳ ಬಗ್ಗೆ ಯೋಚಿಸದೆ, ತಮ್ಮ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆಯಿಂದ ಈ ಅಭಿವೃದ್ಧಿ ಯೋಜನೆಗಳನ್ನು ಸ್ವಾಗತಿಸುತ್ತ ಕುಳಿತಿದ್ದಾರೆ.
ಕರ್ನಾಟಕ ಮಾತ್ರವಲ್ಲ ದೇಶದ ಅರಣ್ಯಗಳ ಆಶ್ರಯ ಸಾಮರ್ಥವೇ ಕಡಿಮೆಯಾದದ್ದರಿಂದಲೇ ಪ್ರಾಣಿಗಳು ನಾಡಿಗೆ ಬಂದಿರುವುದು.. ಜನಸಂಖ್ಯೆ ನಿಯಂತ್ರಣ ಮಾಡಬೇಕು, ಜನವಸತಿಗಳು ಅರಣ್ಯ ಪ್ರದೇಶದಲ್ಲಿ ವಿಸ್ತರಿಸದಂತೆ ನೋಡಿಕೊಳ್ಳಬೇಕು. ಅರಣ್ಯದ ಆಶ್ರಯ ಸಾಮರ್ಥ್ಯದಂತೆ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುವುದೆಂದರೆ, ದಿನಕಳೆದಂತೆ ಅರಣ್ಯ ವಿಸ್ತಾರ ಕಡಿಮೆಯಾಗುತ್ತಿರುವ ನಮ್ಮ ದೇಶದ ಮಟ್ಟಿಗಂತೂ ಪ್ರಾಣಿಗಳನ್ನು ಸಂಪೂರ್ಣ ನಾಶ ಮಾಡುವ ಯೋಜನೆಯಾದೀತು.
ಸರ್ಕಾರ ತುರ್ತಾಗಿ ಪುಂಡಾನೆಗಳಿಗಾಗಿ ಶ್ರೀಲಂಕಾ ಮಾದರಿಯಲ್ಲಿ ಆನೆಧಾಮವನ್ನು ನಿರ್ಮಿಸಬೇಕು. ಇವು ಸೀಮಿತ ಪ್ರದೇಶದಲ್ಲಿ ಆನೆಗಳಿಗೆ ಆಹಾರ ಸಹಿತ ನೀಡುವ ಆಶ್ರಯತಾಣಗಳಾಗಿರುತ್ತವೆ. ಇನ್ನುಳಿದ ಕಾಡಾನೆಗಳಿಗೆ ನಾವು ಏನನ್ನೂ ಮಾಡಬೇಕಾಗಿಲ್ಲ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ನಡೆಸುತ್ತಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಶಾಶ್ವತವಾಗಿ ನಿಲ್ಲಿಸಬೇಕು.
ಹಲವು ತಲೆಮಾರುಗಳ ಕಾಲದಿಂದ ಈ ಪ್ರದೇಶದಲ್ಲಿ ರೈತರು, ಕೃಷಿ ಕಾರ್ಮಿಕರು ನೆಲೆಸಿದ್ದಾರೆ. ಇವರಲ್ಲಿ ಸ್ವ ಇಚ್ಛೆಯಿಂದ ಬೇರೆಡೆಗೆ ಹೋಗಲು ಬಯಸುವವರಿಗೆ ಉತ್ತಮ ಪರಿಹಾರ ನೀಡಿ ಸ್ಥಳಾಂತರಿಸಬೇಕು. ಇಡೀ ಘಟ್ಟ ಪ್ರದೇಶವನ್ನೇ ಸಂರಕ್ಷಿತ ಪ್ರದೇಶವನ್ನಾಗಿಸಿ ಆನೆಗಳು ಮತ್ತಿತರ ಪ್ರಾಣಿಗಳಿಗೆ ಬದುಕಲು ಬಿಡುವುದೊಂದೇ ಪರಿಹಾರ ಮಾರ್ಗ. ಇದು ಪ್ರಾಣಿಗಳ ಉಳಿವಿಗೆ ಮಾತ್ರವಲ್ಲ ಮಹಾ ವೈವಿಧ್ಯ ತಾಣವಾಗಿರುವ ಇಡೀ ಪಶ್ಚಿಮ ಘಟ್ಟಗಳು ಆ ಮೂಲಕ ಜೀವಸಂಕುಲದ ಉಳಿವಿಗೆ ಅನಿವಾರ್ಯ.
ವಿಚಿತ್ರ ಎಂದರೆ ಸರ್ಕಾರಗಳು ಇಲ್ಲಿನ ಯಾವುದೇ ವಿದ್ಯುತ್ ಯೋಜನೆಯನ್ನಾಗಲೀ ಇನ್ನಿತರ ಕಾಮಗಾರಿಗಳನ್ನಾಗಲೀ ನಿಲ್ಲಿಸುವ ಮಾತಾಡುತ್ತಿಲ್ಲ. ಒಂದೊಮ್ಮೆ ಆನೆದಾರಿಯ ನೆಪದಲ್ಲಿ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಂಡರೆ ಆ ನೆಲವೂ ಯಾವುದಾದರೂ ಯೋಜನೆ ಪಾಲಾಗುವ ಅನುಮಾನ ಕಂಡುಬರುತ್ತಿದೆ. ನಮ್ಮ ಶಾಸಕಾಂಗ ಮತ್ತು ನಮ್ಮ ನೀತಿ ನಿರೂಪಕರು ಸರಿದಾರಿಗೆ ಬರುವ ತನಕ ಈ ಸಮಸ್ಯೆಗೆ ಉತ್ತರ ದೊರೆಯಲಾರದು.
ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ಇಲಿಗಳೇ ಮಾಡಬೇಕು. ಬೇರೆ ದಾರಿ……ನಮಗೂ ಇಲ್ಲ….ಆನೆಗಳಿಗೂ ಇಲ್ಲ.

ಕೃಪೆ: ಸಮಾಜಮುಖಿ ಪತ್ರಿಕೆ

1 COMMENT

LEAVE A REPLY

Please enter your comment!
Please enter your name here