ರಾಜ್ಯದಲ್ಲಿ ಉತ್ತಮ ಮಳೆ ನಿರೀಕ್ಷೆ ; ಮಲೆನಾಡಿಗೆ ಆರೆಂಜ್ ಅಲರ್ಟ್

0

ರಾಜ್ಯದಲ್ಲಿ ಜುಲೈ 02, 2023ರ ತನಕ ಆಗಿರುವ ನೈರುತ್ಯ ಮುಂಗಾರು ಮಳೆಯಲ್ಲಿ ಶೇಕಡ 51ರಷ್ಟು ಕೊರತೆ ಉಂಟಾಗಿದೆ. ವಾಡಿಕೆ ಮಳೆ 21.07 ಸೆಂಟಿ ಮೀಟರ್ ಪ್ರಮಾಣದಷ್ಟು ಆಗಬೇಕು. ಆದರೆ ಆಗಿದ್ದು 10.06 ಸೆಂಟಿ ಮೀಟರ್. ಕರಾವಳಿಯಲ್ಲಿ ವಾಡಿಕೆ ಮಳೆ 93.09 ಸೆಂಟಿ ಮೀಟರ್. ಆದರೆ ಬಿದ್ದ ಮಳೆ 53.03 ಸೆಂಟಿ ಮೀಟರ್. ಇದು ಶೇಕಡ 46 ರಷ್ಟು ಕಡಿಮೆ ಆಗಿದೆ.

ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆ 11.01 ಸೆಂಟಿ ಮೀಟರ್. ಆದರೆ ಆಗಿರುವ ಮಳೆ ಪ್ರಮಾಣ 5.03 ಸೆಂಟಿ ಮೀಟರ್. ಶೇಕಡ 55ರಷ್ಟು ಮಳೆ ಕೊರತೆಯಾಗಿದೆ.

ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಮಳೆ 16.01 ಸೆಂಟಿ ಮೀಟರ್. ಆದರೆ ಜುಲೈ 02ರ ತನಕ ಆಗಿರುವ ಮಳೆ ಪ್ರಮಾಣ 7.04 ಸೆಂಟಿ ಮೀಟರ್. ಶೇಕಡ 54ರಷ್ಟು ಮಳೆ ಕೊರತೆಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 7.08 ಸೆಂಟಿ ಮೀಟರ್ ಮಳೆಯಾಗಬೇಕು. ಆದರೆ ಆಗಿರುವ ಮಳೆ 7.04 ಸೆಂಟಿ ಮೀಟರ್. ಶೇಕಡ 05 ರಷ್ಟು ಕೊರತೆ ಉಂಟಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಾಡಿಕೆಯಂತೆ ಜುಲೈ 02ರ ತನಕ 6.09 ಸೆಂಟಿ ಮೀಟರ್ ಮಳೆಯಾಗಬೇಕು. ಆದರೆ ಆಗಿರುವುದು 5.08 ಸೆಂಟಿ ಮೀಟರ್.  ಶೇಕಡ 14ರಷ್ಟು ಮಳೆ ಕೊರತೆಯಾಗಿದೆ.

ಬೆಂಗಳೂರು ನಗರದಲ್ಲಿ 9 ಸೆಂಟಿ ಮೀಟರ್ ಮಳೆ ಆಗಬೇಕಿತ್ತು. ಆದರೆ 7.08 ಸೆಂಟಿ ಮೀಟರ್ ಮಳೆಯಾಗಿದೆ. ಶೇಕಡ 20ರಷ್ಟು ಕೊರತೆ ಉಂಟಾಗಿದೆ.

ರಾಜ್ಯದಲ್ಲಿ ಜುಲೈ 02ರ ಒಂಭತ್ತು ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಕೋಲಾರ, ಮಂಡ್ಯ ಮೈಸೂರು ಮತ್ತು ತುಮಕೂರು. ಇನ್ನು 15 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ. 07 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತೀ ಕಡಿಮೆ ಮಳೆಯಾಗಿದೆ.

ಬಾಗಲಕೋಟೆ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಈ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅತೀ ಕಡಿಮೆ ಮಳೆಯಾಗಿದೆ. ಮುಂದಿನ ಐದು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಕೊರತೆ ಸುಧಾರಣೆಯಾಗುವ ಸಾಧ್ಯತೆಗಳಿವೆ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ರಾಜ್ಯದ ಕರಾವಳಿ ಪ್ರದೇಶಕ್ಕೆ ಮುಂದಿನ ನಾಲ್ಕು ದಿನಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಅಂದರೆ ಅತೀಭಾರಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವೆಡೆ ಈ ರೀತಿಯ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿಗೆ ಜುಲೈ 06 ತನಕ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ. ಜುಲೈ 04, 05, 06 ತಾರೀಖುಗಳಂದು ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿಗೆ ಜುಲೈ 03 ಮತ್ತು 04, 05, 06 ರಂದು ಬಹುತೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇಂದಿನಿಂದ ಅಂದರೆ ಜುಲೈ 03 ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಜುಲೈ 03 ರಿಂದ 06 ತನಕ ಪಶ್ಚಿಮ ಘಟ್ಟ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಜುಲೈ 04 ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಒಳನಾಡಿನಲ್ಲಿ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕೆಲವಡೆ ಅತೀ ಭಾರಿಮಳೆಯಾಗುವ ಸಾಧ್ಯತೆಗಳಿವೆ ಅಂದರೆ 20 ಸೆಂಟಿ ಮೀಟರ್ ತನಕ ಮಳೆಯಾಗುವ ಸಾಧ್ಯತೆಗಳಿವೆ. ದಕ್ಷಿಣ ಒಳನಾಡಿಗೆ 05, 06ನೇ ತಾರೀಖು ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here