ಭಾರತೀಯ ವಿಜ್ಞಾನಿಗಳು ರಸಗೊಬ್ಬರ ಬಳಕೆಯನ್ನುಗಣನೀಯವಾಗಿ ಕಡಿಮೆ ಮಾಡುವ, ಪರಿಸರ ಮತ್ತು ಆರ್ಥಿಕ ಲಾಭಗಳನ್ನು ಪಡೆಯಲು ಅವಕಾಶ ಇರುವ ಭತ್ತದ ತಳಿಗಳನ್ನು ಗುರುತಿಸಿದ್ದಾರೆ. ಈ ತಳಿಗಳು ಸಾರಜನಕವನ್ನು ಸಮರ್ಥವಾಗಿ ಬಳಸುವುದನ್ನು ಅಧ್ಯಯನದಿಂದ ಕಂಡು ಕೊಂಡಿದ್ದಾರೆ.
ಈ ಅಧ್ಯಯನದ ವಿವರವು “ಜರ್ನಲ್ ಆಫ್ ಪ್ಲಾಂಟ್ ಗ್ರೋತ್ ರೆಗ್ಯುಲೇಶನ್”ನಲ್ಲಿ ಪ್ರಕಟವಾಗಿದೆ. ತಳಿಗಳಾದ ಖಿರಾ ಮತ್ತು ಸಿಆರ್ ಧನ್ 301 ದೀರ್ಘಾವಧಿಯ ಬೆಳೆಗಳಾಗಿದ್ದರೆ, ಧಲಾ ಹೀರಾ ತಳಿಯು ಕಡಿಮೆ ಅವಧಿಯದ್ದಾಗಿದೆ. ಇದು ರೈತರಿಗೆ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ.
ಧಾನ್ಯಗಳಲ್ಲಿನ ಸಾರಜನಕದ ಸಮರ್ಥ ಬಳಕೆಯು ಬಹು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ವಿಶೇಷವಾಗಿ ಭತ್ತದ ಬೆಳೆಯಲ್ಲಿ ಇದು ಭಾರಿ ಪ್ರಮುಖವಾದ ಅಂಶವಾಗಿದೆ. ಕೃಷಿ ಸುಸ್ಥಿರತೆಯಲ್ಲಿಯೂ ನಿರ್ಣಾಯಕ ಅಂಶವಾಗಿದೆ. ಭಾರತದಲ್ಲಿ ಪ್ರಧಾನ ಸಾರಜನಕ ಗೊಬ್ಬರವಾದ ಯೂರಿಯಾ ಒಳಸುರಿಗೆ ಪ್ರತಿ ಯೂನಿಟ್‌ಗೆ ಕೊಯ್ಲು ಮಾಡಿದ ಧಾನ್ಯದ ಇಳುವರಿ ಅಥವಾ ಸಾರಜನಕವನ್ನು ಅಳೆಯಲಾಗುತ್ತದೆ.
ಕಳಪೆ ರಸಗೊಬ್ಬರ ಜೊತೆಗೆ ಸಾರಜನಕದ ಸಮರ್ಥ ಬಳಕೆಯಲ್ಲಿ ವಿಫಲವಾಗುವ ಭತ್ತದ ತಳಿಗಳಿಂದ ಭಾರತದಲ್ಲಿ ವಾರ್ಷಿಕವಾಗಿ ರೂ 1 ಲಕ್ಷ ಕೋಟಿ ಮತ್ತು ಜಾಗತಿಕವಾಗಿ 170 ಶತಕೋಟಿ ಡಾಲರ್ ಮೌಲ್ಯದ ಸಾರಜನಕ ಗೊಬ್ಬರಗಳು ವ್ಯರ್ಥವಾಗುತ್ತಿದೆ. ಇದಲ್ಲದೆ, ಕಳಪೆ ಸಾರಜನಕ ಬಳಕೆಯು ಕಳೆದ 50 ವರ್ಷಗಳಲ್ಲಿ ಪರಿಸರ ಸಮಸ್ಯೆಗಳಿಗೆ ಗಮನಾರ್ಹ ಕೊಡುಗೆ ನೀಡಿದೆ.
ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ವಿವಿಧ ಭತ್ತದ ತಳಿಗಳಲ್ಲಿ 46 ಫಿನೋಟೈಪಿಕ್ ಮತ್ತು ಶಾರೀರಿಕ ನಿಯತಾಂಕಗಳನ್ನು ಪರಿಶೀಲಿಸಿದೆ. ಸಂಶೋಧನೆಗಳು ಸಾವಿರಕ್ಕೂ ಹೆಚ್ಚು ಬಿಡುಗಡೆಯಾದ ಭಾರತೀಯ ತಳಿಗಳಲ್ಲಿನ ಒಂದು ಡಜನ್ ಅಕ್ಕಿ ಪ್ರಭೇದಗಳ ಸಾರಜನಕ ಬಳಕೆ ಸಾಮರ್ಥ್ಯದಲ್ಲಿ ಐದು ಪಟ್ಟು ವ್ಯತ್ಯಾಸ ಇರುವುದನ್ನು ಬಹಿರಂಗಪಡಿಸಿದೆ.
“ನಾವು ಸಾರಜನಕ ಬಳಕೆ ಸಾಮರ್ಥ್ಯತೆಯೊಂದಿಗೆ ಬಲವಾಗಿ ಸಂಬಂಧಿಸಿರುವ 19 ಮಾನದಂಡಗಳನ್ನು ಗುರುತಿಸಿದ್ದೇವೆ. ಇದರಲ್ಲಿ ಇತ್ತೀಚೆಗೆ ಗೊತ್ತಾದ 8 ಅಂಶಗಳು ಸಹ ಸೇರಿವೆ. ಇವುಗಳ ಬಗ್ಗೆ ಕ್ಷೇತ್ರ ಪ್ರಯೋಗಗಳ ದೃಢೀಕರಣ ಬಾಕಿಯಿದೆ” ಎಂದು ತಮ್ಮ ಡಾಕ್ಟರೇಟ್ ಪ್ರಬಂಧಕ್ಕಾಗಿ ಈ ಕೆಲಸವನ್ನು ನಿರ್ವಹಿಸಿದ ಆಶು ತ್ಯಾಗಿ ಹೇಳಿದ್ದಾರೆ.
ಸಂಶೋಧನೆಯು ಒಂದು ದಶಕದಲ್ಲಿ ಮೂರು ಪ್ರತ್ಯೇಕ ಅಧ್ಯಯನಗಳನ್ನು ಒಳಗೊಂಡಿತ್ತು, ಪ್ರಯೋಗಾಲಯದಿಂದ ವಿವಿಧ ಸಂಶೋಧಕರು ಹಸಿರುಮನೆ ಪರಿಸ್ಥಿತಿಗಳಲ್ಲಿ ಮೌಲ್ಯಮಾಪನ ಮಾಡಿದ 34 ಬಿಡುಗಡೆಯಾದ ಅಕ್ಕಿ ಪ್ರಭೇದಗಳ ವಿವಿಧ ಮಾದರಿಗಳನ್ನು ಬಳಸಿದರು. ಹಸಿರುಮನೆಗಳಲ್ಲಿ ಹೆಚ್ಚಿನ ಸಾರಜನಕ ಬಳಕೆ ಸಾಮರ್ಥ್ಯ ಉಳ್ಳವು ಎಂದು ಗುರುತಿಸಲಾದ ಪ್ರಭೇದಗಳು ನಂತರ ಕೃಷಿ ಸಂಸ್ಥೆ ಪಾಲುದಾರರಿಂದ ಕ್ಷೇತ್ರ ಪ್ರಯೋಗಗಳಲ್ಲಿ ದೃಢೀಕರಿಸಲ್ಪಟ್ಟವು,
ಸಾರಜನಕ ಬಳಕೆ ಸಾಮರ್ಥ್ಯದ ಜೈವಿಕ ಮೌಲ್ಯಮಾಪನಕ್ಕಾಗಿ ಬಳಸಿದ ವಿಧಾನಗಳು ಬಲಿಷ್ಠ ತಳಿಗಳ ಮೇಲಿನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿವೆ. ಇದರ ಆಧಾರದ ಮೇಲೆ, ವಿವಿಧ ಕೃಷಿ ಹವಾಮಾನ ಪರಿಸ್ಥಿತಿಗಳು ಮತ್ತು ಮಾರುಕಟ್ಟೆಗಳಿಗೆ ಸೂಕ್ತವಾದ ಹೆಚ್ಚಿನ ಸಾರಜನಕ ಬಳಕೆ ಸಾಮರ್ಥ್ಯದ ತಳಿಗಳನ್ನು ಕಂಡುಹಿಡಿಯಲು ನಾವು ಎಲ್ಲಾ ಭಾರತೀಯ ಭತ್ತದ ತಳಿಗಳ ದೊಡ್ಡ ಪ್ರಮಾಣದ ಪರೀಕ್ಷೆಯನ್ನು ಶಿಫಾರಸು ಮಾಡಬಹುದು” ಎಂದು ಅಧ್ಯಯನ ತಂಡದ ಎನ್ ರಘುರಾಮ್ ಹೇಳಿದ್ದಾರೆ.
ಕಳಪೆ ಸಾರಜನಕ ನಿರ್ವಹಣೆಯಿಂದ ಪರಿಸರದ ಮೇಲೆ ಅಪಾರ ದುಷ್ಪರಿಣಾ ಉಂಟಾಗುತ್ತದೆ. ಸಾರಜನಕ ಗೊಬ್ಬರಗಳು ನೈಟ್ರಸ್ ಆಕ್ಸೈಡ್, ಪ್ರಬಲವಾದ ಹಸಿರುಮನೆ ಅನಿಲದ ಮೂಲಕ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ. ಇದಲ್ಲದೆ, ಜಲಮೂಲಗಳಿಗೆ ಸಾರಜನಕ ಹರಿವು ಯುಟ್ರೋಫಿಕೇಶನ್‌ಗೆ ಕಾರಣವಾಗುತ್ತದೆ, ಇದು ನೀರಿನಲ್ಲಿ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ, ಇದು ಜಲಚರಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುವ ಮೃತ ವಲಯಗಳನ್ನು ನಿರ್ಮಸುತ್ತದೆ. ಭತ್ತದ ತಳಿಯಲ್ಲಿ ಸಾರಜನಕ ಬಳಕೆ ಸಾಮರ್ಥ್ಯವನ್ನು ಸುಧಾರಣೆ ಮಾಡುವುದರಿಂದ ಈ ಸಮಸ್ಯೆಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು, ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಬಹುದು.
ಭಾರತದಲ್ಲಿ ಹೆಚ್ಚಿನ ಮಂದಿ ತಮ್ಮ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಅವರಿಗೆ ಕೃಷಿಗಾಗಿ ಸಾರಜನಕ ಬಳಕೆಯಲ್ಲಿ ಅಧಿಕ ಸಾಮರ್ಥ್ಯ ಇರುವ ತಳಿಗಳನ್ನು ನೀಡುವುದರಿಂದ ಇಳುವರಿ ಮತ್ತು ತನ್ಮೂಲಕ ಬರುವ ಲಾಭದ ಪ್ರಮಾಣ ಹೆಚ್ಚುತ್ತದೆ. ಮುಖ್ಯವಾಗಿ ಅತಿಯಾದ ರಸಗೊಬ್ಬರದ ಅಗತ್ಯವನ್ನು ಕಡಿಮೆ ಮಾಡಬಹುದು. ಇದರಿಂದ ಅವರು ಗೊಬ್ಬರಗಳ ಖರೀದಿಗಾಗಿ ಮಾಡುವ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ.