ಅತೀ ಉತ್ಪಾದನೆ ನಾಗಲೋಟದಲ್ಲಿ ತೊಡಗಿದ್ದೇವೆ. ಏಕೆ, ಏನು, ಏತ್ತ ಎಂದು ಆಲೋಚಿಸಲೇ ಹೋಗುತ್ತಿಲ್ಲ. ಉತ್ಪಾದನೆಯೇನೊ ಅತಿಯಾಯ್ತು, ಅವುಗಳನ್ನು ಏನು ಮಾಡೋದು; ಬಡಪಾಯಿ ಭಾರತ, ಅದರಂಥ ರಾಷ್ಟ್ರಗಳಿಗೆ ತಂದು ಸುರಿಯೋದು, ಇಲ್ಲಿರುವವರನ್ನು ಬೀದಿಪಾಲು ಮಾಡೋದು. ಇಂಥ ಒಪ್ಪಂದಗಳಿಗೆ ಆರ್.ಸಿ.ಇ.ಪಿ. ಎಂಬ ಉದ್ದದ ಆಕರ್ಷಕ ಹೆಸರುಗಳು. ಈ ಬಾರಿಯೇನೊ ಭಾರತದ ಗ್ರಾಮೀಣರು ಜೋರಾಗಿಯೇ ಪ್ರತಿಭಟಿಸಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಲು ಹಿಂಜರಿದಿದೆ. 15 ರಾಷ್ಟ್ರಗಳು ಸಹಿ ಹಾಕಿವೆ; ಭಾರತವೂ ಯಾವಾಗ ಬರುತ್ತದೊ ಎಂದು ತುದಿಗಾಲಲ್ಲಿ ಕಾಯುತ್ತಿವೆ. ಇಂಥ ಸಂದರ್ಭದಲ್ಲಿ ಇಂಥ ಅನಾಹುತಗಳಿಗೆಲ್ಲ ಕಾರಣವಾಗುವ ಅತಿಯಾದ ಉತ್ಪಾದನೆ ಬೇಕೇ ಎನ್ನುವ ಪ್ರಶ್ನೆಯನ್ನು ಆಸ್ಟ್ರೇಲಿಯಾದಲ್ಲಿ ನೆಲಸಿರುವ ಕನ್ನಡಿಗ ಶ್ರೀಹರ್ಷ ಸಾಲಿಮಠ್ ಕೇಳಿದ್ದಾರೆ… ನೀವೇನು ಉತ್ತರ ಕೊಡುತ್ತಿರೋ ನೋಡಿ…. ಸಂಪಾದಕ

ಲೇಖಕ: ಶ್ರೀಹರ್ಷ ಸಾಲಿಮಠ್

ನಾವು ಜಾಗತೀಕರಣವನ್ನು ವಿರೋಧಿಸಬೇಕಾದ ಮುಖ್ಯ ಕಾರಣವೆಂದರೆ “ಅತಿಯಾದ ಉತ್ಪಾದನೆ” ಆಸ್ಟ್ರೇಲಿಯಾಕ್ಕೆ ಬೇಕಾಗಿರುವುದು ಮೂರು ಸಾವಿರ ಕೋಟಿ ಲೀಟರ್ ಹಾಲು. ಆದರೆ ಒಂಬತ್ತು ಸಾವಿರ ಕೋಟಿ ಉತ್ಪಾದಿಸುವ ಅವಶ್ಯಕತೆ ಏನಿದೆ? ಅಷ್ಟು ಉತ್ಪಾದನೆಗಾಗಿ ಹಸು ಸಾಕಣೆ ಫಾರಂಗಳು, ಅದಕ್ಕಾಗಿ ಅಪಾರ ಪ್ರಮಾಣದ ವಿದ್ಯುತ್ ಉತ್ಪಾದನೆ, ನೀರು, ಮೇವು ಇತ್ಯಾದಿ ಬೇಕು. ಅದನ್ನೆಲ್ಲ ನೈಸರ್ಗಿಕ ಸಂಪತ್ತು ಕರಗಿಸಿಯೇ ಉತ್ಪಾದಿಸಬೇಕು. ಇದಕ್ಕೆ ಪ್ಯಾಕಿಂಗ್, ಸಾಗಣಿಕೆ, ಇಂಧನ ಇತ್ಯಾದಿಗಳು. ಕಡೆಗೆ ಬಳಕೆಯಾಗದ ಉತ್ಪಾದನೆ, ಅವುಗಳ ಪ್ಯಾಕಿಂಗ್ ಕಸ ಸಮುದ್ರವನ್ನು ಸೇರುತ್ತದೆ. ಅತಿಯಾದ ಉತ್ಪಾದನೆಯಿಂದಾಗಿ ರೈತರಿಗೆ ಶ್ರಮಕ್ಕೆ ತಕ್ಕ ಬೆಲೆಯೂ ಸಿಗುವುದಿಲ್ಲ. ಜಾಗತೀಕರಣದಿಂದ ಜಗತ್ತಿನಾದ್ಯಂತ ಅತಿ ದೊಡ್ಡ ಹೊಡೆತ ತಿಂದಿರುವವರು, ನೋವು ಅನುಭವಿಸುತ್ತಿರುವವರಲ್ಲಿ ಬಹುತೇಕ ದೇಶಗಳ ರೈತರು ಸೇರಿದ್ದಾರೆ
ದನದ ಮಾಂಸದ ರಫ್ತಿಗಾಗಿ ದೊಡ್ಡ ದೊಡ್ಡ ಫಾರಂಗಳನ್ನು ಸ್ಥಾಪಿಸಲು ಅಮೇಜಾನ್ ಕಾಡುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಇಂಡೊನೇಶಿಯಾ ಮಲೇಶಿಯಾಗಳಲ್ಲಿ ಮೆಣಸು, ಅಡಿಕೆಗಳನ್ನು ಬೆಳೆಯಲು ನಿತ್ಯ ಹರಿದ್ವರ್ಣ ಕಾಡುಗಳನ್ನು ಬಲಿಕೊಡಲಾಗುತ್ತಿದೆ. ಅದರ ಜೀವವೈವಿಧ್ಯ ನಾಶವಾಗುತ್ತಿದೆ. ಅಸಲಿಗೆ ಇಷ್ಟೊಂದು ಉತ್ಪಾದನೆ ಅವಶ್ಯಕತೆಯೇ ಇಲ್ಲ. ರಫ್ತು ಮಾಡಿ ಬಂಡವಾಳಿಗರ ಜೇಬಿಗೆ ನಿರ್ಜೀವ ಹಣವನ್ನು ತುಂಬಿಸಲು ಇಷ್ಟೆಲ್ಲ ಪಡಿಪಾಟಲು!


ಈ ಹಣಕ್ಕಾಗಿ ಪ್ರಾಣಿಗಳ ಪಾಲಿನ ಮತ್ತು ಬಡಜನಗಳ ಪಾಲಿನ ನೈಸರ್ಗಿಕ ಸಂಪತ್ತು ಕೊಳ್ಳೆಯಾಗುತ್ತಿದೆ. ಹೀಗೆ ಬಂಡವಾಳಶಾಹಿ ಮುಖಾಂತರ ಲೂಟಿ ಮಾಡಿದ ಹಣವನ್ನು ನೌಕರಿಯಲ್ಲಿ ದುಡಿದು ನಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯ ಕಟ್ಟಲು ಹೆಣಗುತ್ತಿರುತ್ತೇವೆ. ನಿಜವಾಗಿ ನೋಡಿದರೆ ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯವನ್ನು ಕೈಯಾರೆ ಹಾಳು ಮಾಡುತ್ತಿದ್ದೇವೆ. ಪ್ರಕೃತಿ ಸಂಪತ್ತನ್ನು ನೋಟುಗಳಾಗಿ ಪರಿವರ್ತಿಸುವುದರಲ್ಲಿ ಯಾವ ಸುಖವಿದೆ ಹೇಳಿ ?

LEAVE A REPLY

Please enter your comment!
Please enter your name here