ಈಗಾಗಲೇ ಕಣ್ಣಿಗೆ ಕಾಣಿಸದ ಸೂಕ್ಷ್ಮಾಣು ಕೊರೊನಾ ತೀವ್ರ ತಲ್ಲಣ ಉಂಟು ಮಾಡಿದೆ. ಇದೀಗ ಎದುರಾಗಿರುವ ಮಿಡತೆ ದಾಳಿಗಳ ಅಪಾಯ, ಗಾಯದ ಮೇಲೆ ಬರೆ ಎಳೆದಂಥ ಅಪಾಯ ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಕಾರಣ ಈ ಮಿಡತೆಗಳು ಸಾಮಾನ್ಯಕ್ಕಿಂತ 400 ಪಟ್ಟು ಅಧಿಕ ಬಾರಿ ಸಂತಾನೋತ್ಪತ್ತಿ ಮಾಡುವುದರಿಂದ ಭಾರತ ಭಾರಿ ಅಪಾಯ ವಲಯದಲ್ಲಿದೆ ಎಂದು ತಜ್ಞರು ಹೇಳುತ್ತಾರೆ.
ಸಾಮಾನ್ಯವಾಗಿ ಮಿಡತೆಗಳ ದಾಳಿ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ದಾಳಿಯಿಟ್ಟ ಪ್ರದೇಶದ ಹಸಿರನ್ನು ತಿಂದು ನೋಡುನೋಡುತ್ತಿದ್ದಂತೆ ಮರುಭೂಮಿಯ ರೀತಿ ಮಾಡಿ ಬಿಡುತ್ತವೆ. ಒಂದೊಂದು ಹಿಂಡಿನಲ್ಲೂ ಲಕ್ಷಾಂತರ, ಕೋಟ್ಯಂತರ ಮಿಡತೆಗಳಿರುತ್ತವೆ. ಈಗಾಗಲೇ 2020ರ ಏಪ್ರಿಲ್ ನಲ್ಲಿ ಪಾಕಿಸ್ತಾನದಿಂದ ಒಂದು ದೊಡ್ಡ ಮಿಡತೆ ಹಿಂಡು ರಾಜಸ್ತಾನಕ್ಕೆ ದಾಳಿಯಿಟ್ಟಿವೆ. ಜೂನ್ ಮೊದಲ ವಾರದ ವೇಳೆಗೆ ಮತ್ತಷ್ಟೂ ಭಾರಿ ಸಂಖ್ಯೆಯ ಹಿಂಡುಗಳು ಭಾರತದ ಇನ್ನಿತರ ಪ್ರದೇಶಗಳಿಗೂ ದಾಳಿ ಮಾಡುವ ಸಾಧ್ಯತೆ ಅಧಿಕವಾಗಿರುವುದು ಆತಂಕವನ್ನು ತೀವ್ರಗೊಳಿಸಿದೆ. ಈ ಹೆಚ್ಚುವರಿ ಮರುಭೂಮಿ ಮಿಡತೆ ಹಿಂಡುಗಳು ಭಾರತಕ್ಕಷ್ಟೆ ಅಲ್ಲದೇ ಇರಾನ್, ಪಾಕಿಸ್ತಾನ್ ಹಾಗೂ ಹಾರ್ನ್ ಆಫ್ ಆಫ್ರಿಕಾ ಮತ್ತು ಕೆಂಪು ಸಮುದ್ರ ಪ್ರದೇಶಗಳ ಕೃಷಿಕ್ಷೇತ್ರಕ್ಕೂ ಬೆದರಿಯೊಡ್ಡಿವೆ.

ಜೈಪುರ ಸನಿಹ ಹೊಲಕ್ಕೆ ದಾಳಿಯಿಟ್ಟಿರುವ ಮಿಡತೆಗಳ ಮಹಾ ಹಿಂಡು

ಕೆಲವೊಂದು ಹವಾಮಾನ ವೈಪರೀತ್ಯಗಳು ಮರುಭೂಮಿ ಮಿಡತೆಗಳಿಗೆ ಭಾರಿ ಅನುಕೂಲರವಾಗಿ ಪರಿಣಮಿಸುತ್ತವೆ. ಅವುಗಳು ಸಂಖ್ಯೆಯಲ್ಲಿ 400 ಪಟ್ಟು ಹೆಚ್ಚಾಗುತ್ತವೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ವರದಿ ತಿಳಿಸಿದೆ. ಈ ಮಹಾ ಸ್ಫೋಟಕ ಗುಣಾಕಾರವು ಏಷ್ಯಾ ಮತ್ತು ಆಫ್ರಿಕಾದ ಹೆಚ್ಚಿನ ಭಾಗಗಳಿಗೆ ವಿಪತ್ತು ಉಂಟುಮಾಡಬಹುದೆಂದು ಹೇಳಲಾಗಿದೆ.
ಈಗಾಗಲೇ ತಿಳಿಸಿದಂತೆ ರಾಜಸ್ಥಾನದ 33 ಜಿಲ್ಲೆಗಳಲ್ಲಿ 22 ರಲ್ಲಿ 38,308 ಹೆಕ್ಟೇರ್ ಜಮೀನು, ಮಿಡತೆಗಳ ದಾಳಿಗೆ ಒಳಗಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇವುಗಳು ಏಪ್ರಿಲ್ನಲ್ಲಿ ಪಾಕಿಸ್ತಾನದಿಂದ ಭಾರತ ಪ್ರವೇಶಿಸಿದ ನಂತರ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದವರೆಗೆ ತಲುಪಿವೆ.
ಪ್ರಸ್ತುತ ಏಕಾಏಕಿ ಭಾರತ, ಇರಾನ್ ಮತ್ತು ಪಾಕಿಸ್ತಾನದ ಜೊತೆಗೆ ಹಾರ್ನ್ ಆಫ್ ಆಫ್ರಿಕಾ ಮತ್ತು ಕೆಂಪು ಸಮುದ್ರದ ಪ್ರದೇಶಗಳ ಮೇಲೆ ತೀವ್ರ ದುಷ್ಪರಿಣಾಮ ಪರಿಣಾಮ ಬೀರುವ ಅಪಾಯದ ಸಾಧ್ಯತೆ ತೀವ್ರವಾಗಿ ಹೆಚ್ಚಿದೆ. ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಮಿಡತೆ ದಾಳಿ ಪೀಡಿತ ದೇಶಗಳನ್ನು ಮೂರು ಭಾಗಗಳನ್ನಾಗಿ ವರ್ಗೀಕರಿಸಿದೆ:
ಪಶ್ಚಿಮ ಪ್ರದೇಶವು ಪಶ್ಚಿಮ ಆಫ್ರಿಕಾದ ದೇಶಗಳನ್ನು ಒಳಗೊಂಡಿದೆ
ಮಧ್ಯ ಪ್ರದೇಶವು ಆಫ್ರಿಕಾದ ಹಾರ್ನ್ ದೇಶಗಳನ್ನು ಒಳಗೊಂಡಿದೆ
ಪೂರ್ವ ಪ್ರದೇಶವು ಇರಾನ್, ಪಾಕಿಸ್ತಾನ, ಭಾರತ ಮತ್ತು ಅಫ್ಘಾನಿಸ್ತಾನವನ್ನು ಒಳಗೊಂಡಿದೆ.

ಮಿಡತೆಗಳನ್ನು ಚೆದುರಿಸಲು ಪ್ರಯತ್ನಿಸುತ್ತಿರುವ ರೈತ

ಮಿಡತೆ ಹಿಂಡುಗಳು ರಕ್ತ ಬೀಜಾಸುರರಂತೆ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೆಚ್ಚಿಸಿಕೊಳ್ಳುತ್ತಾ ಪಶ್ಚಿಮ ಪ್ರದೇಶದಿಂದ ಮಧ್ಯ ವಲಯಕ್ಕೆ ನಂತರ ಪೂರ್ವದೆಡೆಗೆ ಚಲಿಸುತ್ತವೆ.
ಎಫ್‌ಎಒ ಪ್ರಕಾರ, ಹಾರ್ನ್ ಆಫ್ ಆಫ್ರಿಕಾ 25 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಮರುಭೂಮಿ ಮಿಡತೆ ಬಿಕ್ಕಟ್ಟನ್ನು ಎದುರಿಸುತ್ತಿದೆ. ಏತನ್ಮಧ್ಯೆ, ಕೀನ್ಯಾ ಮತ್ತು ಇರಾನ್ 70 ವರ್ಷಗಳಲ್ಲಿಯೇ ಅತ್ಯಂತ ಗಂಭೀರವಾದ ಮಿಡತೆ ಬಿಕ್ಕಟ್ಟನ್ನು ಎದುರಿಸುತ್ತಿವೆ.
“ಪ್ರಸ್ತುತ ಪರಿಸ್ಥಿತಿ – ಪ್ರಾದೇಶಿಕ ಪ್ಲೇಗ್ ಆಗುವ ಸಾಮರ್ಥ್ಯದೊಂದಿಗೆ ಒಂದು ಏರಿಕೆ – ಈ ಪ್ರದೇಶದಲ್ಲಿನ ಆಹಾರ ಸುರಕ್ಷತೆ ಮತ್ತು ಜೀವನೋಪಾಯಕ್ಕೆ ಭಾರಿ ಅಪಾಯವಾಗುವ ತೀವ್ರ ಆತಂಕದ ಸ್ಥಿತಿ ತಂದೊಡ್ಡಿದೆ. ಇದು ಮತ್ತಷ್ಟು ಸಂಕಟ, ಸ್ಥಳಾಂತರ ಮತ್ತು ಸಂಭಾವ್ಯ ಸಂಘರ್ಷಕ್ಕೆ ಕಾರಣವಾಗಬಹುದು” ಎಂದು ಎಫ್‌ಎಒ ವರದಿ ತಿಳಿಸಿದೆ.
“ಮಿಡತೆಗಳು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ತಲುಪುವುದು ಅಪರೂಪ, ಅಲ್ಲಿ ಅವುಗಳ ಹಿಂಡುಗಳು ಆಹಾರಕ್ಕಾಗಿ ಹಸಿರು ಪ್ರದೇಶಗಳನ್ನು ಅರಸುತ್ತವೆ. ಇದು ಭಾರತದ ಆಹಾರ ಸುರಕ್ಷತೆಯ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತದೆ ”ಎಂದು ದೆಹಲಿ ಮೂಲದ ಕೃಷಿ ಮತ್ತು ವಿಜ್ಞಾನದ ಲಾಭೋದ್ದೇಶವಿಲ್ಲದ ದಕ್ಷಿಣ ಏಷ್ಯಾ ಜೈವಿಕ ತಂತ್ರಜ್ಞಾನ ಕೇಂದ್ರದ (ಎಸ್‌ಎಬಿಸಿ) ಸಂಶೋಧನಾ ವಿಜ್ಞಾನಿ ಗೋವಿಂದ್ ಗುಜಾರ್ ಹೇಳಿದ್ದಾರೆ.


“ಯೆಮೆನ್, ಜಿಬೌಟಿ, ಇಥಿಯೋಪಿಯಾ, ಕೀನ್ಯಾ, ಇರಾನ್, ಅಫ್ಘಾನಿಸ್ತಾನದಂತಹ ಕೌಂಟಿಗಳಲ್ಲಿ ಮಧ್ಯ ಮತ್ತು ಪೂರ್ವ ಪ್ರದೇಶದಲ್ಲಿ ಭಾರಿ ಮಳೆಯು ಮಿಡತೆಗಳ ಸಂತಾನೋತ್ಪತ್ತಿಗೆ ಸಹಾಯ ಮಾಡಿದೆ. ಹೆಣ್ಣು ಮಿಡತೆ ಹೆಚ್ಚಾಗಿ ಮರಳು ಮಣ್ಣಿನಲ್ಲಿ ಮೊಟ್ಟೆಗಳನ್ನು ಇಡುತ್ತದೆ. ತಾಪಮಾನ ಹೆಚ್ಚಿದ್ದರೆ ಮತ್ತು ಮಳೆ ಇಲ್ಲದಿದ್ದರೆ, ಸಂತಾನೋತ್ಪತ್ತಿ ಯಶಸ್ವಿಯಾಗುವುದಿಲ್ಲ” ಎಂದು ಗುಜಾರ್ ತಿಳಿಸಿದ್ದಾರೆ.
“ದಕ್ಷಿಣ ಇರಾನ್ ಮತ್ತು ನೈರುತ್ಯ ಪಾಕಿಸ್ತಾನದಲ್ಲಿ ಸ್ಪ್ರಿಂಗ್ ಸಂತಾನೋತ್ಪತ್ತಿ ಮುಂದುವರೆದಿದೆ, ಅಲ್ಲಿ ಹಾಪರ್ ಹಿಂಡುಗಳು ಮತ್ತು ಬ್ಯಾಂಡ್‌ಗಳ ವಿರುದ್ಧ ನಿಯಂತ್ರಣ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ. ಅವುಗಳಲ್ಲಿ ಹೆಚ್ಚಿನ ಸಂಖ್ಯೆಯವು ವಯಸ್ಕ ಹಿಂಡುಗಳು” ಎಂದು ಎಫ್‌ಎಒನ ಮರುಭೂಮಿ ಲೋಕಸ್ಟ್ ಸಿಚುಯೇಶನ್ ಇತ್ತೀಚಿನ ನವೀಕರಣವು ಮೇ 21, 2020 ರಂದು ತಿಳಿಸಿದೆ.
“ಭಾರತ-ಪಾಕಿಸ್ತಾನ ಗಡಿಯಲ್ಲಿ ಜೂನ್ ಮೊದಲಾರ್ಧದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ, ಅದು ಮೊಟ್ಟೆ ಇಡಲು ಅವಕಾಶ ನೀಡುತ್ತದೆ. ಇದು ಈಗಾಗಲೇ ಭಾರತದ ರಾಜಸ್ಥಾನಕ್ಕೆ ಆಗಮಿಸಿರುವ ಹಿಂಡುಗಳ ಪೂರ್ವ ದಿಕ್ಕಿನ ಚಲನೆಯನ್ನು ಕಡಿಮೆ ಮಾಡುತ್ತದೆ ” ಎಂದು ಅದು ತಿಳಿಸಿದೆ.


ತಜ್ಞರು ಹೇಳುವಂತೆ ಸಾಮಾನ್ಯವಾಗಿ ಪಾಕಿಸ್ತಾನದಿಂದ ಕೇವಲ ಒಂದು ಸಮೂಹ ಮಾತ್ರ ಭಾರತಕ್ಕೆ ದಾಟುತ್ತದೆ, ಆದರೆ ಈ ಸಮಯದಲ್ಲಿ, ಅನೇಕ ಹಿಂಡುಗಳು ಬಂದಿವೆ. “ಮೊದಲಿಗಿಂತ ಭಿನ್ನವಾಗಿ, ಅನೇಕ ಹಿಂಡುಗಳು ಬಂದಿವೆ. ಇದು ಅನೇಕ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರಲು ಒಂದು ಕಾರಣವಾಗಿದೆ” ಎಂದು ಸೆಂಟ್ರಲ್ ಆರಿಡ್ ವಲಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

2 COMMENTS

  1. ಸರ್‌ ಈ ಮಿಡತೆ ಧಾಳಿ ಸಮಸ್ಯೆಗೆ ಪರಿಹಾರ ಏನಿದೆ? ಈಗಾಗಲೇ ಅದು ಮಧ್ಯಪ್ರದೇಶ ತಲುಪಿದೆಯಂತೆ.

    • ಹವಾಮಾನ ವೈಪರಿತ್ಯ ತಡೆಗಟ್ಟುವುದೊಂದೇ ದೀರ್ಘಕಾಲಿಕ ಪರಿಹಾರ

LEAVE A REPLY

Please enter your comment!
Please enter your name here