ಸುಮಾರು 5 ತಿಂಗಳುಗಳು ಮಳೆ ಇಲ್ಲದೇ ತೀವ್ರ ತಾಪಮಾನದಿಂದ ಬಸವಳಿದಿದ್ದ ಬೆಂಗಳೂರಿಗೆ ಕಳೆದ ವಾರ ಬಿದ್ದ ಮಳೆ ತಂಪೆರೆದಿದೆ. ಇದೇ ಸಮಯದಲ್ಲಿ ಭಾರಿ ಗಾಳಿ-ಮಳೆ ಹಾನಿಯನ್ನೂ ಉಂಟು ಮಾಡಿದೆ.
ಕಳೆದ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 200 ತಾಣಗಳು ಮುಳುಗಡೆಯಾಗಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯಗಳಲ್ಲಿ ಮಹದೇವಪುರ ವಲಯವು ಅತಿ ಹೆಚ್ಚು ಪ್ರವಾಹಕ್ಕೆ ಸಾಕ್ಷಿಯಾಗಿದೆ.
ಮೇ 6 ಮತ್ತು 12 ರ ನಡುವೆ 1,000 ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಉರುಳಿರುವ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಬಿಬಿಎಂಪಿ ತೊಡಗಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ವಿವಿಧ ರೀತಿಯ ಉಪಯೋಗಕ್ಕೆ ಆಗುವ ಮರಗಳ ನಾಟಗಳನ್ನು ಸ್ಥಳದಲ್ಲಿಯೇ ಹರಾಜು ಹಾಕುವ ಪ್ರಕ್ರಿಯೆ ಬಗ್ಗೆಯೂ ಆಲೋಚಿಸುತ್ತಿದೆ.
ಈ ಯೋಜನೆಯು ಎರಡು ಪ್ರಮುಖ ಸವಾಲುಗಳನ್ನು ಎದುರಿಸುವ ಗುರಿಯನ್ನು ಹೊಂದಿದೆ: ನಿರ್ಬಂಧಿಸಲಾದ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳನ್ನು ತ್ವರಿತವಾಗಿ ತೆರವುಗೊಳಿಸುವುದು ಮತ್ತು ಬಿದ್ದ ಮರಗಳ ಸಂಪೂರ್ಣ ವಿಲೇವಾರಿ ನಿರ್ವಹಿಸುವುದು. ಸಾಮಾನ್ಯವಾಗಿ, ಬಿಬಿಎಂಪಿ ಧರೆಗುರುಳಿದ ಮರಗಳನ್ನು ಗೊತ್ತುಪಡಿಸಿದ ಡಿಪೋಗಳಿಗೆ ಸಾಗಿಸುತ್ತದೆ. ಆದರೆ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚು ಸಂಖ್ಯೆಯ ಮರಗಳು ಧರೆಗುರುಳಿದಾಗ ಅವುಗಳನ್ನು ಸಾಗಿಸಲು ಹೆಚ್ಚು ಸಮಯ ಅಗತ್ಯ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಯೋಜನೆ ಮಹತ್ವ ಪಡೆದುಕೊಂಡಿದೆ.
ಮರಗಳ ಕಾಂಡಗಳನ್ನು ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸಲಾಗುತ್ತದೆ. ನಗರದಲ್ಲಿ ಇಂಥ ಎಂಟು ಯಾರ್ಡ್‌ಗಳಿವೆ. ವಿಶೇಷವಾಗಿ ಒಂದು ವಾರದಲ್ಲಿ 1,000 ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದಾಗ ಸಾಗಣೆ- ವಿಲೇವಾರಿ ಕಷ್ಟವಾಗುತ್ತದೆ. ಆದ್ದರಿಂದ, ಅವುಗಳನ್ನು ಸ್ಥಳದಲ್ಲಿಯೇ ಹರಾಜು ಹಾಕುವ ಯೋಜನೆ ಇದೆ ಎಂದು ಬಿಬಿಎಂಪಿಯ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿಎಲ್‌ಜಿ ಸ್ವಾಮಿ ವಿವರಿಸಿದ್ದಾರೆ.
ಈ ಸಂಬಂಧಿತ ಹರಾಜು ಪ್ರಕ್ರಿಯೆ ನಡೆಸಲು ಬಿಬಿಎಂಪಿಯು ಮುಖ್ಯ ಆಯುಕ್ತರಿಂದ ಅನುಮತಿ ಕೇಳಲಾಗುತ್ತಿದೆ. . ಈ ವಿಧಾನವು ಟ್ರಾಫಿಕ್ ಸುಗಮ ನಿರ್ವಹಣೆ ಮತ್ತು ಪಾದಚಾರಿಗಳಿಗೆ ಆಗುವ ಅಡಚಣೆಯನ್ನು ನಿವಾರಿಸಲು ಸಹಾಯಕವಾಗಲಿದೆ.
ಮಳೆ ಮತ್ತು ಗುಡುಗು ಸಹಿತ ಮಳೆಯು ಬೆಂಗಳೂರಿನ ತಾಪಮಾನವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಕಳೆದ ವಾರದವರೆಗೆ ನಗರವು ಬಿಸಿಗಾಳಿ ಪರಿಸ್ಥಿತಿಯಿಂದ ತತ್ತರಿಸಿತ್ತು. ಕಳೆದ ವಾರ ಬಿದ್ದ ಮಳೆಯಿಂದ ತಾಪಮಾನವು ಗಣನೀಯವಾಗಿ ಇಳಿಕೆಯಾಗಿದೆ. ಪ್ರಸ್ತುತ ವಾರ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಇದು ನಗರವನ್ನು ಮತ್ತಷ್ಟೂ ತಂಪಾಗಿಸಲಿದೆ.