ಲೇ: ಡಾ.ಗಣೇಶ ಎಂ.ಹೆಗಡೆ

ವಾಣಿಜ್ಯಿಕ ಹೈನುಗಾರಿಕೆಯಲ್ಲಿ  ಪಶು ಆಹಾರವನ್ನು(ಹಿಂಡಿ) ವ್ಯಾಪಕವಾಗಿ ಬಳಸಲಾಗುತ್ತದೆ.  ಆದರೆ ಇದೇ ಪಶು ಆಹಾರದಿಂದ ಹಸುಗಳಿಗೆ ಒಂದು ತರಹದ ಚರ್ಮರೋಗವೂ ಬರಬಹುದು. ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹಿಂಡಿಯನ್ನು ಬದಲಿಸುವುದೇ ಇದಕ್ಕಿರುವ ಪರಿಹಾರ.

“ನನ್ನ ಒಂದು ಹಸು ಯಾಕೋ ಪದೇ ಪದೇ ಹಿಂದಿನ ಕಾಲು ಕೊಡವಿಕೊಳ್ಳೋಕೆ ಶುರು ಮಾಡಿದೆ, ಕೊಂಚ ರಕ್ತಾನೂ ಬರ್ತಾ ಇದೆ. ಸ್ವಲ್ಪ ಬಂದು ನೋಡಬೇಕಾಗಿತ್ತು ಡಾಕ್ಟ್ರೇ ಅಂದು ಮಧ್ಯಾಹ್ನ ರೈತರೊಬ್ಬರ ಪೋನ್ ಕರೆ. ಹೋಗಿ ನೋಡಿದರೆ ಅದು ಬರೀ ಗಾಯದಿಂದ ಆಗುತ್ತಿದ್ದ ರಕ್ತಸ್ರಾವವಾಗಿರಲಿಲ್ಲ. ಎರಡೂ ಹಿಂಗಾಲುಗಳ ಗೊರಸಿನ ಸುತ್ತಲೂ ಚರ್ಮ ಬಿರುಕು ಬಿಟ್ಟಿತ್ತು. ಅಲ್ಲಿಂದ ಸಣ್ಣಗೆ ರಕ್ತದಂತಹ ದ್ರವ ಒಸರುತ್ತಿತ್ತು. ಅದರ ಮೇಲೆ ನೊಣಗಳು ಮೊಟ್ಟೆ ಇಟ್ಟು ಹುಳುಗಳು ಉತ್ಪನ್ನವಾಗಿದ್ದವು.

ಚರ್ಮದ ಮೇಲೆ ಎರಡುಮೂರು ತೂತು ಆಗಿ ಅದರೊಳಗಿನಿಂದ ಹಣಕಿ ಹಾಕುತ್ತಿದ್ದ ಮಂಡಕ್ಕಿ ಗಾತ್ರದ ಹುಳುಗಳು! ಇದರಿಂದ ಉಂಟಾದ ತುರಿಕೆಯಿಂದ ಹಸು ಅಗಾಗ ಕಾಲುಗಳನ್ನು  ಕೊಡವಿಕೊಳ್ಳುತ್ತ  ಯಾತನೆ ಅನುಭವಿಸುತ್ತಿತ್ತು. ಇದು ಮಲೆನಾಡಿನ ಭಾಗದಲ್ಲಿ ‘ರುತ್ತಿ’ ಎಂದೇ ಕರೆಯಲ್ಪಡುವ ಒಂದು ತರದ ಚರ್ಮರೋಗ.

ಏನಿದು ರುತ್ತಿ: ಇದೊಂದು ವಿಚಿತ್ರ ರೀತಿಯ ಚರ್ಮರೋಗ. ಎಮ್ಮೆ ಮತ್ತು ಹಸುಗಳೆರಡೆರಲ್ಲೂ ಬರಬಹುದು. ಇಡೀ ರಾಜ್ಯಾದ್ಯಂತ ಕಂಡುಬಂದರೂ ಮಲೆನಾಡಿನಲ್ಲಿ ಹೆಚ್ಚು. ಪಶು ಆಹಾರದ (ಹಿಂಡಿ) ಮೇಲೆಯೇ ಹೆಚ್ಚು ಅವಲಂಬಿತವಾಗಿರುವ ಜಾನುವಾರುಗಳಲ್ಲಿ ಈ ತೊಂದರೆ ಅಧಿಕ. ಇದರಿಂದ ಪ್ರಾಣಾಪಾಯ ಇಲ್ಲದಿದ್ದರೂ ಕಾಲುಗಳ ತುದಿಯಲ್ಲಿ ಅಥವಾ ತೊಡೆ, ಕೆಚ್ಚಲು ಮತ್ತು ಮೊಲೆಗಳ ಮೇಲೆ ಅಥವಾ ಈ ಎಲ್ಲ ಸ್ಥಳಗಳಲ್ಲಿ ಚರ್ಮ ಕೆಂಪಾಗಿ ದಪ್ಪಗಾಗಿ ಒರಟಾಗುತ್ತದೆ. ಚರ್ಮವು ಬಿರುಕು ಬಿಡುತ್ತದೆ. ಜಾನುವಾರು ಬಹಳ ನೋವು ಮತ್ತು ತುರಿಕೆ ಅನುಭವಿಸುತ್ತದೆ. ಮೊಲೆಗಳ ಮೇಲೆ ಗಾಯಗಳಾಗುತ್ತವೆ. ಅಡ್ಡವಾಗಿ ಸೀಳು ಉಂಟಾಗಬಹುದು. ಹಾಲು ಹಿಂಡುವಾಗ ಬಹಳ ನೋವಿನಿಂದ ಕೊಸರಾಡುತ್ತವೆ. ಕಾಲು ಜಾಡಿಸುತ್ತಿರುತ್ತವೆ.

ತುರಿಕೆ ಜಾಸ್ತಿ ಇದ್ದರೆ ಚಡಪಡಿಸುತ್ತ ಅತ್ತಿಂದಿತ್ತ ಓಡಾಡುತ್ತವೆ. ಆ ಭಾಗವನ್ನು ಪದೇ ಪದೇ ನೆಕ್ಕುತ್ತವೆ. ಬಿರುಕು ಬಿಟ್ಟ ಚರ್ಮದ ಮೇಲೆ ನೊಣಗಳು ಕುಳಿತು ಹುಳು ಆಗಬಹುದು. ಹುಳುಗಳು ಸಾಮಾನ್ಯವಾಗಿ ಕಾಲು ಗೊರಸುಗಳ ಹಿಂಭಾಗದಲ್ಲಿ ಅಧವಾ ತೊಡೆಯ ಭಾಗದಲ್ಲಿ ಕಂಡುಬರುವುದು ಹೆಚ್ಚು. ರುತ್ತಿ ಆದ ಜಾನುವಾರು ಪದೇ ಪದೇ ಕಾಲು ಜಾಡಿಸುತ್ತಿದ್ದರೆ ಕಾಲಿಗೆ ಹುಳುಗಳಾಗಿವೆಯೆಂದೇ ಅರ್ಥ. ಈ ವೇದನೆಯಿಂದಾಗಿ ಹಾಲು ಉತ್ಪಾದನೆ (ಶೇ 20ಕ್ಕೂ ಹೆಚ್ಚು) ಕುಂಠಿತವಾಗುತ್ತದೆ. ಕೇವಲ ಒಂದೆರಡು ದಿನಗಳ ಅವಧಿಯಲ್ಲಿಯೇ ರುತ್ತಿಯ ಲಕ್ಷಣಗಳು ಪ್ರಾರಂಭವಾಗಿ ಚರ್ಮ ಒಡೆದು ಗಾಯ ಉಂಟಾಗಿಬಿಡಬಹುದು. ನಿರ್ಲಕ್ಷಿಸಿದರೆ ಆ ಭಾಗದ ಚರ್ಮ ಕೊಳೆಯಲು  ಪ್ರಾರಂಭವಾಗುತ್ತದೆ.

ಯೂರಿಯಾ ಎಂಬ ಭ್ರಮೆ: ಈ ವಿಚಿತ್ರ ರೋಗ ‘ರುತ್ತ್ರಿ’ ಬರಲು ಕಾರಣವೂ ಅಷ್ಟೇ ವಿಚಿತ್ರ. ಇದು ‘ಪಶು ಆಹಾರ’  (ಹಿಂಡಿ)ಯಿಂದ ಬರುತ್ತದೆ! ಬಹಳಷ್ಟು ರೈತರು ‘ಪಶು ಆಹಾರದಲ್ಲಿ ಯೂರಿಯಾ ಹಾಕಿದ್ದರೆ ಈ ಸಮಸ್ಯೆ ಬರುತ್ತದೆ’ ಎಂದು ನಂಬಿದ್ದಾರೆ. ಆದರೆ ಇದೊಂದು ತಪ್ಪು ಕಲ್ಪನೆ. ಯೂರಿಯಾ ಮಿಶ್ರಿತವಲ್ಲದ ಪಶು ಆಹಾರ ತಿನ್ನುವ ರಾಸುಗಳಲ್ಲಿ ಕೂಡಾ ಈ ಸಮಸ್ಯೆ ಇದೆ. ಮುಖ್ಯವಾಗಿ ಜಿಂಕ್ ಮತ್ತು ಗಂಧಕದಂತಹ ಸೂಕ್ಷ್ಮ ಖನಿಜಾಂಶಗಲ ಕೊರತೆಯಿಂದ ಈ ಸಮಸ್ಯೆ ಬರುತ್ತದೆ.

ಇದು ಪಶು ಆಹಾರದಲ್ಲಿರಬಹುದಾದ ಒಂದು ತರಹದ ಶಿಲೀಂಧ್ರದಿಂದಲೂ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಬೆಂಗಳೂರು ಪಶುವೈದ್ಯಕೀಯ ಕಾಲೇಜಿನ ಔಷಧ ಮತ್ತು ವಿಷಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎನ್.ಬಿ.ಶ್ರೀಧರ್. ಶಿಲೀಂಧ್ರವಷ್ಟೇ ಅಲ್ಲದೇ ಪಶು ಆಹಾರದಲ್ಲಿರುವ, ಇನ್ನೂ ಕಂಡುಹಿಡಿಯಲಾಗದ ಯಾವುದೋ ಒಂದು ಅಂಶವು ರಾಸಿನ ದೇಹದಲ್ಲಿ ಗಂಧಕ ಮತ್ತು ಸತುವಿನಂತಹ ಕೆಲವು ಅಗತ್ಯ ವಸ್ತುಗಳ ಕೊರತೆಯನ್ನುಂಟುಮಾಡುತ್ತದೆೆ. ಇದರಿಂದ ಈ ಚರ್ಮರೋಗ ಬರಬಹುದು ಎಂಬುದು ಅವರ ಅನಿಸಿಕೆ.

ನಿಯಂತ್ರಣ: ಈ ತೊಂದರೆ ಕಂಡುಬಂದಾಗ ಯಾವ ಹಿಂಡಿ ಹಾಕುತ್ತಿದ್ದಾರೋ ಅದನ್ನು ಬದಲಾಯಿಸಿ ಬೇರೆ ತಯಾರಕರ ಹಿಂಡಿ ಹಾಕಿದರೆ ನಿಯಂತ್ರಣಕ್ಕೆ ಬರುತ್ತದೆ. ಅಥವಾ ಹಿಂಡಿಯನ್ನು ಹಾಕುವುದನ್ನೇ ನಿಲ್ಲಿಸಬೇಕು. ಒಂದಂತೂ ನಿಜ. ಉತ್ತಮ ಗುಣಮಟ್ಟದ ಸಮತೋಲಿತ ಆಹಾರ ಸೇವಿಸುವ ಜಾನುವಾರುಗಳಿಗೆ ಈ ಸಮಸ್ಯೆ ಕಡಿಮೆ. ಸಮತೋಲಿತ ಆಹಾರವೆಂದರೆ, ರಾಸುವಿನ ಹಾಲಿನ ಉತ್ಪಾದನೆ ಮತ್ತು ದೇಹದ ತೂಕವನ್ನು ಆಧರಿಸಿದ ಏಕದಳ ಮತ್ತು ದ್ವಿದಳ ಹಸಿರು ಮೇವು, ಒಣ ಮೇವು ಮತ್ತು ಹಿಂಡಿ.  ಇವುಗಳ ಪ್ರಮಾಣ ಮತ್ತು ಗುಣಮಟ್ಟ ಉತ್ತಮವಾಗಿರಬೇಕು. ಸರಿಯಾದ ಪ್ರಮಾಣದಲ್ಲಿ ಖನಿಜ ಮಿಶ್ರಣ (ಮಿನರಲ್ ಮಿಕ್ಸ್ಚರ್) ಹಾಕಬೇಕು.

 ದಿನಕ್ಕೆ 10 ಲೀಟರು ಹಿಂಡುವ ರಾಸಿಗೆ ದಿನಂಪ್ರತಿ ಕನಿಷ್ಠ 60 ಗ್ರಾಂ ಖನಿಜ ಮಿಶ್ರಣ ಬೇಕಾಗುತ್ತದೆ. ಉತ್ತಮ ಗುಣಮಟ್ಟದ ಖನಿಜ ಮಿಶ್ರಣವು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಲ್ಲದೇ ಕೊಟ್ಟಿಗೆಯ ನೆಲ ಶುಭ್ರವಾಗಿರಬೇಕು ಮತ್ತು ಸಾಧ್ಯವಾದಷ್ಟು ಒಣಗಿರಬೇಕು. ಹೆಚ್ಚಿನ ಪ್ರಮಾಣದಲ್ಲಿ ಖನಿಜ ಮಿಶ್ರಣದ ಅಗತ್ಯವಿರುವ ದೊಡ್ಡ ರೈತರು  ಪಶುವೈದ್ಯರ ಸಲಹೆ ಪಡೆದು ಖನಿಜ ಮಿಶ್ರಣವನ್ನು ತಾವೇ ತಯಾರಿಸಿಕೊಳ್ಳಲೂ ಸಹ ಸಾಧ್ಯವಿದೆ.

ಚಿಕಿತ್ಸೆ ಹೇಗೆ: ರುತ್ತಿ ಆದಾಗ ಕೂಡಲೇ ಹಿಂಡಿ ಬದಲಿಸಬೇಕು. ಗಾಯ/ಬಿರುಕು ಆದ ಭಾಗವನ್ನು ಶುಭ್ರವಾಗಿ ತೊಳೆಯಬೇಕು. ಇದಕ್ಕಾಗಿ ಮಲೆನಾಡಿನಲ್ಲಿ ಸಿಗುವ ಶೀಗೆಕಾಯಿ ಅಥವಾ ಅಂಟುವಾಳದ ಪುಡಿ ಉಪಯೋಗಿಸಬಹುದು. ಪೇಟೆಯಲ್ಲಿ ಸಿಗುವ ಜಿಂಕ್ ಆಕ್ಸೈಡ್ ಎಂಬ ಪುಡಿಯ ರೂಪದ ಔಷಧವನ್ನು ಬೇವಿನ ಎಣ್ಣೆಯೊಂದಿಗೆ ಕಲೆಸಿ ಗಾಯದ ಮೇಲೆ ದಿನಕ್ಕೆ ಎರಡು ಬಾರಿ ಹಚ್ಚಬೇಕು. ಉತ್ತಮ ಗುಣಮಟ್ಟದ ಖನಿಜ ಮಿಶ್ರಣ ಪುಡಿಯನ್ನು ದಿನಕ್ಕೆ ನಾಲ್ಕು ಚಮಚದಷ್ಟು ಹಿಂಡಿಯಲ್ಲಿ ಮಿಶ್ರಗೊಳಿಸಿ ನೀಡಬೇಕು. ಲಕ್ಷಣಗಳು ಜಾಸ್ತಿ ಇದ್ದಲ್ಲಿ ಪಶುವೈದ್ಯರ ಮೂಲಕ ಚಿಕಿತ್ಸೆ ಅಗತ್ಯ. ಸೂಕ್ತ ಚಿಕಿತ್ಸೆ ನೀಡಿದರೆ ಮೂರ್ನಾಲ್ಕು ದಿನಗಳಲ್ಲಿ ಪರಿಹಾರ ಸಾಧ್ಯ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 94489 95595

LEAVE A REPLY

Please enter your comment!
Please enter your name here