ಬೆಂಗಳೂರು: ನವೆಂಬರ್ 28, 2020 ರಂದು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಆಯೋಜಿತವಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಪಿಎಚ್,ಡಿ. ಪಡೆದವರಿಗೆ ಪದವಿ ಪ್ರಮಾಣಪತ್ರ ಪ್ರಧಾನ ಮಾಡಲಾಗುವುದು ಎಂದು ಕುಲಪತಿ ಡಾ.‌ಎಸ್. ರಾಜೇಂದ್ರ ಪ್ರಸಾದ್ ತಿಳಿಸಿದರು.

ಅವರಿಂದು ಜಿಕೆವಿಕೆ ಆವರಣದಲ್ಲಿರುವ ನಾಯಕ್ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಇದೇ ಕ್ಯಾಂಪಸಿನಲ್ಲಿರುವ ಡಾ.‌ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಸಭಾಂಗಣದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಈ ಘಟಿಕೋತ್ಸವವನ್ನು ಕಳೆದ ಏಪ್ರಿಲ್‌ನಲ್ಲಿಯೇ ನಡೆಸಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಈ ಬಾರಿ ಒಟ್ಟು 986 ವಿದ್ಯಾರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ.‌ ಇವರಲ್ಲಿ 638  ವಿದ್ಯಾರ್ಥಿಗಳು ಸ್ನಾತಕ ಪದವಿ, 280 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ, 68 ವಿದ್ಯಾರ್ಥಿಗಳು ಡಾಕ್ಟೋರಲ್ ಪದವಿಗಳನ್ನು ಪಡೆಯಲಿದ್ದಾರೆ.

ಇದೇ ಸಂದರ್ಭದಲ್ಲಿ  ಡಾಕ್ಟತ್ ಆಫ್ ಫಿಲಾಸಫಿಗಾಗಿ ಸಂಶೋಧನೆ ಮಾಡಿದವರಿಗಾಗಿ 20 ಚಿನ್ನದ ಪದಕ ಪ್ರಧಾನ ಮಾಡಲಾಗುತ್ತಿದೆ.‌ ಇದರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹ. 8 ಮಂದಿ ವಿದ್ಯಾರ್ಥಿನಿಯರು 4 ಮಂದಿ ವಿದ್ಯಾರ್ಥಿಗಳು ಒಟ್ಟು 11 ಚಿನ್ನದ ಪದಕಗಳನ್ನು ಮತ್ತು 3 ದಾನಿಗಳ ಚಿನ್ನದ ಪದಕ ಹಾಗೂ ಪ್ತಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ ಎಂದರು.

ಮಾಸ್ಟರ್ ಪದವಿಯಲ್ಲಿಯೂ ಚಿನ್ನದ ಪದಕಗಳನ್ನು ಪಡೆದವರಲ್ಲಿಯೂ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಟ್ಟು 54 ಚಿನ್ನದ ಪದಕಗಳಿದ್ದು ಇವುಗಳನ್ನು 25 ಮಂದಿ ವಿದ್ಯಾರ್ಥಿನಿಯರು ಹಾಗೂ 6 ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಸ್ನಾತಕ ಪದವಿಯಲ್ಲಿ ಒಟ್ಟು 47 ಚಿನ್ನದ ಪದಕಗಳಿದ್ದು ಇದರಲ್ಲಿ 8 ವಿದ್ಯಾರ್ಥಿನಿಯರು 8 ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಗುವುದು ಎಂದರು.

ರಾಜ್ಯಪಾಲರ ಅನುಪಸ್ಥಿತಿಯಲ್ಲಿ   ಸಹ ಕುಲಾಧಿಪತಿಗಳಾದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರೇ ಪದವಿ ಪ್ರದಾನ ಮಾಡಲಿದ್ದು ಘಟಿಕೋತ್ಸವ ಭಾಷಣವನ್ನು ಇಸ್ರೋ ಮುಖ್ಯಸ್ಥ ಶಿವನ್ ಮಾಡಲಿದ್ದಾರೆ.‌ ಇವರು ತಮ್ಮ ಭಾಷಣವನ್ನು ಆನ್ ಲೈನ್ ಮೂಲಕ ಮಾಡಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಪದವಿಗಳನ್ನು ಪಡೆಯುವವರು, ಸಂಬಂಧಿಸಿದ ಬೋಧಕವರ್ಗದವರು ಮಾತ್ರ ನೇರ ಭಾಗವಹಿಸಲು ಅವಕಾಶ. ಉಳಿದ ಆಸಕ್ತರು ಆನ್ ಲೈನ್ ಮೂಲಕ‌ ಭಾಗವಹಿಸಬಹುದು. ಸಿಸಿಟಿವಿಗಳ ಮೂಲಕ ಸಮಾರಂಭದ ನೇರ ಪ್ತಸಾರ ಮಾಡಲಾಗುತ್ತದೆ ಎಂದು ವಿವರಿಸಿದರು.

ಕುಲಸಚಿವ ಡಾ. ಜಿ.ಎನ್.‌ಧನಪಾಲ್, ವಿಸ್ತರಣಾ ನಿರ್ದೇಶಕ ಡಾ.‌ಎಂ.‌ಭೈರೇಗೌಡ,  ಹಿರಿಯ ವಾರ್ತಾತಜ್ಞ ಡಾ.‌ಎಂ.‌ಶಿವರಾಮು, ಕೃಷಿ ತಂತ್ರಜ್ಞಾನ ಮಾಹಿತಿ ಘಟಕದ ಡಾ.‌ಮಂಜುನಾಥ್ ಸೇರಿದಂತೆ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ಕೃಷಿವಿಜ್ಞಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here