ಇತ್ತೀಚೆಗೆ ಜಾಗತಿಕ ಹವಾಮಾನ ವಿಜ್ಞಾನಿಗಳು ಪೆಸಿಫಿಕ್ ಮಹಾಸಾಗರದಲ್ಲಿ ತೀವ್ರ ಸ್ವರೂಪದ ಎಲ್ ನಿನೋ (El Nino) ರೂಪುಗೊಳ್ಳುತ್ತಿದೆ. ಅದು ‘ಸೂಪರ್ ಎಲ್ ನಿನೋ’ ಹಂತ ತಲುಪಬಹುದು ಎಂದು ಎಚ್ಚರಿಸಿದ್ದರು. ಆದರೆ, ಭಾರತ ಸರ್ಕಾರವು ಅಧಿಕೃತವಾಗಿ ‘ಸೂಪರ್ ಎಲ್ ನಿನೋ’ ಎಂಬ ಯಾವುದೇ ವರ್ಗೀಕರಣವಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಭೂ ವಿಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಡಾ. ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ, ವಿಶ್ವ ಹವಾಮಾನ ಸಂಸ್ಥೆ (WMO) ಅಥವಾ ಭಾರತೀಯ ಹವಾಮಾನ ಇಲಾಖೆ (IMD) ಯಾವುದೇ “ಸೂಪರ್ ಎಲ್ ನಿನೋ” ಎಂಬ ಪ್ರತ್ಯೇಕ ವರ್ಗೀಕರಣವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ವರ್ಗೀಕರಣ ಹೇಗೆ?
ಭೂಮಧ್ಯರೇಖೆಯ ಮಧ್ಯ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪಮಾನದಲ್ಲಿನ ಏರಿಕೆಯನ್ನು ಆಧರಿಸಿ ಭಾರತೀಯ ಹವಾಮಾನ ಇಲಾಖೆಯು ಎಲ್ ನಿನೋ ಸ್ಥಿತಿಯನ್ನು ಸಾಮಾನ್ಯ (Weak), ಸಾಧಾರಣ (Moderate), ಪ್ರಬಲ (Strong), ಮತ್ತು ಅತ್ಯಂತ ಪ್ರಬಲ (Very Strong) ಎಂದು ವರ್ಗೀಕರಿಸುತ್ತದೆ.
ಸ್ಥಿತಿ ಪ್ರಗತಿ: 2026ರ ಜೂನ್‌ನಲ್ಲಿ ಎಲ್ ನಿನೋ ಸಾಮಾನ್ಯ ಮಟ್ಟದಲ್ಲಿ ಕಂಡುಬಂದಿದ್ದು, ಜುಲೈ ಹೊತ್ತಿಗೆ ಸಾಧಾರಣ ಮಟ್ಟಕ್ಕೆ ತಲುಪಿದೆ. ಅಕ್ಟೋಬರ್‌ನಿಂದ ಡಿಸೆಂಬರ್ 2026ರ ಅವಧಿಯಲ್ಲಿ ಇದು ಮತ್ತಷ್ಟು ತೀವ್ರಗೊಂಡು ‘ಅತ್ಯಂತ ಪ್ರಬಲ’ ವರ್ಗ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಏನಿದು ಎಲ್ ನಿನೋ? ಇದು ಹವಾಮಾನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಎಲ್ ನಿನೋ ಎಂಬುದು ಪೆಸಿಫಿಕ್ ಮಹಾಸಾಗರದ ಕೇಂದ್ರ ಮತ್ತು ಪೂರ್ವ ಭಾಗಗಳಲ್ಲಿ ಸಾಗರದ ಮೇಲ್ಮೈ ನೀರು ಸಾಧಾರಣಕ್ಕಿಂತ ಹೆಚ್ಚಿನ ತಾಪಮಾನಕ್ಕೆ ಬಿಸಿಯಾಗುವ ನೈಸರ್ಗಿಕ ಹವಾಮಾನ ಪ್ರಕ್ರಿಯೆಯಾಗಿದೆ.
ಜಾಗತಿಕ ಪರಿಣಾಮ: ಸಾಗರದ ತಾಪಮಾನ ಹೆಚ್ಚಾದಾಗ ಜಾಗತಿಕ ಗಾಳಿಯ ದಿಕ್ಕು ಹಾಗೂ ಹವಾಮಾನ ಮಾದರಿಗಳು ಬದಲಾಗುತ್ತವೆ. ಇದರಿಂದಾಗಿ ವಿಶ್ವದ ಹಲವು ಭಾಗಗಳಲ್ಲಿ ತೀವ್ರ ಉಷ್ಣ ಅಲೆ, ಬರಗಾಲ, ಕಾಡ್ಗಿಚ್ಚು ಮತ್ತು ಅಸಹಜ ಮಳೆಯಂತಹ ಬದಲಾವಣೆಗಳು ಕಂಡುಬರುತ್ತವೆ.
ಭಾರತದ ಮೇಲಿನ ಪರಿಣಾಮ: ಐತಿಹಾಸಿಕವಾಗಿ, ಪ್ರಬಲ ಎಲ್ ನಿನೋ ವರ್ಷಗಳಲ್ಲಿ ಭಾರತದಲ್ಲಿ ನೈರುತ್ಯ ಮುಂಗಾರು ಮಳೆ ಕ್ಷೀಣಿಸುವುದು ಕಂಡುಬಂದಿದೆ. ಆದರೆ ಭಾರತದ ಮಳೆಯು ಕೇವಲ ಎಲ್ ನಿನೋ ಒಂದನ್ನೇ ಅವಲಂಬಿಸಿಲ್ಲ. ಇತರ ಎರಡು ಮುಖ್ಯ ಹವಾಮಾನ ವಿದ್ಯಮಾನಗಳು ಭಾರತದ ಮುಂಗಾರಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
- ಇಂಡಿಯನ್ ಓಷನ್ ಡಿಪೋಲ್ (Indian Ocean Dipole – IOD):
ಹಿಂದೂ ಮಹಾಸಾಗರದ ಪಶ್ಚಿಮ ಮತ್ತು ಪೂರ್ವ ಭಾಗಗಳ ತಾಪಮಾನದ ವ್ಯತ್ಯಾಸವನ್ನು IOD ಎನ್ನಲಾಗುತ್ತದೆ. ಧನಾತ್ಮಕ IOD (Positive IOD) ಇದ್ದರೆ, ಅದು ಎಲ್ ನಿನೋ ಪರಿಣಾಮವನ್ನು ಸರಿದೂಗಿಸಿ ಭಾರತದಲ್ಲಿ ಉತ್ತಮ ಮಳೆಗೆ ನೆರವಾಗುತ್ತದೆ.
- ಮ್ಯಾಡನ್-ಜುಲಿಯನ್ ಆಸಿಲೇಷನ್ (Madden-Julian Oscillation – MJO):
ಇದು ಭೂಮಧ್ಯರೇಖೆಯ ಉದ್ದಕ್ಕೂ ಪೂರ್ವಕ್ಕೆ ಚಲಿಸುವ ಮೋಡಗಳು ಮತ್ತು ಗಾಳಿಯ ಚಲನೆಯಾಗಿದೆ. ಇದು ಕೂಡ ಮಳೆಯ ಪ್ರಮಾಣದ ಮೇಲೆ ಹ್ರಸ್ವಕಾಲಿಕ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರಬಲ್ಲದು.
ಮುನ್ನೆಚ್ಚರಿಕಾ ಕ್ರಮಗಳು: ಕೇಂದ್ರ ಸರ್ಕಾರದ ಪ್ರಕಾರ, ಎಲ್ ನಿನೋ ಪರಿಸ್ಥಿತಿಯನ್ನು ಭಾರತೀಯ ಹವಾಮಾನ ಇಲಾಖೆಯು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಸಂಸ್ಥೆಗಳಿಗೆ ಹಾಗೂ ಜಿಲ್ಲಾಡಳಿತಗಳಿಗೆ ಕಾಲಕಾಲಕ್ಕೆ ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಗಳನ್ನು ರವಾನಿಸಲಾಗುತ್ತಿದೆ.
































