ಬೀದರ್, ಕಲಬುರ್ಗಿ ಕುಡಿಯುವ ನೀರು ಯೋಜನೆ: ಜಲಶಕ್ತಿ ಸಚಿವರಿಗೆ ಖಂಡ್ರೆ ಮನವಿ

0

ನವದೆಹಲಿ, ಜೂ.30: ಕಲ್ಯಾಣ ಕರ್ನಾಟಕದ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಸುಸ್ಥಿರ ಕುಡಿಯುವ ನೀರು ಖಾತ್ರಿಪಡಿಸುವ  ಯೋಜನೆ ಕುರಿತಂತೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಚರ್ಚಿಸಿದ್ದಾರೆ.

ಕರ್ನಾಟಕದ ಉತ್ತರ ತುದಿಯ ಈ ಎರಡು ಜಿಲ್ಲೆಗಳು ಕುಡಿಯುವ ನೀರಿನ ಕೊರತೆ ಎದುರಿಸುತ್ತಿವೆ, ಅಂತರ್ಜಲ ಮಟ್ಟವೂ ಕುಸಿದಿದೆ. ಹೀಗಾಗಿ ಮುಂದಿನ 30 ವರ್ಷಗಳವರೆಗೆ ಶಾಶ್ವತ, ಸುಸ್ಥಿರ ಮತ್ತು ಮೇಲ್ಮೈ ನೀರು ಆಧಾರಿತ ಕುಡಿಯುವ ನೀರಿನ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರವು ಈ ಸಮಗ್ರ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಜಾರಿಗೊಳಿಸಲು ಪ್ರಾಥಮಿಕ ಯೋಜನಾ ವರದಿಯನ್ನು ಅಂತಿಮಗೊಳಿಸಿದೆ ಎಂದು ಕೇಂದ್ರ ಸಚಿವರಿಗೆ ತಿಳಿಸಿ, ಮನವಿ ಪತ್ರ ಸಲ್ಲಿಸಿದರು.

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾರಾಯಣಪುರ ಜಲಾಶಯದ ಸುಸ್ಥಿರ ಮತ್ತು ದೀರ್ಘಕಾಲಿಕ ಸಂಗ್ರಹಣೆಯಿಂದ ನೀರನ್ನು ಎತ್ತುವಳಿ ಮಾಡುವ ಉದ್ದೇಶ ಹೊಂದಿದೆ. ಇದರ ಒಟ್ಟು ಅಂದಾಜು ವೆಚ್ಚ 7200 ಕೋಟಿ ರೂ.  ಆಗುತ್ತದೆ. ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ಒಟ್ಟು 28.೦9 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸಲು ಈ ಯೋಜನೆ ಸಹಕಾರಿ ಆಗಲಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

18 ತಾಲ್ಲೂಕುಗಳು ಮತ್ತು 943 ಗ್ರಾಮಗಳನ್ನು ಒಳಗೊಂಡ ಈ ಉಪಕ್ರಮವು ಸುಮಾರು 200 ಎಂಎಲ್.ಡಿ. ನೀರಿನ ಅಗತ್ಯವನ್ನು ಪೂರೈಸುವ ಗುರಿಯನ್ನು ಹೊಂದಿದೆ. ಒಟ್ಟು ಫಲಾನುಭವಿಗಳ ಜನಸಂಖ್ಯಾ ವಿಭಜನೆಯಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) 6.76 ಲಕ್ಷ ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) 1.84 ಲಕ್ಷ ಸೇರಿವೆ ಎಂಬ ವಿವರವನ್ನು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ನೀರು ಜೀವಜಲವಾಗಿದ್ದು, ಗ್ರಾಮೀಣ ಜನರ ಕುಡಿಯುವ ನೀರು ಪೂರೈಕೆಯ ಹಿತದೃಷ್ಟಿಯಿಂದ ಈ ಯೋಜನೆಯನ್ನು ಅನುಮೋದಿಸಲು ಕೇಂದ್ರ ಜಲಶಕ್ತಿ ಸಚಿವರನ್ನು ಕೋರಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತು ಇಲಾಖೆಯ ಅಧಿಕಾರಿಗಳು ಹಾಜರಿದ್ದರು

LEAVE A REPLY

Please enter your comment!
Please enter your name here