ಬೆಂಗಳೂರು, ಜೂನ್ 2: ಕಲಬುರಗಿ ಮತ್ತು ಹಾವೇರಿಯಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿ ಹಂಚಿಕೆ ಆಗಿದೆ. ಜೂನ್ ಅಂತ್ಯದೊಳಗೆ ಡಿ.ಪಿ.ಆರ್. ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.
ಅವರು ಇಂದು ರೇಷ್ಮೆ ಇಲಾಖೆ ಆಯವ್ಯಯ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು. ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆಯನ್ನು ಉನ್ನತೀಕರಿಸಲು ಪ್ರಸ್ತಾವನೆ ಸಲ್ಲಿಸುವಂತೆಯೂ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ತಿಳಿಸಿದರು.
ಬೈವೋಲ್ಟೀನ್ ರೇಷ್ಮೆ ಗೂಡಿಗೆ ಪ್ರತಿ ಟನ್ ಗೆ 10 ಸಾವಿರ ರೂ. ಪ್ರೋತ್ಸಾಹಧನ ಬಿಡುಗಡೆಗೆ ಮಂಜೂರಾತಿ ನೀಡಲಾಗಿದೆ. ಶೀಘ್ರವೇ ಡಿ.ಬಿ.ಟಿ. ಮೂಲಕ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಮದ್ದೂರು, ರಾಣೆಬೆನ್ನೂರು ಮತ್ತು ದೇವನಹಳ್ಳಿಯಲ್ಲಿ ಶೈತ್ಯಾಗಾರ ನಿರ್ಮಿಸುವ ಕುರಿತು ಸಹ ಸಭೆಯಲ್ಲಿ ಚರ್ಚಿಸಲಾಯಿತು.
ರೇಷ್ಮೆ ಬೆಳೆಗಾರರ ಆದಾಯವನ್ನು ಹೆಚ್ಚಿಸಲು ಮತ್ತು ರೇಷ್ಮೆ ಉತ್ಪಾದನೆಯನ್ನು ವೃದ್ಧಿಸಲು ದ್ವಿತಳಿ ಬಿತ್ತನೆ ಗೂಡಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಕೆಜಿಗೆ 50 ರೂ. ಗಳಷ್ಟು ಹೆಚ್ಚಿಸಲು ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ರೇಷ್ಮೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಐಎಸ್ ಎನ್ ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ರೇಷ್ಮೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಠಾರಿಯ, ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.