ಸೂರ್ಯಕಾಂತಿ ಬೆಳೆ ಉತ್ತಮ ಯೋಜನೆ ಆದಾಯದ  ಆಯೋಜನೆ

0

ಸೂರ್ಯಕಾಂತಿಯು ರಾಜ್ಯದ ಪ್ರಮುಖ ಎಣ್ಣೆಕಾಳು ಬೆಳೆಯಾಗಿದೆ. ವರ್ಷದ ಮೂರು ಹಂಗಾಮುಗಳಲ್ಲೂ ಬೆಳೆಯಬಹುದು. ಅಲ್ಪಕಾಲಾವಧಿಯಲ್ಲಿ, ಅತಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಮತ್ತು ಹೆಚ್ಚಿನ ಲಾಭ ಪಡೆಯಲು ಅವಕಾಶ ಇರುವ  ಬೆಳೆ.

ಇದು ಶುಷ್ಕ ವಾತಾವರಣ ಮತ್ತು ಹವಾಮಾನದ ವೈಪರೀತ್ಯಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ. ಕಡಿಮೆ ಮಳೆ ಬೀಳುವ ಮತ್ತು ಪೂರ್ಣ ಮಳೆಯಾಶ್ರಯದಲ್ಲಿ ಬೆಳೆಯಲು ಸೂಕ್ತವಾಗಿದೆ. ಈ ಕಾರಣಗಳಿಂದಾಗಿ ಸೂರ್ಯಕಾಂತಿಯು ಕರ್ನಾಟಕ ರಾಜ್ಯದ ಎಣ್ಣೆಕಾಳು ಬೆಳೆಗಳ ವಿಸ್ತೀರ್ಣದಲ್ಲಿ ಮೂರನೆಯ ಸ್ಥಾನಗಳಿಸಿದೆ.

ರಾಷ್ಟ್ರದ ಸೂರ್ಯಕಾಂತಿ ಬೆಳೆಯ ವಿಸ್ತೀರ್ಣದ ಅರ್ಧಕ್ಕಿಂತ ಹೆಚ್ಚು ಭಾಗ ಕರ್ನಾಟಕ ರಾಜ್ಯದಲ್ಲಿರುವುದರಿಂದ ಸೂರ್ಯಕಾಂತಿ ರಾಜ್ಯವೆಂದು ಪ್ರಸಿದ್ಧಿ ಪಡೆದಿದೆ. ಸೂರ್ಯಕಾಂತಿ ಬೀಜವು ಉತ್ತಮ ದರ್ಜೆಯ ಎಣ್ಣೆ ಅಂಶ ಹೊಂದಿದ್ದು,  ಪುಷ್ಠಿದಾಯಕವಾಗಿರುತ್ತದೆ.

ತಳಿಗಳು ಮತ್ತು ವಿಶೇಷ ಗುಣಗಳು:

ಭೂಮಿಯ ಆಯ್ಕೆ: ಎಲ್ಲಾ ರೀತಿಯ ಭೂಮಿಯಲ್ಲೂ ಬೆಳೆಯಬಹುದು. ಆದರೆ, ನೀರು ಸರಾಗವಾಗಿ ಬಸಿದು ಹೋಗುವಂತಹ ಸಾಮರ್ಥ್ಯ ಹೊಂದಿರುವ ಮಣ್ಣು ಸೂರ್ಯಕಾಂತಿಗೆ ಉತ್ತಮ.

ಭೂಮಿ ಹದ ಮಾಡುವಿಕೆ :

ಬಿತ್ತನೆ ವಿಧಾನ ಹಾಗೂ ಅಂತರ: ಬಿತ್ತನೆ ಮಾಡುವ ಮೊದಲು ಭೂಮಿಯನ್ನು ಎರಡು ಬಾರಿ ಉಳುಮೆ ಮಾಡಿ ನಂತರ ಕುಂಟೆಯ ಮೂಲಕ ಭೂಮಿಯನ್ನು ಸಮಾ ಮಾಡಬೇಕು. ಭೂಮಿಯನ್ನು ಹದಮಾಡಿದ ನಂತರ ಸಾಲುಗಳನ್ನು 2 ಅಡಿ ಅಂತರದಲ್ಲಿ ಹಾಗೂ ಪ್ರತಿ ಸಾಲಿನಲ್ಲಿ ಗಿಡದಿಂದ ಗಿಡಕ್ಕೆ 1 ಅಡಿ ಅಂತರವಿರುವಂತೆ ಎರಡರಿಂದ ಮೂರು ಬೀಜಗಳನ್ನು ಒಂದು ಅಂಗುಲಕ್ಕಿAತ ಹೆಚ್ಚಿನ ಆಳಕ್ಕೆ ಬೀಳದಂತೆ ಬಿತ್ತನೆ ಮಾಡಬೇಕು.

ಬೀಜೋಪಚಾರ:

ಅಜಟೋಬ್ಯಾಕ್ಟರ್ ಜೈವಿಕ ಗೊಬ್ಬರವನ್ನು ಒಂದು ಕೆ.ಜಿ. ಬಿತ್ತನೆ ಬೀಜಕ್ಕೆ 150ಗ್ರಾಂ ನಂತೆ ಬೀಜೋಪಚಾರ ಮಾಡಬೇಕು.  ನಂತರ ಅರ್ಧ ಗಂಟೆ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಲು ಉಪಯೋಗಿಸಬೇಕು.. ಬಿತ್ತುವುದಕ್ಕೆ ಮುಂಚೆ ಪ್ರತಿ ಕೆ.ಜಿ. ಬೀಜವನ್ನು 2 ಗ್ರಾಂ. ಮ್ಯಾಂಕೊಜೆಬ್‌ನಿAದ ಬೀಜೋಪಚಾರ ಮಾಡುವುದರಿಂದ ಬೀಜದಿಂದ ಪ್ರಸಾರವಾಗುವ ರೋಗಗಳನ್ನು ತಡೆಗಟ್ಟಬಹುದು.

ಪ್ರತಿ ವರ್ಷ ಕೇದಿಗೆ ರೋಗ ಕಂಡುಬರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರತಿ ಕೆ.ಜಿ. ಬಿತ್ತನೆ ಬೀಜಕ್ಕೆ 6 ಗ್ರಾಂ ನಷ್ಟು ಮೆಟಾಲಾಕ್ಸಿಲ್‌ನಿಂದ ಬೀಜೋಪಚಾರ ಮಾಡುವುದರಿಂದ ರೋಗ ತಡೆಗಟ್ಟಬಹುದು. ನೆಕ್ರೋಸಿಸ್ ನಂಜು ರೋಗ ತಡೆಗಟ್ಟಲು ಪ್ರತಿ ಕೆ.ಜಿ. ಬಿತ್ತನೆ ಬೀಜಕ್ಕೆ 5 ಗ್ರಾಂ. ಇಮಿಡಾಕ್ಲೋಪ್ರಿಡ್ 70 ಡಬ್ಯೂ÷್ಲ.ಎಸ್. ನಿಂದ ಬೀಜೋಪಚಾರ ಮಾಡಬೇಕು..

ಸಸಿಗಳನ್ನು ವಿರಳ ಮಾಡುವುದು: ಬಿತ್ತನೆಯ ನಂತರ 15-20 ದಿನಗಳೊಳಗಾಗಿ ಪ್ರತಿ ಸಾಲಿನಲ್ಲಿ 1 ಅಡಿ ಅಂತರದಲ್ಲಿ ಗುಣಿಗೆ ಒಂದರಂತೆ ಆರೋಗ್ಯವಾದ ಒಂದು ಸಸಿಯನ್ನು ಬಿಟ್ಟು ಮಿಕ್ಕ ಸಸಿಗಳನ್ನು ತೆಗೆಯುವುದರಿಂದ ಗಿಡಗಳು ದೃಢ ಬೆಳೆದು ಹೆಚ್ಚಿನ ಇಳುವರಿಯನ್ನು ಪಡೆಯಲು ಅನುಕೂಲವಾಗುತ್ತದೆ.

ಗೊಬ್ಬರದ ಪ್ರಮಾಣ: ಬಿತ್ತನೆ ಮಾಡುವ 2-3 ವಾರಗಳ ಮೊದಲೆ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟನ್ನು ಮಣ್ಣಿನಲ್ಲಿ ಸೇರಿಸಬೇಕು. ರಸಗೊಬ್ಬರಗಳಲ್ಲಿ ಶಿಫಾರಸ್ಸು ಮಾಡಿದ ಅರ್ಧ ಪ್ರಮಾಣದ ಸಾರಜನಕ ಹಾಗೂ ಪೂರ್ಣ ಪ್ರಮಾಣದ ರಂಜಕ ಮತ್ತು ಪೊಟ್ಯಾಷ್ ರಸಗೊಬ್ಬರಗಳನ್ನು ಬಿತ್ತನೆ ಸಮಯದಲ್ಲಿ ಮಣ್ಣಿನಲ್ಲಿ ಸೇರಿಸಬೇಕು.  ಉಳಿದ ಅರ್ಧ ಪ್ರಮಾಣದ ಸಾರಜನಕವನ್ನು ಬಿತ್ತನೆ ಮಾಡಿದ ಸುಮಾರು 25-30 ದಿನಗಳಲ್ಲಿ ಮೇಲುಗೊಬ್ಬರವಾಗಿ ಕೊಟ್ಟ್ಟು ಅಂತರ ಬೇಸಾಯ ಕೈಗೊಳ್ಳುವುದು.

ಬೋರಾನ್ ಲಘು ಪೋಷಕಾಂಶವನ್ನು ಬೋರಾಕ್ಸ್ ರೂಪದಲ್ಲಿ ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ಹೂ ಅರಳುವ ಹಂತದಲ್ಲಿ ತೆನೆಯ ಮೇಲೆ ಸಿಂಪಡಿಸುವುದರಿAದ ಕಾಳುಕಟ್ಟುವಿಕೆ ಜಾಸ್ತಿಯಾಗುವುದರ ಜೊತೆಗೆ ಕಾಳಿನ ತೂಕ ಮತ್ತು ಇಳುವರಿಯಲ್ಲಿ ಹೆಚ್ಚಳವಾಗುತ್ತದೆ.

ನೀರು ನಿರ್ವಹಣೆ: ಬಿತ್ತುವುದಕ್ಕೆ ಮುಂಚೆ ನೀರು ಹಾಯಿಸಿ ಬಿತ್ತನೆ ಮಾಡುವುದು, ನಂತರದ ನೀರನ್ನು ಹವಾಗುಣ ಮತ್ತು ಮಣ್ಣಿನ ಗುಣಗಳಿಗನುಸಾರವಾಗಿ ಅಗತ್ಯಕ್ಕೆ ತಕ್ಕಂತೆ ಕೊಡಬೇಕು. ಕಪ್ಪು ಮಣ್ಣಿನಲ್ಲಿ 12-15 ದಿನಗಳಿಗೊಮ್ಮೆ ಮತ್ತು ಕೆಂಪು ಮಣ್ಣಿನಲ್ಲಿ 8-10 ದಿನಗಳಿಗೊಮ್ಮೆ ನೀರನ್ನು ಕೊಡಬೇಕಾಗುತ್ತದೆ. ಹೆಚ್ಚಿನ ಇಳುವರಿ ಪಡೆಯಲು ಬೆಳೆಯ ಮುಖ್ಯ ಹಂತಗಳಾದ ಮೊಗ್ಗು, ಹೂವು ಹಾಗೂ ಕಾಳು ಕಟ್ಟುವ ಸಮಯದಲ್ಲಿ ನೀರಿನ ಅಭಾವವಾಗದಂತೆ ನೋಡಿಕೊಳ್ಳಬೇಕು.

ಕಳೆ ನಿರ್ವಹಣೆ: ಬಿತ್ತಿದ ದಿವಸ ಅಥವಾ ಮಾರನೆಯ ದಿವಸ ಎಕರೆಗೆ 0.75ಲೀ ಪೆಂಡಿಮಿಥಾಲಿನ್ 38.7 ಇ.ಸಿ ಯನ್ನು 300 ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಸಿಂಪರಣೆ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರುವಂತೆ ಹಾಗೂ ಹೆಚ್ಚು ಹೆಂಟೆಗಳಿರದಂತೆ ಎಚ್ಚರವಹಿಸಬೇಕು.

ಮುಖ್ಯವಾದ ಕಡಿಮೆ ಖರ್ಚಿನ ಬೇಸಾಯ ಕ್ರಮಗಳು

  • ಶಿಫಾರಸ್ಸು ಮಾಡಿದ ತಳಿಗಳು ಹಾಗೂ ಪ್ರಮಾಣೀಕರಿಸಿದ ಬಿತ್ತನೆ ಬೀಜ ಉಪಯೋಗಿಸುವುದು.
  • ಸೂರ್ಯಕಾಂತಿ ಬೇಸಾಯದಲ್ಲಿ ಬೆಳೆಗಳ ಪರಿವರ್ತನೆ ಬಹಳ ಮುಖ್ಯ. ಆದ್ದರಿಂದ ದ್ವಿದಳ ಧಾನ್ಯದ ಬೆಳೆಗಳೊಡನೆ ಬೆಳೆ ಪರಿವರ್ತನೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವ ಜೊತೆಗೆ ಸೂರ್ಯಕಾಂತಿಯ ಬೆಳೆಗೆ ಬರುವ ರೋಗ ಹಾಗೂ ಕೀಟಬಾಧೆಯನ್ನು ಕಡಿಮೆ ಮಾಡಬಹುದು.

ಸೂರ್ಯಕಾಂತಿಯಲ್ಲಿ ಜೇನು ನೊಣಗಳ ಸಂರಕ್ಷಣೆ:

ಸೂರ್ಯಕಾಂತಿಯಲ್ಲಿ ಜೇನು ನೊಣಗಳು ಪರಾಗಸ್ಪರ್ಶಕ್ರಿಯೆಯಲ್ಲಿ ಸಹಕಾರಿಯಾಗಿ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೀಟನಾಶಕಗಳನ್ನು ಸಾಯಂಕಾಲದ ಸಮಯದಲ್ಲಿ ಸಿಂಪಡಿಸುವುದು ಉತ್ತಮ. ಇದರಿಂದ ಪರಾಗಸ್ಪರ್ಶಕ್ಕೆ ಸಹಕಾರಿಯಾಗುವ ಜೇನುನೊಣಗಳ ಸಂರಕ್ಷಣೆಯನ್ನು ಮಾಡಬಹುದು.

ಲೇಖಕರು: ಎಂ. ಎಸ್. ಉಮಾ, ಎಸ್. ಡಿ. ನೆಹರು, ಕೆ. ಎಂ ಶ್ರೀನಿವಾಸ್ ರೆಡ್ಡಿ, ಸಿ. ಪಿ. ಮಂಜುಳ, ಕೆ. ಎಸ್. ಸೋಮಶೇಖರ್, ದತ್ತಾತ್ರೇಯ ಭಟ್ ಮತ್ತು ಅರ್ಜುಮನ್ ಬಾನು

ವಿಳಾಸ: ಅಖಿಲ ಭಾರತ ಸುಸಂಘಟಿತ ಸೂರ್ಯಕಾಂತಿ ಸಂಶೋಧನಾ ಪ್ರಾಯೋಜನೆ, ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ, ಬೆಂಗಳೂರು 560065

ಬೆಂಗಳೂರು ಕೇಂದ್ರದಿಂದ ಸಾಗುವಳಿಗಾಗಿ ಬಿಡುಗಡೆಯಾದ ಸಂಕರಣ ತಳಿ

LEAVE A REPLY

Please enter your comment!
Please enter your name here