​ಕೃಷಿ ಮೇಳ 2026; ಸುರಕ್ಷತೆ, ರೈತ ಸ್ನೇಹಿ ಸೌಲಭ್ಯ ಹಾಗೂ ಆಧುನಿಕ ಸ್ಪರ್ಶ

0

​ದೇಶದಲ್ಲೇ ಪ್ರಸಿದ್ದಿ ಪಡೆದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಾರ್ಷಿಕ ‘ಕೃಷಿ ಮೇಳ 2026’ರ ಆಯೋಜನೆ, ಸಾರ್ವಜನಿಕರಿಗೆ ನೀಡಲಾಗಿರುವ ಸುರಕ್ಷತೆ ಹಾಗೂ ನೂತನ ಸೇವಾ ವ್ಯವಸ್ಥೆಗಳ ಕುರಿತು ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕಿ ಡಾ. ಮಂಜುಳಾ ಎನ್. ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದ ಮುಖ್ಯಾಂಶಗಳು ನಿಮ್ಮ ಮುಂದಿದೆ.

​ಪ್ರಶ್ನೆ: ಅಪಾರ ಸಂಖ್ಯೆಯ ಕೃಷಿಕರು, ಆಸಕ್ತರು ಸೇರುವ ಧಾರವಾಡ ಕೃಷಿಮೇಳದ ಸುರಕ್ಷತೆ ಹಾಗೂ ವಿಮಾ ರಕ್ಷಣೆ (Insurance Coverage) ಕುರಿತು ಕೈಗೊಂಡಿರುವ ಕ್ರಮಗಳೇನು ?

​ಡಾ. ಮಂಜುಳಾ ಎನ್. : ಕೃಷಿ ಮೇಳಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ರೈತರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೇಳ ಪ್ರಾರಂಭವಾಗುವ ೭ ದಿನ ಮುಂಚಿತವಾಗಿ ಮತ್ತು ಮೇಳ ಮುಗಿದ ನಂತರದ ೭ ದಿನಗಳವರೆಗೆ ಇಡೀ ಮೇಳದ ಪ್ರದೇಶವನ್ನು ವಿಮಾ ವ್ಯಾಪ್ತಿಗೆ (Insurance) ಒಳಪಡಿಸಲಾಗಿದೆ. ಮೇಳದ ಆವರಣದಲ್ಲಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಅಥವಾ ಅನಾಹುತ ಸಂಭವಿಸಿದಲ್ಲಿ ತಕ್ಷಣವೇ ಸಹಾಯ ಸಿಗುವಂತೆ ಕಟ್ಟುನಿಟ್ಟಿನ ಕಾಯ್ದೆ-ಕ್ರಮಗಳನ್ನು ಕೈಗೊಳ್ಳಲಾಗಿದೆ.

​ಪ್ರಶ್ನೆ: ಈ ಬಾರಿಯ ಡಿಜಿಟಲ್ ನೋಂದಣಿ ಹಾಗೂ ಹೆಡ್ ಕೌಂಟಿಂಗ್ ವ್ಯವಸ್ಥೆ ಹೇಗಿರಲಿದೆ ?

​ಡಾ. ಮಂಜುಳಾ ಎನ್. : ಕಳೆದ ಬಾರಿ ಸುಮಾರು ೨೩ ಲಕ್ಷ ಜನರು ಭಾಗವಹಿಸಿದ್ದರು. ಈ ಬಾರಿ ೨೦ ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ. ಈ ಬೃಹತ್ ಜನಸಂದಣಿಯನ್ನು ದಾಖಲಿಸಲು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ಗೆ ಅರ್ಜಿ ಸಲ್ಲಿಸಲಾಗಿದೆ. ಮೇಳದ ಮುಖ್ಯ ೫ ದ್ವಾರಗಳಲ್ಲಿ ವಿಶೇಷ ಹೆಡ್ ಕೌಂಟಿಂಗ್ (Head Counting) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಪ್ರತಿ ಗಂಟೆಗೆ (Hourly Basis) ಮೇಳಕ್ಕೆ ಎಷ್ಟು ಜನರು ಆಗಮಿಸಿದರು ಎಂಬ ನಿಖರವಾದ ಡಿಜಿಟಲ್ ಡೇಟಾ ಲಭ್ಯವಾಗಲಿದೆ. ಆನ್‌ಲೈನ್ ಕ್ಯೂಆರ್ ಕೋಡ್ (QR Code) ಮೂಲಕ ಸರಳ ಡಿಜಿಟಲ್ ನೋಂದಣಿ ವ್ಯವಸ್ಥೆ ಮಾಡಲಾಗಿದೆ.

​ಪ್ರಶ್ನೆ: ರೈತರಿಗೆ ಉಚಿತ ಊಟ ಹಾಗೂ ಸಬ್ಸಿಡಿ ಸೌಲಭ್ಯ ಹೇಗಿರುತ್ತದೆ ಎಂಬುದರ ಬಗ್ಗೆ ತಿಳಿಸಿ

​​ಡಾ. ಮಂಜುಳಾ ಎನ್. : ಮೇಳಕ್ಕೆ ಆಗಮಿಸುವ ಆಹ್ವಾನಿತ ರೈತರು ಹಾಗೂ ಸಾಧಕ ರೈತರಿಗೆ ದಿನಕ್ಕೆ ಸುಮಾರು ೨,೦೦೦ ದಿಂದ ೩,೦೦೦ ಜನರಿಗೆ ಉಚಿತ ಊಟದ ವ್ಯವಸ್ಥೆಯನ್ನು ಪ್ರತ್ಯೇಕ ಸ್ಟಾಲ್‌ನಲ್ಲಿ ಮಾಡಲಾಗಿದೆ. ಖಾಸಗಿ ಸಂಸ್ಥೆಗಳು ನೀಡುವ ಯಂತ್ರೋಪಕರಣಗಳಿಗೆ ಮೇಳದ ಆವರಣದಲ್ಲೇ ನೇರವಾಗಿ ಸಬ್ಸಿಡಿ (ದರ ಕಡಿತ) ದೊರೆಯುವಂತೆ ವ್ಯವಸ್ಥೆ ರೂಪಿಸಲಾಗಿದೆ.

​ಪ್ರಶ್ನೆ: ಅಗ್ರಿ ಸ್ಟಾರ್ಟ್‌ಅಪ್ ಹಾಗೂ ಕೆವಿಕೆ ಕಾಂಕ್ಲೇವ್ ಬಗ್ಗೆ ತಿಳಿಸಿ

​​​ಡಾ. ಮಂಜುಳಾ ಎನ್. : ಕೆವಿಕೆ ಕಾಂಕ್ಲೇವ್ (KVK Conclave): ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ೬ ಕೃಷಿ ವಿಜ್ಞಾನ ಕೇಂದ್ರಗಳ (KVK) ಚಟುವಟಿಕೆಗಳು ಮತ್ತು ತಂತ್ರಜ್ಞಾನಗಳನ್ನು ಒಂದೇ ಸೂರಿನಡಿ ಪ್ರದರ್ಶಿಸಲು ‘ಕೆವಿಕೆ ಕಾಂಕ್ಲೇವ್’ ಆಯೋಜಿಸಲಾಗಿದೆ. ವಿಶ್ವವಿದ್ಯಾಲಯದಿಂದಲೇ ಧನಸಹಾಯ (Funding) ಪಡೆದ ಯುವ ಅಗ್ರಿ-ಸ್ಟಾರ್ಟ್‌ಅಪ್‌ಗಳಿಗೆ ಉಚಿತ ಮಳಿಗೆಗಳನ್ನು (Free Stalls) ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಅವರು ಮಾಡಿದ ಆವಿಷ್ಕಾರಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ರೈತ ಉತ್ಪಾದಕ ಸಂಸ್ಥೆಗಳು (FPO) ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವಿಶೇಷ ಆಸಕ್ತಿ ವಹಿಸಲಾಗಿದೆ.

​ಪ್ರಶ್ನೆ: ಕೃಷಿ ವಿಶ್ವವಿದ್ಯಾಲಯದ ತಾಂತ್ರಿಕ ಪ್ರಕಟಣೆಗಳು ಹಾಗೂ ನೂತನ ತಂತ್ರಜ್ಞಾನ ಬಗ್ಗೆ ತಿಳಿಸಿ

​​​​ಡಾ. ಮಂಜುಳಾ ಎನ್.: ಇಂಗ್ಲಿಷ್ ಭಾಷೆಯ ಪ್ರಭಾವ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಕನ್ನಡ ಕೃಷಿ ಸಾಹಿತ್ಯವನ್ನು ಪ್ರೋತ್ಸಾಹಿಸಲು ‘ಚೆನ್ನವೀರ ಕಣವಿ ಕೃಷಿ ಲೇಖನ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತಿದೆ.  ರೈತರಿಗಾಗಿ ದೇಶಿ ಕೃಷಿ ತಂತ್ರಜ್ಞಾನಗಳನ್ನು ಒಳಗೊಂಡ ನೂತನ ‘ಕೃಷಿ ಕೈಪಿಡಿ’ಯನ್ನು ಹಾಗೂ ಪರಿಷ್ಕೃತ ಕೃಷಿ ಪುಸ್ತಕಗಳನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.ಕೃಷಿಯಲ್ಲಿ ಮಹಿಳೆಯರನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ‘ಡ್ರೋನ್ ದೀದಿ’ ಯೋಜನೆಯಡಿ ಮಹಿಳೆಯರಿಗೆ ಡ್ರೋನ್ ಬಳಕೆಯ ತರಬೇತಿ ಹಾಗೂ ಪ್ರದರ್ಶನವನ್ನು ನೀಡಲಾಗುತ್ತಿದೆ.

​ಪ್ರಶ್ನೆ: ಕ್ಷೇತ್ರ ವೀಕ್ಷಣೆಗೆ ವಾಹನ ಸೌಲಭ್ಯ ಇರುತ್ತದೆಯೇ ?

​​​​​ ​ಡಾ. ಮಂಜುಳಾ ಎನ್.: ಮೇಳಕ್ಕೆ ಆಗಮಿಸುವ ರೈತರು ಕೃಷಿ ತಾಕುಗಳನ್ನು (Agricultural Fields) ವೀಕ್ಷಿಸಲು ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಒಳಗಿನ ಕ್ಷೇತ್ರಗಳವರೆಗೆ ಸಾಗಲು ಸಣ್ಣ ವಾಹನ/ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ದಾರಿ ತೋರಲು ಹಾಗೂ ಮಾರ್ಗದರ್ಶನ ನೀಡಲು ವಿದ್ಯಾರ್ಥಿಗಳ ತಂಡಗಳನ್ನು (Batch-wise Students) ನಿಯೋಜಿಸಲಾಗಿದೆ.

​ನಿರ್ದೇಶಕರ ಸಂದೇಶ:

“ರೈತರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ಅಡಚಣೆಯಾಗದಂತೆ ಸಾರಿಗೆ, ಕುಡಿಯುವ ನೀರು, ಶೌಚಾಲಯ, ಮೊಬೈಲ್ ಎಟಿಎಂ ಹಾಗೂ ನೆಟ್‌ವರ್ಕ್ ಗೋಪುರಗಳನ್ನು ಸ್ಥಾಪಿಸಲಾಗಿದೆ. ರೈತ ಬಾಂಧವರು ಈ ಎಲ್ಲಾ ಆಧುನಿಕ ಸೌಲಭ್ಯಗಳ ಸೌಲಭ್ಯ ಪಡೆದುಕೊಳ್ಳಬೇಕು.” – ಡಾ. ಮಂಜುಳಾ ಎನ್.

LEAVE A REPLY

Please enter your comment!
Please enter your name here