“ನೋಡಿ ಸರ್, ಸರ್ಕಾರ ಇತ್ತಿತ್ತಲಾಗೆ ಆಗೊಮ್ಮೆ ಈಗೊಮ್ಮೆ ಟೀಚರ್ಸ್ ಪೋಸ್ಟ್ ಕಾಲ್ಫಾರ್ ಮಾಡ್ತಿದೆ. ಪ್ರತಿ ಬಾರಿಯೂ ಹೊಸ ಹೊಸ ರೂಲ್ಸ್ ಬರ್ತಿದೆ. ಜೊತೆಗೆ ಹೊಸದಾಗಿ ಪದವಿ ಪಡೆದವರ ಸಿಕ್ಕಾಪಟ್ಟೆ ಪೈಪೋಟಿ ಬೇರೆ. ಆದುದರಿಂದ ಪ್ರವೈಟ್ ಸ್ಕೂಲ್ನಲ್ಲಿ ಗೆಸ್ಟ್ ಟೀಚರ್ ಆಗಿ ಹೋದೆ. ಅಲ್ಲಿಯ ಅಲ್ಪ ಸಂಬಳ ಜೀವನಕ್ಕೆ ಸಾಲಲಿಲ್ಲ. ಈ ಕಾರಣಕ್ಕೆ ಟೀಚಿಂಗ್ ಕೆಲಸಕ್ಕೆ ಗುಡ್ ಬೈ ಹೇಳಿ ನಾಟಿ ಕೋಳಿ ಸಾಕಲಿಕ್ಕೆ ಶುರು ಮಾಡಿದೆ” ಎಂದರು ಪ್ರಸನ್ನ
“ಈಗ ಕೈ ತುಂಬಾ ಕಾಸಿನ ಜೊತೆಗೆ ಬದುಕಿನಲ್ಲಿ ನೆಮ್ಮದಿ ಮತ್ತು ಸಂತೃಪ್ತಿ ಸಿಗುತ್ತಿದೆ” ಎನ್ನುತ್ತಾ ಪ್ರಸನ್ನ ನಾಟಿ ಕೋಳಿಗಳಿಗೆ ತಾವೇ ಪ್ರಿಪೇರ್ ಮಾಡಿದ ಫುಡ್ ಹಾಕುತ್ತಿದ್ದರೆ, ಬೆನ್ನಲ್ಲೇ ನಾಲ್ಕೆöÊದು ಗಿರಾಕಿಗಳು ನಾಟಿ ಕೋಳಿ ಕೇಳಿಕೊಂಡು ಬಂದರು. ಪ್ರಸನ್ನನ ಹೆಂಡತಿ ರೇಖಾ ಅರೆಚಣದಲ್ಲಿ ವ್ಯಾಪಾರ ಮುಗಿಸಿ ` ನೋಡಿದ್ರಾ, ಮೂರು ಕೋಳಿಯಿಂದ ೮೦೦/- ರೂ ನಿವ್ವಳ ಲಾಭ ಸಿಕ್ಕಿತ್ತು..’ ಎಂದು ನಗೆಸೂಸಿದರು!.
ಆರಂಭಿಸಿದ್ದು ಹೀಗೆ..
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕಣಗಾವ್ ಗ್ರಾಮದ ಪ್ರಸನ್ನ ಪರಸಪ್ಪನವರ್ ಕಳೆದ ಒಂದು ದಶಕದಿಂದ ನಾಟಿ ಕೋಳಿ ಸಾಕಾಣಿಕೆಯಲ್ಲಿ ರುಚಿ ಕಂಡಿದ್ದಾರೆ. ಓದಿದ್ದು ಬಿಇಡಿ. ಸಕಾಲದಲ್ಲಿ ಸರಕಾರಿ ನೌಕರಿ ಸಿಗಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆ ನೀಡುವ ಸಂಬಳ ಸಾಲಲಿಲ್ಲ. ಈಗಿದ್ದಾಗ ಮೂಲತಃ ಕೃಷಿ ಕುಟುಂಬದವರಾಗಿದ್ದ ಪ್ರಸನ್ನ ತಮ್ಮ ಹೊಲದ ಒಂದೆಡೆ ಕೇವಲ ನಾಲ್ಕು ಗುಂಟೆ ಜಾಗದಲ್ಲಿ ಲಕ್ಷ ರೂ ಖರ್ಚು ಮಾಡಿ ಕೋಳಿ ಶೆಡ್ ನಿರ್ಮಿಸಿದರು. ಪ್ರಾರಂಭದಲ್ಲಿ ೫೦ ಸಾವಿರ ಖರ್ಚು ಮಾಡಿ ೫೦೦ ನಾಟಿ ಕೋಳಿ ಮರಿಗಳನ್ನು ತಂದು ಮೂರು ತಿಂಗಳು ಸಾಕಿದರು. ಪ್ರಾರಂಭದಲ್ಲಿ ಅನನುಭವ, ಮಾಹಿತಿ ಕೊರೆತೆಯಿಂದ ಪೆಟ್ಟು ತಿಂದರೂ ತಮ್ಮ ಅಧ್ಯಯನ, ಉತ್ಸಾಹ, ಶ್ರಮದಿಂದ ಬೇಗನೆ ಚೇತರಿಸಿಕೊಂಡರು.
ಸಿಕ್ಕಾಪಟ್ಟೆ ಬೇಡಿಕೆ..
ಹಾಗೆ ನೋಡಿದರೆ ಕಣಗಾವ್ ಸುತ್ತಾಮುತ್ತಾ ಬರೀ ಬಾಯ್ಲರ್ ಪೌಲ್ಟಿç ಫಾರಂಗಳೇ ಹೆಚ್ಚು. ಜವಾರಿ ಕೋಳಿಗಳನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸಾಕುವುದಿಲ್ಲ. ಸಹಜವಾಗಿ ಈ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ಇನ್ನು ಹೋಳಿ ಹುಣ್ಣಿಮೆ, ಮೊಹರಂ.. ಇತ್ಯಾದಿ ಹಬ್ಬಗಳಲ್ಲಿ ಅದರಲ್ಲೂ ವಿಶೇಷವಾಗಿ ಬ್ಯಾಟೆ, ಕರಿ ದಿನಗಳಲ್ಲಿ ಸಿಕ್ಕಾಪಟ್ಟೆ ಬೇಡಿಕೆ. ಇಂತಹ ಸಮಯಕ್ಕೆ ಸರಿಯಾಗಿ ಕೋಳಿಗಳು ಕೈಗೆ ಬರುವಂತೆ ಪರಸಪ್ಪ ಪ್ಲಾöನ್ ಮಾಡಿ ಕೋಳಿ ಸಾಕುತ್ತಾರೆ. ದಲ್ಲಾಲಿಗಳು ಇಲ್ಲಿಲ್ಲ. ಗಿರಾಕಿಗಳನ್ನು ಹುಡುಕಿಕೊಂಡು ಊರೂರು ಅಲೆಯುವುದೂ ಇಲ್ಲ!. ಸುತ್ತಲಿನ ೨೫-೩೦ ಹಳ್ಳಿಗಳ ಜನರೇ ಇವರ ಫಾರಂಗೇ ಬಂದು ಕೊಂಡು ಒಯ್ಯುತ್ತಾರೆ!. ಅಖಂಡ ಕೋಳಿಗಳನ್ನು ಹೋಲ್ಸೇಲ್ ಧರಕ್ಕೆ ಮಾರುತ್ತಾರೆ.
ಕೆಟ್ಟ ಕಾಯಿಪಲ್ಲೆಯೂ ಬೇಕು..!
ಕೋಳಿ ಮರಿಗಳಿಗೆ ಆರಂಭದ ಒಂದೂವರೆ ತಿಂಗಳು ಮಾತ್ರ ಕಂಪನಿ ಫುಡ್ ನೀಡುತ್ತಾರೆ. ನಂತರವೇನಿದ್ದರೂ ನಾವು ವೇಸ್ಟ್ ಎನ್ನುವ ಕೊಳೆತ ಕಾಯಿಪಲ್ಲೆಗಳೇ ಈ ಕೋಳಿಗಳಿಗೆ ಬೆಸ್ಟ್ ಫುಡ್!. ಇನ್ನು ಆಯಾ ಸೀಜನ್ನಲ್ಲಿ ಸೋವಿ ಸಿಗುವ ತರಕಾರಿಗಳನ್ನು ಕೊಂಡು ತಂದು ಹಾಕುತ್ತಾರೆ. ಇನ್ನು ತಮ್ಮ ಹೊಲದಲ್ಲೇ ಬೆಳೆಯುವ ಮೆಕ್ಕೆಜೋಳ, ಜೋಳ, ಗೋಧಿ ಅದರೊಟ್ಟಿಗೆ ಹಿಂಡಿ ಬೆರೆಸಿ ಕೊಡುತ್ತಾರೆ. ಅದು ಬಿಟ್ಟರೆ ದಿನದಲ್ಲಿ ಕೋಳಿಗಳನ್ನು ಹೊರಗೆ ಮೇಯಲು ಬಿಡುತ್ತಾರೆ. ಈ ಕಾರಣಗಳಿಂದ ಮಿತ ಸಾಕಾಣಿಕೆ ವೆಚ್ಚ, ಶ್ರಮದಲ್ಲಿ ಗರಿಷ್ಠ ಆದಾಯ ಗಳಿಸುತ್ತಿದ್ದಾರೆ.
ಲಾಭದ ಲೆಕ್ಕಚಾರ..
` ನೋಡಿ ಮರಿಗಳನ್ನು ೨ ೧/೨ ರಿಂದ ೦೩ ತಿಂಗಳು ಸಾಕಿ ನಂತರ ಮಾರಬಹುದು. ಮೂರು ತಿಂಗಳ ಕೋಳಿ ಅಂದಾಜು ೧ ೧/೨ ಕೆ.ಜಿ ತೂಗಲಿದ್ದು ಅದಕ್ಕೆ ಸದ್ಯ ಕನಿಷ್ಟ ೨೫೦-೩೦೦ ರೂ, ಹುಂಜವಾದರೆ ೦೨ ಕೆ.ಜಿ ಬರಲಿದ್ದು ಅದಕ್ಕೆ ೪೫೦-೫೦೦ ರೂ ಬೆಲೆ ಇದೆ. ವರ್ಷದವರೆಗೆ ಸಾಕಿ ಮಾರಿದರೂ ಒಳ್ಳೆ ದುಡ್ಡಿಗೆ ಸೇಲ್ ಆಗ್ತಾವೆ. ಕೋಳಿಗಳು ಐದು ತಿಂಗಳ ನಂತರ ಮೊಟ್ಟೆ ಇಡಲಿಕ್ಕೆ ಆರಂಭಿಸುತ್ತಾವೆ. ಮೊಟ್ಟೆಗೂ ಬೇಡಿಕೆ. ಜೊತೆಗೆ ಕೋಳಿ ಗೊಬ್ಬರವೂ ಡಿಮ್ಯಾಂಡ್. ಒಂದು ಟ್ರಾಕ್ಟರ್ಗೆ ೫-೬ ಸಾವಿರ ಬೆಲೆ!. ೫೦೦ ಮರಿಗಳನ್ನು ೦೩ ತಿಂಗಳವರೆಗೆ ಸಾಕಿದರೆ ೬೦ ಸಾವಿರ ಖರ್ಚು ಬರುತ್ತದೆ..’ ಹೀಗೆ ಸಾಕಾಣಿಕೆಯ ಖುರ್ಚವೆಚ್ಚದ ಲೆಕ್ಕಚಾರ ತೆರೆದಿಡುತ್ತಾ ಹೋಗುತ್ತಾರೆ ಪರಸಪ್ಪ.
ಈಗ ಇವರು ವರ್ಷದಲ್ಲಿ ೮-೧೦ ಸಾವಿರ ಕೋಳಿಗಳನ್ನು ಸಾಕಿ ಮಾರುತ್ತಿದ್ದು, ಇದರಿಂದ ೮-೧೦ ಟ್ರಾಕ್ಟರ್ ಗೊಬ್ಬರ ಸಿಗಲಿದೆ. ಒಟ್ಟಾರೆಯಾಗಿ ಕೋಳಿ ಫುಡ್, ಕೋಳಿ ಮಾಂಸದ ಬೆಲೆಯ ಏರಿಳಿತದ ನಡುವೆಯೂ ಖರ್ಚುವೆಚ್ಚ ತೆಗೆದು ಪ್ರತಿ ವರ್ಷ ಸರಾಸರಿ ೦೪ ಲಕ್ಷ ನಿವ್ವಳ ಲಾಭ ಗಳಿಸುತ್ತಿದ್ದಾರೆ. ` ನಾವು ಮಧ್ಯವರ್ತಿ, ವ್ಯಾಪಾರಿಗಳನ್ನೇ ಪೂರ್ಣವಾಗಿ ಅವಲಂಬಿಸಿದರೆ ಲಾಭಾಂಶ ಕಡಿಮೆ. ಸಾಧ್ಯವಾದಷ್ಟು ಸ್ವಂತ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕು. ಊರೂರು ತಿರುಗಿ ಮಾರಬೇಕು, ಚಿಕನ್ ಅಂಗಡಿಗಳಿಗೆ ನೇರವಾಗಿ ಸಂಪರ್ಕಿಸಬೇಕು…’ ಅನ್ನುತ್ತಾರೆ ರೇಖಾ.
`ಆಡು’ಡುತ್ತಾ ಆದಾಯ..!
`ದಿನವಿಡಿ ನಾವು ಕೋಳಿ ಫಾರಂನಲ್ಲಿ ಕಾಲ ಕಳೆಯಲ್ಲ. ಬೆಳಗ್ಗೆ ಮತ್ತು ಸಂಜೆ ಒಂದೆರೆಡು ಗಂಟೆಯಷ್ಟೆ ಅಲ್ಲಿ ಕೆಲಸ. ಮಿಕ್ಕ ಸಮಯ ಹೊಲ ಮನೆ ಕೆಲಸಕ್ಕೆ ಮೀಸಲು. ಅಲ್ಲೂ ಬರೀ ಕೆಲಸ ಮಾಡಲ್ಲ. ಜೊತೆಗೆ ಈ ಆಡುಗಳನ್ನು ಸಾಕ್ತೀವಿ..’ ಅನ್ನುತ್ತಾರೆ ಪರಸಪ್ಪನ ಮಡದಿ ಡಿಇಡಿ ಪಧವಿದರೇ ರೇಖಾ!. ಕೋಳಿ ಸಾಕಾಣಿಕೆ, ವ್ಯವಸಾಯ ಜೊತೆಯಲ್ಲೇ ಸಣ್ಣ ಪ್ರಮಾಣದಲ್ಲಿ ಆಡು ಸಾಕಾಣಿಕೆ ಮಾಡುತ್ತಿದ್ದು, ವರ್ಷದಲ್ಲಿ ಸರಾಸರಿ ೧೫-೨೦ ಆಡುಗಳನ್ನು ಪ್ರತ್ಯೇಕ ಸಮಯ, ಶ್ರಮವಿಲ್ಲದೇ ಸಾಕಿ ಮಾರುವುದು ವಿಶೇಷ.