ಬೀದಿಬದಿ ಗಿಡಗಳ ಸಂರಕ್ಷಣೆ ಕಾಯಕ

0
ಬೆಂಗಳೂರು ಮಲ್ಲೇಶ್ವರ ರೈಲ್ವೆ ಸ್ಟೇಷನ್, 15ನೇ ಕ್ರಾಸಿನ ಹೊಂಗೆ ಮರಗಳ ಸಾಲು ರಸ್ತೆಯಲ್ಲಿ ನಿಂತ ವೃಕ್ಷ ಸಂರಕ್ಷಕಿ ಶೈಲಜಾ ಗೌಡಟ್ಟಿ

ಮನೆ ಮುಂದಿನ ಸಸಿಗಳಿಗೆ ನೀರು ಹಾಕುವವರೇ ಕಡಿಮೆ !! ಇನ್ನು ಬೀದಿ ಬದಿಯ ಮರಗಳಿಗೆ ನೀರು ಹಾಕಿ ಸಲುಹುವವರು ಎಷ್ಟು ಮಂದಿ ಇರಬಹುದು ? ಅದೂ ಮಹಾನಗರ ಪ್ರದೇಶದಲ್ಲಿ ? ಗಿಡ ನೆಟ್ಟು ಬೆಳೆಸುವುದು ಪುರಸಭೆ, ನಗರಸಭೆ ಮತ್ತು ಪಾಲಿಕೆ ಕೆಲಸ ಎಂದು ಭಾವಿಸಿದವರೇ ಹೆಚ್ಚು. ಇಂಥ ಸಂದರ್ಭದಲ್ಲಿ ಗಿಡಮರ ಸಲುಹುವುದು ನಮ್ಮ ಕರ್ತವ್ಯ ಎಂದುಕೊಂಡವರು ವಿರಳ ಇಂಥವರ ಸಾಲಿಗೆ ಶೈಲಜಾ ಗೌಡಟ್ಟಿ ಸೇರಿದ್ದಾರೆ.

ಇವರು ಮೂಲತಃ ತುಮಕೂರಿನವರು. ತಂದೆ ಶಾಲಾ ಅಧ್ಯಾಪಕರು. 27 ವರ್ಷದ ಹಿಂದೆ ವಿವಾಹದ ಬಳಿಕ ಬೆಂಗಳೂರಿನ ಮಲ್ಲೇಶ್ವರ ನಿವಾಸಿ. ತಮ್ಮ ಬಡಾವಣೆ ಎಂದರೆ ಇವರಿಗೆ ಅಚ್ಚುಮೆಚ್ಚು. ಶಾಲಾಕಾಲೇಜು ದಿನಗಳಿಂದಲೂ ಪ್ರಕೃತಿ ಪ್ರಿಯೆ. ಅವಕಾಶ ದೊರೆತಾಗಲೆಲ್ಲ  ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದರು. ಈಗ ಅವಕಾಶ ಮಾಡಿಕೊಂಡು ಗಿಡಗಳನ್ನು ನೆಡುತ್ತಾರೆ. ವಿಶೇಷವಾಗಿ ಹೊಂಗೆ-ಬೇವು ಬಗ್ಗೆ ಒಲವು.

ಮಲ್ಲೇಶ್ವರದ 15ನೇ ಕ್ರಾಸಿನಲ್ಲಿ ರೈಲ್ವೆ ನಿಲ್ದಾಣ ಇದೆ. ಇಲ್ಲಿಂದ  ಸ್ವಲ್ಪ ಮುಂದೆ ಕ್ಲೂನಿ ಕಾನ್ವೆಂಟ್‌.  17 ವರ್ಷದ ಹಿಂದೆ ಶೈಲಜಾ ಅವರ ಮಕ್ಕಳು ಇಲ್ಲಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು. ಮನೆ ಸಮೀಪ. ನಡೆಸಿಕೊಂಡೆ ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದರು.

ಬಿರು ಬಿಸಿಲಿನ ದಿನ. ರಸ್ತೆ ಬದಿ ಹೊಂಗೆ ಸಸಿಗಳು ಬಾಡಿದ್ದವು. ನೆಟ್ಟವರು ಅಷ್ಟಕ್ಕೆ ಕೈ ತೊಳೆದುಕೊಂಡಿದ್ದರು. ಶೈಲಜಾ ಗಮನಿಸಿದರು. ಸುಮ್ಮನಾಗಲಿಲ್ಲ. ಮನೆಗೆ ಹೋಗಿ ದೈನಂದಿನ ಕೆಲಸ ಪೂರ್ಣಗೊಳಿಸಿದರು. ಹಿಂದಿರುಗಿ ಬರುವಾಗ ಎರಡೂ ಕೈಯಲ್ಲೂ ಕೊಡಗಳಿದ್ದವು. ವರದಾಂಜನೇಯ ದೇವಸ್ಥಾನದ ಕಡೆಯಿಂದ ಸಸಿಗಳಿಗೆ ನೀರು ಹಾಕಲು ಶುರು ಮಾಡಿದರು. ಕ್ಲೂನಿ ಶಾಲೆ ತನಕ ೫೦ಕ್ಕೂ ಹೆಚ್ಚು ಸಸಿಗಳು.

ಸಸಿಗಳು ಬಳಿ ಇದ್ದ ಎಲ್ಲ ಮನೆಗಳವರ ಸಹಕಾರ ದೊರೆಯಲಿಲ್ಲ. “ನಿಮ್ಮ ಕೆಲಸ ನೀವು ನೋಡ್ರಿ, ನೀರು ಹಾಕೋಕೆ ಬಿಬಿಎಂಪಿ ಇದೆ”, ನಿಮಗೆ ನೀರು ಕೊಡ್ತಾ ನಿಂತ್ಕೊಳೋಕೆ ಆಗೋಲ್ಲ. ಬೇರೆ ಕೆಲಸ ಇದೆ” ಹೀಗೆ ಹೇಳಿದವರೆ ಹೆಚ್ಚು. ಮೂರ್ನಾಕ್ಕು ಮನೆಗಳವರು ಕೊಡಗಳಿಗೆ ನೀರು ತುಂಬಿಸಿ ಕೊಟ್ಟರು. ಭಾರದ ಕೊಡಗಳನ್ನು ದೂರ ಇರುವ ಸಸಿಗಳ ತನಕ ಹೊತ್ತುಕೊಂಡು ಹೋಗಿ ಹಾಕಬೇಕು. ಸಂಜೆ ಶಾಲೆ ಬಿಡುವ ತನಕ ಇದೇ ಕಾಯಕ. ಆಚೆ ಬಂದ ಮಕ್ಕಳಿಗೆ ಮೈಯೆಲ್ಲ ಒದ್ದೆಯಾಗಿದ್ದ ಅಮ್ಮನನ್ನು ಕಂಡು ಅಚ್ಚರಿ. ಅಮ್ಮನ ಕಾಯಕ ನೋಡಿದರು. ನಂತರ ಅವರು ಹಿಂದಿರುಗುವಾಗ ತಮ್ಮ ಪುಟ್ಟಪುಟ್ಟ ವಾಟರ್‌ ಬಾಟಲುಗಳಲ್ಲಿ ನೀರು ತುಂಬಿ ತಂದು ಸಸಿಗಳಿಗೆ ಹಾಕುತ್ತಿದ್ದರು !!

ಒಣಗಿದ ಸಸಿಗಳಿಗೆ ಜೀವ ಬಂತು. ಚಿಗುರುಗಳು ಅರಳಿದವು. ಶೈಲಜಾ ಅವರಿಗೆ, ಮಕ್ಕಳಿಗೆ ಖುಷಿಯೋ ಖುಷಿ ! “ಎರಡು ದಿನಗಳಿಗೆ ಒಮ್ಮೆಯಂತೆ  ಗಿಡಗಳಿಗೆ ನೀರು ಹುಯ್ಯುವುದನ್ನು ನಿಲ್ಲಿಸಲಿಲ್ಲ.  ಇದಕ್ಕಾಗಿ ಮನೆಗೆಲಸ ಬೇಗ ಪೂರ್ಣಗೊಳಿಸುತ್ತಿದ್ದೆ. ನನ್ನ ಮಕ್ಕಳ ಶಾಲೆಗೆ ರಜೆ ಇದ್ದ ದಿನವೂ ನೀರು ಹಾಕುವುದನ್ನು ನಿಲ್ಲಿಸುತ್ತಿರಲಿಲ್ಲ.” ಎಂದು ಹೇಳುತ್ತಾರೆ.

ಅನಗತ್ಯವಾಗಿ ಮರ ಕಡಿದಿರುವುದನ್ನು ತೋರಿಸುತ್ತಿದ್ದಾರೆ

“ಆರಂಭದಲ್ಲಿ ಒಬ್ಬಳೇ  ನೀರು ಹಾಕುವುದನ್ನು ಆ ರಸ್ತೆಯ ಮನೆಗಳವರು, ಅಂಗಡಿಗಳವರು, ಪರಿಚಯದವರು ವಿಚಿತ್ರವಾಗಿ ನೋಡುತ್ತಿದ್ದರು. ಒಂದಿಬ್ಬರಂತೂ ನಿಮಗೇಕೆ ಇಲ್ಲದ ಉಸಾಬರಿ ಎಂದಿದ್ದೂ ಇದೆ” ಎಂದು ನೆನಪು ಮಾಡಿಕೊಳ್ಳುತ್ತಾರೆ.

ಬೆಂಗಳೂರಿನಲ್ಲಿ 15 ವರ್ಷದ ಹಿಂದೆ ಮರಗಳ ಬುಡಕ್ಕೆ ಡಾಂಬರು, ಸಿಮೆಂಟ್‌ ಮೆತ್ತುವ ಚಾಳಿ ಇರಲಿಲ್ಲ. ಆದ್ದರಿಂದ ಅಗತ್ಯ ಇರುವ ಕಡೆ ಇವರೇ ಕೈ ಪಿಕಾಸಿ ತಂದು ಪಾತಿ ಮಾಡುತ್ತಿದ್ದರು.ಸಸಿಗಳಿಗೆ ಹಾಕುವ  ನೀರು ವ್ಯರ್ಥವಾಗದಂತೆ ಜಾಗ್ರತೆ ವಹಿಸುತ್ತಿದ್ದರು. ವರ್ಷಕ್ಕೊಮ್ಮೆ ಸ್ವಲ್ಪಸ್ವಲ್ಪ ಗೊಬ್ಬರ ತಂದೂ ಹಾಕಿದ್ದಾರೆ.

ಮರಗಳ ಬುಡದವರೆಗೆ ಡಾಂಬರು ಹಾಕಿರುವುದು

ಈ ರಸ್ತೆಯ ಒಂದಷ್ಟು ಗಿಡಗಳಿಗೆ ನೀರು ಹಾಕುವುದರಷ್ಟರಲ್ಲಿ ಸುಸ್ತಾಗಿ ಬಿಡುತ್ತಿತ್ತು. ಆಗ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮತ್ತೆ ನೀರು ಹಾಕಲು ಶುರು ಮಾಡುತ್ತಿದ್ದೆ. ಮಕ್ಕಳ ಶಾಲೆ ಬಿಡುವ ತನಕವೂ ನೀರು ಹಾಕುವ ನನ್ನ ಕಾಯಕ ಮುಂದುವರಿಯುತ್ತಿತ್ತು. ಕೆಲವೊಮ್ಮೆ ಕೆಲಸದ ಮೇಲೆ ಹೊರಗೆ ಹೋಗಬೇಕಾದಾಗ ಬೆಳಗ್ಗಿನ ಜಾವ ಐದು ಗಂಟೆಗೆ ಎದ್ದು ಎಷ್ಟು ಗಿಡಗಳಿಗೆ ಸಾಧ್ಯವೋ ಅಷ್ಟು ಗಿಡಗಳಿಗೆ ನೀಡು ಹಾಕಿ ಬರುತ್ತಿದ್ದೆ. ಮತ್ತೆ ಉಳಿದ ಗಿಡಗಳಿಗೆ ಮರುದಿನ ನೀರು ನೀಡುತ್ತಿದ್ದೆ” ಎಂದು ಹೇಳುತ್ತಾರೆ.

“ ಆಗ ನಾನು, ಮನೆ ಸಮೀಪದ ಸರ್ಕಾರಿ ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ಉಚಿತವಾಗಿ ಮನೆ ಪಾಠ ಹೇಳಿಕೊಡುತ್ತಿದ್ದೆ. ಆ ಮಕ್ಕಳು ಸಹ ರಜೆ ಇದ್ದಾಗ ಜೊತೆಯಲ್ಲಿ ಬಂದು ನೀರು ಹಾಕಲು ಸಹಕರಿಸುತ್ತಿದ್ದರು ಎಂದು ಸ್ಮರಿಸುವುದನ್ನು ಶೈಲಜಾ ಅವರು ಮರೆಯುವುದಿಲ್ಲ.

ಸವಾಲುಗಳು

“ಪ್ಯಾಸೆಂಜರುಗಳಿಗಾಗಿ ಕಾಯುತ್ತಿರುವ ಕೆಲವು ಚಾಲಕರು ಆಟೋಗಳನ್ನು ಸಸಿಗಳ ಮಗ್ಗುಲಿನಲ್ಲಿಯೇ ನಿಲ್ಲಿಸಿರುತ್ತಿದ್ದರು. ಸಸಿಗೆ ನೀರು ಹಾಕಬೇಕು. ತುಸು ಮುಂದೆ ನಿಲ್ಲಿಸಿ ಎಂದರೆ “ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವ” ಎಂದು ಜಗಳಕ್ಕೆ ಬಂದು ಬಿಡುತ್ತಿದ್ದರು. ದೇವಸ್ಥಾನಕ್ಕೆ ಬರುವ ಕೆಲವರು ಬೇರೆಡೆ ಪಾರ್ಕಿಂಗ್‌ ಗೆ ಸ್ಥಳವಕಾಶ ಇದ್ದರೆ ಪುಟ್ಟಪುಟ್ಟ ಗಿಡಗಳ ಮೇಲೆಯೇ ಕಾರುಗಳನ್ನು ಹತ್ತಿಸಿ ನಿಲ್ಲಿಸಿ ಬಿಡುತ್ತಿದರು. ಇದರಿಂದ ಒಂದಷ್ಟು ಗಿಡಗಳು ಮುರುಟಿ ಹೋಗಿ ಬೇರೆ ಗಿಡಗಳನ್ನು ತಂದು ನೆಟ್ಟಿದ್ದೇನೆ” ಎನ್ನುತ್ತಾರೆ.

“ನಾನು ಇಂಥವರ ಜೊತೆಯಲ್ಲಿ ಜಗಳಕ್ಕೆ ಹೋಗುತ್ತಿರಲಿಲ್ಲ. ಬದಲಾಗಿ ದಯವಿಟ್ಟು ಇಲ್ಲಿ ವಾಹನ ನಿಲ್ಲಿಸಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದೆ. ಹೆಚ್ಚಿನ ಮಂದಿ ಸ್ಪಂದಿಸುತ್ತಿದ್ದರು. ದಿನ ಕಳೆದಂತೆ ನನ್ನ ಶ್ರಮ ಗಮನಿಸಿದ್ದ ರೈಲ್ವೆ ಸ್ಟೇಷನ್‌ ರಸ್ತೆಯ ಅಂಗಡಿ ಮಾಲೀಕರು ಸಹ ಗಿಡಗಳ ಬಳಿ ಯಾರಿಗೂ ವಾಹನಗಳನ್ನು ನಿಲ್ಲಿಸಲು ಬಿಡುತ್ತಿರಲಿಲ್ಲ” ಎಂದು ನೆನಪು ಮಾಡಿಕೊಳ್ಳುತ್ತಾರೆ.

ಕಡಿದು ಹಾಕುವುದು

“ಸಸಿಗಳು ಮರಗಳಾಗಿ ಬೆಳವಣಿಗೆ ಹೊಂದುತ್ತಾ ಬಂದ ಹಾಗೆ ರೆಂಬೆಗಳು ಚಾಚಿಕೊಳ್ಳುತ್ತವೆ.  ಎಲೆಗಳು ಉದುರುತ್ತವೆ. ಮನೆ ಆವರಣದೊಳಗೆ ಗಲೀಜು ಆಗುತ್ತದೆ ಎಂದು ರೆಂಬೆಗಳನ್ನು ಕತ್ತರಿಸಿದವರಿದ್ದಾರೆ. ಮನೆ ಬಳಿ ಪಾರ್ಕಿಂಗ್‌ ಗೆ ಅವಕಾಶ ಆಗುವುದಿಲ್ಲವೆಂದು ಹೇಳೆ ಮರಗಳನ್ನೇ ಸಾಯುವ ಹಾಗೆ ಮಾಡಿ ಕಡಿದು ಹಾಕಿದವರಿದ್ದಾರೆ. ಮರಗಳ ಬುಡಕ್ಕೂ ಸಿಮೆಂಟ್‌ ಮೆತ್ತುವವರು ಇದ್ದಾರೆ. ಹೀಗೆ ಇಂದಿಗೂ ಈ ರೀತಿಯ ಸವಾಲುಗಳು ನಿಂತಿಲ್ಲ. ಇಂಥ ಪ್ರವೃತ್ತಿ ಬೆಂಗಳೂರಿನ ಎಲ್ಲೆಡೆ ಇದೆ. ಇದಕ್ಕೆಲ್ಲ ಕಾರಣ ಬೆಂಗಳೂರಿನ ಕಾಂಕ್ರೀಟೀಕರಣ “ ಎಂದು ಶೈಲಜಾ ಅವರು ಮರುಗುತ್ತಾರೆ.

ಶೈಲಜಾ ಗೌಡಟ್ಟಿ ಅವರು ಮಾಡುತ್ತಾ ಬಂದಿರುವ ಸಸ್ಯ ಸಂರಕ್ಷಣೆ ಕಾಯಕವನ್ನು ಗಮನಿಸುತ್ತಾ ಬಂದಿರುವ ಮಲ್ಲೇಶ್ವರದ ಹಿರಿಯ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದರು

ಮರದ ಬುಡಗಳ ಬಳಿ ನೀರಿಂಗಲು ಅವಕಾಶ ಇಲ್ಲ. ಮರದ ಬೇರು ಎಲ್ಲಿಯ ತನಕ ನೀರು ಹುಡುಕಿಕೊಂಡು ಹೋಗಲು ಸಾಧ್ಯ ? ಬೆಂಗಳೂರಿನಲ್ಲಿ ಅಂತರ್ಜಲ ತುಂಬ ಕೆಳಗಿಳಿದಿದೆ.  ಅಂತರ್ಜಲ ಮೇಲೆ ಇದ್ದರೆ ಗಿಡಮರಗಳು ಬದುಕಿಕೊಳ್ಳುತ್ತವೆ. ಅದಿಲ್ಲದೇ ಇರುವುದು ಸಹ ಸಮಸ್ಯೆಯಾಗಿದೆ. ವೃಕ್ಷಗಳ ಸಾವಿಗೆ ಕಾರಣವಾಗಿದ.

“ಕೇವಲ 20 ವರ್ಷದ ಹಿಂದೆ ಮಲ್ಲೇಶ್ವರದಲ್ಲಿ ಅಂತರ್ಜಲ ಮಟ್ಟ ಅತ್ಯುತ್ತಮ. ಶ್ರೀರಾಮಪುರ ಬದಿಯ ರೈಲ್ವೆ ಸ್ಟೇಷನ್ ಬಳಿ ಇದ್ದ ನಮ್ಮ ಮನೆ ಬಾವಿಯಲ್ಲಿ ಆರು ಅಡಿ ಹಗ್ಗ ಅಷ್ಟೆ ಬಳಸಿ ಬಿಂದಿಗೆಯಿಂದ ನೀರು ಮೇಲೆತ್ತುತ್ತಿದ್ದವು. ಈಗ ಹುಡುಕಿದರೂ ಅಂಥ ದೃಶ್ಯ ಸಿಗೋದಿಲ್ಲ” ಎನ್ನುತ್ತಾರೆ.

ಕೇವಲ 15 ವರ್ಷದ ಹಿಂದೆ ಬೆಂಗಳೂರು, ಬಿರು ಬೇಸಿಗೆಯಲ್ಲಿಯೂ ತಂಪು. ಅದಕ್ಕೆ ಗಿಡಮರಗಳೇ ಕಾರಣವಾದ್ದವು. “ಇತ್ತೀಚೆಗೆ ರಸ್ತೆ ಅಗಲೀಕರಣ, ಅಭಿವೃದ್ಧಿ, ಹೊಸಹೊಸ ಕಟ್ಟಡಗಳನ್ನು ಕಟ್ಟುವ ಕಾರಣಗಳನ್ನು ಹೇಳಿ ಮರ ಕಡಿಯುತ್ತಿದ್ದಾರೆ. ಮಳೆಗಾಲದಲ್ಲಿ ಒಂದೆರಡು ಮರಗಳ ರೆಂಬೆ-ಕೊಂಬೆ ಬಿದ್ದರೆ ಮರಗಳನ್ನೇ ಕತ್ತರಿಸಿ ಹಾಕುತ್ತಿದ್ದಾರೆ. ತಮ್ಮ ಕಟ್ಟಡಗಳ ಬಳಿ ಮರ ಇರಬಾರದೆಂದು ಬಯಸುವವರಿಗೆ ಇದೆಲ್ಲ ನೆಪವಾಗಿ ಒದಗುತ್ತಿದೆ” ಎಂದು ಮರುಗುತ್ತಾರೆ.

ನಿರಂತರ ಮೂರು ವರ್ಷ ಮಳೆಗಾಲ ಹೊರತುಪಡಿಸಿ ನೀರು ಹಾಕಿ ಆರೈಕೆ ಮಾಡಿದರು. ವಾಹನಗಳಿಂದ ರಕ್ಷಿಸಿದರು. ಸಸಿ ಸತ್ತರೆ ಬೇರೆ ಸಸಿ ತಂದು ನೆಟ್ಟರು. ಇವೆಲ್ಲದರ ಪರಿಣಾಮ ಮಲ್ಲೇಶ್ವರ 15 ನೇ ಕ್ರಾಸಿನ ವರದಾಂಜನೇಯ ದೇವಸ್ಥಾನದಿಂದ ಕ್ಲೂನಿ ಶಾಲೆ ತನಕದ ರಸ್ತೆ, ಬಿರುಬಿಸಿಲಿನಲ್ಲಿಯೂ ತಂಪುತಂಪು ! ಇದಕ್ಕೆ ಶ್ರಮ ವಹಿಸಿದವರು ಅಲ್ಲಿ ನಿಂತು ಸಂತಸದ ನಗೆ ಬೀರುತ್ತಾರೆ. ಆ ರಸ್ತೆಯ ಅಂಗಡಿಗಳವರಿಂದ “ಪ್ರಕೃತಿ ಆಂಟಿ” ಎಂಬ ಹೆಸರು ಗಳಿಸಿಕೊಂಡಿದ್ದಾರೆ.

ತಾವು ಸಂರಕ್ಷಿಸಿದ ಹೊಂಗೆಮರಕ್ಕೆ ಸಂತಸದಿಂದ ಒರಗಿ ನಿಂತ ಶೈಲಜಾ ಗೌಡಟ್ಟಿ

ಮಲ್ಲೇಶ್ವರದ ತಮ್ಮ ಮನೆ ಸನಿಹದ ಸರ್ಕಾರಿ ಶಾಲೆ, ಶ್ರೀರಾಮಪುರ ಮೆಟ್ರೂ ಸನಿಹದ “ಚಳವಳಿ ಪಾರ್ಕ್”‌ ಸೇರಿದಂತೆ ಇನ್ನೂ ಕೆಲವೆಡೆ ಹೊಂಗೆ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಅವಕಾಶ ಮಾಡಿಕೊಂಡು ದೂರದೂರುಗಳಿಗೂ ಹೋಗಿ ಗುಡ್ಡ, ಬೆಟ್ಟ, ಬಯಲು ಪ್ರದೇಶಗಳಲ್ಲಿ ಗಿಡಗಳನ್ನು ನೆಡುತ್ತಾರೆ. ಸದ್ದುಗದ್ದಲವಿಲ್ಲದೇ ಎಲ್ಲ ವಯೋಮಾನದವರಿಗೂ ಪರಿಸರ ಸಂರಕ್ಷಣೆ ಅಗತ್ಯ ಹೇಳುತ್ತಾರೆ. “ನಾವು ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ” ಎಂದೇಳುವುದನ್ನು ಮರೆಯುವುದಿಲ್ಲ !!

LEAVE A REPLY

Please enter your comment!
Please enter your name here