
ಯಾರ ತೋಟದಲ್ಲಿ ತೆಂಗಿನ ಫಸಲು ಕಡಿಮೆಯಾಗಿಲ್ಲ ಹೇಳಿ? ಎಲ್ಲೆಲ್ಲೂ ಫಸಲು ಕಡಿಮೆಯಾಗಿರುವುದೇ ಸುದ್ದಿ. ಯಾಕೆ ಕಡಿಮೆಯಾಗಿದೆ? ಉತ್ತರವಿಲ್ಲ. ಅನೇಕ ಹಿರಿಯ ರೈತರುಗಳು “ನಮ್ದು ಮುವತ್ತು ಸಾವಿರ ಕಾಯಿ ಆಗ್ತಾ ಇತ್ತು. ಈಗ ಬರೀ ಎಂಟು ಸಾವಿರ ಆಗ್ತಾ ಇದೆ” ಎನ್ನುತ್ತಾರೆ. ಸಾಮಾನ್ಯವಾಗಿ ಒಂದು ವರ್ಷ ಫಸಲು ಹೆಚ್ಚಾಗಿ ಇನ್ನೊಂದು ವರ್ಷ ಕಡಿಮೆಯಾಗುವುದು ವಾಡಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರತಿವರ್ಷ ತುಮಕೂರು ಜಿಲ್ಲೆಯ ಭಾಗದಲ್ಲಿ ತೆಂಗು ಬೆಳೆ ಕಡಿಮೆಯಾಗಿದೆ. ವಾಡಿಕೆಗಿಂತ ಅತೀ ಕಡಿಮೆ ಫಸಲು ಸಿಗುತ್ತಿದೆ.
ಇದಕ್ಕೆ ಕಾರಣವು ಸ್ಪಷ್ಟವಾಗಿದೆ, ಕ್ಲೈಮಟ್ ಚೇಂಜ್. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ. ಹವಾಮಾನ ಬದಲಾವಣೆಯ ಪರಿಣಾಮಗಳಲ್ಲಿ ಮಳೆಯನ್ನು ತೆಗೆದುಕೊಂಡರೆ, ಒಂದು ವರ್ಷ 1200 ಎಂಎಂ ನಷ್ಟು ಮಳೆಯಾದರೆ, ನಂತರ ವರ್ಷ 500 ಎಂಎಂನಷ್ಟು ಮಳೆಯಾಗುತ್ತಿದೆ. ಒಂದು ದಿನ ಹೊಟ್ಟೆ ಬಿರಿಯುವಂತೆ ತಿಂದು ಇನ್ನೊಂದು ದಿನ ಒಂದೊತ್ತು ಊಟ ಇಟ್ಟರೆ ಆ ವ್ಯಕ್ತಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಅದರಲ್ಲೂ ತೆಂಗು 3000 ಎಂಎಂ ನಷ್ಟು ಮಳೆ ಬೀಳುವ ಕಡೆ ಚೆನ್ನಾಗಿ ಬೆಳೆಯಬಲ್ಲದು. ಆದರೆ 500 ಎಂಎಂ ನಷ್ಟು ಮಳೆಯಾಗುವ ತುಮಕೂರು ಸೀಮೆಗೆ ಹೊಂದಿಕೊಂಡಿದೆ. ಈ ತಿಪಟೂರು ಟಾಲ್ ತಳಿಯು ಬರ ನಿರೋಧಕ ಗುಣ ಹೊಂದಿದೆ. ಆದರೆ ಹೆಚ್ಚು ಮಳೆ ಬಿದ್ದ ನಂತರ ಅತೀ ಕಡಿಮೆ ಮಳೆಯಾಗುವುದರಿಂದ ಅದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ.
ಹವಾಮಾನ ಬದಲಾವಣೆಯಲ್ಲಿ ನೀವು ಬಿಸಿಲನ್ನು ತೆಗೆದುಕೊಂಡರೆ, ಬೇಸಿಗೆಯಲ್ಲಿ ಬರದ ನಾಡಿನ ಮರಗಳೇ ಬದುಕಲು ಹೆಣಗಾಡುತ್ತಿವೆ. ಅಂತದ್ದರಲ್ಲಿ, ಕರಾವಳಿಯ ಬೆಳೆಯೊಂದು ಇಲ್ಲಿ ಬದುಕಲು ಸಾಧ್ಯವೆ? ಅಷ್ಟೊಂದು ಬಿಸಿಲು ಹೆಚ್ಚುತ್ತಿದೆ. ಹಿಂದೆಂದಿಗಿಂತಲೂ ಅತೀ ಹೆಚ್ಚು ಬಿಸಿಲು ಬೀಳುತ್ತಿದೆ. ಇದರಿಂದ ವಾತಾವರಣದಲ್ಲಿ ಆರ್ದ್ರತೆ ಕಡಿಮೆಯಾಗುತ್ತದೆ. ಈ ಆರ್ದ್ರತೆಯಿಂದಲೆ ತೆಂಗು ಬದುಕಿರುವುದು. ತಾಯಿ ಬೇರು ಇಲ್ಲದ ವೃಕ್ಷ ತೆಂಗು. ಇದಕ್ಕೆ ಆರ್ದ್ರತೆಯು ತುಂಬಾ ಅಗತ್ಯ. ನೆಲದಲ್ಲಿ ನೀರು ಕಡಿಮೆಯಾದರೂ ಬದುಕೀತು. ವಾತಾವಾರಣದ ಆರ್ದ್ರತೆ ಕಡಿಮೆಯಾದರೆ ಇದು ಬದುಕುವುದು ಕಷ್ಟ.
ಅದೇ ರೀತಿ ಚಳಿಯೂ ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚಾಗುತ್ತದೆ. ಚಳಿಗೆ ತೆಂಗು ಹೊಂದಿಕೊಳ್ಳುವುದು ಕಷ್ಟ. ಹೊಂದಿಕೊಂಡರೂ ಅಲ್ಲಿ ಫಸಲನ್ನು ಬಿಡುವುದು ಕಡಿಮೆಯಾಗುತ್ತದೆ. ನಾನು ಚಿಕ್ಕಮಗಳೂರಿನ ಘಟ್ಟದ ಮೇಲೆ ಕೆಲವರ ಮನೆಯ ಮುಂದೆ ನೆಟ್ಟ ಮರಗಳನ್ನ ನೋಡುತ್ತಿದ್ದೆನು. ಅಲ್ಲಿ ಮಳೆಯೂ ಅಧಿಕ ಮತ್ತು ಚಳಿಯೂ ಅಧಿಕ. ತೆಂಗಿಗೆ ಮಳೆ ಅಧಿಕವಾದರೆ ಓಕೆ. ಆದರೆ ಚಳಿ ಹೆಚ್ಚಾದರೆ, ಫಸಲು ಕಡಿಮೆಯಾಗುತ್ತದೆ.
ತೆಂಗು ಒಂದು ಸೂಕ್ಷ್ಮವಾದ ಬೆಳೆಯಾಗಿರುವುದಿರಿಂದ ಚಳಿ, ಮಳೆ, ಬಿಸಿಲಿನ ಅತೀರೇಕದ ಏರಿಳಿತಗಳಿಗೆ ಹೊಂದಿಕೊಳ್ಳುವುದು ಕಷ್ಟ. ಈ ಲೆಕ್ಕಾಚಾರದಲ್ಲಿ ಇನ್ನು ಮುಂದೆ ತುಮಕೂರು ಭಾಗದಲ್ಲಿ ತೆಂಗು ಇಲ್ಲವಾಗುವುದೆ ಎಂಬ ಆತಂಕವಿದೆ.
ಹಾಗಾದರೆ, ಮುಂದೇನು?
ಸಿ ಪಿ ಸಿ ಆರ್ ಐ ತರದ ಸಂಸ್ಥೆಗಳು , ತೋಟಗಾರಿಕಾ ವಿಶ್ವವಿದ್ಯಾಲಯ ಬಾಗಲಕೋಟೆ ರೈತರ ಸಹಭಾಗಿತ್ವದಲ್ಲಿ ಈ ಸ್ಥಿತಿಗತಿಯ ಬಗ್ಗೆ ಸಂಶೋಧನೆ ಮಾಡಿ ಸರಿಯಾದ ಕಾರ್ಯಕಾರಣ ಸಂಬಂಧಗಳನ್ನು ಗುರುತಿಸಬೇಕು. ಈಗಾಗಲೆ ಯಾರ ತೋಟಗಳಲ್ಲಿ ತೆಂಗು ಚೆನ್ನಾಗಿ ಫಲ ಬಿಡುತ್ತಿವೆ. ಆ ರೈತರು ಅಳವಡಿಸಿಕೊಂಡಿರುವ ಉತ್ತಮ ಕೃಷಿ ವಿಧಾನಗಳನ್ನು ಇತರ ರೈತರಿಗೆ ಪ್ರಚಾರ ಪಡಿಸಬೇಕು. ಎಲ್ಲ ರೈತರು ಹವಾಮಾನ ವೈಪರೀತ್ಯದ ಬಗ್ಗೆ ಅರ್ಥಮಾಡಿಕೊಂಡು, ಇದರ ಬಗ್ಗೆ ಕ್ರಮ ತೆಗೆದುಕೊಳ್ಳಲು ಜನಪ್ರತಿನಿಧಿಗಳಿಗೆ ಒತ್ತಾಯಿಸಬೇಕು.
ಪರಿಹಾರದ ಮಾರ್ಗಗಳನ್ನು ರೈತರು ಮತ್ತು ವಿಜ್ಞಾನಿಗಳು ಒಟ್ಟಿಗೆ ಸೇರಿ ರೂಪಿಸಬೇಕು. (ಕ್ಲೈಮೆಟ್ ರೆಸಿಲಿಯನ್ಸ್ ಪ್ಯಾಕೇಜ್ ಆಫ್ ಪ್ರಾಕ್ಟೀಸ್) ಸರ್ಕಾರ ಕ್ಲೈಮೆಟ್ ರೆಸಿಲಿಯನ್ಸ್ ಪ್ಯಾಕೇಜ್ ಅನ್ನು ತುಮಕೂರು ತೆಂಗಿಗೆ ವಿಶೇಷವಾಗಿ ಪ್ರಕಟಿಸಬೇಕು. ನಮ್ಮ ಸುತ್ತಮುತ್ತ ಮರಗಿಡಗಳನ್ನು ಕಡಿಯದಂತೆ ಎಚ್ಚರವಹಿಸಬೇಕು. ಆದಷ್ಟೂ ಪರಿಸರ ವಿರೋಧಿ ಚಟುವಟಿಕಗಳಿಗೆ ಬ್ರೇಕ್ ಹಾಕಬೇಕು.