ಮುಂಗಾರು ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿಯಿರುವುದರಿಂದ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವ ಪ್ರಶ್ನೆ “ಈ ವರ್ಷದ ಮುಂಗಾರಿನ ಮಳೆ ಹೇಗಿರಬಹುದು” ಎಂದು. ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮಳೆ ನಮ್ಮ ಕೃಷಿಯನ್ನು ನಿರ್ಧರಿಸುವುದರಿಂದ ಮುಂಗಾರಿಗೆ ಒಂದು ರೀತಿ ವಿಐಪಿ ಸ್ಥಾನಮಾನ. ಮುಂಗಾರು
ಮಾರುತಗಳು ನೈಋತ್ಯ ದಿಕ್ಕಿನಿಂದ ಬೀಸುವುದರಿಂದ ಇದಕ್ಕೆ ನೈಋತ್ಯ ಮುಂಗಾರು ಎಂದು ಕರೆಯಲಾಗುತ್ತದೆ ಮುಂಗಾರು ಆಯಾ ಪ್ರದೇಶಗಳಿಗೆ ಬೇಗ ಪ್ರವೇಶಿಸಿ ಉತ್ತಮ ಮಳೆಯಾದಾಗ ಬಿತ್ತನೆ ಚುರುಕಾಗಿ ಕೃಷಿಕರಲ್ಲಿ ಹುರುಪು ತಂದರೆ, ತಡವಾಗಿ ಅಥವಾ ಕಡಿಮೆ ಮಳೆಯಾದಾಗ ಮುಂದೇನು ಎನ್ನುವ ಯೋಚನೆ ಆವರಿಸುವಂತೆ ಮಾಡುತ್ತದೆ. ಹಾಗಾಗಿ ಮುಂಗಾರಿನ ಅಂದಾಜು ಪ್ರತಿಯೊಂದು ವಲಯದ ಜನರಿಗೆ ಮುಂಬರುವ ಸನ್ನಿವೇಶಗಳಿಗೆ ಸರಿಯಾದ ಮುನ್ನೆಚ್ಚರಿಕೆ ಕೈಗೊಳ್ಳಲು ಅನುಕೂಲವಾಗಲಿದೆ
ಈ ವರ್ಷದ ಮುಂಗಾರಿನ ಮುನ್ಸೂಚನೆ
ದೇಶದ ಪ್ರಮುಖ ಹವಾಮಾನ ಮುನ್ಸೂಚನೆ ಸಂಸ್ಥೆಯಾದ ಭಾರತ ಹವಾಮಾನ ಇಲಾಖೆಯು (IMD) ಮೊದಲ ಹಂತದ ಮುಂಗಾರಿನ ಮುನ್ಸೂಚನೆಯನ್ನು ನೀಡಿದ್ದು ಅವರ ಪತ್ರಿಕಾ ಪ್ರಕಟಣೆಯಂತೆ ದೇಶದಾದ್ಯಂತ ಈ ವರ್ಷ ದೀರ್ಘಾವಧಿ ಸರಾಸರಿಯ ೯೬% (ಹೆಚ್ಚು/ಕಡಿಮೆ ೫%) ರಂತೆ ಸಾಮಾನ್ಯ ಮಳೆಯಾಗುವ ಸೂಚನೆ ನೀಡಲಾಗಿದೆ.
ದೇಶದ ದಕ್ಷಿಣ ಭಾಗದ ಹಲವೆಡೆ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆಯಿದ್ದು, ಪಶ್ಚಿಮ ಹಾಗೂ ವಾಯವ್ಯ ಭಾರತದ ಕೆಲ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಮೇ ತಿಂಗಳ ಕೊನೆಯಲ್ಲಿ ಎರಡನೇಯ ಹಂತದ ನವೀಕರಿಸಿದ ಮುಂಗಾರಿನ ಮುನ್ಸೂಚನೆಯನ್ನು ನೀಡಲಾಗುವುದು.
ಸ್ಕೈಮೆಟ್ ಸಂಸ್ಥೆಯ ಮುನ್ಸೂಚನೆ
ದೇಶದ ಖಾಸಗಿ ಹವಾಮಾನ ಸಂಸ್ಥೆಯಾದ ಸ್ಕೈಮೆಟ್ ಕೂಡ ಮುಂಗಾರಿನ ಮುನ್ಸೂಚನೆ ನೀಡಿದ್ದು ಐಎಮ್‌ಡಿ ಗಿಂತ ೨% ಕಡಿಮೆ ಅಂದರೆ ದೇಶದಾದ್ಯಂತ ೯೪% (ಹೆಚ್ಚು/ಕಡಿಮೆ ೫%) ಮಳೆಯಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಆದರೆ ದಕ್ಷಿಣದ ರಾಜ್ಯಗಳಲ್ಲಿ (ಕರ್ನಾಟಕ ಹಾಗೂ ಕೇರಳದ ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ) ಅಧಿಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಸ್ಕೈಮೆಟ್ ಸಂಸ್ಥೆಯು ತಿಂಗಳಾನುಸಾರದ ಮುನ್ಸೂಚನೆಯನ್ನೂ ನೀಡಿದ್ದು ಅದರಂತೆ ಕರ್ನಾಟಕ ರಾಜ್ಯದ ಒಳನಾಡಿನಲ್ಲಿ ಜೂನ್, ಜುಲೈ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ವಾಡಿಕೆಗಿಂತ ಅಧಿಕ, ಅಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯನ್ನು ತಿಳಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕ ಮಳೆ ಹಾಗೂ ಉಳಿದ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದೆಂಬ ಸೂಚನೆಯನ್ನು ನಕ್ಷೆಗಳ ಮುಖಾಂತರ ವ್ಯಕ್ತಪಡಿಸಲಾಗಿದೆ
ನೈಋತ್ಯ ಮುಂಗಾರಿನ ಮೇಲೆ ಪೆಸಿಫಿಕ್ ಸಾಗರದಲ್ಲಿ ನಡೆಯುವ ವಿದ್ಯಮಾನಗಳ ಪ್ರಭಾವ
ಕಳೆದ ಕೆಲ ವರ್ಷಗಳಿಂದ ದೇಶದಲ್ಲಿ ಸತತವಾಗಿ ವಾಡಿಕೆಗಿಂತ ಅಧಿಕ ಮಳೆಯಾಗಿ ದಾಖಲೆಯಾಗಿದ್ದು ಈ ವರ್ಷ ಪೆಸಿಫಿಕ್ ಮಹಾಸಾಗರಲ್ಲಿ ಕಂಡುಬರುವ ಎನ್ಸೊ (ENSO) ಪ್ರಭಾವದಿಂದಾಗಿ ಮುಂಗಾರಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂದು ಅಂದಾಜಿಸಲಾಗಿದೆ. ಪೂರ್ವದ ಪೆಸಿಫಿಕ್ ಸಾಗರದ ತಾಪಮಾನದಲ್ಲಿ ಉಂಟಾಗುವ ಬದಲಾವಣೆಯನ್ನು ಎನ್ಸೋ ಎಂದು ಹೆಸರಿಡಲಾಗಿದ್ದು , ತಾಪಮಾನ ಪೆಸಿಫಿಕ್ ಸಾಗರದ ಪೂರ್ವದಲ್ಲಿ (ಅಂದರೆ ದಕ್ಷಿಣ ಅಮೇರಿಕಾ ಸಮುದ್ರ ತೀರದ ಸಮೀಪ)ಹೆಚ್ಚಾಗಿದ್ದರೆ ಎಲ್ ನಿನೊ(El-Nino) ಹಾಗೂ ಪಶ್ಚಿಮದಲ್ಲಿ (ಅಂದರೆ ಆಸ್ಟ್ರೇಲಿಯಾ ತೀರದ ಸಮೀಪ) ಹೆಚ್ಚಾದರೆ ಲಾ ನಿನಾ(La Nina) ಎಂದು ಕರೆಯುತ್ತಾರೆ.
ಈ ಸದ್ಯ ಎನ್ಸೋ ತಟಸ್ಥವಾಗಿದ್ದು, ಜುಲೈನಿಂದ ಎಲ್ ನಿನೊ ಉಲ್ಭಣವಾಗಬಹುದೆಂದು ಐಎಂಡಿ ಅಷ್ಟೇ ಅಲ್ಲದೇ ಅಮೇರಿಕಾ, ಯೂರೋಪ್ ಹಾಗೂ ಇತರೆ ಹವಾಮಾನಕ್ಕೆ ಸಂಬಂಧಿತ ಸಂಸ್ಥೆಗಳು ಎಚ್ಚರಿಕೆ ನೀಡುತ್ತಿವೆ. ಏಲ್ ನಿನೊ ಪ್ರಭಾವ ಹೆಚ್ಚಾದಲ್ಲಿ ಭಾರತದ ಕಡೆ ತಿರುಗುವ ಮಾರುತಗಳ ತೀವ್ರತೆ ಕಡಿಮೆಯಾಗಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾದ್ಯತೆ ಅಧಿಕವಾಗಬಹುದು.
ಎಲ್ ನಿನೊ ಸಾಧ್ಯತೆಯಿದ್ದರೂ ಈ ವರ್ಷದ ಮುಂಗಾರು ವಾಡಿಕೆಯಂತೆ ಆಗಲು ಹೇಗೆ ಸಾಧ್ಯ?
ಎಲ್ ನಿನೊದ ಪ್ರಭಾವ ಮುಂಗಾರಿನ ಮೇಲೆ ಇದ್ದರೂ ನಮ್ಮ ದೇಶದ ಮುಂಗಾರು ಕೇವಲ ಪೆಸಿಫಿಕ್ ಸಾಗರದ ತಾಪಮಾನದ ಮೇಲೆ ಅವಲಂಬಿತವಾಗಿಲ್ಲ. ಜಾಗತಿಕವಾದ ಹಾಗೂ ಸ್ಥಳೀಯವಾದ ಅನೇಕ ಹವಾಮಾನದ ವಿದ್ಯಮಾನಗಳು ಸಹ ಪ್ರಬಾವ ಬೀರುವುದು ಹಾಗೂ ಈ ವರ್ಷ ಮುಂಗಾರಿಗೆ ಪೂರಕವಾಗಿರುವ ಹಿಂದೂ ಮಹಾಸಾಗರದ ತಾಪಮಾನ. ಅಂದರೆ ವೈಜ್ಞಾನಿಕ ಭಾಷೆಯಲ್ಲಿ ಕರೆಯಲ್ಪಡುವ ಐಒಡಿ(Indian Ocean Dipole). ಅರಬ್ಬೀ ಸಮುದ್ರದಲ್ಲಿ ತಾಪಮಾನ ಅಧಿಕವಾದರೆ ಪಾಸಿಟಿವ್ ಹಾಗೂ ಬಂಗಾಳಕೊಲ್ಲಿಯಲ್ಲಿ ಅಧಿಕವಾದರೆ ನೆಗೆಟಿವ್ ಎಂದು ವಿಶ್ಲೇ಼ಷಿಸಲಾಗುತ್ತದೆ. ಸದ್ಯ ತಟಸ್ಥವಾಗಿರುವ ಐಒಡಿ ಮುಂಗಾರಿನ ತಿಂಗಳಿನಲ್ಲಿ ಪಾಸಿಟಿವ್ ಗೆ ಬದಲಾಗುವ ಸೂಚನೆಯಿರುವುದರಿಂದ ಮುಂಗಾರಿನ ಮಳೆಯೂ ಸಾಮಾನ್ಯವಿರಬಹುದೆಂಬ ಅಂದಾಜು ಅನೇಕ ಹವಾಮಾನ ವಿಶ್ಲೇ಼ಷಕರದ್ದಾಗಿದೆ.
ಹವಾಮಾನ ಕ್ಷಣಕ್ಷಣಕ್ಕೂ ಬದಲಾಗುವ ವಿದ್ಯಮಾನ. ಅದರಲ್ಲೂ ಅತೀ ಜಟಿಲವಾದ ಮುಂಗಾರಿನ ಮುನ್ಸೂಚನೆಯನ್ನು ನಿಖರವಾಗಿ ಹೇಳುವುದು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಐಎಮ್‌ಡಿ ಯು ಎರಡನೇಯ ಹಂತದ ನವೀಕರಿಸಿದ ಮುಂಗಾರಿನ ಮುನ್ಸೂಚನೆಯನ್ನು ಮೇ ತಿಂಗಳ ಅಂತ್ಯದಲ್ಲಿ ನೀಡುತ್ತದೆ.
ಅಷ್ಟೇ ಅಲ್ಲದೆ ಪ್ರತೀ ತಿಂಗಳಿನ ಮಳೆ ಹಾಗೂ ತಾಪಮಾನದ ಸಂಭವನೀಯತೆಯನ್ನು ಆಯಾ ತಿಂಗಳ ಪ್ರಾರಂಭದಲ್ಲಿ ನೀಡಲಾಗುವುದು. ಆದ್ದರಿಂದ ಆದಷ್ಟು ನವೀಕರಿಸಿದ ಮುನ್ಸೂಚನೆ ಹಾಗೂ ಲಭ್ಯವಾಗಲಿರುವ ಪ್ರತೀ ತಿಂಗಳಿನ ಮುನ್ಸೂಚನೆಯ ಆಧಾರದ ಮೇಲೆ ಮುಂಗಾರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಯೋಜಿಸುವುದು ಒಳಿತು.
Good information 👍🙏