ಲೇಖಕರು: ಡಾ. ರಾಮಕೃಷ್ಣಪ್ಪ ಕೆ.

ಥೈಲ್ಯಾಂಡ್ ದೇಶದ ಯೋಕ್ ಅವರು ಬದುಕು ಕಟ್ಟಿಕೊಂಡ ಕಥೆ; ಬರೀ ಕಥೆಯಲ್ಲ. ಅದು ಪರಿಶ್ರಮದ ಪ್ರತಿಫಲ. ಅವರ ಜೀವಾನುಭವ ಕುಂದಗೋಳ, ಶಿವಮೊಗ್ಗ , ಕೊಳ್ಳೇಗಾಲ ಮತ್ತು ಇತರ ಪ್ರದೇಶಗಳ ಸ್ವಸಹಾಯ ಗುಂಪುಗಳ ಮಹಿಳೆಯರು ಬೆರಗುಗೊಳ್ಳುವಂತೆ ಮಾಡಿತು. ತಾವು ಕೂಡ ಅದೇ ಮಾದರಿಯಲ್ಲಿ ಮುನ್ನಡೆಯಬೇಕೆಂಬ ಛಲವನ್ನೂ ಅವರಲ್ಲಿ ಉಂಟು ಮಾಡಿತು. ಇದು ಸಾಧ್ಯವಾಗಿದ್ದು ಇತ್ತೀಚೆಗೆ…
ಸಹಜ ಸಮೃದ್ಧ, ಜೈವಿಕ್ ಕೃಷಿಕ್ ಸೊಸೈಟಿ ಮತ್ತು ಮೈಸೂರು ನಗರದಲ್ಲಿರುವ ಬೆಳವಲ ಪೌಂಢೇಶನ್ ವತಿಯಿಂದ ಬೆಳವಲ ಪರಿಸರ ಕೇಂದ್ರದಲ್ಲಿ ನವಂಬರ್ 11 ಮತ್ತು 12 ರಂದು ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೃಷಿ ಕ್ಷೇತ್ರಗಳಲ್ಲಿಯೇ ದೊರೆಯುವ ವಸ್ತುಗಳಿಂದ ನೈಸರ್ಗಿಕ ಸಾಬೂನು, ಶಾಂಪೂ , ಸೊಳ್ಳೆ ನಿವಾರಕ ದ್ರವ್ಯ, ಸುಟ್ಟ ಗಾಯದ ಮುಲಾಮ್ ಇತ್ಯಾದಿ ವಸ್ತುಗಳ ಸುಲಭ ತಯಾರಿಕಾ ವಿಧಾನಗಳ ಪ್ರಾತ್ಯಕ್ಷಿಕೆ ಮಾಡಲಾಯಿತು.

ರಾಸಾಯನಿಕ ಅಂಶಗಳಿಲ್ಲ ನಿಸರ್ಗದತ್ತ ಮೇಕಪ್ ಸಾಮಗ್ರಿ ತಯಾರಿಕೆ ಹೇಳಿಕೊಡುತ್ತಿರುವ ಯೋಕ್

ಥೈಲಾಂಡ್ ದೇಶದಿಂದ ಬಂದಿದ್ದ ಯೋಕ್ ಅವರು ಮಾರ್ಗದರ್ಶಕರು-ತರಬೇತುದಾರಾಗಿ ಕಾರ್ಯಕ್ರಮ ನಡೆಸಿಕೊಟ್ಟರು. ಇವರು ಕಾಲೇಜಿನಿಂದ ವಾಪ್ಪಸ್ಸು ಬಂದ ಕೂಡಲೇ ಕರಕುಶಲ ಕಲೆಗಳನ್ನು ಕಲಿಯುತ್ತಿದ್ದರು. ಇವರ ಆಸಕ್ತಿಯನ್ನು ಗಮನಿಸಿದ ಅದೇ ಹಳ್ಳಿಯಲ್ಲಿ ಸೌಂದರ್ಯ ಪ್ರಸಾದನಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದ ವ್ಯಕ್ತಿ ಇವರಿಗೆ ಗುರುವಾದರು.

ಯೋಕ್ ಮತ್ತವರ ಪತಿ ಮೈಕೆಲ್ ಅವರನ್ನು ಸನ್ಮಾನಿಸುತ್ತಿರುವ ಆಯೋಜಕರು

ಈ ಪ್ರಸಾದನ ಸಾಮಗ್ರಿಗಳ ವೈಶಿಷ್ಟತೆಯೆಂದರೆ ಹಾನಿಕಾರಕ ರಾಸಾಯನಿಕ ಅಂಶಗಳಿಂದ ಮುಕ್ತರಾಗಿರುವುದು. ಯೋಕ್ ಅವರು ತಾವು ಕಲಿತ ಕಲೆಯನ್ನು ಗ್ರಾಮದಲ್ಲಿ ಆಸಕ್ತರ ಮಹಿಳೆಯರಿಗೂ ಹೇಳಿಕೊಡತೊಡಗಿದರು. ಅತ್ಯುತ್ತಮ ಗುಣಮಟ್ಟದ ಈ ಸಾಮಗ್ರಿಗಳಿಗೆ ಸಹಜವಾಗಿಯೇ ಬೇಡಿಕೆ, ಉತ್ತಮ ಮಾರುಕಟ್ಟೆ ದೊರೆಯಿತು. ತಯಾರಕ ಗ್ರಾಮೀಣ ಮಹಿಳೆಯರು ಕೂಡ ಸ್ವಯಂ ಉದ್ಯೋಗ; ಉತ್ತಮ ಬದುಕು ಕಟ್ಟಿಕೊಳ್ಳುವಂತಾಯಿತು.
ಬೆಳವಲ ಪೌಂಢೇಶನ್ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಸ್ವ ಸಹಾಯ ಗುಂಪುಗಳ ಮಹಿಳೆಯರು, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಆಯುರ್ವೇದದ ವೈದ್ಯರು, ಆಸಕ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಯೋಕ್ ಅವರು ನೀಡಿದ ತರಬೇತಿಯನ್ನು ಆಸಕ್ತಿಯಿಂದ ಕಲಿತರು. ಅವರ ಕಿವಿಮಾತುಗಳನ್ನು ಆಸಕ್ತಿಯಿಂದ ಕೇಳಿದರು.
ಕಾರ್ಯಾಗಾರದ ಪ್ರಮುಖ ಅಂಶಗಳು:
1. ಸ್ಥಳೀಯವಾಗಿ ಹೊಲ, ಗದ್ದೆ , ತೋಟ ಮತ್ತು ಕಾಡುಗಳಲ್ಲಿ ದೊರೆಯುವ ಸಸ್ಯಮೂಲ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ನೈಸರ್ಗಿಕ ಸೌಂದರ್ಯ ವಸ್ತುಗಳನ್ನು ತಯಾರಿಸುವಿಕೆಗೆ ಒತ್ತು ನೀಡುವುದು.
2. ರೈತ ಮತ್ತು ಕೃಷಿಯೇತರ ಮಹಿಳೆಯರು ಈ ವಸ್ತುಗಳ ಉತ್ಪನ್ನ ಮಾಡುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವುದು
3. ಗ್ರಾಮೀಣ ಪ್ರದೇಶದಲ್ಲಿಯೂ ಯಚೇತವಾಗಿ ಹಬ್ಬುತ್ತಿರುವ ರಾಸಾಯಿನಿಕ ವಸ್ತುಗಳಿಂದ ತಯಾರಿಸಿದ ಅಗ್ಗದ ಸೌಂದರ್ಯ ಮತ್ತು ಗೃಹಬಳಕೆ ವಸ್ತುಗಳಿಗೆ ಕಡಿವಾಣ ಹಾಕುವುದು.
4. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸಾಂಪ್ರದಾಯಿಕ ವೈದ್ಯರು ಹಾಗೂ ಔಷಧಿ ವಿತರಣಕಾರರು ಈ ವಸ್ತುಗಳಿಗೆ ಪ್ರಚಾರ/ಮಾರುಕಟ್ಟೆ ಒದಗಿಸುವುದು.
5. ಸರ್ಕಾರೇತರ ಸಂಘ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಇಂತಹ ವಸ್ತುಗಳ ತಯಾರಿಕೆ ಬಗ್ಗೆ ಹೆಚ್ಚು ತರಬೇತಿಗಳನ್ನು ಹಮ್ಮಿಕೊಳ್ಳುವುದು ಹಾಗೂ ಗ್ರಾಹಕರಿಗೆ ತಿಳುವಳಿಕೆ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸುವುದು .
6. ಗ್ರಾಮೀಣ ಪ್ರದೇಶದಲ್ಲಿ ತಯಾರಾದ ನೈಸರ್ಗಿಕ ವಸ್ತುಗಳಿಗೆ ತೆರಿಗೆ ವಿನಾಯಿತಿ ಮತ್ತು ಇತರೆ ಸೌಲತ್ತುಗಳನ್ನು ನೀಡಲು ಸರ್ಕಾರದ ಮಟ್ಟದಲ್ಲಿ ಪಾಲಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಮಾಡುವುದು.
ಯೋಕ್ ಅವರ ಪತಿ ಮೈಕೆಲ್ ಅವರು ಸಹ ಕಾರ್ಯಾಗಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾರ್ಯಾಗಾರ ಉತ್ತಮರೀತಿಯಲ್ಲಿ ಆಯೋಜನೆಗೊಳ್ಳಲು ಸಹಜ ಸಮೃದ್ಧ ಬಳಗದ ಜಿ. ಕೃಷ್ಣಪ್ರಸಾದ್, ಶ್ರೀವತ್ಸ, ಜೈವಿಕ್ ಕೃಷಿಕ್ ಸೊಸೈಟಿ ಮತ್ತು ಬೆಳವಲ ಪೌಂಢೇಶನ್ ಸಿಬ್ಬಂದಿ ಸಹಕಾರ ಅನನ್ಯ.

ನೈಸರ್ಗಿಕ ಪ್ರಸಾದನ ಸಾಮಗ್ರಿಗಳು

ಅಭಿಪ್ರಾಯಗಳು:

ಇಂತಹ ತರಬೇತಿ ಕಾರ್ಯಾಗಾರಗಳಷ್ಟೆ ನಮ್ಮ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಬಲ್ಲವು. ಹಳ್ಳಿಗಳ ಆರೋಗ್ಯ ಕಾಪಾಡಬಲ್ಲವು.ಇಂತಹ ಕಾರ್ಯಕ್ರಮಗಳು ಎಲ್ಲಾ ಕಡೆ ನಡೆಯಲಿ. ಸಂಘಟಕರಿಗೆ ಧನ್ಯವಾದಗಳು.
– ಚಿನ್ನಸ್ವಾಮಿ ವಡ್ಡಗೆರೆ, ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಖ್ಯಾತ ಕೃಷಿ ಪತ್ರಕರ್ತರು


ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಅಪಾರ ಖುಷಿ ನೀಡಿತು. ಸಮಾನಮನಸ್ಕರು  ಪರಿಚಯವಾದರು. ಇದೊಂದು ಪ್ರಯೋಜನಕಾರಿ ಕಾರ್ಯಕ್ರಮ.
– ಅನಿತಾ ಕೆ. ಕೆಂಬಾವಿ, ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರು

LEAVE A REPLY

Please enter your comment!
Please enter your name here