
ಚಾರ್ಮಾಡಿ ಘಟ್ಟದ ಪಯಣದಲ್ಲಿ ಕಲ್ಲು ಬಾಳೆ ಸಸಿ ಹುಡುಕಲು ಹೋದ ಕೃಷಿ ಮಿತ್ರ ವಸಂತ್ ಕಜೆ ಬೆಟ್ಟದ ಕಾಡು ಹುಲ್ಲು ಕಿತ್ತು ತಂದವರು. ಹತ್ತು ವರ್ಷಗಳ ಹಿಂದೆ ತಂದ ಹುಲ್ಲು ಈಗ ಕಜೆ ವೃಕ್ಷಾಲಯದ ರಸ್ತೆ ಅಕ್ಕಪಕ್ಕ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷೆಯಾಗಿದೆ!
ಕಾಡು ಹುಲ್ಲು ಬೆಳೆದ ರೀತಿ ನೋಡಿದರೆ ಖುಷಿ ಆಗುತ್ತದೆ. ಕಜೆ ತೋಟದ ಒಂದು ಆಕರ್ಷಣೆ ಕೂಡಾ ಇದು. ಇದರ ಚೆಂದಕ್ಕೆ ಬೆರಗಾಗಿ ನಾನು ವಸಂತರಿಂದ ಕಳವೆಗೆ ಈ ಹುಲ್ಲು ತಂದಿದ್ದೇನೆ.
ಹೂದೋಟದಲ್ಲಿ ವಿದೇಶಿ ಸಸ್ಯ ನೆಟ್ಟು ಬೆಳೆಸೋದು ಸಾಮಾನ್ಯ. ಆದರೆ ನಮ್ಮದೇ ಕಾಡಿನ ಸಸ್ಯಗಳನ್ನು ಹೀಗೆ ಬೆಳೆಸೋದು ಕಡಿಮೆ. ವಸಂತ್ ನೆಟ್ಟ ಒಂದು ಹುಲ್ಲಿಗೆ ಅಬ್ಬಾ, ಎಂಥ ಸುಂದರ ರೂಪವಿದೆ!
ನಮ್ಮ ನೆಲದ ಸಸ್ಯ ಇಲ್ಲಿನ ಕೀಟ,ಪಕ್ಷಿಗಳ ಜೊತೆಗೆ ನಿಕಟ ಸಂಬಂಧ ಹೊಂದಿರುತ್ತದೆ.ನಮ್ಮ ಕಾಡಿನ ಕೆಲವು ಸಸ್ಯಗಳು ಹಳ್ಳಿ,ನಗರದ ಉದ್ಯಾನಗಳಿಗೆ ಹೀಗೆ ಬಂದಾಗ ಅಳಿಯುವ ಜೀವ ಲೋಕಕ್ಕೆ ಆಹಾರ ಆವಾಸ ಸಿಕ್ಕಿ ಅಮೃತ ಸಿಕ್ಕಂತೆ ಆದೀತು.
ವಸಂತ್ ಕೊಟ್ಟ ಹುಲ್ಲು ಹಿಡಿದು ಸೀತಾ ನದಿ ಅಂಚಿನಲ್ಲಿ ಆಗುಂಬೆ ಘಟ್ಟ ಏರುವಾಗ ರಸ್ತೆ ತಿರುವಿನ ಕಲ್ಲು ಬಂಡೆಗಳ ಮೇಲೆ ಬೆಳೆದ ಇದೇ ವಸಂತ ಹುಲ್ಲುಗಳು ನನ್ನ ನೋಡಿ ನಕ್ಕವು.
ವಸಿ ತಡೀರಿ, ನನ್ನ ತೋಟದಲ್ಲಿ ಈ ಹುಲ್ಲು ಹೇಗೆ ಮೆರೆಯುತ್ತೆ ನೋಡೋಣ ಚೂರು ಸಮಯ ಕೊಡಿ.