ಕೋಟಿ ರೂಪಾಯಿ ಎಣಿಸೋದಷ್ಟೇ ಬಾಕಿ… !!

0
ಚಿತ್ರ-ಲೇಖನ: ನಾಗೇಂದ್ರ ಸಾಗರ್‌, ಪ್ರಗತಿಪರ ಕೃಷಿಕರು

ಪಾಲಿ ಹೌಸಂತೂ ಹೇಗೂ ಇದೆ. ಬಣ್ಣದ ಸೌತೆ ಮತ್ತು ಮಗೇ ಕಾಯಿ ಬೀಜ ಒಂದು ಇರಲಿಲ್ಲ. ಅದು ಹೇಗೋ ಬಣ್ಣದ ಸೌತೆಯನ್ನು ವಾಣಿ ಸಂಪಾದಿಸಿದ್ದಳು. ಆದರೆ ಮಗೇಕಾಯಿ ಬೀಜ ಇಲ್ಲ ಎಂಬ ಕೊರಗೊಂದು ಇತ್ತು. ನಿನ್ನೆ ಬೆಳೆದ ಮಗೇಕಾಯಿಯೇ ಬಂದಿದೆ. ಹಾಗಾಗಿ ಮಡದಿ ವಾಣಿಗೆ ಬಂಪರ್ ಜಾಕಪಾಟ್ ಹೊಡೆದಂತೆ ಹುಮ್ಮಸ್ಸು ಬಂದಿದೆ…
ನಿನ್ನೆ ಯಲ್ಲಾಪುರದ ವಿಶ್ವನಾಥ ಭಟ್ಟರು ನಮ್ಮಲ್ಲಿಗೆ ಬರುವಾಗ ಎರಡು ಮಗೇ ಕಾಯಿ ತಂದಿದ್ದರು. ಅದನ್ನು ನೋಡಿದ್ದೇ ನನ್ನವಳಿಗೆ ದೊಡ್ಡ ಇಡಗಂಟೇ ಮನೆಗೆ ಬಂದ ಫೀಲಿಂಗು. ವಿಶ್ವನಾಥ ಭಟ್ಟರೊಂದಿಗೆ ಕೃಷಿ ಸಂಬಂಧಿತ ತಿರುಗಾಟ ಮುಗಿಸಿ ಬರುತ್ತಿದ್ದಂತೆ ವಾಣಿ; “ಭಟ್ಟರೆ ಈ ಸಲ ಈ ಪಾಲೀ ಹೌಸಿನಲ್ಲೇ ಮಗೇ ಕಾಯಿ ಬೆಳೆದರೆ ಹೇಗೆ” ಎಂದು ವಿಚಾರ ಇಟ್ಟಳು.


ಸ್ಪರ್ಧೆಗೆ ಬಿದ್ದವರಂತೆ ನಾವಿಬ್ಬರೂ “ಬಹಳ ಒಳ್ಳೆಯ ಐಡಿಯಾ.ರಾಜಸ್ಥಾನದಲ್ಲಿ ಮಾನ್ಯ ಕೇಂದ್ರ ಸಚಿವರೊಬ್ಬರು ಹೀಗೊಂದು ಯತ್ನವ ಮಾಡಿ ಕೋಟಿ ರೂಪಾಯಿ ಎಣಿಸಿದ್ದಾರಂತೆ.. ನೀನೂ ಏಕೆ ಪ್ರಯತ್ನ ಮಾಡಬಾರದು” ಎಂದು ಹೇಳಿದ್ದೇವೆ.
ಮಗೇ ಕಾಯಿ, ಮತ್ತು ಈ ಬಣ್ಣದ ಸೌತೆ ಎಂದರೆ ಈಗಂತೂ ನಮ್ಮ ಕಡೆ ತರಕಾರಿಗಳ ರಾಜ ಅಂತಲೇ ಹೇಳಬಹುದು… ಮದುವೆ ಮುಂಜಿ ಮುಂತಾದ ಕಾರ್ಯ ಕಟ್ಟಲೆಗಳಲ್ಲಿ ಸಾಂಬಾರು ಮಾಡಲು ಇದೇ ತರಕಾರಿ. ಜೊತೆಗೆ ಆಲೂಗಡ್ಡೆ ಮತ್ತು ನುಗ್ಗೇಕಾಯಿ. ಬೆಸ್ಟ್ ಎವರ್ಗ್ರೀನ್ ಕಾಂಬಿನೇಷನ್.


“ಹಾಗಾಗಿ ಬೆಳೆದ ಸೌತೆಗೆ ದರ ಸಿಗಲಿಲ್ಲ, ಗ್ರಾಹಕರು ಇಲ್ಲ ಎಂಬ ಯೋಚನೆ ಬೇಡವೇ ಬೇಡ.  ಎಡವಿ ಬಿದ್ದರೆ ವರದಾಮೂಲ ಇದೆ. ಅಲ್ಲಿ ಕಲ್ಯಾಣ ಮಂಟಪವೂ ಇದೆ. ಅಲ್ಲಿ ಹೆಚ್ಚೂಕಡಿಮೆ ನಿತ್ಯವೂ ಏನಾದರೊಂದು ಫಂಕ್ಷನ್ ಇದ್ದೇ ಇರುತ್ತದೆ.. ಫಾರ್ಮ್ ಫ್ರೆಶ್ ತರಕಾರಿ ಇದೆ ಎಂದರೆ ಅಲ್ಲಿನ ಕಾರ್ಯ ಕಟ್ಟಲೆಯ ಉಸ್ತುವಾರಿ ವಿ.ಟಿ. ನಾಗರಾಜ್ ಒಯ್ದೇ ಒಯ್ಯುತ್ತಾರೆ. ಇಲ್ಲವೋ ನಮ್ಮ ಮಲೆನಾಡು ಗಿಡ್ಡ ಕಚೇರಿಯಲ್ಲಿ ಇಟ್ಟರೆ ಆಯಿತು. ಹಾಗಾಗಿ ಬೆಳೆಯುವುದಂತೂ ಬೆಳಿ. ಬೆಳೆ ಬಂದರಂತೂ ಗ್ರಾಹಕರು ಇದ್ದಾರೆ. ಇಲ್ಲವೋ ಕಂಪನ್ಸೇಷನ್ ಕೊಡಲು ಕೇಂದ್ರ ಸರಕಾರದ ಕೃಷಿ ಇಲಾಖೆ ತುದಿಗಾಲಿನಲ್ಲಿ ನಿಂತಿದೆ ಎಂದಿದ್ದೇನೆ” ನೋಡೋಣ ಏನೇನು ಆಗುತ್ತೆ ಅಂತ.

LEAVE A REPLY

Please enter your comment!
Please enter your name here