ಬರ ಪರಿಹಾರ: ಅರ್ಹ ರೈತರಿಗೆ ಹೆಚ್ಚುವರಿ ಹಣ ಜಮೆ ವಿವರ

0
  •  ಕನಿಷ್ಠ 5,000 ರೂ. ಇನ್‌ಪುಟ್ ಸಬ್ಸಿಡಿ ಖಾತರಿ – ವಿಪತ್ತು ನಿರ್ವಹಣೆ ಆಯುಕ್ತರ ಸ್ಪಷ್ಟನೆ

​ಬೆಂಗಳೂರು, ನವೆಂಬರ್ 10 (ಕರ್ನಾಟಕ ವಾರ್ತೆ) :2026ರ ಮುಂಗಾರು ಋತುವಿನ ಬರಗಾಲದಿಂದಾದ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ರೈತರಿಗೆ ವಿತರಿಸಲಾಗುತ್ತಿರುವ ಮೊದಲ ಕಂತಿನ ಇನ್‌ಪುಟ್ ಸಬ್ಸಿಡಿ ಮೊತ್ತದ ಕುರಿತು ಹಲವು ಮಾಧ್ಯಮಗಳಲ್ಲಿ ಹಬ್ಬಿರುವ ಗೊಂದಲಗಳಿಗೆ ವಿಪತ್ತು ಪರಿಹಾರ ಇಲಾಖೆಯ ಆಯುಕ್ತ ಹೊನ್ನಾಂಬ ಅವರು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ.

​ಸರ್ಕಾರವು ದಿನಾಂಕ 23.10.2026ರ ಆದೇಶದಂತೆ ಪ್ರತಿ ರೈತರ ಅರ್ಹತೆಗೆ ಅನುಗುಣವಾಗಿ ಮೊದಲ ಕಂತಾಗಿ ರೂ.2,500 ಗಳವರೆಗೆ ಇನ್‌ಪುಟ್ ಸಬ್ಸಿಡಿ ಬಿಡುಗಡೆ ಮಾಡಲು ಅನುಮೋದನೆ ನೀಡಿತ್ತು. ಇದರ ಭಾಗವಾಗಿ 2026ರ ನವೆಂಬರ್ 5ರಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ 1,743.53 ಲಕ್ಷ ರೂ. ಬಿಡುಗಡೆಗೆ ಚಾಲನೆ ನೀಡಿದ್ದರು.

​ಇದರ ಬೆನ್ನಲ್ಲೇ ಬೆಳೆ ನಷ್ಟಕ್ಕೊಳಗಾದ ರೈತರಿಗೆ (ಮಳೆಯಾಶ್ರಿತ, ನೀರಾವರಿ ಮತ್ತು ಬಹುವಾರ್ಷಿಕ ಬೆಳೆಗಳು ಸೇರಿ) ನೀಡಲಾಗುವ ಕನಿಷ್ಠ ಇನ್‌ಪುಟ್ ಸಬ್ಸಿಡಿ ನೆರವನ್ನು 5,000 ರೂ.ಗಳಿಗೆ ಹೆಚ್ಚಿಸಿ, ಅದನ್ನು ಎರಡು ಕಂತುಗಳಲ್ಲಿ ವಿತರಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

​ಎರಡನೇ ಕಂತಿನಲ್ಲಿ ವ್ಯತ್ಯಾಸದ ಮೊತ್ತ ಜಮಾ:
ಸ್ಪಷ್ಟನೆಯಲ್ಲಿ ನೀಡಿರುವ ವಿವರಗಳ ಪ್ರಕಾರ, ಮೊದಲ ಕಂತಿನಲ್ಲಿ ರೂ. 2,000 ಪಡೆದಿರುವ ರೈತರು ಎರಡನೇ ಕಂತಿನಲ್ಲಿ ಬಾಕಿ ರೂ. 3,000 ಪಡೆಯಲಿದ್ದಾರೆ. ಹಾಗೆಯೇ ಮೊದಲ ಕಂತಿನಲ್ಲಿ ರೂ. 2,500 ಪಡೆದ ರೈತರಿಗೆ ಬಾಕಿ ರೂ. 2,500 ತಲುಪಲಿದ್ದು, ಪ್ರತಿಯೊಬ್ಬ ಅರ್ಹ ರೈತರಿಗೂ ಒಟ್ಟಾರೆಯಾಗಿ ಕನಿಷ್ಠ 5,000 ರೂ. ನೆರವು ಸಿಗುವುದು ಖಚಿತವಾಗಲಿದೆ.

​ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ನಿಯಮಗಳಿಗಿಂತ ಹೆಚ್ಚಿನ ನೆರವು:
ಪ್ರಸ್ತುತ ಜಾರಿಯಲ್ಲಿರುವ SDRF/NDRF ನಿಯಮಗಳ ಪ್ರಕಾರ ಕನಿಷ್ಠ ಇನ್‌ಪುಟ್ ಸಬ್ಸಿಡಿ ನೆರವು ಮಳೆಯಾಶ್ರಿತ ಬೆಳೆಗಳಿಗೆ ರೂ.1,500, ನೀರಾವರಿ ಬೆಳೆಗಳಿಗೆ ರೂ.2,600 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ರೂ.3,200 ಆಗಿದೆ. ಆದರೆ ರಾಜ್ಯ ಸರ್ಕಾರವು ರೈತರ ಹಿತದೃಷ್ಟಿಯಿಂದ ಈ ಮೂರೂ ವರ್ಗದ ಬೆಳೆಗಳಿಗೆ ನೀಡುವ ಕನಿಷ್ಠ ನೆರವನ್ನು ರೂ. 5,000 ಕ್ಕೆ ಹೆಚ್ಚಿಸಿದ್ದು, ನಿಯಮಾವಳಿಗಿಂತ ಹೆಚ್ಚುವರಿಯಾಗುವ ಈ ವ್ಯತ್ಯಾಸದ ಮೊತ್ತವನ್ನು ರಾಜ್ಯ ಸರ್ಕಾರದ ಸ್ವಂತ ನಿಧಿಯಿಂದಲೇ ಭರಿಸಲಾಗುತ್ತಿದೆ.

​ರೂ. 5,000 ಗರಿಷ್ಠ ಮಿತಿಯಲ್ಲ:
ಸರ್ಕಾರ ನೀಡಿರುವ ರೂ. 5,000 ಭರವಸೆಯು ಕೇವಲ ಕನಿಷ್ಠ ನೆರವು ಮಾತ್ರವಾಗಿದ್ದು, ಇದು ಗರಿಷ್ಠ ಮಿತಿಯಲ್ಲ ಎಂದು ಕಾರ್ಯದರ್ಶಿಗಳು ಸ್ಪಷ್ಟಪಡಿಸಿದ್ದಾರೆ. ಬೆಳೆ ನಷ್ಟದ ಪ್ರಮಾಣ ಮತ್ತು ವರ್ಗಕ್ಕೆ ಅನುಗುಣವಾಗಿ ಪರಿಷ್ಕೃತ SDRF/NDRF ನಿಯಮಗಳ ಅಡಿಯಲ್ಲಿ ಅರ್ಹ ರೈತರು ರೂ. 5,000 ದಿಂದ ಹಿಡಿದು ರೂ. 60,000 ರವರೆಗೆ ಇನ್‌ಪುಟ್ ಸಬ್ಸಿಡಿ ನೆರವನ್ನು ಮುಂದಿನ ಹಂತಗಳಲ್ಲಿ ಪಡೆಯಲಿದ್ದಾರೆ.

​ಈಗಾಗಲೇ ವಿತರಿಸಲಾಗಿರುವ ಮೊತ್ತವು ಕೇವಲ ಮೊದಲ ಕಂತು ಮಾತ್ರವಾಗಿದ್ದು, ಇದು ಅಂತಿಮ ಪರಿಹಾರವಲ್ಲ. ಬರದಿಂದ ಸಂಕಷ್ಟಕ್ಕೊಳಗಾದ ಎಲ್ಲಾ ಅರ್ಹ ರೈತರಿಗೆ ಸಂಪೂರ್ಣ ನೆರವನ್ನು ಸಕಾಲದಲ್ಲಿ ತಲುಪಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here