ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಬರ ನಿರ್ವಹಣೆ ತಂತ್ರಜ್ಞಾನಗಳು ಹಾಗೂ ಕೃಷಿ ನಾವಿನ್ಯತೆಗಳನ್ನು ಪರಿಚಯಿಸುವ ಸಲುವಾಗಿ ೩ ದಿನಗಳ ಕೃಷಿಮೇಳವನ್ನು ದಿನಾಂಕ ೧೬, ೧೭ ಮತ್ತು ೧೮ನೇ ನವೆಂಬರ್ ೨೦೨೬ ರಂದು ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಆಯೋಜಿಸಲಾಗಿದೆ.
ಕೃಷಿಮೇಳದ ಅಂಗವಾಗಿ ರೈತರಿಗೆ ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಬರ ನಿರ್ವಹಣಾ ತಂತ್ರಜ್ಞಾನಗಳು, ಬರ ಪರಿಸ್ಥಿತಿಗೆ ಸೂಕ್ತವಾದ ಬೆಳೆಗಳು ಮತ್ತು ತಳಿಗಳು, ಸೂಕ್ತ ಬೆಳೆ ಪ್ರತ್ಯಕ್ಷಿಕೆಗಳನ್ನು ಆಯೋಜಿಸಲಾಗಿದೆ. ವಿ.ವಿ.ಸಂಶೋಧನಾ ವಿಭಾಗಗಳು, ರಾಜ್ಯದ ಕೃಷಿ ವಿ.ವಿ.ಗಳು, ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಹಾಗೂ ಅಭಿವೃದ್ಧಿ ಇಲಾಖೆಗಳಿಂದ ತಂತ್ರಜ್ಞಾನ ಪ್ರದರ್ಶನ ವ್ಯವಸ್ಥೆ ಮಾಡಲಾಗುವುದು.
ಈ ಮೂರು ದಿನಗಳ ಅವಧಿಯಲ್ಲಿ ನುರಿತ ತಜ್ಞರಿಂದ ರಾಜ್ಯದಲ್ಲಿ ಕಂಡುಬಂದಿರುವ ಎಲ್ ನಿನೋ ಪರಿಣಾಮ ಹಾಗೂ ಭವಿಷ್ಯದ ಸಿದ್ಧತೆಗಳು, ಹವಾಮಾನ ವೈಪರಿತ್ಯ ಚತುರ ಕೃಷಿ ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆಯ ಕುರಿತಾದ ವಿಚಾರಣಾ ಸಂಕಿರಣಗಳನ್ನು ಆಯೋಜಿಸಲಾಗಿದೆ. ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಸಲು ಸಲಹಾ ಕೇಂದ್ರವನ್ನು ತೆರೆಯಲಾಗುವುದು. ಕೃಷಿಮೇಳದ ಅಂಗವಾಗಿ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಪ್ರಗತಿಪರ ರೈತ ಮತ್ತು ರೈತ ಮಹಿಳಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಕೃಷಿಮೇಳದ ಸಮಾರಂಭವನ್ನು ನವೆಂಬರ್ ೧೬ ರಂದು ಕೃಷಿ ಸಚಿವ ಹಾಗೂ ಸಹ ಕುಲಾಧಿಪತಿ ಪಿ.ಎಂ. ನರೇಂದ್ರಸ್ವಾಮಿ, ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಚಿವ ಶ್ರೀಕೃಷ್ಣ ಬೈರೇಗೌಡ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ವೆಂಕಟರಮಣ, ವಿಶ್ವವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ರೈತರು, ರೈತ ಮಹಿಳೆಯರು, ಕೃಷಿ ಆಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃಷಿಮೇಳದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ವಿನಂತಿಸಿದೆ.
ಈ ಮೊದಲು ಕೃಷಿಮೇಳವನ್ನು ನವೆಂಬರ್ ೧೬ ರಂದು ಒಂದು ದಿನಕ್ಕೆ ಸೀಮಿತವಾಗಿ ಆಯೋಜಿಸಲಾಗಿತ್ತು. ಬರ ನಿರ್ವಹಣಾ ತಂತ್ರಜ್ಞಾನಗಳ ವಿಷಯಗಳು ಹೆಚ್ಚು ಜನರಿಗೆ ತಲುಪಬೇಕೆಂಬ ನಿಟ್ಟಿನಲ್ಲಿ ಮೂರು ದಿನಕ್ಕೆ ವಿಸ್ತರಿಸಲಾಗಿದೆ. ಎಂದಿನಂತೆ ಕೃಷಿಮೇಳ ಆವರಣದಲ್ಲಿಯೇ ಈ ಬಾರಿಯ ಮೇಳ ನಡೆಯಲಿದೆ.
ಕೃಷಿಮೇಳದಲ್ಲಿ ಖಾಸಗಿ ಸಂಸ್ಥೆಗಳ ಮಳಿಗೆಗಳಿಗೆ ಅವಕಾಶ ನೀಡಿಲ್ಲ. ವಿಶ್ವವಿದ್ಯಾಲಯ ಮತ್ತು ಕೃಷಿ – ತೋಟಗಾರಿಕೆಗೆ ಸಂಬಂಧಿಸಿದ ಇಲಾಖೆಗಳ ಮಳಿಗೆಗಳು ಮಾತ್ರ ಇರುತ್ತವೆ. ಇವುಗಳ ಒಟ್ಟು ಸಂಖ್ಯೆ ೭೦ ಎಂದು ವಿಶ್ವವಿದ್ಯಾಲಯದ ಮೂಲಗಳು ಹೇಳಿವೆ.




























