ಶಿವಮೊಗ್ಗದಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಗುರಿ ಮತ್ತು ೨೦೨೬ರ ಕೃಷಿಮೇಳದ ಉದ್ದೇಶ ಕುರಿತು ಕುಲಪತಿ ಡಾ. ಎಂ.ವಿ. ಧನಂಜಯ ಅವರ ವಿಶೇಷ ಸಂದರ್ಶನ ನಿಮ್ಮ ಮುಂದಿದೆ.
ಅಗ್ರಿಕಲ್ಚರ್ ಇಂಡಿಯಾ ಪ್ರತಿನಿಧಿ : ನಮಸ್ತೆ, ಈ ಬಾರಿಯ ಕೃಷಿ ಮೇಳದ ಧೈಯವನ್ನು “ಬರ ನಿರ್ವಹಣೆಗಾಗಿ ನಾವೀನ್ಯತೆ ಕೃಷಿ” ಎಂದು ಇಟ್ಟುಕೊಳ್ಳಲಾಗಿದೆ. ಇದರ ಪ್ರಮುಖ ಉದ್ದೇಶವೇನು?
ಕುಲಪತಿ ಡಾ. ಎಂ.ವಿ. ಧನಂಜಯ: ಸಂಶೋಧನಾ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯಗಳು ಕಂಡುಕೊಳ್ಳುವ ತಂತ್ರಜ್ಞಾನಗಳು ಹಾಗೂ ನಾವೀನ್ಯತೆಗಳು ರೈತರಿಗೆ ಪೂರ್ಣ ಪ್ರಮಾಣದಲ್ಲಿ ತಲುಪುತ್ತಿಲ್ಲ ಎಂಬ ಕೊರತೆಯನ್ನು ನೀಗಿಸುವುದೇ ಈ ಮೇಳದ ಮುಖ್ಯ ಉದ್ದೇಶವಾಗಿದೆ. ಐಸಿಎಆರ್ (ICAR) ಹಾಗೂ ದೇಶದ ವಿವಿಧ ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನಾ ಫಲಿತಾಂಶಗಳನ್ನು ರೈತರಿಗೆ ತಲುಪಿಸಲು ಕೃಷಿ ಮೇಳವು ದೊಡ್ಡ ವೇದಿಕೆಯಾಗಿದೆ.

ಈ ಬಾರಿ ತೀವ್ರ ಬರಗಾಲವಿರುವುದರಿಂದ ರೈತರು ಮತ್ತು ಜಾನುವಾರುಗಳು ಸಂಕಷ್ಟದಲ್ಲಿವೆ. ಇದನ್ನು ಮನಗಂಡು ವಿಶ್ವವಿದ್ಯಾಲಯದ ವತಿಯಿಂದ ಕಳೆದ ಒಂದು ತಿಂಗಳಿಂದ ನಮ್ಮ ವಿವಿಧ ಕೇಂದ್ರಗಳ ಸುಮಾರು 250 ರಿಂದ 300 ಎಕರೆ ಜಮೀನಿನಲ್ಲಿ ಮೇವಿನ ಬೆಳೆಗಳನ್ನು ಬೆಳೆಸಲಾಗುತ್ತಿದೆ. ನವೆಂಬರ್ ಕೊನೆಯೊಳಗೆ ಈ ಮೇವು ಸಿದ್ಧಗೊಳ್ಳಲಿದ್ದು, ಸರ್ಕಾರದ ಯೋಜನೆಗಳು ಹಾಗೂ ಪಶುವೈದ್ಯಕೀಯ ಇಲಾಖೆಯ ಸಹಯೋಗದೊಂದಿಗೆ ರೈತರಿಗೆ ಲಭ್ಯವಾಗುವಂತೆ ಮಾಡಲಾಗುವುದು.
ಅಗ್ರಿಕಲ್ಚರ್ ಇಂಡಿಯಾ ಪ್ರತಿನಿಧಿ : ಈ ಬಾರಿಯ ಮೇಳದಲ್ಲಿ ಬಿಡುಗಡೆಯಾಗುತ್ತಿರುವ ವಿಶೇಷ ತಳಿಗಳು ಮತ್ತು ತಾಂತ್ರಿಕತೆಗಳೇನು?
ಕುಲಪತಿ ಡಾ. ಎಂ.ವಿ. ಧನಂಜಯ: ಭತ್ತದ 3 ಹೊಸ ತಳಿಗಳು ಹಾಗೂ ಕಡಲೆಯ 1 ನೂತನ ತಳಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ರೈತರಿಗೆ ಹವಾಮಾನ ಮುನ್ಸೂಚನೆ ಹಾಗೂ ಬೆಳೆ ನಿರ್ವಹಣೆಯ ಸಂಪೂರ್ಣ ಮಾಹಿತಿ ನೀಡಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸಹ್ಯಾದ್ರಿ ಕೃಷಿ AI (Sahyadri Krishi AI ವಿಶೇಷ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಯಾವ ಬೆಳೆಗೆ ಯಾವ ತಳಿ ಉತ್ತಮ, ಇಳುವರಿ ಅವಧಿ, ರೋಗಗಳು ಮತ್ತು ಪರಿಹಾರದ ಸಂಪೂರ್ಣ ಮಾಹಿತಿ ಇದರಲ್ಲಿ ಸಿಗಲಿದೆ.
ನಿಖರ ಕೃಷಿ (Precision Farming) ಅಂದರೆ ನೀರು ಮತ್ತು ರಸಗೊಬ್ಬರವನ್ನು ಅತಿಯಾಗಿ ಬಳಸುವುದು ತಪ್ಪಿಸಿ, ಬೆಳೆಗೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ನಿಖರವಾಗಿ ಬಳಸುವ ಆಧುನಿಕ ಪದ್ಧತಿಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಇದರಿಂದ ಅನಗತ್ಯ ಖರ್ಚು ತಪ್ಪಿ ಭೂಮಿಯ ಆರೋಗ್ಯ ಕಾಪಾಡಬಹುದು.
ಅಗ್ರಿಕಲ್ಚರ್ ಇಂಡಿಯಾ ಪ್ರತಿನಿಧಿ: ಕೃಷಿ ಮೇಳದಲ್ಲಿ ಈ ಬಾರಿ ಯಾವೆಲ್ಲಾ ಪ್ರದರ್ಶನ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ?
ಕುಲಪತಿ ಡಾ. ಎಂ.ವಿ. ಧನಂಜಯ: ಒಟ್ಟಾರೆ 600ಕ್ಕೂ ಹೆಚ್ಚು ಮಳಿಗೆಗಳು ಮೇಳದಲ್ಲಿರಲಿವೆ. ಅಡಿಕೆ, ಭತ್ತ, ಬರ ನಿರ್ವಹಣೆ ಮುಂತಾದ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ 5 ವಿಶೇಷ ಪೆವಿಲಿಯನ್ಗಳನ್ನು ಮಾಡಲಾಗಿದೆ. 50ಕ್ಕೂ ಹೆಚ್ಚು ಬೀಜ ಹಾಗೂ ಸಸಿಗಳ ಮಳಿಗೆಗಳು ಹಾಗೂ 16ಕ್ಕೂ ಹೆಚ್ಚು ಯಂತ್ರೋಪಕರಣಗಳ ಮಳಿಗೆಗಳಿವೆ.
ಪ್ರಥಮ ಬಾರಿಗೆ 17 ಐಸಿಎಆರ್ (ICAR) ಸಂಸ್ಥೆಗಳು ಪಾಲ್ಗೊಂಡು ತಮ್ಮ ವಸ್ತುಪ್ರದರ್ಶನ ಮಳಿಗೆಗಳನ್ನು ಹಾಕುತ್ತಿವೆ (ಉದಾಹರಣೆಗೆ: ಕೇರಳದ ಕಾಳಿಕಟ್ನ ಐಐಎಸ್ಆರ್ – IISR, ಕಾಸರಗೋಡು ತೆಂಗು ಸಂಶೋಧನಾ ಕೇಂದ್ರ ಇತ್ಯಾದಿ). ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ವಿವಿಯ ವತಿಯಿಂದ 80 ಉಚಿತ ಮಳಿಗೆಗಳು ಹಾಗೂ ಸ್ವಸಹಾಯ ಸಂಘಗಳು (SHGs), ಎಫ್ಪಿಒಗಳು ಮತ್ತು ಎನ್ಆರ್ಎಲ್ಎಂ (NRLM) ಅಡಿಯಲ್ಲಿ 40ಕ್ಕೂ ಹೆಚ್ಚು ಮಳಿಗೆಗಳನ್ನು ಕಾಯ್ದಿರಿಸಲಾಗಿದೆ.

ಅಗ್ರಿಕಲ್ಚರ್ ಇಂಡಿಯಾ ಪ್ರತಿನಿಧಿ: ರೈತರಿಗೆ ಮತ್ತು ಪದವೀಧರರಿಗೆ ವಿವಿಯಿಂದ ಸಿಗುವ ನಿರಂತರ ಸೌಲಭ್ಯಗಳೇನು?
ಕುಲಪತಿ ಡಾ. ಎಂ.ವಿ. ಧನಂಜಯ: ಸಹ್ಯಾದ್ರಿ ಕೃಷಿ ವನ ಹೆಸರಿನಲ್ಲಿ ವಿಶ್ವವಿದ್ಯಾಲಯದ ಎಲ್ಲಾ 14 ಕೇಂದ್ರಗಳಲ್ಲಿ ಸಸಿಗಳು, ಬೀಜಗಳು, ಉಪಕರಣಗಳು ಮತ್ತು ತಾಂತ್ರಿಕ ಮಾಹಿತಿ ಒಂದೇ ಸೂರಿನಡಿ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ.
ಸಹ್ಯಾದ್ರಿ ಕೃಷಿ ವನ್ (ಉದ್ಯಮಶೀಲತೆ) ಮೂಲಕ ಕೃಷಿ ಪದವೀಧರರು ಹಾಗೂ ನಿರುದ್ಯೋಗಿ ಯುವಕರಿಗಾಗಿ ತರೀಕೆರೆ ತಾಲೂಕಿನ ಬಾವಿಕೆರೆಯಲ್ಲಿ ತರಕಾರಿ ಬೀಜೋತ್ಪಾದನೆ, ಮಶ್ರೂಮ್, ಕಾಂಪೋಸ್ಟ್, ಜೇನುಸಾಕಣೆ ಸೇರಿದಂತೆ 8-9 ಕ್ಷೇತ್ರಗಳನ್ನು ಒಳಗೊಂಡ ತರಬೇತಿ ಮತ್ತು ಇನ್ಕ್ಯುಬೇಷನ್ ಕೇಂದ್ರವನ್ನು ಆರಂಭಿಸಲಾಗಿದೆ.
ಮೂಡಿಗೆರೆಯಲ್ಲಿ ಮಸಾಲೆ ಪದಾರ್ಥಗಳ ಮೌಲ್ಯವರ್ಧನೆ, ಹಿರಿಯೂರಿನಲ್ಲಿ ಶೇಂಗಾ/ಸಿರಿಧಾನ್ಯ ಮತ್ತು ಶಿವಮೊಗ್ಗ ಹಾಗೂ ಮೂಡಿಗೆರೆಯಲ್ಲಿ ಹಣ್ಣು-ಶುಂಠಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯಮಶೀಲತಾ ತರಬೇತಿ ನೀಡಲಾಗುತ್ತಿದೆ.
ಕಪ್ಪೆಕ್ (KAPPEC) ಸಹಯೋಗದಲ್ಲಿ ಮೂರು ಒನ್ ಡಿಸ್ಟ್ರಿಕ್ಟ್ ಒನ್ ಪ್ರೊಡಕ್ಟ್ (ODOP) ಯೋಜನೆಯಡಿ ಶಿವಮೊಗ್ಗದಲ್ಲಿ ಪೈನಾಪಲ್-ಶುಂಠಿ, ಮೂಡಿಗೆರೆಯಲ್ಲಿ ಸಾಂಬಾರು ಪದಾರ್ಥಗಳು ಮತ್ತು ಹಿರಿಯೂರಿನಲ್ಲಿ ಶೇಂಗಾ/ಸಿರಿಧಾನ್ಯಗಳ ಮೌಲ್ಯವರ್ಧನೆಗಾಗಿ ಕೋಟ್ಯಂತರ ರೂ. ಬಂಡವಾಳದಲ್ಲಿ ಅತ್ಯಾಧುನಿಕ ಘಟಕಗಳನ್ನು ಸ್ಥಾಪಿಸಲಾಗಿದೆ.
ಅಗ್ರಿಕಲ್ಚರ್ ಇಂಡಿಯಾ ಪ್ರತಿನಿಧಿ: ವಿವಿ ವತಿಯಿಂದ ವಾರ್ಷಿಕವಾಗಿ ಉತ್ಪಾದನೆಯಾಗುವ ಬೀಜ ಹಾಗೂ ಸಸಿಗಳ ವಿವರಣೆ ನೀಡಿ.
ಕುಲಪತಿ ಡಾ. ಎಂ.ವಿ. ಧನಂಜಯ: ರಾಜ್ಯದ ರೈತರಿಗೆ ಅನುಕೂಲವಾಗಲು ವರ್ಷಕ್ಕೆ 5,700 ಕ್ವಿಂಟಾಲ್ ಗುಣಮಟ್ಟದ ಬೀಜಗಳನ್ನು (ಭತ್ತ, ದ್ವಿದಳ ಧಾನ್ಯಗಳು ಇತ್ಯಾದಿ) ಕತ್ತಲಿಗೆರೆ, ಬಾವಿಕೆರೆ, ಬ್ರಹ್ಮಾವರ ಹಾಗೂ ಹಿರಿಯೂರು ಕೇಂದ್ರಗಳ ಮೂಲಕ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ. ಕಾಳುಮೆಣಸು, ಅಡಿಕೆ, ಹಣ್ಣಿನ ಸಸಿಗಳು ಹಾಗೂ ಅಲಂಕಾರಿಕ ಗಿಡಗಳು ಸೇರಿದಂತೆ 12 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಉತ್ಪಾದಿಸಲಾಗುತ್ತಿದೆ.
ಅಗ್ರಿಕಲ್ಚರ್ ಇಂಡಿಯಾ ಪ್ರತಿನಿಧಿ: ಮೇಳಕ್ಕೆ ಬರುವ ರೈತರಿಗೆ ಊಟ ಮತ್ತು ಇತರ ಸೌಲಭ್ಯಗಳ ಕುರಿತು ತಿಳಿಸಿ.
ಕುಲಪತಿ ಡಾ. ಎಂ.ವಿ. ಧನಂಜಯ: ಕೃಷಿ ಮೇಳಕ್ಕೆ ಆಗಮಿಸುವ ರೈತರಿಗಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದು ಊಟದ ನಿಜವಾದ ಖರ್ಚು ರೂ. 60 ಇದ್ದು, ಇದರಲ್ಲಿ ವಿಶ್ವವಿದ್ಯಾಲಯದಿಂದ ರೂ. 10 ಭರಿಸಿ, ರೈತರಿಗೆ ಕೇವಲ ರೂ. 50 ಕ್ಕೆ ಊಟ ನೀಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಚಿಂತನೆಯಿದೆ).
ಮೇಳದಲ್ಲಿ ಮೀನುಗಾರಿಕೆ, ಜೈವಿಕ ಗೊಬ್ಬರ, ಜೇನುಸಾಕಣೆ, ಅಣಬೆ ಕೃಷಿ ಸೇರಿದಂತೆ ಒಟ್ಟು 9 ಪ್ರಮುಖ ವಿಷಯಗಳ ಕುರಿತು ಅನುಭವಾತ್ಮಕ ಕಲಿಕಾ (Experiential Learning) ಘಟಕಗಳು ಲಭ್ಯವಿವೆ.
ರೈತರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು, ಆಧುನಿಕ ತಂತ್ರಜ್ಞಾನ ಹಾಗೂ ಮೌಲ್ಯವರ್ಧನೆಯ ಮೂಲಕ ಕೃಷಿಯಲ್ಲಿ ಅಧಿಕ ಲಾಭ ಗಳಿಸಬಹುದು. ಇದಕ್ಕೆ ಪೂರಕವಾದ ತಂತ್ರಜ್ಞಾನಗಳು – ಮಾಹಿತಿಯನ್ನು ನಾವು ನೀಡುತ್ತೇವೆ.




























