ಮುಂಗಾರು ಮಳೆ ಮುನ್ಸೂಚನೆ ನೀಡುವ ಟಿಟ್ಟಿಭ ಪಕ್ಷಿ

0

ಪ್ರಾಕೃತಿಕ ವಿದ್ಯಮಾನಗಳನ್ನು ಅರಿಯಲು ಪ್ರಕೃತಿಯೇ ಹಲವು ಮುನ್ಸೂಚಕಗಳನ್ನು ಇರಿಸಿದೆ. ಆದರೆ ಆಧುನಿಕತೆ ನಮ್ಮನ್ನು ಹುಸಿ ಕುರುಡರನ್ನಾಗಿ ಮಾಡಿದೆ. ಆಧುನಿಕ ರಾಡಾರ್‌ ಗಳು, ಸ್ಯಾಟ್‌ ಲೈಟ್‌ ಗಳು, ದತ್ತಾಂಶ ವಿಶ್ಲೇಷಕ ಬೃಹತ್‌ ಗಣಕ ಯಂತ್ರಗಳು ಒಂದು ವೇಳೆ ಆಕಸ್ಮಿಕವಾಗಿ ತಪ್ಪು ಸೂಚನೆ ನೀಡಬಹುದೇನೋ!! ಆದರೆ ಪ್ರಕೃತಿಯ ಮುನ್ಸೂಚಕಗಳು ಕುರಿತೇಟು (ನಿಖರ)

ತಂತ್ರಜ್ಞಾನ ಯುಗದಲ್ಲಿ ಮಳೆ ಬರುವುದನ್ನು ತಿಳಿಯಲು ನಮ್ಮ ಕೈಯಲ್ಲಿ ಹವಾಮಾನ ಇಲಾಖೆಯ ಆ್ಯಪ್‌ಗಳಿವೆ, ಉಪಗ್ರಹ ಚಿತ್ರಗಳಿವೆ. ಆದರೆ, ಇವೆಲ್ಲವೂ ಇಲ್ಲದ ಕಾಲದಲ್ಲಿ ನಮ್ಮ ಪೂರ್ವಜರು, ರೈತರು ಮಳೆಯ ಆಗಮನವನ್ನು ಹೇಗೆ ಊಹಿಸುತ್ತಿದ್ದರು? ಅದಕ್ಕೆ ಉತ್ತರ ಪ್ರಕೃತಿ. ಹೌದು, ಪ್ರಕೃತಿಯೇ ಒಂದು ದೊಡ್ಡ ಹವಾಮಾನ ಕೇಂದ್ರ. ಗಿಡ-ಮರಗಳು, ಕೀಟಗಳು, ಮಾರುತಗಳು ಮತ್ತು ಮುಖ್ಯವಾಗಿ ಹಕ್ಕಿಗಳ ನಡವಳಿಕೆಯನ್ನು ನೋಡಿ ರೈತರು ಮಳೆಗಾಲದ ಮುನ್ಸೂಚನೆ ಪಡೆಯುತ್ತಿದ್ದರು. ಅಂತಹ ಹಕ್ಕಿಗಳಲ್ಲಿ ಪ್ರಮುಖ “ರೆಡ್-ವ್ಯಾಟಲ್ಡ್ ಲ್ಯಾಪ್‌ವಿಂಗ್” (Red-wattled Lapwing) ಇದನ್ನು ಕನ್ನಡದಲ್ಲಿ ಟಿಟ್ಟಿಭ ಹಕ್ಕಿ, ಟಬಲಕ್ಕಿ, ಹಳದಿ ಟಿಟ್ಟಿಭ ಅಥವಾ ಕಾರೆಹಕ್ಕಿ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ:ನೇರಳೆಹಣ್ಣು ಸಮೃದ್ಧತೆ ಬರಗಾಲ ಮುನ್ಸೂಚನೆಯೇ ?

ಇತ್ತೀಚೆಗೆ ‘ಅಮೆರಿಕನ್ ಮೆಟಿಯರಲಾಜಿಕಲ್ ಸೊಸೈಟಿ’ (American Meteorological Society) ಪ್ರಕಟಿಸಿದ ಸಂಶೋಧನಾ ವರದಿಯೊಂದು ನಮ್ಮ ಗ್ರಾಮೀಣ ಭಾಗದ ಈ ಸಾಂಪ್ರದಾಯಿಕ ಜ್ಞಾನಕ್ಕೆ ವೈಜ್ಞಾನಿಕ ಮೊಹರು ಒತ್ತಿದೆ. ರಾಜಸ್ಥಾನದ ನೈಋತ್ಯ ಭಾಗದ ಬುಡಕಟ್ಟು ರೈತರ ನಂಬಿಕೆಗಳು ಮತ್ತು ಈ ಹಕ್ಕಿಯ ಗೂಡುಕಟ್ಟುವ ಶೈಲಿಯ ನಡುವೆ ಇರುವ ನೇರ ಸಂಬಂಧ ಕುರಿತು ವಿಜ್ಞಾನಿಗಳು ಸುಮಾರು ಎಂಟು ವರ್ಷ ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಿದ್ದಾರೆ.

ರೈತರ ಪಾಲಿನ ಹವಾಮಾನ ಮುನ್ಸೂಚಕ

ಟಿಟ್ಟಿಭ ಹಕ್ಕಿಗಳು ಸಾಮಾನ್ಯವಾಗಿ ಜಲಮೂಲಗಳ ಹತ್ತಿರ, ಒಣ ಭೂಮಿ ಅಥವಾ ಕೃಷಿ ಗದ್ದೆಗಳ ಬಯಲಿನಲ್ಲಿ ವಾಸಿಸುತ್ತವೆ. ಇವು ಮರಗಳ ಮೇಲೆ ಗೂಡು ಕಟ್ಟುವುದಿಲ್ಲ, ಬದಲಿಗೆ ನೆಲದ ಮೇಲೆಯೇ ಸಣ್ಣ ಗುಂಡಿ ಮಾಡಿ ಕಲ್ಲು-ಮಣ್ಣುಗಳ ನಡುವೆ ಗೂಡು ರಚಿಸುತ್ತವೆ. ಇವುಗಳ ಇದೇ ನಡವಳಿಕೆಯನ್ನು ರೈತರು ಸೂಕ್ಷ್ಮವಾಗಿ ಗಮನಿಸುತ್ತಾರೆ.

ಇದನ್ನೂ ಓದಿ:ಬರದ ಭೀತಿ; ಐಓಡಿ ಒಂದೇ ಆಶಾಕಿರಣ

 ಗೂಡಿನ ಎತ್ತರ ಮತ್ತು ಮಳೆಯ ಪ್ರಮಾಣ: ಈ ಹಕ್ಕಿ ತನ್ನ ಗೂಡನ್ನು ಎತ್ತರದ ಪ್ರದೇಶ ಅಥವಾ ದಿಣ್ಣೆಗಳ ಮೇಲೆ ಕಟ್ಟಿದರೆ, ಆ ವರ್ಷ ಉತ್ತಮ ಅಥವಾ ಭಾರಿ ಮಳೆಯಾಗಲಿದೆ ಎಂದರ್ಥ. ಒಂದು ವೇಳೆ ನದಿಯ ಒಣ ಪಾತ್ರದಲ್ಲಿ ಅಥವಾ ತಗ್ಗು ಪ್ರದೇಶದಲ್ಲಿ ಗೂಡು ಕಟ್ಟಿದರೆ, ಆ ವರ್ಷ ಮಳೆ ಕಡಿಮೆಯಾಗಿ ಬರಗಾಲ ಆವರಿಸಬಹುದು ಎಂಬ ಮುನ್ಸೂಚನೆ!!

ಹಕ್ಕಿ ಇಟ್ಟ ಮೊಟ್ಟೆಗಳು ಗೂಡಿನಲ್ಲಿ ನೇರವಾಗಿ (ವರ್ಟಿಕಲ್) ನಿಂತಿದ್ದರೆ ದೀರ್ಘಕಾಲದ ಭಾರಿ ಮಳೆಯಾಗುತ್ತದೆ ಹಾಗೂ ಮೊಟ್ಟೆಗಳು ಅಡ್ಡಲಾಗಿ (ಹಾರಿಜಾಂಟಲ್) ಮಲಗಿದ್ದರೆ ಸಾಧಾರಣ ಮಳೆಯಾಗುತ್ತದೆ ಎಂಬುದು ನಂಬಿಕೆ.

ಮೊಟ್ಟೆಗಳು ಒಂದಕ್ಕೊಂದು ಹತ್ತಿರವಾಗಿ ಗುಂಪಾಗಿದ್ದರೆ ಮುಂಗಾರು ಸಕಾಲಕ್ಕೆ ಮತ್ತು ಸಮೃದ್ಧವಾಗಿ ಬರಲಿದೆ ಎಂದೂ, ಅವು ಚದುರಿದಂತಿದ್ದರೆ ಮಳೆ ವಿಳಂಬವಾಗಲಿದೆ ಅಥವಾ ಬಿಟ್ಟು ಬಿಟ್ಟು ಬರಲಿದೆ ಎಂದೂ ರೈತರು ಅಂದಾಜಿಸುತ್ತಾರೆ.

ಇದನ್ನೂ ಓದಿ:ಜೂನ್‌ ೨೨ರಿಂದ ಮುಂಗಾರು ಮಳೆ ಚುರುಕಾಗಬಹುದೇ ?

ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನದ ಮಿಲನ

ರಾಜಸ್ಥಾನದ ನೈಋತ್ಯ  ಭಾಗದಗ್ರಾಮೀಣ ಭಾಗದ ಹಿರಿಯ ರೈತರು ಇಂದಿಗೂ ಬಿತ್ತನೆ ಕಾರ್ಯ, ನೀರಿನ ನಿರ್ವಹಣೆ ಮತ್ತು ಬೆಳೆಗಳ ಆಯ್ಕೆಯನ್ನು ಈ ಹಕ್ಕಿಯ ಸೂಚನೆಗಳ ಆಧಾರದ ಮೇಲೆಯೇ ನಿರ್ಧರಿಸುತ್ತಾರೆ. ವಿಜ್ಞಾನಿಗಳ ಎಂಟು ವರ್ಷಗಳ ಸಂಶೋಧನೆಯಲ್ಲಿ, ಈ ಹಕ್ಕಿಯ ನಡವಳಿಕೆಗೂ ಮತ್ತು ಆಧುನಿಕ ಹವಾಮಾನ ಇಲಾಖೆಯ ಮುನ್ಸೂಚನೆಗಳಿಗೂ ಆಶ್ಚರ್ಯಕರವಾದ ಸಾಮ್ಯತೆ ಇರುವುದು ಕಂಡುಬಂದಿದೆ. ಪ್ರಾಣಿ-ಪಕ್ಷಿಗಳಿಗೆ ಪ್ರಕೃತಿಯಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು (ವಾಯುಭಾರ ಕುಸಿತ, ತೇವಾಂಶದ ಏರಿಳಿತ) ಮುಂಚಿತವಾಗಿಯೇ ಗ್ರಹಿಸುವ ಜೈವಿಕ ಶಕ್ತಿ ಇರುತ್ತದೆ ಎಂಬುದಕ್ಕೆ ಇದು ಅತ್ಯುತ್ತಮ ಉದಾಹರಣೆ.

ಮರೆಯಾಗುತ್ತಿರುವ ಅಪೂರ್ವ ಜ್ಞಾನ

ಆದರೆ, ಈ ಸಂಶೋಧನೆಯು ಒಂದು ಕಳವಳಕಾರಿ ಸತ್ಯವನ್ನೂ ಬಿಚ್ಚಿಟ್ಟಿದೆ. 50 ರಿಂದ 70 ವರ್ಷದ ಹಿರಿಯ ರೈತರಿಗೆ ಈ ನೈಸರ್ಗಿಕ ಹವಾಮಾನ ಮುನ್ಸೂಚನೆಗಳ ಬಗ್ಗೆ ಇರುವಷ್ಟು ಜ್ಞಾನ ಇಂದಿನ ಯುವ ಪೀಳಿಗೆಗೆ ಇಲ್ಲ. ಯುವಕರು ಸಂಪೂರ್ಣವಾಗಿ ಮೊಬೈಲ್ ಆ್ಯಪ್‌ಗಳು ಮತ್ತು ಆಧುನಿಕ ಮುನ್ಸೂಚನೆಗಳನ್ನೇ ಅವಲಂಬಿಸುತ್ತಿದ್ದಾರೆ. ಇದರಿಂದಾಗಿ ತಲೆಮಾರುಗಳಿಂದ ಹರಿದುಬಂದ ಅಮೂಲ್ಯವಾದ ಸ್ಥಳೀಯ ಜ್ಞಾನ ಭಂಡಾರ ನಿಧಾನವಾಗಿ ಮರೆಯಾಗುತ್ತಿದೆ.

ಆಧುನಿಕ ಹವಾಮಾನ ಮುನ್ಸೂಚನೆಗಳು ಇಡೀ ಜಿಲ್ಲೆ ಅಥವಾ ರಾಜ್ಯದ ಮಟ್ಟಕ್ಕೆ ಹವಾಮಾನದ ಚಿತ್ರಣ ನೀಡಿದರೆ, ಈ ಸಾಂಪ್ರದಾಯಿಕ ನೈಸರ್ಗಿಕ ಜ್ಞಾನವು ಅತ್ಯಂತ ಸ್ಥಳೀಯವಾದ (Local) ನಿಖರ ಮಾಹಿತಿಯನ್ನು ನೀಡುತ್ತದೆ. ವಿಜ್ಞಾನಿಗಳು ಹೇಳುವಂತೆ, ಆಧುನಿಕ ತಂತ್ರಜ್ಞಾನದ ಜೊತೆಗೆ ನಮ್ಮ ಹಿರಿಯರ ಇಂತಹ ಸಾಂಪ್ರದಾಯಿಕ ಜ್ಞಾನವನ್ನೂ ಬೆರೆಸಿ ಬಳಸಿಕೊಂಡರೆ ರೈತರು ಕೃಷಿಯಲ್ಲಿ ಮತ್ತಷ್ಟು ಯಶಸ್ಸು ಕಾಣಬಹುದು. ಮುಂಗಾರಿನ ಆಗಮನ ಕೇವಲ ಸ್ಯಾಟಲೈಟ್ ಚಿತ್ರಗಳಲ್ಲಿ ಮಾತ್ರವಲ್ಲ, ನಮ್ಮ ಸುತ್ತಲಿನ ಟಿಟ್ಟಿಭ ಹಕ್ಕಿಯ ಗೂಡಿನಲ್ಲೂ ಅಡಗಿದೆ ಎಂಬುದನ್ನು ಅರಿಯುವುದು ಪ್ರಕೃತಿಯೊಂದಿಗಿನ ನಮ್ಮ ಬಾಂಧವ್ಯವನ್ನು ಹೆಚ್ಚಿಸುತ್ತದೆ.

LEAVE A REPLY

Please enter your comment!
Please enter your name here