ಲಾಭದಾಯಕ ಸಾವಯವ ಕೃಷಿಗೆ ಸಹಕಾರಿ ಯಂತ್ರ

0
ಲೇಖಕರು: ಡಾ. ನಾಗರಾಜ್‌

ಭಾಗ – 1

ಮೊದಲಿಗೆ ಕಳೆ ತೆಗೆಯುವ ಯಂತ್ರವನ್ನು ಅಭಿವೃದ್ದಿಪಡಿಸಲು ಯೋಚನೆ ಮಾಡಿದೆ.  ಏಕೆಂದರೆ ಬೆಳೆಗಳ ಮಧ್ಯದಲ್ಲಿ ಕಳೆ ತೆಗೆಯಬೇಕೆಂದರೆ ಬಹಳ ಸಮಸ್ಯೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕಳೆ ತೆಗೆಯುವವರು ಮಹಿಳೆಯರು. ಈ ಕಾರ್ಯ ಅವರ ಮೇಲೆ ಬಹಳ ಒತ್ತಡ ಹೇರುತ್ತದೆ. ಅವರು ಬಿಸಿಲಿನಲ್ಲಿ, ಮಳೆಯಲ್ಲಿ ಕಷ್ಟಪಟ್ಟು ಕಳೆ ತೆಗೆಯುವುದನ್ನು ನೋಡುವಾಗ ಒಂದು  ಕಳೆ ತೆಗೆಯುವ ಯಂತ್ರ ರೂಪಿಸಬೇಕೆಂದು ಅಂದುಕೊಳ್ಳುತ್ತಿದ್ದೆ.

ಎಷ್ಟು ಕಳೆ ತೆಗೆದರೂ ಕಳೆ ಬರುತ್ತಲೇ ಇರುತ್ತದೆ. ಎಲ್ಲ ರೀತಿಯ ಬೆಳೆಗಳಲ್ಲಿಯೂ ಕಳೆಯನ್ನು ಸಲೀಸಾಗಿ ತೆಗೆಯುವ ಯಂತ್ರ ಆವಿಷ್ಕಾರ ಮಾಡಲು ನಿರಂತರ ಪ್ರಯತ್ನಿಸತೊಡಗಿದೆ. ಅನೇಕ ಪ್ರಯೋಗಗಳನ್ನು ಮಾಡಿದೆ.

ಬೆ<ಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿರುವ ಯಂತ್ರ ಅಭಿವೃದ್ಧಿಪಡಿಸುವ  ಕೃಷಿ ಇಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಚೌಡರೆಡ್ಡಿ ಅವರನ್ನು  ಭೇಟಿಯಾಗಿ ಇದರ ಬಗ್ಗೆ  ತಿಳಿಸಿದೆ.  ಅವರು ಆಶ್ಚರ್ಯಪಟ್ಟರು. ಎಲ್ಲ ಬೆಳೆಗಳಲ್ಲಿಯೂ ಬರುವ ಕಳೆ ತೆಗೆಯುವಂಥ ಯಂತ್ರದ ಅಭಿವೃದ್ಧಿ ಇನ್ನೂ ಆಗಿಲ್ಲ ಎಂದರು. ಇದು ನನ್ನ ಹಠವನ್ನು ಮತ್ತಷ್ಟೂ ಹೆಚ್ಚಿಸಿತು. ಇನ್ನಷ್ಟು ಶ್ರಮ ಹಾಕಿ ಪ್ರಯೋಗಗಳನ್ನು ಮಾಡ ತೊಡಗಿದೆ.

ಡಾ. ಚೌಡರೆಡ್ಡಿ ಅವರು ನನಗೆ “ ನೀವು ಹೇಗೂ ಹೆಚ್.ಎಂ.ಟಿ.ಯಲ್ಲಿ ಕೆಲಸ ಮಾಡುತ್ತಿದ್ದಿರಿ,, ಸೂಕ್ಷ್ಮ ಯಂತ್ರಗಳನ್ನು ಅಭಿವೃದ್ಧಿಪಡಿಸುವುದು ನಿಮಗೆ ಕಷ್ಟವಾಗಲಾರದು. ನೀವೇ ಪ್ರಯತ್ನ ಮಾಡಿ, ಇಂಥ ಯಂತ್ರ ಅಭಿವೃದ್ಧಿಪಡಿಸಿ” ಎಂದರು. ಜೊತೆಗೆ “ಅಂಥ ಯಂತ್ರವನ್ನು ಎಡ ಬಲಕ್ಕೆ ಸುಲಭವಾಗಿ ತಿರುಗಿಸುವ ವ್ಯವಸ್ಥೆಯನ್ನೂ ಮಾಡಿ” ಎಂದು ಸಲಹೆ ನೀಡಿದರು.

ಅವಾಗ ನಾನು ಹೆಚ್. ಎಂ..ಟಿಯಲ್ಲಿ ಕೆಲಸ ಮಾಡುತ್ತಿದ್ದೆ. ಇಂಥ ಯಂತ್ರ ಅಭಿವೃದ್ಧಿ ಮಾಡುವ ಸಲುವಾಗಿಯೇ ಕೆಲಸಕ್ಕೆ ರಾಜಿನಾಮೆ ನೀಡಿದೆ. ಬಹಳ ಸಮಯ ಆಡಳಿತ ಮಂಡಳಿ ನನ್ನ ರಾಜಿನಾಂಎ ಅಂಗೀಕರಿಸಲು ಸಿದ್ಧವಿರಲಿಲ್ಲ. ಹಿರಿಯ ಅಧಿಕಾರಿಗಳು ಕರೆಯಿಸಿ “ನಿನ್ನಂಥ ನುರಿತ ಕೆಲಸಗಾರರ ಅವಶ್ಯಕತೆ ತುಂಬ ಇದೆ. ಕೆಲಸ ಬಿಡಬೇಡ” ಎಂದರು. ಆದರೂ ಮಾಡಿದ್ದ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ

ರಾಜಿನಾಮೆ ನೀಡಿ ಹೊರ ಬಂದೆ. ಬೇರೆಡೆಗಳಿಂದ ಸಹಕಾರವಿರಲಿಲ್ಲ. ಆರಂಭದ ದಿನಗಳಲ್ಲಿ ತುಂಬ ಕಷ್ಟ ಅನುಭವಿಸಿದ್ದೇನೆ. ಸಂಶೋಧನೆಗೆ ಪ್ರೋತ್ಸಾಹವೇನೂ ದೊರೆಯಲಿಲ್ಲ. ಸಂಶೋಧನೆಗೆ, ಅಭಿವೃದ್ಧಿ ಕೆಲಸಗಳಿಗೆ ಬಹಳ ಖರ್ಚಾಯಿತು. ನನಗೆ ಸ್ವತಃ ಸಮಾಧಾನವಾಗುವ ತನಕ ಆವಿಷ್ಕಾರ ಮಾಡುವುದನ್ನು ಮುಂದುವರಿಸಿದೆ. ಸತತ ಪ್ರಯತ್ನದ ನಂತರ ಯಂತ್ರ ಸಿದ್ಧವಾಯಿತು.

ಆರಂಭದಲ್ಲಿ ಬೀಜ ಉತ್ಪಾದನಾ ಕಂಪನಿಗೆ ಯಂತ್ರ ನೀಡಿದೆ. ಅದರ ಕಾರ್ಯ ವೈಖರಿ ಕಂಡು ಆಶ್ಚರ್ಯಪಟ್ಟ ಅಲ್ಲಿನ ಆಡಳಿತಾಧಿಕಾರಿಗಳು ಇಂಥ ಇನ್ನಷ್ಟು ಯಂತ್ರಗಳನ್ನು ಪೂರೈಸುವಂತೆ ಕಾರ್ಯಾದೇಶ ನೀಡಿದರು. ಇದರಿಂದ ಬಹಳ ಸ್ಪೂರ್ತಿ ಬಂತು. ಜೊತೆಗೆ ಯಂತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಿದೆ. ಈ ಪ್ರಯತ್ನಗಳ ನಂತರ ಅದು ಒಂದು ಪರಿಪೂರ್ಣ ಎನ್ನಬಹುದಾದ ಹಂತಕ್ಕೆ ಬಂದಿದೆ. ಯಾವುದೇ ತೊಂದರೆಗಳಿಲ್ಲದೇ ಅದನ್ನು ಬಳಸಬಹುದು.

ಇಡೀ ಪ್ರಪಂಚವೇ ಸಾವಯವ ಕೃಷಿಯತ್ತ ಹೊರಟಿದೆ. ರಾಸಾಯನಿಕಗಳಿಂದ ಭೂಮಿಯ ಆರೋಗ್ಯ ಹಾಳಾಗುತ್ತಿದೆ ಎಂಬುದನ್ನು ರೈತರು ಮನಗಂಡಿದ್ದಾರೆ. ಜೊತೆಗೆ ತಮ್ಮ ಆರೋಗ್ಯವೂ ಹದಗೆಡುತ್ತದೆ ಎಂಬುದನ್ನೂ ಆರಿತುಕೊಂಡಿದ್ದಾರೆ.

ಆರಂಭದಲ್ಲಿ ಸಾವಯವ ಕೃಷಿಯಲ್ಲಿ  ಇಳುವರಿ ಕಡಿಮೆಯಾಗುತ್ತದೆ ಎಂದು ಬಹಳಷ್ಟು ಮಂದಿ ಹೇಳುತ್ತಾರೆ.  ಇದರ ಬಗ್ಗೆಯೂ ನಾನು ಬಹಳವಾಗಿ ಯೋಚಿಸಿದೆ. ಕಾರಣಗಳನ್ನು ತಿಳಿಯತೊಡಗಿದೆ.  ಅಧ್ಯಯನ ಮಾಡಿದೆ. ಆಗ ಕಾರಣಗಳೂ ತಿಳಿಯತೊಡಗಿತು.

ತಾಂಡವಾಳದ ಉಪಕರಣದಿಂದ ಉಳುಮೆ‌ ಮಾಡುವುದರಿಂದ (cash iron) ಮಣ್ಣು ಸಡಿಲವಾಗಿ, ಸ್ಪಂಜ್ ರೀತಿ ಮೃದುವಾಗುತ್ತದೆ. ಉದಾಹರಣೆಗೆ ಚಹಾ ಪುಡಿ ಮಾದರಿ ಮಣ್ಣಿನ ಕಣಗಳ ಸುಧಾರಣೆಯಾಗುತ್ತದೆ. ಮಣ್ಣಿನ ಭೌತಿಕ ಗುಣವೂ ಸುಧಾರಿಸುತ್ತದೆ.‌ ಇದರಿಂದಾಗಿ ಮಣ್ಣಿನ ಸೂಕ್ಷ್ಮಣು ಜೀವಿಗಳ ಚಟುವಟಿಕೆ ಹೆಚ್ಚಾಗಿ ಮಳೆನೀರು ಭೂಮಿಯಲ್ಲಿ ಚೆನ್ನಾಗಿ ಇಂಗುತ್ತದೆ.

ಮಳೆನೀರಿನಲ್ಲಿರುವ ಅನನ್ಯ ಪೋಷಕಾಂಶಗಳು ಭೂಮಿಯಲ್ಲಿ ಸೇರಿ ಮಣ್ಣಿನ ಸೂಕ್ಷ್ಮಾಣುಗಳು, ಸಸ್ಯಗಳ ಬೇರುಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಮಣ್ಣು ಮೃದುವಾಗಿ ಎರೆಹುಳುಗಳ ಸಂತತಿ ವೃದ್ಧಿಗೆ ಅಗತ್ಯವಾದ ಜೈವಿಕ ವಾತಾವರಣ ನಿರ್ಮಾಣವಾಗುತ್ತದೆ. ಇಂದಿನ ಬೇಸಾಯ ಪದ್ಧತಿಯಲ್ಲಿ ಎರೆಹುಳುಗಳನ್ನು ಕಡೆಗಾಣಿಸಿರುವುದರಿಂದ ಅವು ವಿನಾಶದ ಅಂಚಿಗೆ ತಳಲ್ಪಟ್ಟಿವೆ. ಈ ಯಂತ್ರದಿಂದ ಉಳುಮೆ ಮಾಡುವುದರಿಂದ ಮಣ್ಣಿನ ಮೇಲೆ ಒತ್ತಡ ಬೀಳದೇ ಇರುವುದರಿಂದ ಎರೆಹುಳುಗಳ ಸಂಖ್ಯೆಯೂ ವೃದ್ದಿಸುತ್ತದೆ

ಮುಖ್ಯವಾಗಿ ಈ ಯಂತ್ರಕ್ಕೆ ಟಯರುಗಳು ಇಲ್ಲದೇ ಇರುವುದರಿಂದ  ಭೂಮಿ ದಮ್ಮಸ್ಸು (ಕಠಿಣ) ಆಗುವುದಿಲ್ಲ ಈ ಎಲ್ಲ ಕಾರಣಗಳಿಂದ ಭೂಮಿಯ ಆರೋಗ್ಯ ಸಹಜವಾಗಿ ವೃದ್ಧಿಯಾಗುತ್ತದೆ. ನಮ್ಮಿಂದ ಯಂತ್ರಗಳನ್ನು ಖರೀದಿ ಮಾಡಿದವರೆಲ್ಲರೂ ಇದೇ ಫೀಡ್‌ ಬ್ಯಾಕ್ ನೀಡುತ್ತಿದ್ದಾರೆ.

ಮುಂದುವರಿಯುತ್ತದೆ ….

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:  ಮಾರುತಿ ಕೃಷಿ ಉದ್ಯೋಗ್‌, ಕೆರೆಕೋಡಿ, ನೆಲಮಂಗಲ ಟೌನ್‌, ಕರ್ನಾಟಕ – 562123, ಸಂಚಾರಿ ದೂರವಾಣಿ: 8618693986 /  9482975463

LEAVE A REPLY

Please enter your comment!
Please enter your name here