ಕಬ್ಬು ಕೃಷಿಗೆ ಎಐ ಬಳಕೆ ಅಧಿಕ ಇಳುವರಿ ಜೊತೆಗೆ ಉಳಿತಾಯ

0
ಸಾಂದರ್ಭಿಕ ಚಿತ್ರ ಬಳಸಲಾಗಿದೆ

ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಿಗೂ ಅಡಿಯಿಟ್ಟಾಗಿದೆ. ಕೃಷಿಕ್ಷೇತ್ರದಲ್ಲಿ ಅದರ ಬಳಕೆ ಗಮನಾರ್ಹ ಬದಲಾವಣೆಗಳನ್ನು ಉಂಟು ಮಾಡುತ್ತಿದೆ. ಇದಕ್ಕೆ ಪ್ರಸ್ತುತ ನಿದರ್ಶನ ಮಹಾರಾಷ್ಟ್ರ ರಾಜ್ಯದಲ್ಲಿ ಕಬ್ಬಿನ ಕೃಷಿಗೆ ಅದನ್ನು ಬಳಕೆ ಮಾಡಿರುವುದು. ಇದರಿಂದ ಇಳುವರಿ ಗಮನಾರ್ಹವಾಗಿ ಹೆಚ್ಚಿರುವುದು. ಬಹುಮುಖ್ಯವಾಗಿ ನೀರು, ಪೋಷಕಾಂಶದ ಬಳಕೆ ಪ್ರಮಾಣ ಕಡಿಮೆಯಾಗಿದೆ. ಇವೆಲ್ಲದರ ಪರಿಣಾಮ ಆಗುತ್ತಿದ್ದ ವೆಚ್ಚದಲ್ಲಿ ಗಮನಾರ್ಹ ಉಳಿತಾಯವಾಗಿದೆ.

ಪೂನಾ, ಬಾರಾಮತಿ,  ಸಾಂಗ್ಲಿ, ಸತಾರಾ, ಕೊಲ್ಹಾಪುರ ಈ ಪ್ರದೇಶಗಳಲ್ಲಿ ಕಬ್ಬುಕೃಷಿ ಅಧಿಕ ಪ್ರಮಾಣದಲ್ಲಿ ನಡೆಯುತ್ತದೆ. ಪೂನಾ ಸಮೀಪದ ಬಾರಾಮತಿಯಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ  ಬೆಳೆಯಲಾದ ಕಬ್ಬು ಬೆಳೆಯ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು.ಮೈಕ್ರೋಸಾಫ್ಟ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಾಯದಿಂದ ಕೃಷಿ ಅಭಿವೃದ್ಧಿ ಟ್ರಸ್ಟ್ ಮೂಲಕ ಬಾರಾಮತಿಯ ಕೃಷಿ ವಿಜ್ಞಾನ ಕೇಂದ್ರವು ಈ ಪ್ರಯೋಗವನ್ನು ನಡೆಸಿತು.

“ಕೃಷಿಯಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಕೆಯಿಂದ ಭಾರಿ ಪ್ರಯೋಜನಗಳಾಗುತ್ತವೆ ಎಂಬುದನ್ನು ನಾವು ಕಬ್ಬು ಬೆಳೆಯಲ್ಲಿ ಮಾಡಿದ ಪ್ರಯೋಗದಿಂದ ಸಾಬೀತಾಗಿದೆ. ಇದನ್ನು ಪ್ರಾಯೋಗಿಕವಾಗಿ ಬಾರಾಮತಿ ಸುತ್ತಮುತ್ತಲಿನ ರೈತರ ಕಬ್ಬುಕೃಷಿ ಕ್ಷೇತ್ರಗಳಲ್ಲಿ ನಡೆಸಲಾಯಿತು. ಬಂದ ಫಲಿತಾಂಶ ತೃಪ್ತಿಕರವಾಗಿದೆ. ಒಂದು ಎಕರೆಯಲ್ಲಿ ಕಬ್ಬು ಬೆಳೆಯ ಇಳುವರಿಯನ್ನು 160 ಟನ್ ತನಕ ಪಡೆಯಲು ಸಾಧ್ಯ ಎಂಬ ವಿಶ್ವಾಸ ಬಂದಿದೆ. ಮುಖ್ಯವಾಗಿ ಕೃಷಿವೆಚ್ಚವು ಶೇಕಡ 20 ರಿಂದ 40ರಷ್ಟು ಕಡಿಮೆಯಾಗುತ್ತದೆ. ಶೇಕಡ 30ರಷ್ಟು ನೀರು ಉಳಿತಾಯವಾಗುತ್ತದೆ” ಎಂದು ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕ ಭೂಷಣ್ ಗೋಸಾವಿ ವಿವರಿಸುತ್ತಾರೆ.

ರೈತರು ಸಾಮಾನ್ಯವಾಗಿ ಕಬ್ಬುಋಷಿಗೆ ಅಧಿಕ ಖರ್ಚು ಮಾಡುತ್ತಾರೆ. ಪೋಷಕಾಂಶ ಖರೀದಿಗೆ ಹೆಚ್ಚು ವೆಚ್ಚವಾಗುತ್ತದೆ. ನೀರಿನ ಬಳಕೆಯೂ ಅಧಿಕವಾಗಿರುತ್ತದೆ. ಇವೆಲ್ಲವನ್ನೂ ಕೃತಕ ಬುದ್ದಿಮತ್ತೆ ಬಳಸಿ ಹೇಗೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ಅರಿಯುವ ಸಲುವಾಗಿ ಪ್ರಯೋಗ ಮಾಡಿದೆವು. ಯಶಸ್ವಿಯೂ ಆಗಿದ್ದೇವೆ. ಮಣ್ಣಿನ ಗುಣಗಳು ವಿಶೇಷವಾಗಿ ಅದರಲ್ಲಿರುವ ಅಂಶಗಳ ಪ್ರಮಾಣ, ಯಾವ ಪ್ರಮಾಣದಲ್ಲಿ ಯಾವಯಾವ ಪೋಷಕಾಂಶಗಳು ಅಗತ್ಯ, ಯಾವಯಾವ ಹಂತಗಳಲ್ಲಿ ಎಷ್ಟು ಪ್ರಮಾಣದಲ್ಲಿ ಒದಗಿಸಬೇಕು, ಮಣ್ಣು ಹಿಡಿದಿಟ್ಟುಕೊಳ್ಳುವ ನೀರಿನ ಪ್ರಮಾಣದ ಅನುಸಾರವಾಗಿ ಎಷ್ಟು ಅವಧಿಗೊಮ್ಮೆ ನೀರನ್ನು ಎಷ್ಟು ಪ್ರಮಾಣದಲ್ಲಿ ಕೊಡಬೇಕು ಎಂಬುದು ನಿಖರವಾಗಿ ತಿಳಿಯುತ್ತದೆ. ಇದೆಲ್ಲವನ್ನೂ ಮೇಲ್ವಿಚಾರಣೆ ಮಾಡಲಾಗುತ್ತದೆ. ಕಾಲಕಾಲಕ್ಕೆ ಬೆಳೆಗಾರರಿಗೆ ಮಾಹಿತಿ ಒದಗಿಸಲಾಗುತ್ತದೆ’ ಎಂದು ಅವರು ಹೇಳುತ್ತಾರೆ.

“ಕಬ್ಬುಕೃಷಿಯ ಕುರಿತಾಗಿ ಸಂಗ್ರಹಿಸಲಾದ ಡೇಟಾವನ್ನು, ಆಲ್ಗಾರಿದಮ್ ಗಳನ್ನು ಅಭಿವೃದ್ದಿಪಡಿಲಾಗುತ್ತದೆ. ಕ್ರುಶಕ್ ಅಪ್ಲಿಕೇಶನ್ ಮೂಲಕ ಬೆಳೆಗಾರರಿಗೆ ಮಾಹಿತಿ ನೀಡುತ್ತೇವೆ. ಎಐ ತಂತ್ರಜ್ಞಾನ ಬಳಕೆ ಮಾಡಿದ ಕಬ್ಬಿನ ಕೃಷಿ, ಎಐ ಬಳಸದೇ ಮಾಡಿದ ಕಬ್ಬಿನ ಕೃಷಿಯ ಅಂಕಿಅಂಶಗಳನ್ನು ಸಂಗ್ರಹಿಸಿದ್ದೇವೆ. ಇದರಿಂದ ವ್ಯತ್ಯಾಸಗಳನ್ನು ನಿಖರವಾಗಿ ಅರಿಯಲು ಸಾಧ್ಯವಾಗುತ್ತದೆ. ಎಐ ಬಳಕೆ ಮಾಡಿದ ವಿಭಾಗದಲ್ಲಿ ಪೋಷಕಾಂಶಗಳು ಮತ್ತು ನೀರಿನ ಬಳಕೆಯಲ್ಲಿ ಗಮನಾರ್ಹ ಉಳಿತಾಯವಾಗಿದೆ. ಮುಖ್ಯವಾಗಿ ಮಣ್ಣಿನ ಫಲವತ್ತತೆ ಹೆಚ್ಚಳವಾಗಿದೆ” ಎನ್ನುತ್ತಾರೆ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡಿದ ವಿಭಾಗದಲ್ಲಿ, ಸುಮಾರು ಶೇಕ  22 ರಷ್ಟು ರಸಗೊಬ್ಬರಗಳ ಪ್ರಮಾಣ ಉಳಿತಾಯವಾಗಿದೆ.  ರೈತರು ಮುಂದಿನ ಹಂತಗಳಲ್ಲಿ  ಕಾರ್ಬನ್ ಕ್ರೆಡಿಟ್‌ನ ಪ್ರಯೋಜನವನ್ನು ಪಡೆಯುತ್ತಾರೆ. ಇವೆಲ್ಲದರ ಜೊತೆಗೆ  ನಿರಂತರ ಬೆಳೆ ಮೇಲ್ವಿಚಾರಣೆ ಸಾಧ್ಯವಾಗುವುದರಿಂದ  ಕೊಯ್ಲು ದಕ್ಷತೆ ಹೆಚ್ಚುತ್ತದೆ. ಕೀಟನಾಶಕಗಳ ಬಳಕೆಯೂ ಗಮನಾರ್ಹವಾಗಿ ಕಡಿಮೆಯಾಗಿದೆ.

LEAVE A REPLY

Please enter your comment!
Please enter your name here