ಮಳೆಯ ಕಾಲಮಾನಗಳಲ್ಲಿ ವ್ಯತ್ಯಾಸಗಳಾಗಿವೆ. ಸಾಮಾನ್ಯವಾಗಿ ಸೆಪ್ಟೆಂಬರ್ ೩೦ಕ್ಕೆ ಭಾರತದ ಹಲವು ರಾಜ್ಯಗಳಲ್ಲಿ ಮುಂಗಾರು ಮುಕ್ತಾಯವಾಗುತ್ತದೆ. ಅಕ್ಟೋಬರ್ ಮೊದಲ ವಾರದಲ್ಲಿ ಹಿಂಗಾರು ಮಳೆ ಆಗಮನವಾಗುತ್ತದೆ. ಆದರೆ ಈ ಬಾರಿ ಭಾರತದ ಇನ್ನೂ ಕೆಲವಾರು ಪ್ರದೇಶಗಳಿಂದ ಮುಂಗಾರು (Monsoon )ನಿರ್ಗಮಿತವಾಗಿಲ್ಲ. ಅಕ್ಟೋಬರ್ ೧೫ ರೊಳಗೆ ಮುಂಗಾರು ನಿರ್ಗಮಿತವಾಗಿ ಅಕ್ಟೋಬರ್ ೧೫ ರಿಂದ ೨೦ ರೊಳಗೆ ಹಿಂಗಾರು (North East Monsoon ) ಆರಂಭವಾಗಬಹುದು ಎಂದು ಹೇಳಲಾಗಿದೆ. ಆದರೂ ಇದಕ್ಕೂ ಮುಂಚಿತವಾಗಿ ಹಿಂಗಾರು ಆರಂಭವಾಗುವ ಸಾಧ್ಯತೆಯೂ ಇದೆ
ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆಯಷ್ಟು ಅನುಕೂಲಗಳು ಹಿಂಗಾರು ಮಳೆಯಲ್ಲಿ ಆಗದಿದ್ದರೂ ಅದರಿಂದ ಪರೋಕ್ಷವಾಗಿ ಲಾಭಗಳಿವೆ. ಸಾಮಾನ್ಯವಾಗಿ ರಾಜ್ಯದಲ್ಲಿ ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಈ ಮೂರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ೧೮೨ ಮಿಲಿ ಮೀಟರ್. ಪ್ರಮಾಣದ ಮಳೆಯಾಗುತ್ತದೆ. ಆದರೆ ಹಿಂಗಾರು ಹಿಂದೆಯೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಬರುವ ಸೈಕ್ಲೋನ್ ಕಾರಣಗಳಿಂದ ಬರುವ ಮಳೆ ಪ್ರಮಾಣ ಹೆಚ್ಚು. ಇದರಿಂದ ಸಾಕಷ್ಟು ಕೆರೆಕುಂಟೆಗಳಿಗೆ ನೀರು ಹರಿದುಬರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಡಾ. ತಿಮ್ಮೇಗೌಡ ಅವರು ಅಭಿಪ್ರಾಯಪಡುತ್ತಾರೆ.
ನೈರುತ್ಯ ಮುಂಗಾರು ( South west monsoon ) ಹಿಂದು ಮಹಾಸಾಗರದ ಕಡೆಯಿಂದ ಪಶ್ಚಿಮ ಕರಾವಳಿಯಾದ ಕೇರಳ ರಾಜ್ಯಕ್ಕೆ ಪ್ರವೇಶ ನೀಡುತ್ತವೆ. ಈಶಾನ್ಯ ಹಿಂಗಾರು ಮಾರುತಗಳು (North East Monsoon ) ಬಂಗಾಳಕೊಲ್ಲಿ( Bay of Bengal )ಯಿಂದ ಆರಂಭವಾಗುತ್ತದೆ. ಇವುಗಳು ಪೂರ್ವ ಕರಾವಳಿಯಾದ ಪಶ್ಚಿಮ ಬಂಗಾಳ, ಒಡಿಸ್ಸಾ ಆಂಧ್ರ ಮೂಲಕ ತಮಿಳುನಾಡು ಕಡೆಗೆ ಚಲಿಸುತ್ತವೆ.
ಈಶಾನ್ಯಹಿಂಗಾರು ಮಾರುತಗಳಿಂದ ಆಂಧ್ರ, ತಮಿಳುನಾಡು ಗಡಿಗಳಲ್ಲಿ ಇರುವ ಕರ್ನಾಟಕದ ಪ್ರದೇಶಗಳಲ್ಲಿಯೂ ಉತ್ತಮ ಪ್ರಮಾಣದ ಮಳೆಯಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಚಾಮರಾಜನಗರ, ಬಳ್ಳಾರಿ, ಗದಗ ಜೊತೆಗೆ ಕಲ್ಯಾಣ ಕರ್ನಾಟಕದ ಪ್ರದೇಶಗಳು ಸಹ ಫಲಾನುಭವಿಗಳಾಗುತ್ತವೆ.
ರೈತರಿಗೆ ಸಲಹೆ
ಹಿಂಗಾರು ಮಳೆ ಸಂದರ್ಭದಲ್ಲಿ ರಾಜ್ಯವನ್ನು ಎರಡು ವಲಯಗಳಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಉತ್ತರ ಒಳನಾಡಿನ ಭಾಗಗಳನ್ನು ತೆಗೆದುಕೊಂಡಾಗ ಅವರು ದೀರ್ಘಾವಧಿಯ ತೊಗರಿ ಬೆಳೆ ಹಾಕಿರುತ್ತಾರೆ. ಈ ಬೆಳೆ ಜನೆವರಿ ತನಕ ವಿಸ್ತರಣೆಯಾಗುತ್ತದೆ. ತೊಗರಿ ಹಾಕಿರದೇ ಇರುವವರು ರೊಟ್ಟಿ ಜೋಳ ಬಿತ್ತನೆ ಮಾಡುತ್ತಾರೆ. ಈ ಪ್ರದೇಶಗಳಲ್ಲಿ ಇದು ಶೇಕಡ ೮೦ರಷ್ಟು ಬಿತ್ತನೆಯಾಗುವುದೇ ಹಿಂಗಾರು ಹಂಗಾಮಿನಲ್ಲಿ ಎಂಬುದನ್ನು ಗಮನಿಸಬೇಕು. ಇದಲ್ಲದೇ ಗಣನೀಯ ಪ್ರಮಾಣದಲ್ಲಿ ಕಡಲೆ) ಬಿತ್ತನೆಯಾಗುತ್ತದೆ. ಕುಸುಬೆ ಕೂಡ ಬಿತ್ತನೆಯಾಗುತ್ತದೆ ಎಂದು ಡಾ. ತಿಮ್ಮೇಗೌಡ ತಿಳಿಸಿದರು.
ದಕ್ಷಿಣ ಒಳನಾಡಿನಲ್ಲಿ ಗಮನಿಸಿದಾಗ ನೀರಾವರಿ ಸೌಲಭ್ಯ ಹೊಂದಿಲ್ಲದೇ ಇರುವ ಮಳೆಯಾಶ್ರಿತ ಪ್ರದೇಶಗಳವರು ಹುರುಳಿ ಚೆಲ್ಲಬಹುದು. ಹೊಲದಲ್ಲಿ ಮುಂಗಾರು ಹಂಗಾಮಿನಲ್ಲಿ ಹಾಕಿರುವ ಬೆಳೆಯಿದ್ದರೆ ಅದು ಡಿಸೆಂಬರ್ ತನಕ ವಿಸ್ತರಣೆಯಾಗುತ್ತದೆ. ಏನೂ ಹಾಕಿಲ್ಲದೇ ಇದ್ದರೆ ರಾಗಿ ಬಿತ್ತನೆ ಮಾಡಬಹುದು. ಒಂದು ವೇಳೆ ಸಕಾಲದಲ್ಲಿ ಮಳೆ ಒದಗದಿದ್ದರೆ ಬೇರೆ ಮೂಲಗಳಿಂದ ಎರಡು ಬಾರಿಯಾದರೂ ನೀರು ನೀಡುವ ಅನುಕೂಲಗಳಿದ್ದರೆ ಮಾತ್ರ ಬಿತ್ತನೆ ಮಾಡಬಹುದು. ನವೆಂಬರ್, ಡಿಸೆಂಬರಿನಲ್ಲಿ ಚಳಿಯಿರುತ್ತದೆ. ಇದನ್ನು ತಡೆದುಕೊಳ್ಳುವ ರಾಗಿ ತಳಿಗಳಾದ ಇಂಡಾಫ್ ೭ ಅಥವಾ ೯ನ್ನು ಬಿತ್ತನೆ ಮಾಡಬಹುದು.ಇದಲ್ಲದೇ ಹೊಲದ ಅಂಚುಗಳಲ್ಲಿ ಮೇವಿನ ಜೋಳ, ಮೇವಿನ ಮುಸುಕಿನ ಜೋಳ, ಮೇವಿನ ಸಜ್ಜೆ ಇವುಗಳನ್ನು ಹಾಕಬಹುದು.