ಎಷ್ಟು ಮುದ್ದಿಸಿದರೂ ಸಾಲದು ಎನ್ನುವಂತೆ ಮುಗಿಲು ಧೋಗುಡುವ ಈ ಹೊತ್ತು. ಮನಸ್ಸು ಜ್ವರಕ್ಕೆ ಕೂತ ರೇಷ್ಮೆ ಹುಳು. ಏನೋ ಓದಬೇಕು ಓದ್ತಿನಿ, ಮನೆಕೆಲಸ ಮಾಡಬೇಕು,ಮಾಡ್ತಿನಿ. ಸಣ್ಣಪುಟ್ಟ ತಿರುಗಾಟ ಅದೂ ನಡೀತಿದೆ. ಮಳೆಗಾಲದಲ್ಲಿ ನಾಲಿಗೆ ಚುರುಕು,ಹಸಿವೆಯೂ ಜೊತೆಗೆ ಸಾತ್ ಕೊಡುತ್ತೆ ಅಂತಾರೆ. ಅಂಥದ್ದೇನೂ ಯಾವತ್ತಿಗೂ ಅನಿಸದ ಕಾರಣ ಅಡುಗೆಯೂ ಮಾಮೂಲಿ.
ಈ ನಡುವೆ ಮಳೆಗಾಲದ ಜ್ವರ ಬಂದು ತನ್ನ ಸರದಿ ಮುಗಿಸುವ ಹಂತದಲ್ಲಿದೆ. ತೋಟಕ್ಕೆ ಕಾಲಿಟ್ಟು ತಿಂಗಳಾಯ್ತು. ಧೋಗುಡುವ ಮಳೆಯಲ್ಲಿ ಎಲ್ಲೂ ಹೋಗಲು ಮನಸ್ಸಿಲ್ಲ. ಮನೆಯೇ ಮಂತ್ರಾಲಯ.ಕಾಫಿ ರೇಟು ದಾಖಲೆ ಮಟ್ಟದಲ್ಲಿ ಏರಿಕೆ ಅಂತೆಲ್ಲ ಪೇಪರ್ ಹೇಳ್ತಿದೆ. ಸರಕೇ ಇಲ್ಲದ ಮೇಲೆ ಬೆಲೆ ಬಂದರೆಷ್ಟು ಹೋದರೆಷ್ಟು ಅಂತಿರುವವರೇ ಈಗ ಹೆಚ್ಚು.
ಸಾಫ್ಟವೇರುಗಳು, ಅಮೆರಿಕ ರಿಟರ್ನ್ ಗಳು ಬೆಲೆಯೇರಿಕೆಯ ಸುದ್ದಿ ಕೇಳಿ ರಿಟೈರ್ಡ್ ಆದಮೇಲೆ ಒಂದು ಸಣ್ಣ ಕಾಫಿತೋಟ ಖರೀದಿ ಮಾಡಿದ್ರೆ ಝಮ್ ಅನ್ನೋ ಹಾಗೆ ಇರಬಹುದು ಅನ್ಕೊಳ್ತಿದ್ದಾರೆ. ಕಾಫಿಗೆ ಬೆಲೆಯೇನೋ ಜಾಸ್ತಿಯಾಗಿದೆ. ಅದು ಜಾಸ್ತಿ ಆಗುವ ಮುನ್ನವೇ ನಮ್ಮ ಕಾರ್ಮಿಕರು ತಮ್ಮ ವೇತನವನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಕೆಲಸದ ಸಮಯವನ್ನು ಮೂರನೇ ಒಂದು ಭಾಗಕ್ಕೆ ಇಳಿಸಿಕೊಂಡಿದ್ದಾರೆ.
ಅಸ್ಸಾಮ್, ತಮಿಳುನಾಡು ರಾಜ್ಯಗಳಿಂದ ವಲಸೆ ಕಾರ್ಮಿಕರು ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪ್ರವಾಹೋಪದಿಯಾಗಿ ಬರ್ತಿದ್ದಾರೆ ಅಂತ ಸುದ್ದಿಯಿದೆಯಾದರೂ ಬಂದವರ ಡಿಮ್ಯಾಂಡ್ಸು ಭಯಂಕರವಾಗಿವೆ. ಮಾಮೂಲಿನಂತೆ ಪ್ರತಿ ವರ್ಷವೂ ಕೆಲಸಕ್ಕೆ ಜನ ಬಿಡುವ ಮೇಸ್ತ್ರಿ ಜಬೀ, ‘ಬೆಳಿಗ್ಗೆ ಒಂಬತ್ತೂವರೆಗೆ ಬಂದು ಮದ್ಯಾಹ್ನ ಒಂದಕ್ಕೆ ಹೋಗ್ತಿವಿ.ನಾನೂರೈವತ್ತು ಸಂಬಳ ಕೊಡಬೇಕು’ ಅಂತ ಮೊನ್ನೆ ಫೋನ್ ಮಾಡಿದ್ದರು.
‘ಹಿಂಗ್ ಕೇಳಿದ್ರೆ ಎಲ್ಲಿಂದ ತರೋದಪ್ಪಾ ಸ್ವಾಮಿ’
ಅಂತ ಕೇಳ್ತಿದ್ರು ಅಪ್ಪ.
‘ತರಕಾರಿ ಕಾ ರೇಟ್ ಝ್ಯಾದಾ ಹೋಗಾಯಾ, ಬೀಡಿ ಬೀ ಬಹುತ್ ಮೆಹಂಗಾ ಹೈನಾ , ಕ್ಯಾ ಕರೊ ಸಾಬ್ ‘ (ತರಕಾರಿಗಳ ಬೆಲೆ ಗಗನಕ್ಕೇರಿದೆ, ಬೀಡಿಯೂ ದುಬಾರಿಯಾಗಿದೆ) ಅಂತ ಮಾರುತ್ತರ ! ಆನೆ ಕಷ್ಟ ಆನೆಗೆ, ಆಡಿನ ಕಷ್ಟ ಆಡಿಗೆ!! ಏನೂ ಮಾಡ್ಲಿಕ್ಕಾಗಲ್ಲ !
ಈ ವರ್ಷದ ಅತಿರೇಕದ ಬಿಸಿಲಿನಿಂದಾಗಿ ಹಣ್ಣು ಕೊಯ್ಲು ಆದ ತಕ್ಷಣ ಮಾಡಿಸಬೇಕಿದ್ದ ಗಿಡಗಸಿಯನ್ನು ತಡೆದಿದ್ದಾಯ್ತು. ಭಯಂಕರ ಬಿಸಿಲಿನಲ್ಲಿ ಗಿಡದ ಸೋತ ರೆಕ್ಕೆ ಕಸಿ ಮಾಡಲು ಚಾಕು ಹಾಕಿದ್ರೆ ಗಿಡ ನಂಜಾಗ್ತವೆ ಎನ್ನುವ ಭಯ ಇತ್ತು. ಇನ್ನು ತೋಟದಲ್ಲಿರುವ ಮರಗಳಿಂದ ಹೆಚ್ಚಿನ ಹರೆಗಳನ್ನು ಕತ್ತರಿಸುವ ಮರಗಸಿ ಮಾಡಿಸುವುದು ಕೂಡ ಎಪ್ರಿಲ್ ಮೇ ತಿಂಗಳಿನಲ್ಲೆ. ಆದರೆ ಈ ವರ್ಷ ಹಾಗೇನಾದರೂ ಮಾಡಿಸಿದ್ರೆ ತೋಟಕ್ಕೆ ತೋಟವೇ ಬಿಸಿಲಿಗೆ ಸುಟ್ಟು ಹೋಗುವ ಭಯವಿತ್ತು.
ಕಾಫಿ ತೋಟದ ಅತಿ ದುಬಾರಿ ಕೆಲಸಗಳಂದ್ರೆ ಗಿಡಗಸಿ ಮರಗಸಿ. (ಸದ್ಯದ ಸ್ಥಿತಿಯಲ್ಲಿ ಪ್ರತಿ ಕೆಲಸವೂ ದುಬಾರಿಯೇ) ಎರಡೂ ಕೆಲಸಗಳೂ ಅದರ ತಕ್ಕ ಸಮಯಕ್ಕೆ ಆಗುವುದನ್ನು ತಪ್ಪಿಸಿದ್ದು ಈ ಬೇಸಿಗೆಯ ರವಗುಟ್ಟ ಝಳ. ಹಾಗಂತ ಕೆಲಸ ತಪ್ಪಿಸುವ ಹಾಗಿಲ್ಲ. ತಡವಾದ್ರೂ ಮರಗಸಿ ಮಾಡಿಸಲೇ ಬೇಕು.
ಸುರಿವ ಮಳೆಯಲ್ಲಿ ಮರಗಸಿ ಮಾಡಿಸುವುದು ಅಪಾಯ. ಗಿಡಗಸಿ ಕೆಲಸ ಸಾಗಲ್ಲ. ಐವತ್ತು ಗಿಡ ಕಸಿ ಮಾಡೋ ಮಂದಿ ಹತ್ತು ಗಿಡ ಮಾಡೋದ್ರೊಳಗೆ ಸೋಲ್ತಾರೆ. ಒಂದಕ್ಕೆರಡು ಖರ್ಚು. ಆದರೂ… ಎಲ್ರಿಗೂ ಆಗುವುದು ನಮಗೂ ಆಗುತ್ತೆ ಅನ್ನೊ ಎಂಟಾಣೆ ಧೈರ್ಯ.
‘ಮಳೆ ಬಂದ್ರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ’ ಅಂತೊಂದು ಮಾತಿದೆ ನಮ್ಮ ಕಡೆಗೆ. ಮಳೆಗಾಲ ಹೆಚ್ಚಾದಂತೆ ಕೆಲಸ ಸಾಗಲ್ಲ ಅನ್ನುವುದೊಂದು ಬಿಟ್ಟರೆ ತೋಟದ ಕೆರೆಕಟ್ಟೆ ತುಂಬಲು ಮಳೆ ಬೇಕು. ತೋಟದಲ್ಲಿರುವ ನೀರುಗುಂಡಿಯಲ್ಲಿ ಈ ಮಳೆನೀರು ಇಂಗಿ ಆ ಭಾಗದ ಅಂತರ್ಜಲ ಹೆಚ್ಚಿದ್ರೆ ತೋಟಕ್ಕೆ ಅನುಕೂಲ. ಅರೆಬಿಕಾ ತೋಟಕ್ಕಂತೂ ಮಳೆ ಕಡಿಮೆಯಾಗುವಂತಿಲ್ಲ. ಹಾಗೇನಾದರೂ ಆದರೆ ಬೋರರ್ (ಕಾಂಡಕೊರಕ)ಹುಳುಗಳು ಇನ್ನಿಲ್ಲದಂತೆ ಹೆಚ್ಚಾಗಿ ತೋಟಕ್ಕೆ ತೋಟವೇ ನಿರ್ನಾಮ ಆಗುವ ಸಾಧ್ಯತೆಯೂ ಇದೆ.
ಮಳೆ, ಹೀಗೆ ಅರೆನಿಮಿಷವೂ ಬಿಡುವು ಕೊಡದೆ ಸುರಿಯುವುದೂ ಅಪಾಯವೇ. ಕೊಳೆ ರೋಗ ಗ್ಯಾರೆಂಟಿ. ಹೇರ್ ರೂಟ್ ಅಥವಾ ತಂತುಬೇರುಗಳೇ ಹೆಚ್ಚಿರುವ ರೋಬಸ್ಟಾ ಕಾಫಿ ಗಿಡಗಳಿಗೆ ಹೀಗೆ ಇಪ್ಪತ್ನಾಲ್ಕು ತಾಸೂ ಮಳೆ ಸುರಿದರೆ ರೂಟ್ ರಾಟ್ ಅಥವಾ ಬೇರು ಕೊಳೆ ರೋಗ ಬರುವ ಸಾಧ್ಯತೆ ಹೆಚ್ಚು . ಕಟ್ಟಿದ ಕಾಯಿಗೊಂಚಲಿನ ಮೇಲೂ ಬಿಡದೆ ಸುರಿವ ಮಳೆ ಹಾನಿ ಮಾಡುತ್ತದೆ. ಇಡೀ ಕಾಯಿಗೊಂಚಲೇ ಕೊಳೆತು ಕೆಳಗೆ ಸುರಿಯುತ್ತದೆ. ಅದೆಲ್ಲ ಸರಿಯಾಗಲಿಕ್ಕೆ ಸಿಂಪರಣೆ ಮಾಡಬೇಕು. ಸಿಂಪರಣೆಗೆ ಕನಿಷ್ಠ ಮಟ್ಟಕ್ಕಾದರೂ ಮಳೆ ನಿಲ್ಲಬೇಕು.
ಈಗಾಗಲೇ ಪು಼ಷ್ಯ ಮಳೆ ಶುರುವಾಗಿದೆ. ನಮ್ಮ ಕಡೆ ಪುಬ್ಬೆ ಅಂತೀವಿ.ಪುಬ್ಬೆ ಮಳೆಯಲ್ಲಿ ಗುಬ್ಬಕ್ಕಿಯೂ ನೆನೆಯಲ್ಲ ಅಂತೊಂದು ಮಾತಿದೆ. ಹಂಗಾದ್ರೆ ಸಾಕು ಅಂತೊಂದು ಆಸೆ. ಸದ್ಯಕ್ಕೆ ರಾಜಿನಾಮೆ ನೀಡಿರುವ ಸೂರ್ಯನನ್ನು ದಯಮಾಡಿ ಕೆಲಸಕ್ಕೆ ಬರಬೇಕು ಅಂತ ಬೇಡಿಕೊಳ್ಳುವುದೊಂದೇ ದಾರಿ.
ಮಳೆತಾಯಿ..ನೀನು ಜೀವದಾಯಿನಿ ನಿಜ. ಆದರೆ ಕರುಣೆಯಿರಲಿ . ಅಲ್ಪ ಮನುಷ್ಯರು ಮಾಡುವ ಅಪರಾಧಗಳ ಹೊಟ್ಟೆಗೆ ಹಾಕಿಕೊ. ಮಳೆ ಇಲ್ಲದ ಊರಿಗೂ ಒಂದೆರಡು ದಿನಗಳ ಮಟ್ಟಿಗೆ ಪ್ರವಾಸ ಹೊರಡು !
ಮಳೆ ನಕ್ಷತ್ರ ಬದಲಾದ ನಂತರ ಹಗಲಿಗೆ ಹಗಲಿನ ಲಕ್ಷಣ ಕಿಂಚಿತ್ತು ಬಂದಿದೆ. ಈ ದಿನದ ಮಳೆ ಯೋಗ ಹೇಗಿದೆ ಅಂತ ಕಾಯುವುದು ಮತ್ತು ಭೋರ್ಗರೆವ ಜಲಪಾತಗಳ ವಿಡಿಯೋ ನೋಡಿ ಜೀವ ನಡುಗಿಸಿಕೊಳ್ಳುವುದು ಸದ್ಯದ ದಿನಚರಿ.