ಸಮಗ್ರ ಕೀಟ ನಿರ್ವಹಣೆಗೆ  ಫೆರೋಮೋನ್ ಟ್ರ್ಯಾಪ್ ಸಹಾಯಕ

0
ಲೇಖಕರು: ವಿದ್ಯಾ ಮಹೇಶ್

ಹೆಚ್ಚುತ್ತಿರುವ ಜನಸಂಖ್ಯೆಯ ಅವಶ್ಯಕತೆಗೆ ತಕ್ಕಂತೆ ಆಹಾರ ಧಾನ್ಯ ಉತ್ಪಾದನೆ ಸ್ವಾತಂತ್ರ್ಯ ನಂತರದ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತ್ತು.ಈ ಅಗಾಧ ಪ್ರಮಾಣದ ಆಹಾರ ಬೇಡಿಕೆಯನ್ನು ಪೂರೈಸಲೆಂದೇ ಪಂಚವಾರ್ಷಿಕ ಯೋಜನೆಯಡಿ ಕೈಗೊಂಡ ಮಹತ್ತರ ಕಾರ್ಯವೆಂದರೆ “ಹಸಿರು ಕ್ರಾಂತಿ”.

ಅರಣ್ಯಭೂಮಿಯನ್ನು  ವ್ಯವಸಾಯ ಭೂಮಿಯನ್ನಾಗಿ ಪರಿವರ್ತಿಸಿ,ಏಕರೂಪ ಬೆಳೆಗಳನ್ನು ಬೆಳೆಯಲು ಶುರುಮಾಡಿದಾಗ ಬಂದೊದಗಿದ ಮೊದಲ ಹಿನ್ನೆಡೆಯೆಂದರೆ ಕೀಟಬಾಧೆ. ಏಕಬೆಳೆ ವ್ಯವಸಾಯ ಪದ್ಧತಿಯಲ್ಲಿ ಬಳಕೆಯಾಗತೊಡಗಿದ ರಾಸಾಯನಿಕದಿಂದ  ಗೊಬ್ಬರ ಸಂತುಷ್ಟವಾಗಿ ಬೆಳೆದ ಹೈಬ್ರಿಡ್ ತಳಿಗಳು ಅಪಾರ ಸಂಖ್ಯೆಯಲ್ಲಿ  ಹಾನಿಕಾರಕ ಕೀಟಗಳನ್ನು ಆಕರ್ಷಿಸಿದವು.

ಅಗಾಧ ಪ್ರಮಾಣದ ಆಹಾರ  ಲಭ್ಯವಾಗಿ ಅವುಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಶುರುವಿನಲ್ಲಿ ಕೃಷಿ ಇಲಾಖೆಗಳವರು  ತಿಳಿಸಿದ,  ಅನುಮೋದಿಸಿದ ಕೀಟನಾಶಕಗಳನ್ನು ರೈತರು ಉಪಯೋಗಿಸಲು ಶುರುಮಾಡಿದರು.

ಈ ಕೀಟನಾಶಕಗಳು ಶುರುವಿನಲ್ಲಿ ಕೀಟಗಳನ್ನು ಹತೋಟಿಗೆ ತಂದರೂ ತದನಂತರದಲ್ಲಿ ಯಾವ ಕೀಟನಾಶಕಗಳಿಗೂ ಬಗ್ಗದೆ ಮತ್ತಷ್ಟು ಮಗದಷ್ಟು ಹೆಚ್ಚಳವಾಗತೊಡಗಿದವು ಜೊತೆಗೆ ಕೀಟನಾಶಕಗಳ ನಿರೋಧಕತೆ ಬೆಳೆಸಿಕೊಂಡವು.

ಇದರ ಪರಿಣಾಮದಿಂದ   ಭೂಮಿಯ ಫಲವತ್ತತೆ ನಶಿಸುವುದರ ಜೊತೆಗೆ, ವಿಷಕಾರಿ ಅಂಶಗಳು ಭೂಮಿಯ ಒಡಲನ್ನು ಸೇರಿ ಕಲುಷಿತಗೊಳಿಸಿ,ಆಹಾರ ಸರಪಳಿಯ ಮೂಲಕ ನಮ್ಮ ದೇಹವನ್ನು ಸೇರಿದೆ.

ಸಾವಯವ ಕೃಷಿಯನ್ನು ಬಹಳಷ್ಟು ರೈತರು ರೂಢಿಗೆ ತಂದರು ಸಹ ಕೀಟಬಾಧೆಯು ಅವರೆಲ್ಲರೂ ಕಂಗೆಡುವಂತೆ ಮಾಡಿದೆ. ಇದರ ದುಷ್ಪರಿಣಾಮವನ್ನು ಅರಿತು ಭಾರತ ಸರ್ಕಾರವು ೧೯೮೫ ರಲ್ಲಿ  ,ಸಮಗ್ರ ಕೀಟ ನಿರ್ವಹಣೆಯನ್ನು ಅಭಿವೃದ್ಧಿ ಪಡಿಸಿತು .

ರಾಸಾಯಿನಿಕ ಕೀಟನಾಶಗಳನ್ನು  ಅತಿ ಕಡಿಮೆ ಬಳಸಿ ಅಥವಾ ಬಳಸದೇ ನೈಸರ್ಗಿಕ ವಿಧಾನಗಳನ್ನು ಕೃಷಿಯಲ್ಲಿ ಅಳವಡಿಸಿಕೊಳುವ ಮೂಲಕ ಸಮಗ್ರ ಕೀಟ ನಿರ್ವಹಣೆಯಲ್ಲಿ  ಫೆರೋಮೋನ್ ಟ್ರ್ಯಾಪ್ ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಫೆರೋಮೋನ್ ಎಂಬುದು ಕೀಟಗಳು ತಮ್ಮ ಸಂಗಾತಿಗಳನ್ನು ಆಕರ್ಷಿಸಲು ತಮ್ಮ ವಿಶಿಷ್ಟ ಗ್ರಂಥಿಗಳಿಂದ ಸ್ರವಿಸುವ ಪ್ರಮುಖ ರಾಸಾಯನಿಕ. ಈ ಫೆರೋಮೋನ್ ಗಾಳಿಯಲ್ಲಿ ಹರಡಿ  ತನ್ನ ಇರುವಿಕೆಯನ್ನು ಪ್ರಚುರಪಡಿಸಿ, ಕೀಟ ಸಂಗಾತಿಯನ್ನು ತನ್ನತ್ತ ಸೆಳೆಯಲು  ಪ್ರೇರೇಪಿಸುತ್ತದೆ.ಇವು ದೂರ ದೂರಕ್ಕೂ ಸಂವಹನ ನಡೆಸಲು ಅವುಗಳಿಗೆ ಸಹಕಾರಿ.ಹೀಗೆ ತನ್ನತ್ತ ಸೆಳೆದ ಸಂಗಾತಿಯನ್ನು ಸೇರಿ ವಂಶಾಭಿವೃದ್ಧಿ ಮಾಡುತ್ತವೆ‌.

ಕೀಟಗಳ ಈ ಸ್ವಾಭಾವಿಕ ಕ್ರಿಯೆಯನ್ನು ಉಪಯೋಗಿಸಿಕೊಂಡು ವಿಜ್ಞಾನಿಗಳು ಬೆಳೆಗಳನ್ನು ಬಾಧಿಸುವ ಕೀಟಗಳನ್ನು ಕೃತಕ ಫೆರೋಮೋನ್ ಬಳಸಿ ನಾಶಪಡಿಸುವ ಬಲೆಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಒಂದು ಹೆಣ್ಣು ಕೀಟವು ತನ್ನ ಪ್ರೌಢಾವಸ್ಥೆಯನ್ನು ತಲುಪಿ ಗಂಡು ಕೀಟವನ್ನು ಸೇರಿ,ನೂರಾರು ಫಲಿತ ಮೊಟ್ಟೆಗಳನ್ನುಗಿಡದ ಎಳೆಯ ಭಾಗಗಳಲ್ಲಿ ಇಡುತ್ತವೆ.ಹೀಗೆ ಇಟ್ಟ ಮೊಟ್ಟೆಗಳು ಒಡೆದು ಈಚೆ ಬರುವ ಹುಳುಗಳು ಗಿಡವನ್ನು ಒಂದೇ ಸಮ ತಿಂದು ಬೆಳೆಯನ್ನು ಹಾಳು ಮಾಡುತ್ತವೆ.

ಒಂದು ಹೆಣ್ಣು ಕೀಟವನ್ನು ಮೊಟ್ಟೆಯಿಡುವ ಮೊದಲೆ ಕೀಟ ಸಂಗಾತಿಗ ಕೊರತೆಯಾಗುವಂತೆ ಮಾಡಿದರೆ ನೂರಾರು ಕೀಟಗಳಿಂದ ಬೆಳೆಗಳನ್ನು ರಕ್ಷಿಸಬಹುದು. ಈ ಕೃತಕ ಫೆರೋಮೋನ್ ಗಳು ಸ್ವಾಭಾವಿಕ ಫೆರೋಮೋನ್ ಗಳಂತಯೇ ಕಾರ್ಯ ನಿರ್ವಹಿಸುತ್ತದೆ. ನಾನಾ ಬಗೆಯ ಕೀಟಗಳನ್ನು ನಿಯಂತ್ರಿಸಲು ಅದಕ್ಕೆ ಹೊಂದಾಣಿಕೆಯಾಗುವಂತ ಫೆರೋಮೋನ್ ಟ್ರ್ಯಾಪ್ ಅಥವಾ ಬಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here