ಕೃಷಿ ಮೇಳ 2026: ರೈತರ ಸಶಕ್ತೀಕರಣ ಮತ್ತು ಸುಸ್ಥಿರ ಕೃಷಿಗೆ ಆದ್ಯತೆ

0

ಧಾರವಾಡ ಕೃಷಿ ವಿಶ್ವವಿದ್ಯಾಲಯ ಪ್ರತಿವರ್ಷ ಆಯೋಜಿಸುವ ಕೃಷಿಮೇಳವು ದೇಶದ ಪ್ರತಿಷ್ಠಿತ-ಗಮನಾರ್ಹ ಕೃಷಿಮೇಳಗಳ ಸಾಲಿಗೆ ಸೇರಿದೆ. ​ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆಪ್ಟೆಂಬರ್ ೨೫ರಿಂದ ೨೮ರ ವರೆಗೆ ನಡೆಯಲಿರುವ ‘ಕೃಷಿ ಮೇಳ ೨೦೨೬’ ಉತ್ತರ ಕರ್ನಾಟಕದ ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಸೆಪ್ಟೆಂಬರ್ ೨೫ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ‘ಬೀಜ ಮೇಳ’ಕ್ಕೆ ಚಾಲನೆ ನೀಡಲಿದ್ದಾರೆ.  ಈ ಬಾರಿಯ ಮೇಳದ ವಿಶೇಷತೆ, ತಂತ್ರಜ್ಞಾನ ಮತ್ತು ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು “ಅಗ್ರಿಕಲ್ಚರ್ ಇಂಡಿಯಾ” ತಂಡವು ವಿಶ್ವವಿದ್ಯಾಲಯದ  ಕುಲಪತಿ ಡಾ. ಎನ್. ಬಿ. ಪ್ರಕಾಶ್ ಅವರೊಂದಿಗೆ ನಡೆಸಿದ ಸಂದರ್ಶನದ  ಮುಖ್ಯಾಂಶಗಳು ನಿಮ್ಮ ಮುಂದಿವೆ.

​ಪ್ರಶ್ನೆ: ಈ ಬಾರಿಯ ಕೃಷಿ ಮೇಳದ ಪ್ರಮುಖ ಧ್ಯೇಯವಾಕ್ಯ (Theme) ಏನು ಮತ್ತು ಇದರ ಹಿನ್ನೆಲೆಯೇನು?

ಡಾ. ಎನ್. ಬಿ. ಪ್ರಕಾಶ್: ಈ ವರ್ಷದ ಮೇಳವನ್ನು “ಸಶಕ್ತ ಮಹಿಳೆ – ಸುಸ್ಥಿರ ಕೃಷಿ” ಎಂಬ ಪ್ರಮುಖ ಧ್ಯೇಯದೊಂದಿಗೆ ಆಯೋಜಿಸಲಾಗುತ್ತಿದೆ. ವಿಶ್ವಸಂಸ್ಥೆಯು ೨೦೨೬ನೇ ವರ್ಷವನ್ನು ‘ಅಂತರರಾಷ್ಟ್ರೀಯ ಮಹಿಳಾ ರೈತರ ವರ್ಷ’ ಎಂದು ಘೋಷಿಸಿದೆ. ಕೃಷಿ ಉತ್ಪಾದನೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಅನನ್ಯ. ಹೀಗಾಗಿ ಮಹಿಳಾ ರೈತರನ್ನು ಸಶಕ್ತಗೊಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ.

​ಪ್ರಶ್ನೆ: ಮೇಳದಲ್ಲಿ ಭಾಗವಹಿಸುವ ರೈತರಿಗೆ ಮತ್ತು ಆಸಕ್ತರಿಗೆ ಏನೆಲ್ಲಾ ಪ್ರಮುಖ ಆಕರ್ಷಣೆಗಳಿರಲಿವೆ?

ಡಾ. ಎನ್. ಬಿ. ಪ್ರಕಾಶ್: ಈ ಬಾರಿ ಒಟ್ಟು ೫೯೪ ವಸ್ತುಪ್ರದರ್ಶನ ಮಳಿಗೆಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ೧೬೮ ಹೈಟೆಕ್ ಮಳಿಗೆಗಳು, ೭೫ ಕೃಷಿ ಯಂತ್ರೋಪಕರಣ ಮಳಿಗೆಗಳು, ಮತ್ತು ೨೮ ಟ್ರ್ಯಾಕ್ಟರ್/ಬೃಹತ್ ಯಂತ್ರಗಳ ಮಳಿಗೆಗಳು ಸೇರಿವೆ. ಬೀಜ ಮೇಳದಲ್ಲಿ ರಬಿ (ಹಿಂಗಾರು) ಹಂಗಾಮಿಗೆ ಅಗತ್ಯವಿರುವ ಸುಮಾರು ೩,೯೪೮ ಕ್ವಿಂಟಾಲ್ ಪ್ರಮಾಣದ ಗುಣಮಟ್ಟದ ಬೀಜಗಳನ್ನು ನೇರವಾಗಿ ಮಾರಾಟ ಮಾಡಲಾಗುತ್ತದೆ.

​ನಮ್ಮ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ೭ರಿಂದ ೮ ನೂತನ ಬೆಳೆ ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಅವುಗಳ ವೈಶಿಷ್ಟ್ಯ ತಿಳಿಸಲು ೨ ನಿಮಿಷದ ಕಿರು ವೀಡಿಯೊಗಳನ್ನು ಸಿದ್ಧಪಡಿಸಲಾಗಿದೆ.  ‘ವಿಸ್ಮಯ ಕೀಟ ಪ್ರಪಂಚ’ ಮಳಿಗೆ, ಫಲ-ಪುಷ್ಪ ಪ್ರದರ್ಶನ, ಜಾನುವಾರು ಮತ್ತು ಶ್ವಾನ ಪ್ರದರ್ಶನಗಳು ಪ್ರಮುಖ ಆಕರ್ಷಣೆಯಾಗಿರಲಿವೆ.

​ಪ್ರಶ್ನೆ: ಆಧುನಿಕ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಮೇಳದಲ್ಲಿ ಎಷ್ಟರಮಟ್ಟಿಗೆ ಅವಕಾಶ ಕಲ್ಪಿಸಲಾಗಿದೆ?

ಡಾ. ಎನ್. ಬಿ. ಪ್ರಕಾಶ್: ನಾವು ಆಧುನಿಕ ‘ಸ್ಮಾರ್ಟ್ ಕೃಷಿ’ಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಒಂದು ಎಕರೆ ವಿಸ್ತೀರ್ಣದಲ್ಲಿ ‘ಅಗ್ರಿ ಸ್ಟಾರ್ಟ್‌ಅಪ್ ಪ್ಯಾವಿಲಿಯನ್’ ನಿರ್ಮಿಸಲಾಗಿದೆ. ಇಲ್ಲಿ ೧೨ ನವೋದ್ಯಮಗಳು (Start-ups) ಭಾಗವಹಿಸುತ್ತಿದ್ದಾರೆ.

​ಬೋರ್‌ವೆಲ್ ನೀರು ನಿರ್ವಹಣಾ ವ್ಯವಸ್ಥೆ

​ಮೊಳಕೆ ಕಳೆ ತೆಗೆಯುವ ಯಂತ್ರ (Sprout Weeder)

​ದ್ರಾಕ್ಷಿ ಬೆಳೆಗಾರರಿಗೆ ನೈಜ-ಸಮಯದ (Real-time) ಕೃಷಿ ಸಲಹಾ ತಂತ್ರಜ್ಞಾನ

​ಕಡಲೆ ಚಿವುಟುವ ಯಂತ್ರ ಹಾಗೂ ಹೈಡ್ರೋಪೋನಿಕ್ ಮೇವು ಕೊಠಡಿಗಳ ಪ್ರದರ್ಶನವಿರಲಿದೆ.

​ಪ್ರಶ್ನೆ: ರಾಜ್ಯದಲ್ಲಿ ಬರಪೀಡಿತ ಪರಿಸ್ಥಿತಿ ಇರುವಾಗ, ರೈತರಿಗೆ ಬರ ನಿರ್ವಹಣೆ ಕುರಿತು ಏನು ಮಾರ್ಗದರ್ಶನ ನೀಡಲಾಗುತ್ತಿದೆ?

ಡಾ. ಎನ್. ಬಿ. ಪ್ರಕಾಶ್: ರಾಜ್ಯದ ೧೨೭ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಪೀಡಿತ ವಾತಾವರಣವಿರುವುದರಿಂದ, ಬರನಿರೋಧಕ ಬೆಳೆ ತಳಿಗಳು, ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ತಂತ್ರಜ್ಞಾನಗಳ ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದೆ. ಜೊತೆಗೆ, ರೈತರ ಸಂದೇಹಗಳಿಗೆ ನೇರವಾಗಿ ಪರಿಹಾರ ನೀಡಲು ವಿಜ್ಞಾನಿಗಳನ್ನೊಳಗೊಂಡ ‘ರೈತ ಸಲಹಾ ಕೇಂದ್ರ’ ನಿರಂತರವಾಗಿ ಕಾರ್ಯಾಚರಿಸಲಿದೆ.

​ಪ್ರಶ್ನೆ: ಬೃಹತ್ ಪ್ರಮಾಣದಲ್ಲಿ ಜನರು ಆಗಮಿಸುವುದರಿಂದ (ಅಂದಾಜು ಸುಮಾರು ೨೦ ಲಕ್ಷ) ಡಿಜಿಟಲ್ ಹಾಗೂ ಮೂಲಸೌಕರ್ಯ ವ್ಯವಸ್ಥೆ ಹೇಗಿದೆ?

ಡಾ. ಎನ್. ಬಿ. ಪ್ರಕಾಶ್: ಹೌದು, ಈ ಬಾರಿ ೧೫ರಿಂದ ೨೦ ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ.  ನೆಟ್‌ವರ್ಕ್ ಜ್ಯಾಮ್ ಆಗಿ UPI/QR ಕೋಡ್ ಪಾವತಿಗೆ ತೊಂದರೆಯಾಗದಂತೆ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ತಾತ್ಕಾಲಿಕ ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗಿದೆ.  ಪೊಲೀಸ್ ಇಲಾಖೆಯ ಸಹಯೋಗದಲ್ಲಿ ವಿಶಾಲವಾದ ಪಾರ್ಕಿಂಗ್ ಮತ್ತು ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಲಾಗಿದೆ.  ಸುದ್ದಿ ಮಾಧ್ಯಮಗಳ ವರದಿಗಾರರು ತಕ್ಷಣ ಮಾಹಿತಿ ಮತ್ತು ವೀಡಿಯೊ ರವಾನಿಸಲು ಚಾರ್ಜಿಂಗ್ ಹಾಗೂ ಹೈ-ಸ್ಪೀಡ್ ಇಂಟರ್ನೆಟ್ ಸೌಲಭ್ಯವಿರುವ ಪ್ರತ್ಯೇಕ ‘ಮಾಧ್ಯಮ ಕೊಠಡಿ’ ಸಜ್ಜುಗೊಳಿಸಲಾಗಿದೆ.

​ರೈತ ಬಾಂಧವರಿಗೆ ಕುಲಪತಿಗಳ ಸಂದೇಶ:

“ಕೃಷಿಯಲ್ಲಿ ತಂತ್ರಜ್ಞಾನದ ಅಳವಡಿಕೆ ಇಂದಿನ ಅಗತ್ಯ. ಆಸಕ್ತಿ ಇರುವ ಪ್ರತಿಯೊಬ್ಬ ರೈತರು ಮೇಳಕ್ಕೆ ಆಗಮಿಸಿ, ನಮ್ಮ ವಿಜ್ಞಾನಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ತಮ್ಮ ಕೃಷಿಯನ್ನು ಸುಸ್ಥಿರ ಹಾಗೂ ಲಾಭದಾಯಕವಾಗಿಸಿಕೊಳ್ಳಬೇಕು.”

LEAVE A REPLY

Please enter your comment!
Please enter your name here