ಲೇಖಕರು: ಕುಮಾರರೈತ, ಪತ್ರಕರ್ತರು

‘ಕೃಷಿಕರು ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿ ಮಾಡುವುದು ಉತ್ತಮ. ಇದರಿಂದ ಖರ್ಚನ್ನು ಸಾಧ್ಯವಾದಷ್ಟು ತಗ್ಗಿಸಬಹುದು. ಉತ್ತಮ ಇಳುವರಿ ಪಡೆಯಲು ಸುಸ್ಥಿರವಾದ ಸಾಕಷ್ಟು ವಿಧಾನಗಳಿವೆ. ಇವುಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ’ ಹೀಗೆನ್ನುತ್ತಾರೆ ಸಾವಯವ ಕೃಷಿಕ ಆಲೂರು ವಿಜಯಕುಮಾರ್.

ಭತ್ತದ ಬೆಳೆಯಲ್ಲಿ ಅತ್ಯುತ್ತಮ ಇಳುವರಿ ಪಡೆಯಲು ‘ಜೈವಿಕ ಸಾರ’ ಒದಗಿಸಿ ಯಶಸ್ವಿಯೂ ಆಗಿದ್ದಾರೆ. ಇದು ಇವರೆ ಸಂಶೋಧಿಸಿದ ವಿಧಾನ. ಇದಕ್ಕೆ ‘ಭೂ ನಿಧಿ’ ‘ಬಯೋಬಾಂಬ್’ಎಂದು ಹೆಸರಿಸಿದ್ದಾರೆ. ಈ ಸಾರವನ್ನು ಎಲ್ಲ ಬೆಳೆಗಳಿಗೂ ಬಳಸಬಹುದು. ಭತ್ತದ ಬೆಳೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆ.

ಗದ್ದೆಯನ್ನು ಉಳುಮೆ ಮಾಡಿ ಹದಗೊಳಿಸಬೇಕು. ದಪ್ಪ ಹೆಂಟೆಗಳನ್ನು ಒಡೆದು ಪುಡಿ ಮಾಡಬೇಕು. ಜಮೀನನ್ನು ಎರಡು ಮೂರು ಬಾರಿ ಹರಗಿದರೂ ಒಳ್ಳೆಯದು. ಕೆಸರು ಗದ್ದೆಗೆ ಗಟ್ಟಿಯಾದ ಬದುಗಳನ್ನು ನಿಮರ್ಿಸಿಕೊಳ್ಳಬೇಕು. ಪ್ರತಿಯೊಂದು ಪಾತಿಗೂ ಒಂದೊಂದೆ ಕಡೆಯಿಂದ ನೀರು ಒಳಹೋಗುವಂತೆ ಮಾಡಬೇಕು. ಪಾತಿಗೆ ನೀರು ಹಾಯುವಲ್ಲಿ ಸಣ್ಣ ಗುಂಡಿ ಮಾಡಬೇಕು. ಇದು ಒಂದೂವರೆ ಅಡಿ ಅಳ, ಮೂರು ಎರಡು ಅಡಿ ಅಗಲವಿದ್ದರೆ ಸಾಕು. ಚಿಕ್ಕ ಹಿಡುವಳಿಯಾಗಿದ್ದರೆ ಒಂದೇ ಗುಂಡಿ ಸಾಕು. ಹೆಚ್ಚು ವಿಸ್ತೀರ್ಣದ ಜಮೀನಾಗಿದ್ದರೆ ಅಗತ್ಯಕ್ಕೆ ತಕ್ಕಂತೆ ಗುಂಡಿ ನಿಮರ್ಾಣ ಮಾಡಿಕೊಳ್ಳಬೇಕು.

ಚೆನ್ನಾಗಿ ಕಳಿತಿರುವ ಕಾಂಪೋಸ್ಟ್ ಅಥವಾ ಎರೆ ಗೊಬ್ಬರ ಗೊಬ್ಬರ ಹತ್ತು ಕೆಜಿ, (ಇವೆಡನ್ನು ಸಮಪ್ರಮಾಣದಲ್ಲಿಯೂ ಬೆರೆಸಿಕೊಳ್ಳಬಹುದು), ಜಮೀನಿನ ಸುತ್ತಮುತ್ತಲು ಇರುವ ಗಿಡಗಳ ಸುಮಾರು ನಾಲ್ಕರಿಂದ ಐದು ಕೆಜಿಯಷ್ಟು ಹಸಿರು ಸೊಪ್ಪು ತೆಗೆದುಕೊಳ್ಳಬೇಕು. ಸೊಪ್ಪನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಎರಡರಿಂದ ನಾಲ್ಕು ಕೆಜಿಯಷ್ಟು ಹಿಂಡಿ ಬೇಕು. ಹಿಪ್ಪಿಂಡಿ, ಎಳ್ಳಿಂಡಿ, ಬೇವಿನ ಹಿಂಡಿ, ಕಡಲೇಕಾಯಿ ಹಿಂಡಿ ಇವುಗಳಲ್ಲಿ ಯಾವುದಾದರೊಂದು ಹಿಂಡಿ ತೆಗೆದುಕೊಂಡರೂ ಸಾಕು. ಇವುಗಳನ್ನೆಲ್ಲ ಒಟ್ಟು ಮಾಡಿ ರಂಧ್ರಗಳಿರದ ಗೋಣಿ ಚೀಲಕ್ಕೆ ಹಾಕಿ ಅದರ ಬಾಯಿಯನ್ನು ಭದ್ರವಾಗಿ ಕಟ್ಟಬೇಕು. ಇಷ್ಟು ಪ್ರಮಾಣದ ಪೋಷಕಾಂಶ ಒಂದು ಎಕರೆಗೆ ಸಾಕಾಗುತ್ತದೆ.

ಗದ್ದೆಗೆ ನೀರು ಹರಿಯುವ ಜಾಗದಲ್ಲಿ ಮಾಡಿದ ಗುಂಡಿಯಲ್ಲಿ ಈ ಚೀಲ ಇಟ್ಟು ಅದರ ಮೇಲೆ ಒಂದು ಕಲ್ಲು ಇಡಬೇಕು. ಪಾತಿಯೊಳಗೆ ನಿಧಾನವಾಗಿ ನೀರು ಹರಿಯುವಂತೆ ಮಾಡಬೇಕು. ಇದರ ಜೊತೆಗೆ ಚೀಲದಲ್ಲಿರುವ ಜೈವಿಕ ಸಾರವೂ ಬೆರೆತು ಗದ್ದೆಯೊಳಗೆ ಸೇರುತ್ತದೆ. ಎರಡು ದಿನಕ್ಕೊಮ್ಮೆ ಚೀಲವನ್ನು ಅಲುಗಾಡಿಸಿ ಇಡುವುದು ಸೂಕ್ತ.

ಹದಿನೈದು ದಿನಗಳಿಗೊಮ್ಮೆ ಗೊಬ್ಬರ ಬದಲಾಯಿಸುವುದು ಉತ್ತಮ. ಪ್ರತಿ ಬಾರಿ ಮೇಲೆ ಹೇಳಿದ ಪೋಷಕಾಂಶಗಳೆಲ್ಲವನ್ನು ಒಟ್ಟು ಮಾಡಿ ಒದಗಿಸಬೇಕಾಗಿಲ್ಲ. ಬೇರೆಬೇರೆ ಗಿಡಗಳಿಂದ ಸುಮಾರು ಹದಿನೈದು ಕೆಜಿಯಷ್ಟು ಹಸಿರು ಸೊಪ್ಪು ತೆಗೆದುಕೊಂಡು ಚೆನ್ನಾಗಿ ಕತ್ತರಿಸಿ ಚೀಲದಲ್ಲಿಡಬಹುದು. ಕಳಿತಿರುವ ಎರೆಗೊಬ್ಬರ ಅಥವಾ ಕಾಂಪೋಷ್ಟ್ ಗೊಬ್ಬರವನ್ನು ಹತ್ತು ಕೆಜಿಯಷ್ಟು ತುಂಬಿಸಿ ಇಡಬಹುದು. ಅಥವಾ ಮೂರ್ನಾಲ್ಕು ವಿಧದ ನಾಲ್ಕು ಕೆಜಿ ಹಿಂಡಿ ಹಾಕಬಹುದು. ಗೊಬ್ಬರ ಬದಲಾಯಿಸುವಾಗ ಚೀಲದಲ್ಲಿ ಉಳಿದಿರುವ ಅಲ್ಪ ಪ್ರಮಾಣದ ಪೋಷಕಾಂಶಗಳನ್ನು ಗದ್ದೆಯೊಳಗೆ ಚೆಲ್ಲಬೇಕು.

1 COMMENT

  1. Today’s surrond material utilise for agricultural activities, minimising expenditure and encourages organic foods to peoples.

LEAVE A REPLY

Please enter your comment!
Please enter your name here