ಇತ್ತೀಚೆಗೆ ಬಹಳಷ್ಟು ಜನ ಸಸ್ಯಗಳ ಬಗ್ಗೆ ಮಾತಾಡುವಾಗ, ಸಸ್ಯಗಳನ್ನು ನೆಡುವಾಗ ಸ್ಥಳೀಯ ಪ್ರಬೇಧದ ಸಸ್ಯಗಳನ್ನು (Native plants) ನೆಡುವುದರ ಬಗ್ಗೆ ಗಮನ ಹರಿಸಿ; ವಿದೇಶಿ ಮೂಲದ ಸಸ್ಯಗಳನ್ನು ಏಕೆ ಮಿತಗೊಳಿಸಬೇಕು ಎನ್ನುವುದಕ್ಕೆ ಸಾಕಷ್ಟು ಕಾರಣಗಳಿವೆ.
ಚಿತ್ರದಲ್ಲಿರುವುದು ಎಲಚಿ ಮರ. (Botanical name: Ziziphus mauritiana. Family: Rhamnaceae) ಈ ಮರ ಸಾಮಾನ್ಯವಾಗಿ ಕರ್ನಾಟಕದ ಬಯಲುಸೀಮೆಯ ಭಾಗಗಳಲ್ಲಿ ಸ್ವಾಭಾವಿಕವಾಗಿ ಬೆಳೆಯತ್ತದೆ. ಇದು ಈಗ ಹೂ ಬಿಟ್ಟಿದೆ. ಮೊನ್ನೆ ಮೈಸೂರಿನ ಪಾರ್ಕ್ ಒಂದರಲ್ಲಿ ವಾಕ್ ಮಾಡುವಾಗ ಕಣ್ಣಿಗೆ ಕಂಡ, ಭರಪೂರ ಹೂಗಳ ರಾಶಿಯಿದ್ದ ಈ ಮರದ ತುಂಬಾ ಚಿಟ್ಟೆಗಳ ರಾಶಿ ಇದ್ದವು.
ನಾನು ನೋಡಿದಂತೆ ಚಿಟ್ಟೆ, ಜೇನುಗಳು, ಕೆಲವು ಪಕ್ಷಿಗಳು ಸ್ಥಳೀಯ ಜಾತಿ ಮರಗಳ ಹೂಗಳಲ್ಲಿ ಮಕರಂಧ ಹೀರುವಂತೆ, ವಿದೇಶಿ ಮೂಲದ ಮರಗಳ ಹೂಗಳಲ್ಲಿ ಹೀರುವುದಿಲ್ಲ. ಹಾಗಾಗಿ ವಿದೇಶಿ ಮೂಲದ ಮರಗಳಲ್ಲಿ ಭರಪೂರ ಹೂಗಳಿದ್ದರೂ ಅಲ್ಲಿ ಮಕರಂಧ ಅರಸುವ ಜೀವಿಗಳು ಅಲ್ಲಿರುವುದಿಲ್ಲ ಅಥವಾ ಆ ಹೂಗಳಲ್ಲಿ ಮಕರಂಧ ಕಡಿಮೆಯೊ ಗೊತ್ತಿಲ್ಲ!
ಇನ್ನು ಹಣ್ಣುಗಳೂ ಅಷ್ಟೆ ಎಲಚಿಹಣ್ಣು ಹಲವು ಪಕ್ಷಿಗಳಿಗೆ ಅಲ್ಲದೆ ಕರಡಿ, ಪುನುಗುಬೆಕ್ಕಿನಂತೆ ಪ್ರಾಣಿಗಳಿಗೆ ನೆಚ್ಚಿನ ಹಣ್ಣು. ಇನ್ನೂ ಆಲದ ಜಾತಿಯ ಹಣ್ಣುಗಳಂತೂ ವಿವಿಧ ವನ್ಯಜೀವಿಗಳ ಪಾಲಿನ ಆಹಾರ ಬ್ಯಾಂಕು!! ಕದಂಬ, ಕಲಂ ಮರಗಳೂ ಹೂ ಬಿಟ್ಟಾಗಲೂ ಇದೇ ರೀತಿ ಜೇನು, ಚಿಟ್ಟೆಗಳು ಮರದ ತುಂಬಾ ಮುತ್ತಿಕೊಂಡು ತಮ್ಮ ಆಹಾರದ ಹಸಿವನ್ನು ನಿವಾರಿಸಿಕೊಳ್ಳುತ್ತವೆ.
ಎಲಚಿ ಹಣ್ಣುಗಳು ರಾಮಾಯಣದಲ್ಲಿ ಶಬರಿ ಶ್ರೀರಾಮನಿಗೆ ಕೊಟ್ಟ ಹಣ್ಣುಗಳು ಎಂದು ಹೇಳಲಾಗುತ್ತದೆ. ಹೀಗೆ ಇವು ‘ಪುರಾಣ ಪ್ರಸಿದ್ದ’. ಆದರೆ ಬಹಳಷ್ಟು ಜನ ಗಿಡಗಳನ್ನು ನೆಡುವಾಗ ಇವುಗಳ ಹೆಸರು ಕಡೆಯ ಸಾಲಿನಲ್ಲಿರುತ್ತವೆ. ನೋಡಲು ಎಲಚಿ ಹಣ್ಣಿನಂತೆ ಇರುವ ಈ ಹಣ್ಣಿಗಿಂತ ಗಾತ್ರದಲ್ಲಿ ತುಸು ದೊಡ್ಡದಾದ ಬೋರಹಣ್ಣು (Ziziphus jujuba) ಭಾರತೀಯ ಮೂಲದ್ದಲ್ಲ.