ತರಕಾರಿಗಳ ಕೃಷಿಗೆ ಪ್ರೋತ್ಸಾಹ ಅಗತ್ಯವಿರುವುದನ್ನು ರಾಜ್ಯ ಸರ್ಕಾರ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಅಗತ್ಯ ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಈಗಾಗಲೇ ರಾಜ್ಯದಲ್ಲಿ ಕೃಷಿಭಾಗ್ಯ ಯೋಜನೆ ಜಾರಿಯಲ್ಲಿದೆ. ಇದೇ ಯೋಜನೆಯಡಿ ಈ ಸಹಾಯಧಾನವನ್ನು ನೀಡಲು ನಿರ್ಧರಿಸಿದ್ದು 2018-19 ನೇ ಸಾಲಿನಲ್ಲಿ ”ತರಕಾರಿ ಬೀಜಗಳ ಕಿಟ್ ವಿತರಣೆ” ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆ ವ್ಯಾಪ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳು ಒಳಪಡುತ್ತವೆ. 15.00 ಕೋಟಿ ರೂ.ಗಳನ್ನು ವಿನಿಯೋಗಿಸಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.


ಈ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗಿದೆ.  ಪ್ರತಿ ಒಂದು ಎಕರೆಯಲ್ಲಿ ತರಕಾರಿ ಕೃಷಿಗೆ ಕನಿಷ್ಟ 4 ಸಾವಿರ ರೂ. ವೆಚ್ಚವಾಗುತ್ತದೆ ಎಂದು ಇಲಾಖೆ ಅಂದಾಜಿಸಿದೆ. ಇದರಲ್ಲಿ ಶೇಕಡ 50ರಷ್ಟನ್ನು ಸಹಾಯಧನವಾಗಿ ನೀಡಲಾಗುವುದು. ಹುರುಳಿಕಾಯಿ, ಟೊಮ್ಯಾಟೋ, ಬೆಂಡೆಕಾಯಿ, ಗೋರಿಕಾಯಿ, ಅಲಸಂದೆ, ಸೊಪ್ಪು, ಎಲೆಕೋಸು, ಹೀರೆಕಾಯಿ, ಹಾಗಲಕಾಯಿ ಹಾಗೂ ಅವರೆ ಸೇರಿದಂತೆ ಇತರೆ ತರಕಾರಿ ತಳಿಗಳ ಬೀಜಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.

ಆಯಾ ಜಿಲ್ಲೆಯ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಅಲ್ಲಿ ಅತ್ಯುತ್ತಮ ಇಳುವರಿ ನೀಡುವ ಸುಧಾರಿತ ತರಕಾರಿ ಬೀಜಗಳನ್ನು ವಿತರಿಸಲು ಆಲೋಚಿಸಿರುವುದು ಮತ್ತು ಸುಧಾರಿತ ಕೃಷಿಪದ್ಧತಿಗೆ ಒತ್ತು ನೀಡಲು ನಿರ್ಧರಿಸಿರುವುದು ಗಮನಾರ್ಹ.ಈ ಯೋಜನೆ ಕುರಿತಂತೆ ಇನ್ನೂ ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಸ್ಥಳೀಯ ಕಚೇರಿಗಳನ್ನು ಸಂಪರ್ಕಿಸಬಹುದು.

 

LEAVE A REPLY

Please enter your comment!
Please enter your name here