
ಕರ್ನಾಟಕದಲ್ಲಿ ವೈವಿಧ್ಯಮಯ ವಲಯಗಳಿವೆ. ಪ್ರತಿಯೊಂದು ವಲಯವೂ ವಿವಿಧ ಬಣ್ಣಗಳ ಮಣ್ಣುಗಳಿಂದ ಕೂಡಿದೆ. ವಿಭಿನ್ನ ಹವಾಮಾನ ಹೊಂದಿದೆ. ಇದರಿಂದಾಗಿ “ಹವಾಮಾನ ಆಧಾರಿತ ಬಹುಬೆಳೆ ಬೇಸಾಯ ಪದ್ಧತಿ” ಸಾವಿರಾರು ವರ್ಷಗಳಿಂದ ಚಾಲ್ತಿಯಲ್ಲಿದೆ.
ಕರ್ನಾಟಕದ ಸಾಗುವಳಿ ಮಣ್ಣಿನ ಶೇಕಡಾ 70 ಭಾಗ ಮಳೆಯನ್ನೇ ನಂಬಿ ಬೇಸಾಯ ಮಾಡುವ ಹೊಲಗಳೇ ಆಗಿವೆ. ಈ ಹೊಲಗಳಲ್ಲಿ ಬಹುಬೆಳೆ ಬೆಳೆಯುವ ಬಹುತೇಕ ಸಣ್ಣ ಹಿಡುವಳಿದಾರರು ಮಳೆಬೇಸಾಯವನ್ನೇ ಪ್ರಧಾನ ಕಸುಬಾಗಿಸಿಕೊಂಡಿರುವ ರೈತ ಸಮುದಾಯಗಳು.
ನಮ್ಮ ಮಳೆಬೇಸಾಯದಲ್ಲಿ ರೈತಸಮುದಾಯಗಳು ಬಹುಬೆಳೆಗಳನ್ನು ಬೆಳೆಯುವ ವಿಧಾನಗಳು ಬೆರಗುಗೊಳಿಸುತ್ತವೆ. ನಾಡಿಗೆ ಅಗತ್ಯವಾದ ಬಹುಬಗೆಯ ಆಹಾರ ಬೆಳೆಗಳು ಉತ್ಪತ್ತಿಯಾಗುತ್ತಿರುವುದು ಮಳೆಯನ್ನೇ ನಂಬಿರುವ ಹೊಲಗಳಲ್ಲೇ ಆಗಿದೆ.
ನಾಡಿನ ಮಹಿಳೆಯರಿಗೆ ಬಿತ್ತನೆಬೀಜ ಮೊಳೆಯುವಿಕೆ ಪರೀಕ್ಷೆ, ಬೀಜೋಪಚಾರ ಕ್ರಮಗಳು, ಇಡಿಯ ಹೊಲವನ್ನೆಲ್ಲಾ ಆವರಿಸುವ ಬಹುಬೆಳೆಗಳನ್ನು ಬೆಳೆಯುವ ಕೌಶಲ್ಯಗಳಿವೆ. ಅವರ ಜ್ಞಾನ ಈ ಹೊಲಗಳಲ್ಲೇ ಅನಾವರಣಗೊಳ್ಳುತ್ತದೆ.
ನಾಡಿನ ಜನಸಮುದಾಯಗಳಿಗೆ ಮೂಲಾಧಾರವಾಗಿರುವ ವಿವಿಧ ಬಗೆಯ (ಕಿರು)ಧಾನ್ಯಗಳು, ಕಾಳುಗಳು, ಎಣ್ಣೆಬೀಜಗಳು, ಸೊಪ್ಪುಗಳು, ಮಸಾಲೆ ಬೆಳೆಗಳು ಹಾಗೂ ಇನ್ನಿತರ ಆಹಾರೋತ್ಪನ್ನಗಳು ಮತ್ತು ಜಾನುವಾರುಗಳಿಗೆ ಅಗತ್ಯವಾಗಿರುವ ಮೇವು, ಕಸ-ಕಡ್ಡಿಗಳಿಂದಾಗುತ್ತಿರುವ ಗೊಬ್ಬರಗಳ ತಯಾರಿ ಇವೆಲ್ಲವುಗಳ ಹಿಂದೆ ಮಹಿಳೆಯರ ಪರಿಶ್ರಮವೇ ಅಧಿಕ.
ಇತ್ತೀಚೆಗೆ ಮಳೆಯಾಶ್ರಿತ ಹೊಲಗಳ ಮಣ್ಣು, ಸಾವಯವ ಅಂಶ, ತೇವಾಂಶ ಮತ್ತು ಜೀವಾಂಶಗಳಿಲ್ಲದೆ ದುರ್ಬಲಗೊಂಡಿದೆ. ನಕಲಿ ಬಿತ್ತನೆಬೀಜಗಳು, ರಾಸಾಯನಿಕ ಗೊಬ್ಬರಗಳು, ವಿಷಪೂರಿತ ಕೀಟ-ಕಳೆನಾಶಕಗಳು, ಬರಗಾಲ, ಅಕಾಲಿಕ ಮಳೆ, ಏಕಬೆಳೆ ಪ್ರವೃತ್ತಿ ಇನ್ನಿತರ ಕಾರಣಗಳಿಂದ ನಿಸ್ತೇಜಗೊಳ್ಳುತ್ತಿವೆ. ಬೇಸಾಯವನ್ನೇ ನೆಚ್ಚಿಕೊಂಡಿದ್ದ ರೈತ ಸಮುದಾಯಗಳು ಕಂಗಾಲಾಗಿವೆ. ಒಟ್ಟಾರೆ ಇಡಿಯ ಮಳೆಬೇಸಾಯ ವ್ಯವಸ್ಥೆಯೇ ಕುಸಿಯುತ್ತಿದೆ.
ಇಂದಿಗೂ ನಾವು ಸೇವಿಸುವ ವೈವಿಧ್ಯಮಯ ಆಹಾರೋತ್ಪನ್ನಗಳಲ್ಲಿ ಬಹುಪಾಲು ಪೂರೈಕೆಯಾಗುತ್ತಿರುವುದು ಮಳೆ ಆಶ್ರಯದಿಂದ ನಡೆಯುತ್ತಿರುವ ಬೇಸಾಯದಿಂದಲೇ ಆಗುತ್ತಿದೆ ಎನ್ನುವುದು ಗಮನಾರ್ಹ. ಆಹಾರ ಪೂರೈಕೆಯ ಜೊತೆಗೆ ಆರ್ಥಿಕ ಪ್ರಗತಿಗೂ ಸಹ ಈ ಹೊಲಗಳ ಪಾತ್ರ – ಸೇವೆ – ಕೊಡುಗೆಗಳನ್ನು ಅರ್ಥಮಾಡಿಕೊಳ್ಳಬೇಕು. ವಿಶೇಷವಾಗಿ ಮಳೆಯಾಶ‍್ರಯದ ಬೇಸಾಯ ನಡೆಸುತ್ತಿರುವ ಸಮುದಾಯಗಳ ಮಹಿಳೆಯರಲ್ಲಿರುವ ಸಾಮರ್ಥ್ಯ, ತಿಳಿವಳಿಕೆ, ಅನುಭವ, ಜಾಣ್ಮೆ ಇನ್ನಿತರ ಆಂಶಗಳನ್ನು ಗುರುತಿಸಿ, ಅವುಗಳು ಮತ್ತೆ ಚಾಲನೆಗೊಳ್ಳುವಂತಹ ಮಳೆಬೇಸಾಯ ಸಂಬಂಧಿತ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕಿದೆ. ಇದರಿಂದ ಕರ್ನಾಟಕದ ಮಳೆಬೇಸಾಯ ವ್ಯವಸ್ಥೆ ಮತ್ತೆ ಚೇತರಿಕೆ ಕಾಣುತ್ತದೆ.