ಬಸವನಹುಳು ನಿಯಂತ್ರಿಸಲು ಪಪಾಯ ತಂತ್ರ !

0
ಚಿತ್ರ ಮತ್ತು ಲೇಖನ: ನಾಗೇಶ್ ಹೆಗಡೆ

ಬಸವನಹುಳುಗಳು ನಿಧಾನ ಚಲನೆಗೆ ಪ್ರಸಿದ್ಧ ನೋಡಲು ಮುದ್ದುಮುದ್ದು. ಚಲನೆ ನಿಧಾನವಾದರೂ ಇವುಗಳುಆಹಾರ ಸೇವಿಸುವುದಂತೂ ಅತೀವೇಗ. ರಾತ್ರಿ ಕಳೆದು ಬೆಳಗಾಗುವುದರೊಳಗೆ ತೋಟಗಳ ಹಸಿರನ್ನೆಲ್ಲ ತಿಂದು ತೇಗಿರುತ್ತವೆ. ಇವುಗಳ ನಿಯಂತ್ರಣಕ್ಕೆ ರಾಸಾಯನಿಕಗಳನ್ನು ಸಿಂಪಡಿಸಿದರೆ ಪರಿಸರಕ್ಕೆ ಮತ್ತಷ್ಟೂ ಅಪತ್ತು. ಮತ್ತೆ ಇದನ್ನು ನಿಯಂತ್ರಿಸುವುದು ಹೇಗೆ ? ಪರಿಸರ ಕ್ಷೇತ್ರದ ಖ್ಯಾತ ತಜ್ಞ ನಾಗೇಶ್ ಹೆಗಡೆ ಅವರು ಬರೆದ ಲೇಖನದಲ್ಲಿ ಬಸವನಹುಳುಗಳನ್ನು ನಿಯಂತ್ರಿಸುವ ಹೊಳವುಗಳಿವೆ.

ನಮ್ಮ ಪತ್ರಿಕೋದ್ಯಮ ಕಾಲೇಜಿನಲ್ಲಿ ಅದೇ ತಾನೇ ಪರಿಸರ ಪಾಠ ಮುಗಿಸಿ ಹೊರಕ್ಕೆ ಬಂದಿದ್ದೆ. ಕ್ಲಾಸ್‌ ರೂಮಿನ ಕಿಟಕಿಯ ಬಳಿಯೇ ಬೆಳೆದು ನಿಂತಿದ್ದ ಪಪಾಯಾ ಗಿಡದಲ್ಲಿ ಈ ವಿಶಿಷ್ಟ ಕಾಯಿಗಳು ಕಂಡವು.  ಹತ್ತಿರ ಹೋಗಿ ನೋಡಿದರೆ ಅವೆಲ್ಲ ಬಸವನಹುಳುಗಳು. ನಗರದ ಅಂಗಡಿಗಳೆದುರು ದೀಪಾವಳಿ ʼಸೇಲ್ಸ್‌ʼಗೆ ಮುಗಿಬಿದ್ದ ಗಿರಾಕಿಗಳ ಹಾಗೆ ಒತ್ತೊತ್ತಾಗಿ ನಿಂತಿದ್ದವು.

ನಿಂತಿದ್ದವೊ, ಕೂತಿದ್ದವೊ ಅಥವಾ ಮಲಗಿದ್ದವೊ? ಕಾಲುಗಳೇ ಇಲ್ಲದ ಈ ಜೀವಿಗಳಿಗೆ ಎಲ್ಲವೂ ಒಂದೇ. ಪಾಪ, ಪಪಾಯಾ ಅಂದುಕೊಂಡೆ. ಅಂದೇ ರಾತ್ರಿ ಟ್ರೇನ್‌ ಹಿಡಿದು ತಾಳಗುಪ್ಪಕ್ಕೆ ಹೋದೆ. ಹೊನ್ನೆಮರಡು ಎಂಬಲ್ಲಿ ನೊಮಿತೊ ಮತ್ತು ಸ್ವಾಮಿ ದಂಪತಿ ನಡೆಸುತ್ತಿರುವ ಸಾಹಸ ಕ್ರೀಡಾ ಸಂಸ್ಥೆಗೆ 30 ವರ್ಷ ತುಂಬಿತ್ತು. ಲಿಂಗನಮಕ್ಕಿ ಜಲಾಶಯವೂ ತುಂಬಿತ್ತು. ಅವರನ್ನು ಅಭಿನಂದಿಸಲು ಹೋಗಬೇಕಿತ್ತು. ಹೋದೆ.

ಬೆಳಿಗ್ಗೆ ಟ್ರೇನ್‌ ಇಳಿದು, ಅವರೇ ವ್ಯವಸ್ಥೆ ಮಾಡಿದ್ದ ಚಂದದ ʼಅಜ್ಜನ ಮನೆʼ ಹೆಸರಿನ ಹೋಮ್‌ ಸ್ಟೇಯಲ್ಲಿ ಇಳಿದು ಮುಖ ತೊಳೆಯಲು ಹೊರಕ್ಕೆ ಬಂದರೆ ಅಲ್ಲಿ ಈ ಇನ್ನೊಂದು ಪಪಾಯಾ ಕಂಡಿತು. ನಿನ್ನೆ ಕಂಡಿದ್ದ ಪಪಾಯಾಕ್ಕೆ ಕಾಯಿಗಳೇ ಇರಲಿಲ್ಲ. ಇಲ್ಲಿ ನೋಡಿದರೆ ಎಲೆಗಳೇ ಇರಲಿಲ್ಲ.  ಎಲೆಗಳೆಲ್ಲ ಕೋತಿಗಳ ಪಾಲಾಗಿದ್ದವಂತೆ. ಅವು ಪಪಾಯಾ ಎಲೆಗಳನ್ನು ಕಂಡಲ್ಲಿ ಹರಿದು ತಿನ್ನುತ್ತವಂತೆ.

ಡೆಂಗೇ ಜ್ವರದಿಂದ ನರಳುವವರಿಗೆ ಪಪಾಯಾ ಎಲೆಗಳನ್ನು ಜಜ್ಜಿ ರಸ ಬಸಿದು ಕುಡಿಯಬೇಕೆಂದು ಆಯುರ್ವೇದ ವೈದ್ಯರೂ ಅಲೊಪಥಿ ಡಾಕ್ಟರ್‌ ಗಳೂ ಹೇಳುತ್ತಾರೆ. ಅದರಿಂದ ರಕ್ತದ ಪ್ಲೇಟ್ಲೆಟ್‌ ಜಾಸ್ತಿ ಆಗುತ್ತದಂತೆ. ರಕ್ತವೃದ್ಧಿಗೆ, ಜಠರ ಶುದ್ಧಿಗೆ, ಸಕ್ಕರೆ ಸಮತೋಲಕ್ಕೆ, ಊತಶಮನಕ್ಕೆ, ತ್ವಚೆಯ ಕಾಂತಿಗೆ, ಕೂದಲ ಹೊಳಪಿಗೆ… ಕೊನೆಗೆ ಕ್ಯಾನ್ಸರ್‌ ಚಿಕಿತ್ಸೆಗೆ ಅದಕ್ಕೆ ಇದಕ್ಕೆ …ಇತ್ಯಾದಿ.

ಅಂದಮೇಲೆ ಕೇಳಬೇಕೆ? ಎಷ್ಟೊಂದು ಅಂಗಡಿಗಳಲ್ಲಿ ಎಷ್ಟೊಂದು ಕಂಪನಿಗಳು ಎಷ್ಟೊಂದು ಬ್ರ್ಯಾಂಡ್‌ನೇಮ್‌ಗಳಲ್ಲಿ ಪಪಾಯಾ ಜೂಸ್‌ ಎಕ್ಸ್‌ಟ್ರಾಕ್ಟ್‌ಗಳನ್ನು ಮಾರುತ್ತಿವೆ. ಅದು ʼಔಷಧʼ ಅಲ್ಲ; ಬದಲಿಗೆ “ಹೆಲ್ಥ್‌ ಸಪ್ಲಿಮೆಂಟ್‌” ಆಗಿರುವುದರಿಂದ ಲೈಸೆನ್ಸ್‌ ಪಡೆಯದೇ ಯಾರು ಬೇಕಾದರೂ ರಸವನ್ನು ಮಾರಬಹುದು.

ಆಯುರ್ವೇದದಲ್ಲೂ ಪಪಾಯಾಕ್ಕೆ ನೂರಾರು ಸದ್ಗುಣಗಳನ್ನು ಲೇಪಿಸಲಾಗಿದೆ. ಕಫ, ನೆಗಡಿ, ಅಸ್ತಮಾ, ಯಕೃತ್ತಿನ ಊತ, ಇತ್ಯಾದಿ ಕಾಯಿಲೆಗಳಿಗೆ ಇದು ಉತ್ತಮ ಮದ್ದಂತೆ.  ಪಪಾಯಾ ನಮ್ಮ ದೇಶಕ್ಕೆ ಬಂದಿದ್ದೇ 16ನೇ ಶತಮಾನದಲ್ಲಿ. ಅದು ಹೇಗೆ ಆಯುರ್ವೇದದಲ್ಲಿ ಯಾವಾಗ ಸೇರ್ಪಡೆ ಆಯಿತೊ ಗೊತ್ತಿಲ್ಲ.

ಪಪಾಯಾ ಸೊಪ್ಪನ್ನು ಬಸವನ ಹುಳಗಳೂ ಮುಸುವ-ಮಂಗಗಳೂ ತಿನ್ನುತ್ತವೆ ಎಂದರೆ ನಾವೂ ದಿನಾಲೂ ತಿನ್ನೋಣ ಎಂದು ಎಲೆಗಳನ್ನು ತರಿದು ತಂದು ಜೂಸ್‌ ಮಾಡಲು ಹೋದೀರಿ, ಹುಷಾರು. ಇದು ತೀರಾ ಕಹಿ. ಜಾಸ್ತಿ ಕುಡಿದರೆ ಸೈಡ್‌ ಎಫೆಕ್ಟ್‌ ಏನೇನಾದೀತೆಂದು ಯಾರೂ ಹೇಳುತ್ತಿಲ್ಲ. ಆದರೂ ಕುಡಿಯೋಣ ಎಂದು ಮಂಗಾಟ ಮಾಡುವ ಮುನ್ನ ಹುಷಾರಾಗಿರಿ.

ಕಾರಣವಿಷ್ಟೆ:  

ಬಸವನ ಹುಳುಗಳಿಗೆ ಪಪಾಯಾ ರಸ ಪ್ರೀತಿ ಹೌದು. ನಿಮ್ಮ ತೋಟದಲ್ಲಿ ಈ ಹುಳುಗಳ ಹಾವಳಿ ತೀರಾ ಜಾಸ್ತಿಯಾದರೆ ಅವುಗಳನ್ನು ಆಕರ್ಷಿಸಿ ಒಂದೆಡೆ ಕೂಡಿ ಹಾಕಲು ಪಪಾಯಾ ಎಲೆಗಳನ್ನು ನೆಲದ ಮೇಲೆ ಅಲ್ಲಲ್ಲಿ ಹರಡಬೇಕಂತೆ ! ಬಸವನ ಹುಳುಗಳಿಗೆ ಪಪಾಯಾ ರಸ ಪ್ರೀತಿ ಹೌದು. ನಿಮ್ಮ ತೋಟದಲ್ಲಿ ಈ ಹುಳುಗಳ ಹಾವಳಿ ತೀರಾ ಜಾಸ್ತಿಯಾದರೆ ಅವುಗಳನ್ನು ಆಕರ್ಷಿಸಿ ಒಂದೆಡೆ ಕೂಡಿ ಹಾಕಲು (ಒಂದೋ) ಪಪಾಯಾ ಎಲೆಗಳನ್ನು ನೆಲದ ಮೇಲೆ ಅಲ್ಲಲ್ಲಿ ಹರಡಬೇಕಂತೆ.  ಅಥವಾ  ಒಂದು ತಟ್ಟೆಯಲ್ಲಿ ತುಸು ಬಿಯರ್‌ ಇಡಬೇಕಂತೆ. ಅವಕ್ಕೆ ಬಿಯರ್‌ ಇಷ್ಟ !

ಕೋತಿಗಳು ಸೊಪ್ಪು ತಿನ್ನುತ್ತವೆ ನಿಜ (ನಾಯಿಗಳು ಆಗೀಗ ಹುಲ್ಲು ತಿನ್ನುತ್ತವೆ). ಆದರೆ ಎಲ್ಲ ಕೋತಿಗಳೂ ಪಪಾಯಾ ಸೊಪ್ಪನ್ನು ಇಷ್ಟಪಟ್ಟು ಪದೇಪದೇ ತಿನ್ನುತ್ತವೆಯೆ? ಅಥವಾ ಜ್ವರವೋ, ಹೊಟ್ಟೆನೋವೋ ಬಂದಾಗ ಮಾತ್ರ ತಿನ್ನುತ್ತವೆಯೆ, ಎಷ್ಟು ತಿನ್ನುತ್ತವೆ ಎಂದು ಯಾರೂ ರೀಸರ್ಚ್‌ ಮಾಡಿದಂತಿಲ್ಲ. ಗೊತ್ತಿದ್ದವರು ತಿಳಿಸೋಣವಾಗಲಿ.ಈ ವಾರ, ನಮ್ಮ ಪತ್ರಿಕೋದ್ಯಮ ವಿದ್ಯಾರ್ಥಿನಿಯರನ್ನು ಮತ್ತೆ ಈ ಪಪಾಯಾ ಗಿಡದ ಬಳಿ ಒಯ್ದೆ. ಗಿಡದ ತುದಿಯಲ್ಲಿ ಬಸವನ ಹುಳಗಳ  ದಂಡು ಆಗಲೇ ಇನ್ನಷ್ಟು ಬೆಳೆದಿತ್ತು.

ಅದರೆದುರೇ ವಿದ್ಯಾರ್ಥಿನಿಯರಿಗೆ ಒಂದು ಚಿಕ್ಕ ಪಾಠ ಮಾಡಿದೆ. ಭಾರತಕ್ಕೆ ವಕ್ಕರಿಸಿದ ದಾಳಿಕೋರ ಜೀವಿಗಳ  ಬಗ್ಗೆ ಹೇಳಿದೆ (ಲಂಟಾನಾ, ಪಾರ್ಥೇನಿಯಂ, ಯುಪಟೋರಿಯಂ, ಆಫ್ರಿಕನ್‌ ಕ್ಯಾಟ್‌ಫಿಶ್‌ ಮತ್ತು ಈ ಚೋಟುದ್ದದ ಬಸವನಹುಳು Achatina fulica ಇತ್ಯಾದಿ). ಇವೆಲ್ಲ ನಮ್ಮ ಅರಣ್ಯ, ಜಲ ಮತ್ತು ಕೃಷಿ  ಸಂಪತ್ತಿಗೆ ಅದೆಷ್ಟು ಹಾನಿ ಮಾಡುತ್ತಿವೆ ಎಂದು ಹೇಳಿದೆ.

ನಮ್ಮ ಕಾಲೇಜಿನ ಈ ಸುಂದರ ಕ್ಯಾಂಪಸ್ಸಿಗೆ ಇವು ಎಲ್ಲಿಂದ ಬಂದವು ʼಪತ್ತೆ ಮಾಡಿʼ ಎಂದು ಸುಗ್ರೀವಾಜ್ಞೆ ಹೊರಡಿಸಿದೆ.ಕೆಲವರು  ಆಸುಪಾಸಿ ಹಳ್ಳಿಗಳಿಗೆ, ಹೊಲಗಳಿಗೆ ಹೋಗಿ ತನಿಖಾ ವರದಿಯನ್ನು ತಂದರು. “ಯಾವ ಹಳ್ಳಿಯಲ್ಲೂ ಇಲ್ಲ ಸಾರ್‌” ಎಂದರು.

ಹಾಗಿದ್ದರೆ ಇವು ಬಂದಿದ್ದೆಲ್ಲಿಂದ ಗೊತ್ತೆ? ಎಂದು ಕೇಳುತ್ತ ಸಮೀಪದಲ್ಲೇ ತಲೆ ಎತ್ತುತ್ತಿರುವ ಸರಕಾರಿ EWS ಬಹುಮಹಡಿ ವಸತಿ ಗೃಹವನ್ನು ತೋರಿಸಿದೆ.  “ಅಲ್ಲಿಂದ್ಲಾ? ಅದು ಆರ್ಥಿಕವಾಗಿ ಹಿಂದುಳಿದವರಿಗೆ ಸರಕಾರ ಕಟ್ಟುತ್ತಿರುವ ವಸತಿ ಸಮುಚ್ಚಯ ಸಾರ್‌. ಅಲ್ಲಿಂದ ಈ ಫುಲಿಕಾಗಳು ಬರಲು ಹೇಗೆ ಸಾಧ್ಯ?” ಒಬ್ಬ ಜಾಣೆ ಕೇಳಿದಳು.

“ಅವು ಹಾಗೇ ಇಡಿಯಾಗಿ ಸ್ನೇಲ್‌ ರೂಪದಲ್ಲಿ ಬಂದಿಲ್ಲ. ಎಲ್ಲೋ ದೂರದ ಹಳ್ಳದಿಂದ ಹೊರಟು ಮರಳಿನ ರಾಶಿಯೊಂದಿಗೆ ಟ್ರಕ್‌ ಏರಿ ಮೊಟ್ಟೆ ರೂಪದಲ್ಲಿ ಇಲ್ಲಿಗೆ ಬಂದಿವೆ. ಈಬಾರಿಯ ಭಾರೀ  ಮಳೆಯಲ್ಲಿ ಅವು ಹುಳುಗಳಾಗಿ, ಹೊಟ್ಟೆ ಹೊಸೆಯುತ್ತ ಕ್ಯಾಂಪಸ್ಸಿಗೆ ಬಂದಿವೆ” ಎಂದೆ.

“ನಮ್ಮಲ್ಲಿಗೇ ಏಕೆ ಬಂದ್ವು ಸಾರ್‌?” ಕೇಳಿದಳು ಮತ್ತೊಬ್ಬ ಜಾಣೆ.

“ನಮ್ಮ ಆವರಣದ ಸುತ್ತ ಎಲ್ಲ ಕಡೆ ರಾಗಿಯ ಹೊಲ ಇದೆ. ಅಲ್ಲೆಲ್ಲೂ  ಪಪಾಯಾ ಗಿಡ ಇಲ್ಲವಲ್ಲ. ಅದಕ್ಕೇ ಈ ಕಡೆ ಬಂದಿವೆ” ಎಂದೆ.

ಪಪ್ಪಾಯಿ ತೋಟಕ್ಕೆ ಮದ್ದೇನು ?

ನಾಗೇಶ್ ಹೆಗಡೆ ಅವರು ಬರೆದ ಮೇಲಿನ ಅನನ್ಯ ಲೇಖನ ಓದಿದಾಗ ತೋಟಗಳನ್ನು ರಕ್ಷಿಸಿಕೊಳ್ಳಲು ಪಪ್ಪಾಯಿ ಬಳಕೆ ಪರಿಣಾಮಕಾರಿ ಎಂಬುದು ತಿಳಿಯುತ್ತದೆ. ಆದರೆ ಪಪ್ಪಾಯಿ ತೋಟಗಳಿಗೆ ಇವು ಲಗ್ಗೆಯಿಟ್ಟರೆ ಏನು ಮಾಡುವುದು, ರಕ್ಷಣೆ ಹೇಗೆ ? ಲೇಖನದಲ್ಲಿಯೇ ತಿಳಿಸಿರುವ ಹಾಗೆ ಪಪಾಯ ತೋಟದ ಅಲ್ಲಲ್ಲಿತಟ್ಟೆಗಳಲ್ಲಿ ಸ್ವಲ್ಪಸ್ವಲ್ಪ ಬಿಯರ್ ಇಡಬಹುದು. ಹುಳುಗಳು ಅತ್ತ ಆಕರ್ಷಿತವಾಗಿ ಸೇರಿದಾಗ ಸಂಗ್ರಹಿಸಿ ನಿಯಂತ್ರಣ ಮಾಡಬಹುದು !

LEAVE A REPLY

Please enter your comment!
Please enter your name here