ಬಿಸಿಲು ರಣಬಿಸಿಲು… ಭೂಮಿಗೆ ಬೆಂಕಿ ಬಿದ್ದಿದೆಯೇನೋ ಎನಿಸುವಂಥ ವಾತಾವರಣ.. ತಂಪಾದ ಸ್ಥಳ ಹುಡುಕಿದರೂ ಸಿಗುತ್ತಿಲ್ಲ. ಫ್ಯಾನಿನ ಗಾಳಿಯೂ ಕ್ಷಣಾರ್ಧದಲ್ಲಿ ಬಿಸಿಯಾಗುತ್ತಿದೆ. ಇಂಥ ಬಿಸಿಲನ್ನು ಹಿಂದೆ ಕಂಡಿರಲಿಲ್ಲ ಎನ್ನುವುದು ಹಲವರ ಮಾತು. ಸಾಮಾನ್ಯವಾಗಿ ಬಯಲುಸೀಮೆಯಲ್ಲಿ ಬೇಸಿಗೆಯಲ್ಲಿ ಬಿಸಿಲಿನ ಝಳ ವಿಪರೀತ.
ಇದಕ್ಕೆ ಹೋಲಿಸಿದರೆ ಮಲೆನಾಡಿನ ಪರಿಸ್ಥಿತಿ ಪರವಾಗಿಲ್ಲ ಎನ್ನುವಂತಿತ್ತು. ಆದರೆ ಅಲ್ಲಿಯೂ ವಾತಾವರಣ ಬದಲಾಗಿದೆ ಎನ್ನುತ್ತಾರೆ ಅಲ್ಲಿಯ ಕೃಷಿಕರು. ಅವರು ಹಂಚಿಕೊಂಡಿರುವ ಅಭಿಪ್ರಾಯ ಅದಕ್ಕೆ ಬಂದಿರುವ ಪ್ರತಿಕ್ರಿಯೆ ನಿಮ್ಮ ಮುಂದಿದೆ. ಶ್ರೀನಿವಾಸಮೂರ್ತಿ ಅವರು ಕುದುರೆಮುಖ ಸನಿಹದಲ್ಲಿ ಕೃಷಿ ಮಾಡುತ್ತಿರುವವರು
ನಮ್ಮ ಮಲೆನಾಡಿನ ಹವಾಮಾನದಲ್ಲಿ ಇತ್ತೀಚೆಗೆ ವಿಚಿತ್ರ ವಿದ್ಯಮಾನಗಳು ಜರುಗುತ್ತಿವೆ.ಅದರೆ ಯಾರೂ ಈ ಬಗ್ಗೆ ಗಮನ ಹರಿಸಿದಂತಿಲ್ಲ. ಕೆಲವು ವರ್ಷಗಳಿಗೊಮ್ಮೆ ಪೂರ್ವ ಮುಂಗಾರು ಕೈಕೊಟ್ಟು ಮೇ ಅಂತ್ಯದಲ್ಲಿ ಮಳೆಯಾಗದಿರುವುದೂ, ಬಿರು ಬಿಸಿಲು ಹಾಗೂ ಸೆಕೆ ಇರುವುದೂ ಮಾಮೂಲಿ ಬಿಡಿ.ಉಷ್ಣಾಂಶ ೩೮°C ವರೆಗೆ ಹೋಗುವುದೂ ಇರುತ್ತದೆ.
ಆದರೆ ಇಂದಿನ ಸ್ಥಿತಿ ಬರೀ ಅದಷ್ಟೇ ಅಲ್ಲ. ಕಳೆದ ಎರಡು ವಾರಗಳಿಂದ ಮಧ್ಯಾಹ್ನದ ೨ – ೩ ರ ಸಮಯವಾಯಿತೆಂದರೆ ಬಿಸಿಲಿನ ಪ್ರಖರತೆ ಕಣ್ಣು ಬಿಡಲಾರದಷ್ಟು ಇರುತ್ತದೆ. ಎಷ್ಟು ನೀರು ಕುಡಿದರೂ ತೀರದ ದಾಹ. ಗದ್ದೆ ಬಯಲುಗಳ ಕತೆ ಹಾಗಿರಲಿ, ಅರೆಬರೆ ನೆರಳಿರುವ ತೋಟಗಳಲ್ಲೂ ಕೆಲಸ ಮಾಡಲಾರದ ಸ್ಥಿತಿ. ಇಡೀ ಶರೀರವೇ ಚೈತನ್ಯ ಕಳೆದುಕೊಂಡು ನಿಶ್ಚಲವಾಗಿಬಿಡುತ್ತದೇನೋ ಎಂಬ ಅನುಭವ.
ಬಹುಶಃ ವಾತಾವರಣದ ತೇವಾಂಶ ಪ್ರಮಾಣದಲ್ಲಿನ ಭಾರೀ ಇಳಿಕೆ ಕಾರಣವಿರಬಹುದು. ಇದು ನಿಜವೇ? ನಿಜವೇ ಆಗಿದ್ದಲ್ಲಿ ಕಾರಣವೇನು? ಅದರಿಂದ ಉಂಟಾಗಬಹುದಾದ ಪರಿಣಾಮಗಳೇನು?ಇದು ಮಾನವನ ಅಚಾತುರ್ಯಗಳ ಫಲವೇ? ಪ್ರಕೃತಿ ಸಹಜ ವಿದ್ಯಮಾನವೇ? ಹವಾಮಾನ ಇಲಾಖೆ ಇತ್ತ ಗಮನ ಹರಿಸಬೇಕಿತ್ತು.ಏಕೆಂದರೆ ಈ ಪ್ರದೇಶಗಳನ್ನೊಳಗೊಂಡ ಪಶ್ಚಿಮ ಘಟ್ಟಗಳು ಭಾರತ ಉಪಖಂಡದ ಹವಾಮಾನ ನಿರ್ದೇಶಿಸುವ ಹಾಗೂ ಮಳೆ ಹಂಚಿಕೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆಯಲ್ಲವೇ?
===============ಪ್ರತಿಕ್ರಿಯೆಗಳು====================
Murthy Kskmurthy ಅತಿಯಾದ ಕಾಡಿನ ನಾಶದಿಂದ ಆದ ಪರಿಣಾಮ…. ಮಲೆನಾಡಿನ ಸಾಂಪ್ರದಾಯಿಕ ಬೆಳೆ ಬಿಟ್ಟು ಏಕಾಏಕಿ ವಾಣಿಜ್ಯ ಬೆಳೆ ಬೆಳೆಯಲು ಕಾಡು ಕಡಿದದ್ದು….. ನೀರಿನ ಮೂಲದ ಮೂಲಗಳನ್ನು ಬಗೆದು ಆಬೆಳೆಗೆ ನೀರು ಹರಿಸಿದ್ದು…. ಸಹಜ ಮಳೆಕಾಡಲ್ಲಿದೆ ಮಳೆ ಆಗುತ್ತಿಲ್ಲ… ವಾತಾವರಣದ ತಂಪು ಕಡಿಮೆ ಆಗಿ ಮಲೆನಾಡು ರಣಗುಡುತ್ತಿದೆ…
Ravi Kumar Havalli ಇದು ಜಾಗತಿಕ ತಾಪಮಾನ ಹೆಚ್ಚಿ ಆಗಿರುವ ಎಫ್ಫೆಕ್ಟ್ ಇರಬಹುದು,ಅದರ ಜೊತೆಗೆ ಶಾಖ ಎಷ್ಟು ಇದೆ ಎಂದು ಮೊಬೈಲಲ್ಲಿ ನೋಡಿಕೊಳ್ಳಬಹುದು TV ಯವರೂ heat ಜಾಸ್ತಿ ಆಗಿದೆ ಅದ್ ಕುಡಿರಿ ಇದ್ ಕುಡಿರಿ ಹಾಂಗ ಆಗುತ್ತೆ ಹಿಂಗ್ ಆಗುತ್ತೆ ಅಂತ ಬೇರೆ ಹೆದರಿಸಿ ಜನ ಭಯ ಭೀತರಾಗಿ ಶಾಖದ ಪ್ರಖರತೆ ಹೆಚ್ಹು ಆಗುತ್ತಿದೆ ಅನ್ನಬಹುದು,
Srikrishna Sringeri ಇದು ಯಾರೂ ಏನು ಮಾಡಲು ಸಾಧ್ಯವಿಲ್ಲ . ನಾವು ಪ್ರತಿಯೊಬ್ಬರೂ ಆಲೋಚಿಸಿ , ಸೌರಶಕ್ತಿ ಜಾಸ್ತಿ ಬಳಕೆ ಮಾಡಬೇಕು . ಜಾಸ್ತಿ ಗಿಡ ಮರಗಳನ್ನು ನೆಡಬೇಕು. ವಾತಾವರಣ ಬಿಸಿ ಮಾಡುವುದರಿಂದ ಆಗುತ್ತಿರುವ ಬದಲಾವಣೆ ಗಳು …
ಎಲ್ಲದಕ್ಕೂ ಮುಖ್ಯ ಜನಸಂಖ್ಯೆ ಕಡಿಮೆ ಆಗಬೇಕು …
Vinayak Rao Sir no one in the administration is bothering about rising temperature, every body busy talking about so called “DEVELOPMENT ” unleashed by the rulers.Desertification of rich biodiversity is the consequences of this greed. I doubt it wl ever become a subject of debate in parliament.
===================================
ತೀರ್ಥಹಳ್ಳಿಯವರಾದ ಶ್ರೀಧರ್ ಅವರು ಕೃಷಿಕರು ಜೊತೆಗೆ ಖ್ಯಾತ ವಾಸ್ತುಶಿಲ್ಪಿ. ಇವರು ಸಹ ಬಿಸಿಲಿನ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇವರಿಬ್ಬರೂ ಏಕಕಾಲದಲ್ಲಿ ಈ ಅನುಭವಗಳನ್ನು ಹಂಚಿಕೊಂಡಿರುವುದು ಕಾಕತಾಳೀಯ. ಮುಖ್ಯವಾದ ಸಂಗತಿ ಎಂದರೆ ಮಲೆನಾಡನ್ನು ಭೀಕರವಾಗಿ ಕಾಡುತ್ತಿರುವ ಈ ಪರಿಯ ಬಿಸಿಲಿಗೆ ಕಾರಣವೇನು ಎಂಬುದು
ಇವತ್ತಿನ ಬಿಸಿಲಿನ ಝಳ ಹೇಗಿತ್ತು ಅಂದ್ರೆ
ಸೂರ್ಯ ತೀರಾ ನೇರವಾಗಿ ನಮಗೆ ಮುಖಾಮುಖಿ ಆಗಿದ್ದ. ಪ್ರಖರವಾಗಿದ್ದ.
ಇದ್ದಬದ್ದ ನೀರಿನ ಪಸೆಯನ್ನೆಲ್ಲ ನೆಲದಿಂದ ಹೀರುವ ನಿರ್ದಯಿ ಆಗಿದ್ದ.
ಯಾರು ಬಲಿಷ್ಠ ಹೇಳು ಅಂತ ಪಂದ್ಯಕ್ಕೆ ಬಿದ್ದಿದ್ದ.
ಸೋತ ಸುಣ್ಣವಾಗಿಹೋಗಿದ್ದ ನರಮಾನವ, ನೆಲ, ಗಿಡ ಬಳ್ಳಿಗಳೆಲ್ಲ
ಆತನನ್ನೂ ದಿಟ್ಟಿಸಿ ನೋಡುವುದಕ್ಕೂ ಸಾಧ್ಯವಾಗದೇ ನಿಶ್ಯಕ್ತವಾಗಿದ್ವು.
ತನ್ನ ವಿಜಯದ ಶಂಖವನ್ನು ಊದಿದ ಸೂರ್ಯ. ದಿನವಿಡೀ ಅದು ಮೊಳುಗ್ತಾನೇ ಇತ್ತು.
ಯಾಕೆ ಸೂರ್ಯ ನಿನಗೆ ಈ ಹಠ?
ಅಹಂಕಾರ?
ನಿನ್ನ ಬಗೆಗೇ ನಿನಗೆ ಅನುಮಾನವೇ?
ಅಥವ
ಮರೆಯುವ ನಮಗೆ ನೆನಪಿಸೋ ಆಸೆಯೋ ನಿನಗೆ???
Srinivasa Murthy ಸಾರ್ ನಾನು ತೋಟದಲ್ಲಿ ಕೆಲಸ ಮಾಡುವಾಗ ಮಧ್ಯಾಹ್ನ ೩ ರ ಸಮಯದಲ್ಲಿ ತಲೆ ತಿರುಗಿ ಬೀಳುವಂತಾಗಿತ್ತು. ಹೇಗೋ ಮನೆಗೆ ಬಂದು ನಿಂಬು – ಉಪ್ಪು ಶರಬತ್ತು ಕುಡಿದು ಮಲಗಿಯೇಬಿಟ್ಟೆ. ಎಂತಹ ಬಿರುಬಿಸಿಲಿಗೂ ಹೆದರದ ನನಗೂ ಹೀಗಾಗುತ್ತಿದೆ.ನಂತರ ಹಲವಾರು ಜನರಿಗೆ ಹೀಗೆಯೇ ಆಗುತ್ತಿರುವ ಬಗ್ಗೆ ತಿಳಿಯಿತು.
oornima Shetty Poornima ನಿಜ.ಬಿಸಿ ಗಾಳಿಯು ಬೀಸುತ್ತಿದೆ…ಮಳೆ ಬಂದು ಹೋದ ಮರುದಿನವೇ ಈ ವಿಚಿತ್ರ ಅನುಭವ…..
ಜಾಗತೀಕ ತಾಪಮಾನ ಇಂಥ ವಿದ್ಯಮಾನಗಳಿಗೆಲ್ಲ ಕಾರಣ ಎನ್ನುತ್ತಾರೆ. ಕಳೆದ ಬಾರಿ ಅತಿಯಾದ ಮಳೆಯಾದರೂ ನದಿಗಳಲ್ಲಿ ನೀರಿಲ್ಲ. ನೆಲ ಕೊತಕೊತನೆ ಕುದಿಯುತ್ತಿದೆ ಏನೋ ಎನಿಸುತ್ತಿದೆ. ಬೇಸಿಗೆ ಮಳೆ ಬಂದರೂ ನಿಲ್ಲದ ಧಗೆಧಗೆ. ಮರಗಳ ಸಂಖ್ಯೆ ಕಡಿಮೆಯಾಗಿರುವುದು ಇದಕ್ಕೆಲ್ಲ ಕಾರಣವೇ… ಈ ಬಗ್ಗೆ ಜನತೆ-ವಿಜ್ಞಾನಿಗಳು-ಸರ್ಕಾರ ಚಿಂತಿಸಬೇಕಲ್ಲವೆ ?