1.ನಮ್ಮ ರಾಜ್ಯದಲ್ಲಿ ಭತ್ತಕ್ಕೆ ಬರುವ ರೋಗಗಳಲ್ಲಿ ಅತೀ ಹೆಚ್ಚು ತೀವ್ರವಾದ ರೋಗವೆಂದರೆ ಬೆಂಕಿ ರೋಗ.ಇದರಿಂದ ನೂರಕ್ಕೆ ನೂರರಷ್ಟು ನಷ್ಟ ಹೊಂದಬಹುದು.
2.ಭತ್ತ ಬೆಳೆಯುವ ಎಲ್ಲೆಡೆ ಈ ರೋಗದ ಹಾವಳಿ ಕಂಡು ಬರುತ್ತದೆ.
3.ಈ ರೋಗವು ಸಸಿಮಡಿಯಿಂದ ಹಿಡಿದು ಕಾಳು ಕಟ್ಟುವವರೆಗೂ ಕಂಡುಬರುವುದು. ಸಸಿಮಡಿಯಲ್ಲಿ ಅಥವಾ ನಾಟಿ ಮಾಡಿದ ಪೈರಿನಲ್ಲಿ ಮೊದಲಿಗೆ ಎಲೆಗಳ ಮೇಲೆ ತಿಳಿಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಈ ಚುಕ್ಕೆಗಳು ದೊಡ್ಡದಾಗಿ ವಜ್ರಾಕಾರ ಹೊಂದುತ್ತವೆ.
4.ರೋಗ ತೀವ್ರವಾದಂತೆ ಚುಕ್ಕೆಗಳು ಹೆಚ್ಚಾಗಿ ಸಸಿಯನ್ನು ಸಂಪೂರ್ಣವಾಗಿ ಆವರಿಸಿ ಒಣಗಲು ಕಾರಣವಾಗುತ್ತದೆ. ಆದ್ದರಿಂದ ಈ ರೋಗಕ್ಕೆ ಬೆಂಕಿರೋಗ ಎಂದು ಹೆಸರು.
5.ರೋಗ ಲಕ್ಷಣಗಳು ಕೇವಲ ಎಲೆಯ ಮೇಲಷ್ಟೆ ಅಲ್ಲದೆ ಕಾಂಡ, ಗಿಣ್ಣು ಹಾಗೂ ತೆನೆಗಳ ಮೇಲೂ ಕಂದು ಬಣ್ಣದ ಮಚ್ಚೆಯಂತೆ ಕಾಣಿಸಿಕೊಳ್ಳುತ್ತವೆ.
6.ಹೂವು ಹಾಗೂ ತೆನೆಗೆ ಬರುವ ಸಮಯದಲ್ಲಿ ತೆನೆಯ ಬುಡಭಾಗದಲ್ಲಿ 2.5 ರಿಂದ 4.0 ಸೆಂ.ಮೀ. ನಷ್ಟು ಭಾಗ ಹಸಿರು ಅಥವಾ ಹಳದಿ ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗುತ್ತದೆ.
7.ಕಾಳುಕಟ್ಟುವ ಮೊದಲೇ ತೆನೆಯ ಬುಡಭಾಗಕ್ಕೆ ಈ ರೋಗ ಭಾದಿಸಿದರೆ ತೀವ್ರವಾದ ನಷ್ಟವಾಗುವುದು. ಕಾಳು ಕಟ್ಟಿದ ನಂತರ ರೋಗ ತಗುಲಿದರೆ ಕಾಳು ಸದೃಡವಾಗದೆ ಹೋಗುವುದು.
ಈ ರೋಗವು ಹಗಲಿನ ಉಷ್ಟಾಂಶ ಶೇಕಡಾ (30 ಸೆ.) ಹಾಗೂ ರಾತ್ರಿ ಉಷ್ಣಾಂಶ (20 ಸೆ.) ಮತ್ತು ಗಾಳಿಯಲ್ಲಿ ಹೆಚ್ಚು ತೇವಾಂಶವಿದ್ದಾಗ (ಶೇ.92). ದಿನದ ಬೆಳಕು 14 ಗಂಟೆಗಳು ಮತ್ತು ರಾತ್ರಿ 10 ಗಂಟೆಗಳ ಕಾಲ ಕತ್ತಲಿರುವ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರೊಂದಿಗೆ ಅತಿಯಾದ ಸಾರಜನಕ ಬಳಕೆ, ರೋಗ ನಿರೋಧಕ ಶಕ್ತಿ ಅಥವಾ ರೋಗ ಸಹಿಷ್ಣುತೆ ಇಲ್ಲದ ತಳಿಗಳ ಬಳಕೆ ಮತ್ತು ಹಸಿರೆಲೆ ಗೊಬ್ಬರ ಅಥವಾ ಕೊಟ್ಟಿಗೆ ಗೊಬ್ಬರದ ಬಳಕೆ ಕಡಿಮೆಯಾದಲ್ಲಿ ರೋಗ ತೀವ್ರವಾಗುವುದು. ಮುಂಗಾರಿನ ಕಾಲದಲ್ಲಿ ಬಿತ್ತನೆ ಮತ್ತು ನಾಟಿ ಮಾಡದಿದ್ದರೆ ರೋಗದ ಹಾವಳಿ ಉಲ್ಬಣಗೊಳ್ಳುವುದು.
ರೋಗ ನಿರ್ವಹಣೆ :
ಗದ್ದೆಯಲ್ಲಿ ಹಾಗೂ ಗದ್ದೆ ಬದುಗಳಲ್ಲಿ ಕಳೆ ತೆಗೆದು ಜಮೀನಿನಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ತಕ್ಷಣ ಸಾರಜನಕಯುಕ್ತ ರಾಸಾಯನಿಕ ಗೊಬ್ಬರ ಕೊಡುವುದನ್ನು ನಿಲ್ಲಿಸಬೇಕು. ಆದಷ್ಟು 2 ಹಂತಗಳಲ್ಲಿ ಮೇಲುಗೊಬ್ಬರವಾಗಿ ಕೊಡಬೇಕು.
ಸಾವಯುವ ಹಾಗೂ ನೈಸರ್ಗಿಕ ಕೃಷಿ ಅನುಸರಿಸುತ್ತಿರುವ ರೈತರು 10 ಲೀಟರ್ ನೀರಿಗೆ 1 ಲೀಟರ್ ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಿ. ರಾಸಾಯನಿಕ ಸಿಂಪರಣೆಗಾಗಿ 4 ಗ್ರಾಂ. ಕಾರ್ಬನ್ ಡೈಜಿಂ 50 ಡಬ್ಲ್ಯು.ಪಿ. / 0.6 ಗ್ರಾಂ ಟ್ರ್ಯೈಸೈಕ್ಲೊಜೋಲ್ 75 ಡಬ್ಲ್ಯು.ಪಿ. / 1 ಮಿ.ಲೀ. ಎಡಿಫಿನ್‍ಫಾಸ್ 50 ಇ.ಸಿ. / 1 ಮಿ.ಲೀ. ಕಿಟಾಜಿನ್ 48 ಇ.ಸಿ. ಇವುಗಳಲ್ಲಿ ಯಾವುದಾರೊಂದನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸಂತೋಷ್ ನಿಲುಗುಳಿ
ವಿಜ್ಞಾನಿ ಗಳು ಮತ್ತು ತೋಟಗಾರಿಕಾ ಸಲಹೆಗಾರರು
ಸಿದ್ಧಾರ್ಥ ಅಗ್ರಿ ಸಲ್ಯೂಷನ್ಸ
9916359007