ನಮ್ಮ ರಾಜ್ಯದ ಬಹುತೇಕ ಜಲಾಶಯಗಳು ಜೂನ್- ಆಗಸ್ಟ್ ತಿಂಗಳಲ್ಲಿ ತುಂಬಬೇಕು. ಹಾಸನದ ತೇಜೂರಿನಿಂದ ಹಾವೇರಿ ಶಿಗ್ಗಾವಿವರೆಗಿನ ಕೆಲವು ಕೆರೆಗಳು ಭರ್ತಿ ಆಗೋದು ಹಿಂಗಾರಿ ಮಳೆಯಲ್ಲಿ ಎಂಬುದು ರಾಜ್ಯದ ಬರ. ವೀಕ್ಷಣೆ, ಕೆರೆ ಸುತ್ತಾಟ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಈ ವರ್ಷ ಭತ್ತ ಬೆಳೆಯುವ ಗಂಗಾವತಿ, ಸಿಂಧನೂರು, ರಾಯಚೂರು,ಯಾದಗಿರಿ ಪ್ರಮುಖ ಪ್ರದೇಶಗಳಲ್ಲಿ ಮಳೆ ಕೊರತೆ ಇದೆ.
ಕೆಲವೆಡೆ ಒಂದು ಬೆಳೆ ಪಡೆಯುವುದು ಕಷ್ಟ. ಇತ್ತ ಮಲೆನಾಡಿನಲ್ಲಿ ಮಳೆ ಇಲ್ಲದ್ದರಿಂದ ಬಯಲು ಸೀಮೆಯ ಅಣೆಕಟ್ಟು ಭರ್ತಿ ಆಗಿಲ್ಲ. ಮೈಸೂರು ಸೀಮೆಯಲ್ಲಿ ಕೂಡಾ ಇದೇ ಪರಿಸ್ಥಿತಿ. ಕಬ್ಬು ಒಣಗುತ್ತಿದೆ. ಜೋಳ, ನೆಲಗಡಲೆ, ಈರುಳ್ಳಿಗಳು ಒಣಗುತ್ತಿರುವ ಚಿತ್ರಗಳು ಗದಗ, ಹುಬ್ಬಳ್ಳಿ ಪ್ರದೇಶಗಳಲ್ಲಿ ಕಾಣಬಹುದು.
ಈಗ ಹದಿನೈದು ದಿನಗಳ ಈಚೆಗೆ ಕರ್ನಾಟಕದ ಅರ್ಧ ಭಾಗ ಸುತ್ತಾಡಿದ್ದೇನೆ,ಎಲ್ಲೆಡೆ ಮಳೆ ಕೊರತೆ ಮಾತೇ ಇತ್ತು. ಈಗಲೂ ಹವಾಮಾನ ಇಲಾಖೆ ನೀಡಿದ ಮಳೆ ಮುನ್ಸೂಚನೆ ನಿರೀಕ್ಷೆಯಂತೆ ಮಳೆ ಬರಬಹುದೇ? ಅನುಮಾನ ಇದೆ. ಲಭ್ಯ ಮಾಹಿತಿ ಪ್ರಕಾರ ಸುಮಾರು 120 ತಾಲೂಕು ಬರ ಪೀಡಿತ ಪ್ರದೇಶವಾಗುವ ಸಾಧ್ಯತೆ ಇದೆ. ಇದು ಇನ್ನೂ ಜಾಸ್ತಿ ಆದೀತು.
ಅಣೆಕಟ್ಟೆಯಿಂದ ನೀರು ಬಿಡಬೇಕು, ಕೆರೆ ನೀರು ಕೃಷಿ ಬಳಕೆಗೆ ಬೇಕೆಂದು ಒಣಗುವ ಬೆಳೆ ನೋಡಿ ರೈತರು ಕೋರುತ್ತಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಪ್ರಸ್ತುತ ರಾಜ್ಯದ ಜಲಾಶಯಗಳ ನೀರಿನ ಲಭ್ಯತೆ ಸ್ಥಿತಿ ನಮ್ಮ ಅಧಿಕಾರಿಗಳಿಗೆ ಚನ್ನಾಗಿ ಗೊತ್ತಿದೆ, ರೈತರ ಒತ್ತಡವೂ ಅರ್ಥವಾಗಿದೆ. ಆದರೆ ಮುಂದೆ ಮಳೆ ಬಂದರೂ ಜಲಾಶಯ ತುಂಬುವುದು ಯಾವ ಖಾತ್ರಿ ಇಲ್ಲ, ಇರುವ ನೀರು ಕೃಷಿಗೆ ಖಾಲಿ ಆದ್ರೆ ಮುಂದೆ ಕುಡಿವ ನೀರಿಗೆ ಸಮಸ್ಯೆ ಇದೆ. ಈಗ ನ್ಯಾಯಾಲಯ ತೀರ್ಪು ಪ್ರಕಾರ ತಮಿಳುನಾಡಿಗೆ ಕಾವೇರಿ ನೀರು ಹೋಗಬೇಕು!ಇಂಥ ಬಿಕ್ಕಟ್ಟಿನ ಸ್ಥಿತಿ ರಾಜ್ಯದಲ್ಲಿ ಇದೆ. ಮಹಾ ನಗರಗಳ ಹೊಟೆಲ್, ವಸತಗೃಹದಲ್ಲಿ ಟ್ಯಾಂಕರ್ ನೀರು ಬಳಕೆ ಈಗಾಗಲೇ ಶುರುವಾಗಿದೆ. ನಮ್ಮ ಸಚಿವರಿಗೆ ಈ ಪರಿಸ್ಥಿತಿ ಅರಿವು ಇದೆಯೇ? ಗೊತ್ತಿಲ್ಲ.
ರಾಜ್ಯದ ಯಾವ ಯಾವ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಬೇಕು? ಕೇಂದ್ರದ ನೆರವು ಕೇಳುವುದು ಹೇಗೆ? ಚರ್ಚೆ ಏನೋ ನಡೆದಿದೆ, ಪತ್ರಿಕಾ ಹೇಳಿಕೆ ಬರುತ್ತಿದೆ. ಇರುವ ನೀರು ಮಿತವಾಗಿ ಬಳಸಲು ಜನಜಾಗೃತಿ ಮೂಡಿಸುವುದು ಹೇಗೆ? ಆಡಳಿತ ಸ್ವಲ್ಪವೂ ಯೋಚಿಸುತ್ತಿಲ್ಲ. ಮುಂದಿನ ಬರ ಊಹಿಸಿ ತಕ್ಷಣ ಕಾರ್ಯ ಪ್ರವೃತ್ತರಾಗದಿದ್ದರೆ ಪರಿಸ್ಥಿತಿ ಬಹಳ ಕಷ್ಟವಿದೆ. ಇಷ್ಟು ತಂತ್ರಜ್ಞಾನ ಬೆಳೆದಿರುವ ಈ ಕಾಲದಲ್ಲಿ ಇನ್ನೂ ನೆಲ ನೋಡದ ಅಧಿಕಾರಿಗಳಿಂದ ಸಭೆಯಲ್ಲಿ ವರದಿ, ಅಂಕಿಸಂಖ್ಯೆ ಪಡೆಯುತ್ತಾ ಕಾಲ ಹರಣ ಸಾಗಿದೆ. ಒಂದು ತಂಡ ಪ್ರವಾಸ ಮಾಡಿ ತಕ್ಷಣ ನದಿ ಕಣಿವೆ ಸ್ಥಿತಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೇ? ಇತ್ತ ಕರಾವಳಿ ನದಿಗಳು ಸೊರಗಿದೆ. ನದಿ ನಾಡಿಗೆ ಭಯಂಕರ ಜಲಕ್ಷಾಮ ಬರುವಂತೆ ಕಾಣುತ್ತಿದೆ.
ಕೈ ಮೀರಿದ ಮೇಲೆ ಗಡಿಬಿಡಿಯಲ್ಲಿ ರಾತ್ರಿ ಟಾರ್ಚ್ ಲೈಟ್ ನಲ್ಲಿ ಕಟ್ಟಕಡೆಗೆ ಬರ ಅಧ್ಯಯನ ಪ್ರವಾಸ ಮಾಡಲು ಹೊರಡುವ ಬದಲು ತಕ್ಷಣ ಸ್ಥಿತಿ ಅರಿಯಲು ಈಗ ಕಾರ್ಯಪ್ರವೃತ್ತರಾಗಬೇಕಲ್ಲವೇ? ರಾಜ್ಯದ ಒಟ್ಟು ಕೃಷಿ ಭೂಮಿಯ ಶೇಕಡಾ 60ಪ್ರದೇಶ ನೀರಾವರಿ ಸಾಧ್ಯವೇ ಇಲ್ಲ. ಪ್ರಮುಖ ಎಲ್ಲ ನದಿಗಳಿಂದ 3400 ಟಿ ಎಂ ಸಿ ಮಾತ್ರ ನೀರು ಲಭ್ಯವಿದೆ. ಶೇಕಡಾ 40 ಪ್ರದೇಶ ಎರೆ ಹೊಲ, ಇಲ್ಲಿ 300 ಮಿಲಿ ಮೀಟರ್ ಮಳೆ ಸುರಿದರೂ ಅನ್ನ ಕೊಡುವ ನೆಲೆ ಇದೆ.
ಟಿ ಆರ್ ಸತೀಶ್ಚಂದ್ರ ಸಮಿತಿ ವರದಿ ನೀರಾವರಿ ಮಾಡಿದಾಗ್ಯೂ ಹಲವು ಸಮಸ್ಯೆ ಉಳಿದ ಬಗ್ಗೇ 1984ರ ಕಾಲಕ್ಕೆ ಅಧ್ಯಯನ ಮಾಡಿದೆ. ಬಯಲು ನೆಲೆಯಲ್ಲಿ ಮರ ಬೆಳೆಸಲು ಹೇಳಿದೆ, ಜಲ ಸಂರಕ್ಷಣೆ, ಮಿತ ಬಳಕೆ ಸೂಚಿಸಿದೆ.ಇವು ಸರಕಾರಕ್ಕೆ ಮರೆತೇ ಹೋಗಿದೆ.
ನಾನೊಮ್ಮೆ ಕರ್ನಾಟಕ ಬರ ಕುರಿತು ಸ್ಲೈಡ್ ಪ್ರದರ್ಶನ ಉಪನ್ಯಾಸ ಮಾಡುವಾಗ ಒಂದು ತಾಸು ಕುಳಿತು ಕೇಳಿದ ಪ್ರಮುಖ ಸಚಿವರೊಬ್ಬರು ಬರ ಇಷ್ಟು ತೀವ್ರ ಇತ್ತೆಂದು ಗೊತ್ತೇ ಆಗಲಿಲ್ಲ ಎಂದು 2016ರಲ್ಲಿ ಹೇಳಿದ್ದರು. ನಾನು ಆಗ ನನ್ನ ಬರ ಪ್ರವಾಸದ ಪುಸ್ತಕ ಕ್ಷಾಮ ಡಂಗುರ ಕೊಟ್ಟು ಓದಲು ಹೇಳಿದ್ದೆ, ನಂತರ ನದಿ ಕಥನ ನೀಡಿದ್ದೆ. ಆಡಳಿತಕ್ಕೆ ಪರಿಸರದ ಸಣ್ಣ ಜ್ಞಾನವೂ ಇಲ್ಲದಿದ್ದರೆ ನಾಳೆ ಅನ್ನ ಸಿಗುವುದು ಕಷ್ಟ, ಈ ಕಾಂಕ್ರೀಟ್, ಕಬ್ಬಿಣ ತಿನ್ನಲು ಬರುವುದಿಲ್ಲ.