ರೈತರ ಸ್ವಾವಲಂಬಿ ಬದುಕಿಗೆ ಸಮಗ್ರ ಕೃಷಿ ಮಾತ್ರ ಖಾತರಿ

0

ಕೃಷಿಕರ ಜೀವನೋಪಾಯ ಭದ್ರತೆಯನ್ನು ಖಾತ್ರಿ ಮಾಡಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ.  ಹಸಿರುಕ್ರಾಂತಿ ಪ್ರಯತ್ನಗಳ ಮೂಲಕ ಭಾರತ ಆಹಾರ ಭದ್ರತೆ ಸಾಧಿಸಿದರೂ, 2047ರೊಳಗೆ ವಿಶ್ವದ ಆಹಾರ ಬುಟ್ಟಿಯಾಗುವ ನಿಟ್ಟಿನಲ್ಲಿ ಶಕ್ತಿಶಾಲಿ ರಾಷ್ಟ್ರವಾಗುವ ಸಾಧ್ಯತೆ ಇದೆ. ಇದನ್ನು ಸಾಧಿಸಲು, ಉತ್ಕೃಷ್ಟ ತಳಿಗಳು, ಹೆಚ್ಚಿನ ಸಾಂದ್ರತಾ ಬೆಳೆ ಪದ್ಧತಿಗಳು ಮತ್ತು ಸ್ಥಿರತೆಯಿಂದ ಯುಕ್ತವಾದ ನವೀನ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಎಂಎಸ್ಎಮ್‌ಇ, ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು.

ಅವರು ಇಂದು ವಿಕಸಿತ ಭಾರತಕ್ಕಾಗಿ ತೋಟಗಾರಿಕೆ (ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ) ಘೋಷಣೆ ಅಡಿ ಬೆಂಗಳೂರು ಸನಿಹದ ಹೆಸರಘಟ್ಟದಲ್ಲಿ ಆಯೋಜಿತವಾಗಿರುವ ರಾಷ್ಟ್ರೀಯ ತೋಟಗಾರಿಕೆ ಮೇಳ-2025 ಉದ್ಘಾಟಿಸಿ ಮಾತನಾಡಿದರು.

ಕೃಷಿವಿಜ್ಞಾನಿಗಳು ಮತ್ತು ವಿಸ್ತರಣಾ ಅಧಿಕಾರಿಗಳು ಕೀಟನಾಶಕಗಳು ಮತ್ತು ರಾಸಾಯನಿಕ ಗೊಬ್ಬರಗಳ ಅಜಾಗರೂಕ ಬಳಕೆಯಿಂದ ಉಂಟಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಇದರಿಂದ ಸುರಕ್ಷಿತ ಆಹಾರದ ಉತ್ಪಾದನೆಯನ್ನು ಖಾತ್ರಿ ಮಾಡಬಹುದು ಎಂದು ಅವರು ಸಲಹೆ ನೀಡಿದರು.

ಸಮಾಜದ ಆರ್ಥಿಕ ಸ್ಥಿತಿಯ ಅವಿರತ ಬದಲಾವಣೆಗಳ ಕಾರಣ, ತಕ್ಷಣದ ಅಡುಗೆ (Ready-to-Cook) ಮತ್ತು ತಕ್ಷಣ ಸೇವನೆಗೆ ತಯಾರಾದ (Ready-to-Eat) ಉತ್ಪನ್ನಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧಿತ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಎಂಎಸ್‌ಎಂಇ (MSME) ವಲಯ ಸಹಾಯ ಮಾಡಬಹುದು ಎಂದು ಅವರು ಒತ್ತಿಹೇಳಿದರು.

ತೋಟಗಾರಿಕೆಯ ಮೂಲಕ ಎರಡನೇ ಹಸಿರು ಕ್ರಾಂತಿಯ ಅಗತ್ಯವಿದೆ.  ತೋಟಗಾರಿಕೆ ವೃದ್ದಿ ದರವು (7%) ಕೃಷಿ ವೃದ್ದಿ ದರಕ್ಕಿಂತ(4%) ಶೇಕಡಾ 3 ರಷ್ಟು   ಹೆಚ್ಚು ಇದೆ. ಈ ಕಾರಣದಿಂದ, ತೋಟಗಾರಿಕೆ ರೈತರು ಕಳೆದ ದಶಕದಲ್ಲಿ ತಮ್ಮ ಆದಾಯವನ್ನು ಈಗಾಗಲೇ ದ್ವಿಗುಣಗೊಳಿಸಿದ್ದಾರೆ ಎಂದು ಹೇಳಬಹುದು. ಅಲ್ಲದೆ, ಹೆಚ್ಚಿದ ಪೋಷಕಾಂಶಗಳನ್ನು ಒಳಗೊಂಡ ಹೊಸ ತೋಟಗಾರಿಕೆ ತಳಿಗಳ ಅಭಿವೃದ್ಧಿ ಮತ್ತು ತೋಟಗಾರಿಕೆ ಉತ್ಪನ್ನಗಳ ಪರಿಷ್ಕರಣೆಯ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ನೀತಿ ಆಯೋಗದ ಸದಸ್ಯ ಪ್ರೊ. ರಾಮೇಶ್ ಚಂದ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ, ಶಿವಮೊಗ್ಗ UAHS‌ನ ಮಾಜಿ ಕುಲಪತಿ ಹಾಗೂ ICAR-IIHR, ಸಂಶೋಧನಾ ಸಲಹಾ ಸಮಿತಿಯ ಅಧ್ಯಕ್ಷ ಡಾ. ಎಂ.ಕೆ. ನಾಯಕ್, ಐಸಿಎಆರ್, ನವದೆಹಲಿಯ ತೋಟಗಾರಿಕೆ ವಿಭಾಗದ ಸಹಾಯಕ ಮಹಾನಿರ್ದೇಶಕ ಡಾ. ವಿ.ಬಿ. ಪಟೇಲ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ICAR-IIHR ಸಂಸ್ಥೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗಮನಾರ್ಹ ಸಾಧನೆ ಮಾಡಿದ ರೈತರಿಗೆ “ಶ್ರೇಷ್ಠ ರೈತ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ  ICAR-IIHR ಸಂಸ್ಥೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗಮನಾರ್ಹ ಸಾಧನೆ ಮಾಡಿದ  ರೈತರಿಗೆ “ಶ್ರೇಷ್ಠ ರೈತ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯಿಂದ ತೋಟಗಾರಿಕೆ ಸಂಬಂಧಿತ ಕಿರು ಕೈಪಿಡಿ ಲೋಕಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳ 2025 ರ ಆಯೋಜನಾ ಸಮಿತಿ ಅಧ್ಯಕ್ಷ,  ICAR-IIHR ನ ನಿರ್ದೇಶಕ ಡಾ. ತುಷಾರ್ ಕಾಂತಿ ಬೇಹೇರಾ ಅವರು  ಅತಿಥಿಗಳನ್ನು ಸ್ವಾಗತಿಸಿದರು.

ಫೆಭ್ರವರಿ 28, ಮಾರ್ಚ್ 1 ರಂದು ಸಹ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ICAR-IIHR) ಆವರಣದಲ್ಲಿ ತೋಟಗಾರಿಕೆ ಮೇಳ ನಡೆಯುತ್ತದೆ.ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಇಲ್ಲಿನ ತಂತ್ರಜ್ಞಾನಗಳ ಮಾಹಿತಿ ಪ್ರಯೋಜನ ಪಡೆಯಲು ಸಂಸ್ಥೆಯ ಕೃಷಿವಿಜ್ಞಾನಿ ಡಾ. ನಂದೀಶ್  ತಿಳಿಸಿದರು

LEAVE A REPLY

Please enter your comment!
Please enter your name here