ಬೆಂಗಳೂರು, ಮಾರ್ಚ್ 20: ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿನ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಟ್ಟು 1726 ಕೆರೆಗಳಿರುತ್ತವೆ. ಈ ವ್ಯಾಪ್ತಿಯಲ್ಲಿನ ಕೆರೆಗಳ ದುರಸ್ಥಿ ಕಾಮಗಾರಿಗಳನ್ನು ಅವುಗಳ ದುರಸ್ಥಿಯ ಅಗತ್ಯತೆ ಹಾಗೂ ಅನುದಾನದ ಲಭ್ಯತೆ ಮೇರೆಗೆ ಕ್ರಮ ವಹಿಸಲಾಗುವುದು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್. ಭೋಸರಾಜು ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಾಂತರಾಮ್ ಬುಡ್ನ ಸಿದ್ದಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಗೆ ಸಂಬಂಧಿಸಿದಂತೆ 2024-25ನೇ ಸಾಲಿನಲ್ಲಿ ದುರಸ್ತಿಯಲ್ಲಿದ್ದ ಸಣ್ಣ ಕೆರೆಗಳ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. 2024-25ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಸದರಿ ಜಿಲ್ಲೆಯ ಕೆರೆಗಳನ್ನು ಅಭಿವೃದ್ಧಿ ಮಾಡಲು ಇದುವರೆಗೆ ರೂ.422.66 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಬಿಡುಗಡೆ ಮಾಡಿದ ಅನುದಾನವನ್ನು ಸಂಪೂರ್ಣವಾಗಿ ವಿನಿಯೋಗಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಗೆ ಸಂಬಂಧಿಸಿದಂತೆ 2024-25ನೇ ಸಾಲಿನಲ್ಲಿ ಸಣ್ಣ ಕೆರೆಗಳನ್ನು ಅಭಿವೃದ್ಧಿ ಮಾಡಲು 2702 ಸಣ್ಣ ನೀರಾವರಿ ಕೆರೆಗಳ ನಿರ್ವಹಣೆ ಲೆಕ್ಕ ಶೀರ್ಷಿಕೆಯಡಿ ಧಾರವಾಡ ಜಿಲ್ಲೆಗೆ ರೂ. 28.40 ಲಕ್ಷ ಬಿಡುಗಡೆ ಮಾಡಲಾಗಿದ್ದು, ರೂ 28.40 ಲಕ್ಷ ವಿನಿಯೋಗಿಸಲಾಗಿದೆ. ಉತ್ತರ ಕನ್ನಡ ರೂ 40.40 ಲಕ್ಷ ಬಿಡುಗಡೆ ಮಾಡಲಾಗಿದ್ದು, ರೂ. 40.40 ಲಕ್ಷ ಅನುದಾನ ವಿನಿಯೋಗಿಸಲಾಗಿದೆ ಎಂದು ತಿಳಿಸಿದರು.