ಆಹಾರದಲ್ಲಿ ಕ್ಯಾಲ್ಸಿಯಂ ಕೊರತೆಯು ಜಾಗತಿಕವಾಗಿ ವ್ಯಾಪಕವಾದ ಕಳವಳಕಾರಿ ಅಂಶವಾಗಿದೆ. ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಜನರು ಈ ಅಗತ್ಯ ಪೋಷಕಾಂಶವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುತ್ತಿಲ್ಲ. ಕ್ಯಾಲ್ಸಿಯಂ ಮಾನವನ ಆರೋಗ್ಯದಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ಮುಖ್ಯವಾಗಿ ಬಲವಾದ ಮೂಳೆಗಳನ್ನು ಕಾಪಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಉತ್ತಮ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅಂಶವಿರುವ ಪೌಷ್ಟಿಕಾಂಶ ಭರಿತ ಆಹಾರ ಸೇವನೆಯು ಗರ್ಭಧಾರಣೆಯ ತೊಡಕುಗಳು, ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ತೊಂದರೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿರ್ಬಂಧಿಸುವ ಗುಣ ಹೊಂದಿದೆ.
ಇದರ ಮಹತ್ವವನ್ನು ಗುರುತಿಸಿ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ICAR-IIHR) ಎಲ್ಮ್ ಆಯ್ಸ್ಟರ್ ಅಣಬೆಗಳನ್ನು (ಹೈಪ್ಸಿಜಿಗಸ್ ಉಲ್ಮಾರಿಯಸ್) ಕ್ಯಾಲ್ಸಿಯಂನೊಂದಿಗೆ ಬಲಪಡಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ಪ್ರಕ್ರಿಯೆಯು ಹೆಚ್ಚಿನ ಒತ್ತಡದಲ್ಲಿ ನಿರ್ವಾತ ಒಳಸೇರಿಸುವಿಕೆಯನ್ನು ಒಳಗೊಂಡಿರುತ್ತದೆ, ಇದು ಸಾಮಾನ್ಯ ಅಣಬೆಗಳಿಗೆ ಹೋಲಿಸಿದರೆ ಕ್ಯಾಲ್ಸಿಯಂ ಸಾಂದ್ರತೆಯಲ್ಲಿ 202.27% ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇದನ್ನು ಭಾರತದಲ್ಲಿ ಮೊದಲ ಬಾರಿಗೆ IIHR ವಾಣಿಜ್ಯ ಉತ್ಪಾದನೆಗೆ ಪರಿಚಯಿಸಿತು. ಅಣಬೆಗಳು ಆರಂಭದಲ್ಲಿ ಬೂದು ಬಣ್ಣದಲ್ಲಿರುತ್ತವೆ. ಪಕ್ವವಾದಾಗ ಮಸುಕಾಗುತ್ತವೆ. ಕಿವಿರುಗಳು ಮತ್ತು ಕಾಂಡಗಳು ಬಿಳಿಯಾಗಿರುತ್ತವೆ. ಅಣಬೆಗಳು ದೊಡ್ಡದಾಗಿ ಮತ್ತು ತಿರುಳಿರುವವು, ಅತ್ಯುತ್ತಮ ರುಚಿಯನ್ನು ಹೊಂದಿರುತ್ತವೆ.
ಈ ಅಣಬೆಗಳು ಗೊಂಚಲು ಮಾದರಿಯಲ್ಲಿ ಇರುತ್ತವೆ . 25-30°C ನಲ್ಲಿ ಇವುಗಳ ಜೀವಿತಾವಧಿ 36-48 ಗಂಟೆಗಳು. ಪಾಶ್ಚರೀಕರಿಸಿದ (2 ಗಂಟೆಗಳ ಕಾಲ 80-85°C)/ ಕ್ರಿಮಿನಾಶಕ (121°C, 15 ನಿಮಿಷಗಳ ಕಾಲ 15 ಪೌಂಡ್ ಒತ್ತಡ) ಭತ್ತದ ಒಣಹುಲ್ಲಿನ ಮೇಲೆಈ ಅಣಬೆ ತಳಿಯ ವಾಣಿಜ್ಯ ಕೃಷಿಯನ್ನು ಮಾಡಬಹುದು. ಇದು 25-30°C ತಾಪಮಾನದ ವ್ಯಾಪ್ತಿಯಲ್ಲಿ 25-30 ದಿನಗಳಲ್ಲಿ ಮೊಳಕೆಯೊಡೆಯುವುದನ್ನು ಪೂರ್ಣಗೊಳಿಸುತ್ತದೆ.
ಚೀಲಗಳನ್ನು ತೆರೆದ 4-7 ದಿನಗಳ ನಂತರ ಮರಿ ಅಣಬೆ (primordium) ಪ್ರಾರಂಭವಾಗುತ್ತದೆ ಮತ್ತು 2-3 ದಿನಗಳಲ್ಲಿ ಕೊಯ್ಲಿಗೆ ಪಕ್ವವಾಗುತ್ತದೆ. ಮೊಳಕೆಯೊಡೆಯುವಿಕೆಯಿಂದ ಕೊಯ್ಲು ಮಾಡುವವರೆಗೆ ಈ ವಿಧದ ಅಣಬೆಯ ಒಟ್ಟು ಬೆಳೆ ಚಕ್ರವು 37-42 ದಿನಗಳು. ಈ ಅವಧಿಯಲ್ಲಿ ಸರಾಸರಿ 60-80% ಜೈವಿಕ ದಕ್ಷತೆಯನ್ನು ಪಡೆಯಬಹುದು. ಇದನ್ನು ತಾಜಾ, ಒಣ ಅಥವಾ ಅಣಬೆ ಪುಡಿಯಾಗಿ ಮಾರಾಟ ಮಾಡಬಹುದು. 20 ರಿಂದ 25°C ನಡುವಿನ ತಾಪಮಾನದ ವ್ಯಾಪ್ತಿಯನ್ನು ಹೊಂದಿರುವ ಭಾರತದ ಯಾವುದೇ ಪ್ರದೇಶದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯಲ್ಲಿಯೂ ಬೆಳೆಯಬಹುದು.
ಕೊಡಗು, ಚಿಕ್ಕಮಂಗಳೂರು, ಕೊಡೈಕೆನಾಲ್, ಊಟಿ, ಕೊನ್ನೂರ್, ಈಶಾನ್ಯ ರಾಜ್ಯಗಳಾದ ಮಣಿಪುರ, ಮೇಘಾಲಯ, ಮೊಜೋರಾಮ್, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದಲ್ಲಿ ವರ್ಷಪೂರ್ತಿ ನೈಸರ್ಗಿಕ ಕೃಷಿ ಮಾದರಿ ಕೈಗೊಳ್ಳಬಹುದು. ಇತರ ಪ್ರದೇಶಗಳಲ್ಲಿ ಕಾಲೋಚಿತ ಕೃಷಿಯನ್ನು ಮಾಡಬಹುದು. ಅಣಬೆ ಕೊಯ್ಲು ಮಾಡಿದ ನಂತರ ಅದು ಬೆಳೆಯಲು ಬಳಸಿದ ಅಣಬೆ ತಲಾಧಾರವನ್ನು (SMS) ಅತ್ಯುತ್ತಮ ಸಾವಯವ ಗೊಬ್ಬರವಾಗಿ ಅಥವಾ ವರ್ಮಿಕಾಂಪೋಸ್ಟಿಂಗ್‌ಗೆ ಬಳಸಬಹುದು.