ಎಂಥಾ ಮಳೆಗೂ ಅಂಜದ ಸೊಪ್ಪುಗಳು !

0
ಲೇಖಕರು: ಮಮತಾ ರೈ

ಮಾರ್ಚ್ ನಲ್ಲಿ ಆರಂಭವಾಗಿ ಇನ್ನೂ ಬಿಟ್ಟು ಬಿಡದೆ ಆಗಾಗ ಬೀಳುವ ಮಳೆ. ಮಳೆಯ ಮುನ್ಸೂಚನೆ ಸಿಕ್ಕಿ ಆಹಾರ ಸಂಗ್ರಹ ಮಾಡಲು ಬರುವ ಇರುವೆಗಳು. ಆದರೂ ಮರಳಿ ಯತ್ನವ ಮಾಡು ಅನ್ನುವಂತೆ ಮತ್ತೇ ಮತ್ತೇ ಬೀಜ ಬಿತ್ತಿ ಅಂತೂ ಕೊನೆಗೆ ಸ್ವಲ್ಪ ಹರಿವೆ, ಮೂಲಂಗಿ, ಸಬ್ಬಸಿಗೆ, ಪಾಲಕ್, ಮೆಂತೆ ಬೆಳೆಸಲು ಸಾಧ್ಯವಾಯಿತು

ಆದರೆ ಎಂತಹ ಜೋರು ಮಳೆಗೂ ಬೆದರದೆ ಯಾವುದೇ ಆರೈಕೆ ಬೇಡದೆ ಬೆಳೆಯುತ್ತಿರುವ ಕೆಲವು ಸೊಪ್ಪಿನ ಗಿಡಗಳು ನಿರಾಶೆಗೊಳ್ಳಲು ಬಿಡುವುದಿಲ್ಲ. ಮೊನ್ನೆ ತೊಗರಿ ಬೇಳೆ ಸಾರು ಮಾಡಲು ಒಂದಿಷ್ಟು ಸೊಪ್ಪು ಸಂಗ್ರಹಣೆ ಮಾಡಿದಾಗ ಸುಮಾರು 41 ಬೇರೆ ಬೇರೆ ರೀತಿಯ ಸೊಪ್ಪುಗಳು ಸಿಕ್ಕವು.

ಮರುದಿವಸ ನೆನೆಸಿದ ಕಡಲೆ ಬೇಳೆ( 70%) ಕಡೆದು , ಸ್ವಲ್ಪವೇ ಸ್ವಲ್ಪ ಅಕ್ಕಿ ಹುಡಿ, ರವೆ ಹುಡಿ ಮತ್ತು ವಿವಿಧ ಸೊಪ್ಪು ಗಳನ್ನು ಬೆರೆಸಿ ಬೆಳಗ್ಗಿನ ತಿಂಡಿಗೆ ಕಡಿಮೆ ಕಾರ್ಬೋಹೈಡ್ರೇಟ್‌ ಇರುವ ದೋಸೆ ಮಾಡಲು ಸಾಧ್ಯವಾಯಿತು. ಅದರಲ್ಲೇ ಹೆಚ್ಚು ನೀರು ಬೆರೆಸದೆ ತೆಗೆದಿಟ್ಟ ಹಿಟ್ಟಿನಿಂದ ವಡೆಗಳನ್ನು ತಟ್ಟಿ,ಹಬೆಯಲ್ಲಿ ಬೇಯಿಸಿ ನಂತರ ಕಡಿಮೆ ಎಣ್ಣೆ ಬಳಿಸಿ ದೋಸೆ ಕಾವಲಿಯಲ್ಲಿ ಕಾಯಿಸಿ ಸಂಜೆಯ ತಿಂಡಿಗೆ ಪ್ರೊಟೀನ್ ಭರಿತ ಆರೋಗ್ಯಕರ ವಡೆ ಕೂಡಾ ಮಾಡಲಾಯಿತು

ಸೊಪ್ಪನ್ನು ಇನ್ನು ನಾನಾ ವಿಧದಲ್ಲಿ ಬಳಸಬಹುದು ಅಂತ ನಿಮಗೆ ಗೊತ್ತೇ ಇದೆ. ಕಳೆದ ವರುಷ 30 ದಿವಸ.. ದಿನಕ್ಕೊಂದು ಸೊಪ್ಪಿನಂತೆ 30 ವಿಧದ ಸೊಪ್ಪುಗಳನ್ನು ಅಡುಗೆಯಲ್ಲಿ ಬಳಸಿದ್ದೆ.

ನಮ್ಮ ಕೈ ತೋಟದಲ್ಲೇ ಸೊಪ್ಪುಗಳು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಇದ್ದರೆ ಅರೋಗ್ಯಕರ ಮತ್ತು ರುಚಿಕರ ತಿನಿಸುಗಳನ್ನು ತಯಾರಿಸಬಹುದು. ರಾಸಾಯನಿಕ ಮತ್ತು ಕಲುಷಿತ ನೀರನ್ನು ಬಳಸಿ ಬೆಳೆಸಿರುವ ಸಂಶಯ ಇರುವುದಿಲ್ಲ. ಈ ಸೊಪ್ಪಿನ ಗಿಡಗಳಿಗೆ ಹೆಚ್ಚು ಸ್ಥಳ ಕೂಡಾ ಬೇಡ.

ಬೇರೆ ಗಿಡಗಳ ಜೊತೆಗೆ ಬೆಳೆಸಬಹುದು ಅಥವಾ ಬಳಸಿದ ನೀರಿನ ಬಾಟಲ್, ಕಂಟೈನರ್ ಬಳಸಿ ಮನೆಯ ಗೋಡೆಯ ಬದಿಯಲ್ಲಿ, ಮಾಡಿನ ಕೆಳಗೆ ಬೆಳೆಸಿಕೊಳ್ಳಬಹುದು. ನೀರಿನ ಸಮಸ್ಯೆ ಇದ್ದರೆ ಅಡುಗೆ ಮನೆಯ ಅಕ್ಕಿ, ಬೇಳೆ ಕಾಳು ತೊಳೆದ ನೀರು ಬಳಸಬಹುದು.

ಅಡುಗೆ ಮನೆಯ ಉಳಿಕೆಯಿಂದ ಕಾಂಪೋಸ್ಟ್ ಮಾಡಬಹುದು. ಅಂತೂ ಒಂದಿಷ್ಟು ಕಾಡು ಸೊಪ್ಪುಗಳಿಗೆ ಮನೆ ಅಂಗಳದಲ್ಲಿ ಅವಕಾಶ ಕೊಡುವುದು ಒಳ್ಳೆಯದು. ಅದರಲ್ಲೂ ಕೆಲವು ಕಾಡು ಸೊಪ್ಪುಗಳನ್ನು ಒಮ್ಮೆ ನೆಟ್ಟರೆ ಸಾಕು ಮ್ಯಾಜಿಕ್ ನಂತೆ ಪ್ರತಿವರುಷ ಹುಟ್ಟಿಬರುತ್ತದೆ.

ಒಂಬತ್ತು ವರುಷದ ಹಿಂದೆ ಮಂಗಳೂರಿನಲ್ಲಿ ಇರುವಾಗ ಕಾಕಿ ಸೊಪ್ಪಿನ ಗಿಡವನ್ನು ಬಂಧುವೊಬ್ಬರ ಮನೆಯಿಂದ ತಂದು ನೆಟ್ಟಿದ್ದೆ. ನಂತರ ಮೂರು ಮನೆ ಬದಲಾಯಿಸಿದ್ದೇವೆ. ಆದರೂ ಪ್ರತಿವರುಷ ಒಂದೆರಡು ಕಾಕಿ ಸೊಪ್ಪಿನ ಗಿಡಗಳು ಯಾವುದಾದರೂ ಕುಂಡದಲ್ಲಿ ಬೆಳೆದು ಇರುತ್ತದೆ. ಉಳಿದ ಗಿಡಗಳು ಅಷ್ಟೇ ಇನ್ನೇನೋ ಅಳಿದು ಹೋಯಿತು ಅನ್ನುವಾಗ ಮತ್ತೇ ಬೆಳೆದು ಖುಷಿ ಕೊಡುತ್ತದೆ. ಆದರೆ ಕೆಲವೊಂದು ಗಿಡಗಳನ್ನು ಕಳೆದುಕೊಂಡದ್ದು ಇದೆ.

ಕಾರ್ಕಳಕ್ಕೆ ಬಂದ ಮೊದಲ ವರುಷ ಹಿಂದೆ ಬಾಡಿಗೆಗೆ ಇದ್ದ ಮನೆಯ ಅಂಗಳದಿಂದ ನೂರಕ್ಕಿಂತಲೂ ಹೆಚ್ಚು ವಿಧದ ಸೊಪ್ಪುಗಳನ್ನು ( ಬೆಳೆಸಿದ ) ಸಂಗ್ರಹಿಸಿದ್ದೆವು . ಕಳೆದು ಹೋದ ಸೊಪ್ಪಿನ ಗಿಡಗಳು ಮತ್ತೇ ದೊರೆತರೆ ಆಗುವ ಖುಷಿ ಅಷ್ಟಿಷ್ಟಲ್ಲ. ನಿಮ್ಮಲ್ಲಿ ಇಲ್ಲಿ ಕೊಟ್ಟ ಲಿಸ್ಟ್ ನಲ್ಲಿ ಇಲ್ಲದ ತಿನ್ನಬಲ್ಲ ಸೊಪ್ಪುಗಳು ಇದ್ದರೆ ಸಾಧ್ಯವಾದರೆ ಕಳುಹಿಸಿ . ನನ್ನಲ್ಲಿ ಇರುವ ಹೆಚ್ಚಿನ ಸೊಪ್ಪಿನ ಗಿಡಗಳ ಮೂಲ ನನಗೆ ನೆನಪಿದೆ.

ತಿನ್ನ ಬಲ್ಲ ಕಾಡಿನ ಸೊಪ್ಪುಗಳು, ಗೆಡ್ಡೆ ಗೆಣಸುಗಳು, ತೊಗರಿ ಇತ್ಯಾದಿ ಗಿಡಗಳು ನನಗೆ ತುಂಬಾ ಆಸಕ್ತಿಯ ವಿಚಾರ. ಹವಾಮಾನ ಬದಲಾವಣೆಯ ಸಮಸ್ಯೆಯಿಂದ ಆಹಾರ ಬೆಳೆ ಬೆಳೆಯಲು ಕಷ್ಟ ಆಗುತ್ತಿರುವಾಗ ಯಾವ ಹವಾಮಾನಕ್ಕೂ ಹೊಂದಿಕೊಂಡು ಸುಲಭವಾಗಿ ಬೆಳೆಸಲು ಸಾಧ್ಯವಾಗುವ ಪೋಷಕಾಂಶ ಇರುವ ಇಂತಹ ಗಿಡಗಳನ್ನು ಉಳಿಸುವ, ಬೆಳೆಸುವ ಮತ್ತು ಬಳಸುವ ಕಡೆಗೆ ನಮ್ಮ ಗಮನ ಹೋಗಬೇಕಾಗಿದೆ.

ಮನೆಯ ಅಂಗಳದಿಂದ ಸಂಗ್ರಹಿಸಿದ ಸೊಪ್ಪುಗಳು:

  1. ವಿಟಮಿನ್ ಸೊಪ್ಪು #SauropusAndrogynus
  2. ಎಲವರಿಗೆ #Senasophera
  3. ಹೊನೆಗೊನೆ 2 ವಿಧ #AlternantheraSessilis 2 varieties
  4. ಗುಬ್ಬಿ ಸೊಪ್ಪು #Commelinabenghalensis
  5. ಒಂದೆಲಗ #CentellaAsiatica
  6. ಕಾಕಿ ಸೊಪ್ಪು #SolanumNigrum
  7. ತಗತೆ ಸೊಪ್ಪು #SennaTora
  8. ನೀರು ಕಡ್ಡಿ ಗಿಡ #PepperomiaPellucida
  9. ಕೆಂಪು ಗೊಂಗುರ #HibiscusSabdariffa
  10. ದೊಡ್ಡ ಪತ್ರೆ #ColeusAmboinicus
  11. ಕನ್ನೇ ಕುಡಿ #Polygonumchinense
  12. ಕಾಡು ಕೊತ್ತಂಬರಿ #Culantro
  13. ಬಸಳೆ ಹಸಿರು #BasellaAlba green
  14. ನೆಲಬಸಳೆ #TalinumFruticosum
  15. ಬಳ್ಳಿ ಬಸಳೆ ( ಸಪೂರ ಬಳ್ಳಿ ) #BasellaAlba thin creeper
  16. ಕೆಂಪು ಬಸಳೆ #BasellaAlba red
  17. ಮರ ಬಸಳೆ ( ಛಾಯಾ ) #CnidoscolusAconitifolius
  18. ಕಾಡು ಬಸಳೆ #bryophyllum
  19. ಒಂದೆಲಗ #IndianPennyWort
  20. ಪುನರ್ನವ BoerhaaviaDiffusa
  21. ಹರಿವೆ ಸೊಪ್ಪು – 2 ವಿಧ Amaranth 2 Varieties
  22. ನುಗ್ಗೆ ಸೊಪ್ಪು #MoringaOleifera
  23. ಮೂಲಂಗಿ ಸೊಪ್ಪು Radish Leaves
  24. ಸಬ್ಬಸಿಗೆ Dil leaves
  25. ಪಾಲಕ್ Palak
  26. ಪುದಿನ Mint
  27. ಬೇವು ಸೊಪ್ಪು CurryLeaves
  28. ತುರಿಸದ ಕೆಸು colocasia non itchy variety
  29. ಕ್ರೋಟನ್ ಹರಿವೆ 4 ವಿಧ #AlternantheraDentata 4 varieties
  30. ನೀರುಳ್ಳಿ ಎಲೆ onion leaves
  31. ಬೆಳ್ಳುಳ್ಳಿ ಎಲೆ garlic chives
  32. ಗೆಣಸಿನ ಎಲೆಗಳು – 6 ವಿಧ #IpomoeaBatatas– 6 varieties
  33. ಅಮಟೆಕಾಯಿ #ColeusAmboinicus
  34. ಬೇವು ಸೊಪ್ಪು #CurryLeaves
  35. ಹಾಡೇ ಬಳ್ಳಿ ಸೊಪ್ಪು #CycliaPeltata
  36. ಬೆಕ್ಕಿನ ಮೀಸೆ #OrthosiphonAristatus
  37. ಹಾಡೇ ಬಳ್ಳಿ #Cyclea peltata

ಆಂಗಳದಲ್ಲಿ ಇರುವ ಅಡುಗೆಗೆ ಬಳಸದ ಕೆಲವು ತಿನ್ನಲಾಗುವ ಸೊಪ್ಪುಗಳು

  1. ವೀಳ್ಯದ ಎಲೆ – 3 ವಿಧ
  2. ತುಳಸಿ – 3 ವಿಧ
  3. ಮಜ್ಜಿಗೆ ಸೊಪ್ಪು
  4. ದಾಸವಾಳ
  5. ಹುಳಿ ಸೊಪ್ಪು
  6. ಅರಶಿಣ ಎಲೆ
  7. ತೊಂಡೆ ಕಾಯಿ
  8. ಅಲಸಂಡೆ ಎಲೆ
  9. ಬೆಂಡೆಕಾಯಿ ಎಲೆ
  10. ಕಾಡು ಅಂಜೂರ ಎಲೆ
  11. ನೆಲ ನೆಲ್ಲಿ
  12. ನೀರು ಕಡ್ಡಿ ಗಿಡ
  13. ಪುನಃರ್ಪುಳಿ ಎಲೆ
  14. ಅಮಟೆಕಾಯಿ ಎಲೆ

ಹುಡುಕಿದರೆ ಇನ್ನೂ ಕೆಲವು ಗಿಡಗಳು ಸಿಗಬಹುದು

LEAVE A REPLY

Please enter your comment!
Please enter your name here