ಮಲೆನಾಡು ಅಕ್ಷರಶಃ ಮಳೆನಾಡಾಗಿದೆ. ಈ ವರ್ಷ, ಆರ್ದ್ರಾ, ಪುನರ್ವಸು, ಪುಷ್ಯ ಮೂರೂ ಮಳೆ ನಕ್ಷತ್ರಗಳೂ ಮಹಾಯೋಗದಲ್ಲೇ ಹುಟ್ಟಿದ್ದು. ಅದರಲ್ಲೂ ಈಗ ಸುರಿಯುತ್ತಿರುವ ಪುಷ್ಯ ಮಳೆ ರೌದ್ರರೂಪಿ. ಮಳೆ ಜೀವದಾಯಿನಿ,ಮಳೆ ಪ್ರೇಮ ಪ್ರದಾಯಿನಿ,ಮಳೆಯೆಂದರೆ ಸಮೃದ್ಧಿ, ಮಳೆಯೆಂದರೆ ಹುಲುಸು ಎನ್ನುವ ಶುಭದ ಮಾತುಗಳಿವೆ. ಆದರೆ ಹೀಗೆ ನಿರಂತರವಾಗಿ ಸುರಿವ ಈ ಮುಂಗಾರಿನ ಮಳೆಗಳು ಮಲೆನಾಡಿಗರ ಅದರಲ್ಲೂ ಮಣ್ಣು ನೆಚ್ಚಿದವರ ಬದುಕನ್ನು ಅಸ್ತವ್ಯಸ್ತಗೊಳಿಸುತ್ತವೆ. ಬದುಕಿನ ಆಸೆಯಿಂದಲೇ ಮುಕ್ತ ಮಾಡಿಬಿಡುತ್ತಿವೆ.
ಈ ತಿಂಗಳ ಆರರಿಂದ ಇಪ್ಪತ್ತರವವರೆಗಿದ್ದ ಪುನರ್ವಸು ಮಳೆ ನಕ್ಷತ್ರ ಭರಪೂರ ಸುರಿದಾಗ ಕೃಷಿಕರ ಮನಸ್ಸು ಹಗುರಾಗಿದ್ದು ನಿಜ. ಕೆರೆ ಕಟ್ಟೆ ತುಂಬಿದವು.ಮರಗಳು ಆಯಾ ಜಾಗಕ್ಕೆ ನೀರಿಂಗಿಸಿದ್ವು.ಬೋರ್ವೆಲ್ ಗಳು ರಿಚಾರ್ಜ್ ಆದ್ವು ,ಪ್ರಾಣಿ ಪಕ್ಷಿಗೆ ನೆಲೆಯೂ ಸೆಲೆಯೂ ಸಿಕ್ತು ಎನ್ನುವ ಖುಷಿ.
ಮುಂಗಾರು ಪೂರ್ವದ ವಿದ್ಯಮಾನಗಳಾದ ಗುಡುಗು ಸಿಡಿಲುಗಳು ಪ್ರಖರವಾಗಿದ್ದರೂ ಇದು ಉಪಯುಕ್ತ ವಾತಾವರಣದಲ್ಲಿರುವ ಸಾರಜನಕ ಭೂಮಿಯನ್ನು ಸೇರಲು ಇವು ಅನಿವಾರ್ಯ. ಸಿಡಿಲು ಮತ್ತು ಮಿಂಚಿನಲ್ಲಿರುವ ಅತ್ಯಂತ ದೊಡ್ಡ ಪ್ರಮಾಣದ ಉಷ್ಣಾಂಶ ವಾತವರಣದಲ್ಲಿರುವ ಸಾರಜನಕದ ಅಣುಗಳನ್ನು ಒಡೆಯುತ್ತವೆ. ಅಲ್ಲಿ ಬಿಡುಗಡೆಗೊಂಡ ಸ್ವತಂತ್ರ ಸಾರಜನಕದ ಅಣುಗಳು ವಾತವರಣದಲ್ಲಿನ ಅಮ್ಲಜನಕದ ಜೊತೆಗೆ ಸಂಯೋಗವಾಗಿ ಸಾರಜನಕದ ಅಕ್ಸೈಡ್ ಉತ್ಪತ್ತಿಯಾಗುತ್ತದೆ.
ಮುಂಗಾರು ಪೂರ್ವದ ಮಿಂಚುಗುಡುಗಿನಲ್ಲಿ ಉತ್ಪತ್ತಿಯಾದ ಈ ಸಾರಜನಕದ ಆಕ್ಸೈಡ್ ಗಳು ಮುಂಗಾರಿನ ಈ ಹದ ಮಳೆಯ (h2o) ಜೊತೆಗೆ ಸಂಯೋಗವಾಗಿ ನೈಟ್ರೇಟ್ ರೂಪದಲ್ಲಿ ಭೂಮಿಯೊಳಕ್ಕೆ ಇಳಿಯುತ್ತದೆ. ಅಂದರೆ ಸುರಿದ ಪ್ರತಿ ಹದಮಳೆಯೂ ಮಣ್ಣಿಗೆ ಒಂದು ಸುತ್ತು ಉತ್ಕ್ರಷ್ಟ ಗೊಬ್ಬರವನ್ನು ಒದಗಿಸುತ್ತಿರುತ್ತದೆ.
ಆದರೆ ಈಗ ಸುರಿಯುತ್ತಿರುವ ಮಳೆ…?
ಫಲವತ್ತಾದ ಮೇಲ್ಮಣ್ಣನ್ನು ಕೊಚ್ಚಿ ಬೆಳೆಗಳ ಬೇರುಗಳಲ್ಲಿ ನಿರಂತರ ತಿಂಗಳಿನಿಂದ ನೀರು ನಿಲ್ಲಿಸಿ ಅವುಗಳಿಗೆ ಕೊಳೆ ರೋಗ(ರೂಟ್ ರಾಟ್)ವನ್ನು ತರುತ್ತಿದೆ. ಕಾಫಿಯಲ್ಲೀಗ ಆಗುತ್ತಿರುವುದೂ ಅದೆ. ತಾಯಿ ಬೇರು ಬಲಿಷ್ಠ ಇರುವ ಸಸ್ಯ ಜಾತಿಗಳಿಗೆ ಅತಿವೃಷ್ಟಿ ಅನಾವೃಷ್ಟಿ ಗಳ ಆತಂಕವಿರುವುದಿಲ್ಲ.
ಹೇಳಿಕೇಳಿ ಕಾಫಿ ತಂತುಬೇರು ಮುಖ್ಯವಾಗಿರುವ ಸಸ್ಯಪ್ರಭೇದ. ಬಿಸಿಲಿನ ದರ್ಶನವಿಲ್ಲದೆ ಆಹಾರ ತಯಾರಿಕೆ ಕ್ಷೀಣಗೊಂಡು ಗಿಡಗಳು ಮುಖ ಇಳಿಬಿಟ್ಟು ಮಂಕಾಗಿವೆ. ಕಾಫಿಯ ಎಳೆಕಾಯಿಗಳ ಇಡೀ ಗೊಂಚಲೇ ಕೊಳೆತು ಉದುರುತ್ತಿದೆ.leaf rot root rot ಗಳು ತೋಟವನ್ನು ಆವರಿಸಿಕೊಳ್ತಿದೆ. ದೊಡ್ಡ ಬೆಳೆಗಾರರು ಮತ್ತು ಮೇಲ್ಮಧ್ಯಮ ಬೆಳೆಗಾರರು ಈ ಎಲ್ಲ ತೊಂದರೆಗಳಿಂದ ಹೇಗೋ ಪಾರಾಗ್ತಾರೆ ಅಥವಾ ಪಾರಾಗದಿದ್ದರೂ ಹೆಚ್ಚು ಬಾಧಿತರಾಗದಿರಲು ಅವರಿಗೆ ಒಂದಷ್ಟು ಮಾರ್ಗಗಳಿವೆ. ನಮ್ಮಂತಹ ಮಧ್ಯಮ ಮತ್ತು ಸಣ್ಣ ಬೆಳೆಗಾರರು ಸಮಸ್ಯೆಗಳಿಗೆ ಸಿಲುಕುತ್ತೇವೆ. ಇವರ ಇವತ್ತಿನ ಈ ನಷ್ಟ ಮುಂದಿನ ಮೂರು ವರ್ಷವನ್ನು ಅಲುಗಾಡಿಸುತ್ತಿರುತ್ತದೆ.
ಪುಷ್ಯ ಮಳೆ ಏಳು ದಿವಸ ಒಂದೇ ಸಮನೆ ಪ್ರಳಯ ಸ್ವರೂಪಿಯಾಗಿ ಸುರಿದು ನಡುವೆ ಒಂದು ದಿನ ಬ್ರೇಕ್ ಕೊಟ್ಟು ಮತ್ತದೇ ರೌದ್ರತೆ ತೋರುತ್ತಿದೆ. ಹೊರಗೆ ಧೋಗುಟ್ಟು ಸುರಿವ ಮಳೆಯ ಹೊರತು ಜಗತ್ತಿನ ಮತ್ತಾವ ಸದ್ದುಗಳೂ ಹಳ್ಳಿಗಳಲ್ಲಿ ಕೇಳುತ್ತಿಲ್ಲ.
ಊರು ಬಚ್ಚಲು ಮನೆ. ಹಿಡಿ ಮಣ್ಣು ಹಿಂಡಿದರೆ ಸಮುದ್ರ. ನಡುನಡುವೆ ಬಿಡುವು ಕೊಟ್ಟ ಹೊತ್ತಿನಲ್ಲಿ ಗದ್ದೆ ತೋಟ ಹಳ್ಳಗಾವಲಿ,ಕೆರೆಕೋಡಿಗಳಿಂದ ಭೋರ್ಗರೆಯುವ ಸದ್ದು. ಏಳಾದರೂ ಏಳಲು ಬಯಸದ ಮನಸ್ಸು. ಹಳ್ಳಿಯ ಪ್ರತಿಮನೆಗಳೂ ದ್ವೀಪ. ಮನಸ್ಸುಗಳೂ..
ಬಿಸಿಲು ಮನುಷ್ಯನ ನರಮಂಡಲಕ್ಕೆ ಅನಿವಾರ್ಯ. ಕ್ಷೇಮ ಪ್ರಚೋದಕ. ನಿರಂತರ ಕತ್ತಲು ಕವಿದಂತಹ ಹಗಲುಗಳಿರುವ ದೀರ್ಘ ಮಳೆಗಾಲಗಳಲ್ಲಿ ಒಂಟಿತನ, ಹತಾಶೆ, ವಿಷಾದ ಕ್ರೋಧ, ವೇದನೆಗಳದ್ದೇ ಹಿರಿತನ. ದೇಹದೊಳಗಿದ್ದ ಸಣ್ಣಪುಟ್ಟ ಕಾಯಿಲೆ ನೋವು ಎದ್ದು ಕಾಣುವ ಕಾಲ.
ಯಾರೋ ಒಂದಿಷ್ಟು ಮಂದಿ ಇಸ್ಪೀಟು ಆಡ್ತಾರೆ.ಕಿಟಿಪಾರ್ಟಿ ಮಾಡ್ತಾರೆ ಗೆಟ್ ಟುಗೆದರ್ ಮಾಡ್ತಾರೆ. ನಿಜ. ಇದ್ಯಾವುದೂ ನಿಂತಿಲ್ಲ. ಆದರೆ ಇದೆಲ್ಲವೂ ಈ ವರ್ಷದ ಮಳೆಗಾಲ ಒಡ್ಡಿರುವ ಒಂಟಿತನಕ್ಕೆ ಹತಾಶೆಗೆ ವಿಷಾದಕ್ಕೆ ಪಲಾಯನ ಮಾರ್ಗವಾಗಿ ಕಾಣುತ್ತಿದ್ದಾವೆಯೆ ಹೊರತು ನಿಜವಾದ ಸಂಭ್ರಮ ಉಳಿದಿಲ್ಲ. ಭವಿಷ್ಯ ವರ್ತಮಾನ ಎರಡೂ ಮಳೆಯೊಂದಿಗೆ ಕೊಚ್ಚುತ್ತಿರುವ ಹೊತ್ತಿನಲ್ಲಿ ಜೀವ ಸಹಜವಾಗಿರುವುದಾದರೂ ಹೇಗೆ?
“ಇವತ್ತು ಮಳೆ ಪರವಾಗಿಲ್ವಾ” ?
“ಇವತ್ತು ಬಿಸಿಲಿರಬೇಕಲ್ವಾ”?
ಪಟ್ಟಣದ ಸ್ನೇಹಿತರ ಫೋನ್ ಬಂದಾಗ ಮತ್ತೆಮತ್ತೆ ಅದೇ ಪ್ರಶ್ನೆ.
“ಇಲ್ಲ ,ಇವತ್ತೂ ನಿನ್ನೆಯ ಹಾಗೇ” ಎನ್ನುವ ನಮ್ಮ ಉತ್ತರ.
“I can imagine..ಮಂಗಳೂರಲ್ಲೂ ಹೀಗೇ ಆಗಿತ್ತು” ಅಂದರು ಯಾರೊ.
ಊಹುಂ ಮಂಗಳೂರಿನ ಮಳೆಗೂ ಆಲೂರಿನ ಮಳೆಗೂ ಹೋಲಿಸಲಾಗದು. ಹಾಸನದ ಮಳೆಗೂ ಹೆದ್ದುರ್ಗದ ಮಳೆಗೂ ಹೋಲಿಸಲಾಗುವುದಿಲ್ಲ. ಆಲೂರಿನ ಮಳೆಗೂ ಸಕಲೇಶಪುರ ದ ಮಳೆಗೂ, ಸಕಲೇಶಪುರದ ಮಳೆಗೂ ಹಾನುಬಾಳಿನ ಮಳೆಗೂ, ಹಾನುಬಾಳಿನ ಮಳೆಗೂ ಹೆತ್ತೂರಿನ ಮಳೆಗೂ ಹೋಲಿಸಬಾರದು. ವರ್ಷಕ್ಕೆ ಇನ್ನೂರೈವತ್ತು ಇಂಚು ಮಳೆ,ವರ್ಷಕ್ಕೆ ಅರವತ್ತು ಇಂಚು ಮಳೆ ಈ ಊರುಗಳ ನಡುವಿನ ವ್ಯತ್ಯಾಸ.
ಸೂರ್ಯ ದರ್ಶನಕ್ಕೆ ತಿಂಗಳಾನುಗಟ್ಟಲೆ ಕಾಯಬೇಕಾಗುವ ಸಾಕಷ್ಟು ಹಳ್ಳಿಗಳು ಸಕಲೇಶಪುರದಲ್ಲಿವೆ. ಪ್ರತಿ ಮನೆಗಳಲ್ಲೂ ಅಪ್ಪ ಅಮ್ಮ ಇಬ್ಬರೇ. ಎಲ್ಲವೂ ಸರಿಯಿದ್ದಾಗ ಮಗ ಅಮೆರಿಕಾದಿಂದ, ಮಗಳು ದೆಹಲಿಯಿಂದ,ತಮ್ಮ ಯುರೋಪಿನಿಂದ ಫೋನ್ ಮಾಡ್ತಿದ್ದಿದ್ದು ಸಹಜವೆನಿಸುತ್ತಿತ್ತು. ಸಂತೋಷವನ್ನೂ ಕೊಡ್ತಿತ್ತು. ದೇಶದಿಂದ ದೇಶಕ್ಕೆ ಹೋಗಿ ಬದುಕು ಕಟ್ಟಿಕೊಂಡವರ ಬಗ್ಗೆ ಹೆಮ್ಮೆಯೂ ಈ ಹಳ್ಳಿಯ ಹಿರಿ ಜೀವಗಳಲ್ಲಿ ಇರ್ತಿತ್ತು.
ಈ ವರ್ಷದ ಮಳೆಗಾಲ ಅದೆಲ್ಲಕ್ಕೂ ಮುಕ್ತಿ ಹಾಡಿದೆ. ದೂರವಿರುವ ಮಕ್ಕಳು ಮನೆಗೆ ಬರಲಿ ಅನಿಸುವಂತೆ ಮಾಡಿದೆ. ಹಣ, ಮನೆ, ಕಾರು, ಊರು ಎಲ್ಲವೂ ಇದೆ. ಆದರೆ ವಾತಾವರಣ ಖಿನ್ನವಾಗಿದೆ. ಯಾವುದೂ ಬೇಡವೆನಿಸುವಂತೆ ಮಾಡುತ್ತಿದೆ.
ಮತ್ತೆಲ್ಲವೂ ಮೊದಲಿನಂತಾಗುವುದೇ?
ಮರಳಿ ನಮ್ಮ ಹಗಲುಗಳಿಗೆ ಬೆಳಕು ಬರುವುದೆ?
ಕಾಯುವುದೊಂದೇ ಕಾಯಕ…