ಕೀಟಗಳ ನಿಯಂತ್ರಣದಲ್ಲಿ ಜೇಡಗಳ ಮಹತ್ವ

0
The importance of spiders in pest control
ಲೇಖಕರು: ಮಂಜುನಾಥ್ ಅಮಲಗೊಂದಿ

ಬೆಳ್ಳಂಬೆಳಿಗ್ಗೆ ಮಂಜು ಕವಿದು ದೂರದ ಗಿಡಮರಗಳು ಕಾಣದೆ ಮಸುಕಾಗಿದ್ದವು. ಚುಮು ಚುಮು ಚಳಿ. ಎದ್ದು ಸೀದಾ ಹಸು ಕಟ್ಟಿದ ಕೊಟ್ಟಿಗೆ ಕಡೆ ನಡೆದೆ. ಹಾಲು ಕರೆದೆ. ಹಸು ಆಚೆ ಕಟ್ಟಿದೆ. ಸಗಣಿಯನ್ನು ಮನೆಯ ಹಿಂದೆಯಿದ್ದ ತಿಪ್ಪೆಗೆ ಸೇರಿಸಿದೆ. ಅಷ್ಟರಲ್ಲಾಗಲೇ ಮಗಳು ವನ್ಯ  ಎದ್ದು ಹೊರ ಬಂದು ತದೇಕಚಿತ್ತದಿಂದ ಸುಮ್ಮನೆ ನೋಡುತ್ತಾ ನಿಂತಿದ್ದಳು “ಮಂಜಪ್ಪ ಅಲ್ಲಿ ನೋಡು ಚಿಗ್ನೇಚರ್ ಪೈಡರ್ ಎಷ್ಟು ಚೆನ್ನಾಗಿದೆ. ರಾತ್ರಿಯಿಂದ ಅದು ಇಲ್ಲೇ ಇದೆ, ಪಾಪ ಅದರ ಮನೆಗೆ ಹೋಗೆ ಇಲ್ಲ” ಎನ್ನುತ್ತಾ ಮೆಟ್ಟಿಲ ಎರಡು ಗೋಡೆಗಳನ್ನು ಆಧಾರವಾಗಿಸಿಕೊಂಡು ಬಲೆಯನ್ನು ನೇಯ್ಗೆ ಮಾಡಿ ಮಧ್ಯದಲ್ಲಿ ಧ್ಯಾನಸ್ಥರಂತೆ ತನ್ನ ಆಹಾರಕ್ಕಾಗಿ ಕಾಯುತ್ತಿದ್ದ ಜೇಡವನ್ನು ತನ್ನ ಬಲಗೈ ತೋರು ಬೆರಳಿನಿಂದ ತೋರಿಸಿದಳು.

ಹಿಂದಿನ ದಿನದ ರಾತ್ರಿ “ವನ್ಯ ಬಾ ಚಂದಿರ ಬಂದಿದ್ದಾನೆ ನೋಡೋಣ” ಅಂತಾ ಮೆಟ್ಟಿಲನ್ನು ಏರಿ ಮನೆ ಮೇಲಕ್ಕೆ ತೆರಳುತ್ತಿದ್ದಾಗ ಜೇಡರ ಬಲೆಯನ್ನು ಅವಳಿಗೆ ತೋರಿಸಿ “ವನ್ಯ ನೋಡಿಲ್ಲಿ ಜೇಡ ಬಲೆ ಕಟ್ಟಿದೆ. ಮಧ್ಯದಲ್ಲಿ ಕುಳಿತಿರುವುದು ಸಿಗ್ನೇಚರ್ ಸ್ಪೈಡರ್. ಎಷ್ಟು ಚಂದ ಇದೆ ಅಲ್ವಾ?!… ಎಂದು ಅವಳಿಗೆ ಕುತೂಹಲವನ್ನು ಹೆಚ್ಚಿಸುವಂತೆ ಹೇಳಿದ್ದೆ. ಆಗ ಅವಳು ಅದನ್ನು ಮುಟ್ಟಲು ಮುಂದಾದಳು ನಾನು ” ಏ ಮಗಳೇ, ಅದನ್ನು ಮುಟ್ಟಬಾರದು ಅದು ಕಚ್ಚಿಬಿಡುತ್ತದೆ. ಹಿಂದೆ ಬಾ ಅದರ ಹತ್ತಿರ ಹೋಗಬೇಡ” ಎಂದು ಎಚ್ಚರಿಸಿದೆ. ಆಯ್ತು ಅಪ್ಪ ಮುಟ್ಟಲ್ಲವೆಂದು ಹಿಂದೆ ಸರಿದಳು.  ರಾತ್ರಿಯಲ್ಲಿ ಇವಳಿಗೆ ಸಿಗ್ನೇಚರ್ ಸ್ಪೈಡರ್ ದೇ ಕನಸು ಬಿದ್ದಿರಬೇಕೇನೂ!… ಅದಕ್ಕೆ ಹಾಸಿಗೆಯಿಂದ ಎದ್ದವಳೇ ಸೀದಾ ಜೇಡದ ಬಲೆಯನ್ನು ಅರಸಿ ಬಂದು ತೋರಿಸಿದ್ದಿರಬೇಕು.

ಕೆಲವು ವರ್ಷಗಳ ಹಿಂದೆ ಸ್ನೇಹಿತರಾದ ಶಿಡ್ಲಘಟ್ಟದ ಅನಂತಲಕ್ಷ್ಮೀ ಅವರು ಫೋನ್ ಮಾಡಿ “ಸರ್, ನಿಮ್ಮ ಮೊಬೈಲ್ಗೆ ಒಂದು ಫೋಟೋ ಕಳಿಸಿದ್ದೇನೆ ನೋಡಿ. ನಮ್ಮ ಮನೆಯ ಪಕ್ಕದ ಕೈತೋಟದಲ್ಲಿನ ದಾಳಿಂಬೆ ಗಿಡದಲ್ಲಿ ಬಲೆ ಹಣೆದು ಚಲನೆ ಮಾಡದೆ ಸುಮ್ಮನೆ ಕುಳಿತಿದೆ” ಎಂದು ಹೇಳಿದರು. ನಾನು ವಾಟ್ಸಪ್ ಒಪನ್ ಮಾಡಿ ನೋಡಿ “ಮೇಡಂ ಇದು ಸಿಗ್ನೇಚರ್ ಸ್ಪೈಡರ, ಅದೇನು ಮಾಡಲ್ಲ ನಿಮ್ಮ ಗಿಡಗಳಿಗೆ ಬರುವ ಕೀಟಗಳನ್ನು ನಿಯಂತ್ರಣ ಮಾಡುತ್ತದೆ. ಕೀಟಗಳನ್ನು ಹಿಡಿಯಲು ಬಲೆ ಹಣೆದು, ಬೇಟೆಗಾಗಿ ಕಾಯುತ್ತಾ ಕುಳಿತಿರಬೇಕು. ಅದಕ್ಕೆ ಏನು ತೊಂದರೆ ಮಾಡಬೇಡಿ” ಎಂದು ಹೇಳಿದ್ದೆ.

ಸಿಗ್ನೇಚರ್ ಸ್ಪೈಡರ್ ಗಳು ತನ್ನ ನಾಲ್ಕು ಕಾಲುಗಳನ್ನು ಹರಡಿಕೊಂಡು ಬಲೆಯ ಮಧ್ಯೆ ಶವಸ್ಥಿತಿಯಲ್ಲಿ ಇರುವಂತೆ ಇರುತ್ತವೆ. ಕಾಲಿನ ಪಕ್ಕದಲ್ಲಿ ಬಲೆಯ ಮೇಲೆ ಸಹಿ ಮಾಡಿದಂತೆ ಜಿಗ್ ಜಾಗ್ ರೀತಿ ಪದರಗಳು ಇರುವುದರಿಂದ ಈ ಹೆಸರು ಬಂದಿರಬೇಕೆಂದೆನಿಸುತ್ತದೆ. ನಾವು ಹತ್ತಿರ ಹೋದರು ಅಲುಗಾಡುವುದಿಲ್ಲ. ತನ್ನ ಬಲಿಯು ಬಲೆಗೆ ಬೀಳುವವರೆಗೂ ಅನೇಕ ದಿನಗಳ ಕಾಲ ಅದೇ ಸ್ಥಿತಿಯಲ್ಲಿರುತ್ತವೆ. ಕನ್ನಡದಲ್ಲಿ ಇದಕ್ಕೆ ದಸ್ಕತ್ ಜೇಡ ಎಂದೂ ಸಹ ಕರೆಯುತ್ತಾರೆ. ಇವುಗಳ ವೈಜ್ಞಾನಿಕ ಹೆಸರು Argiope. ಇವುಗಳು ಹೆಚ್ಚಾಗಿ ಅರಣ್ಯ ಪ್ರದೇಶ ಮತ್ತು ಗಾರ್ಡನ್ ಗಳಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿರುತ್ತದೆ. ಸಾಧ್ಯವಾದರೆ ನೀವೂ ಸಹ ನಿಮ್ಮ ಕೈ ತೋಟಗಳಲ್ಲಿ ಒಮ್ಮೆ ಗಮನಿಸಿ ನೋಡಿ.

ಕೆಲವು ವರ್ಷಗಳ ಹಿಂದೆ ಆಸಕ್ತ ಕೃಷಿ ಮತ್ತು ಪರಿಸರ ಬರಹಗಾರರೊಂದಿಗೆ ಕೊಡಗಿನ ಅಧ್ಯಯನ ಪ್ರವಾಸಕ್ಕೆಂದು ಕೊಡಗಿಗೆ ಹೋಗಿದ್ದೇವು. ಕೊಡಗಿನ ಚಿಂಗಾರ ಹನಿವ್ಯಾಲಿ ಎಸ್ಟೇಟ್ನ ಗೆಸ್ಟ್ ಹೌಸ್ ನಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡಿದ್ದೆವು. ಈ ಗೆಸ್ಟ್‌ ಹೌಸ್ನಲ್ಲಿ ರಾತ್ರಿಯ ಊಟಕ್ಕೆಂದು ನಾವೆಲ್ಲರೂ ಡೈನಿಂಗ್ ಹಾಲ್ನಲ್ಲಿ ಠಿಕಾಣಿ  ಹೂಡಿದ್ದೆವು. ನನಗೆ ನೆಗಡಿಯಿದ್ದ ಕಾರಣ ಬಿಸಿನೀರಿಗೆ ಬೇಡಿಕೆ ಇಡಲು ಅಡುಗೆ ಮನೆಗೆ ಹೋದೆ. ನನಗೆ ಕಿಚನ್ ನೋಡಿ ತುಂಬಾ ಖುಷಿಯಾಯಿತು. ಕುಕ್ಕಿಂಗ್ ಮಾಡುವ ಜಾಗದಲ್ಲಿ ಜೇಡಗಳ ಬಲೆಯನ್ನು ನಾಶ ಮಾಡದೆಯೇ ಸ್ವಚ್ಛತೆಯಿಂದ ಇಟ್ಟುಕೊಂಡಿದ್ದರು. ಇಂತಹ ಜೀವಸಂಕುಲ ಸ್ನೇಹಿ ಹೋಮ್ ಸ್ಟೇ ಮಾಲೀಕರುಗಳು ಇರುತ್ತಾರಾ!?… ಎಂದು ಆಶ್ಚರ್ಯಪಟ್ಟೆ.

ಊಟದ ನಂತರ ಗೆಸ್ಟ್ ಹೌಸ್ ಮಾಲೀಕರಾದ ಸುರೇಶ್ ಚೆಂಗಪ್ಪ ರವರನ್ನು ಭೇಟಿ ಮಾಡಿ ಜೇಡಗಳ ಬಗೆಗಿನ ಅವರ ಆಸಕ್ತಿಯನ್ನು ತಿಳಿಯಲು ಪ್ರಯತ್ನಿಸಿದೆ. ಅವರು ನಮಗೆ ಪ್ರತ್ಯುತ್ತರಿಸುತ್ತಾ “ನಮ್ಮ ಹೋಂ ಸ್ಟೇಗೆ ಒಬ್ಬ ವಿದೇಶಿ ವ್ಯಕ್ತಿ ಬಂದಿದ್ದನು. ಅವನು 30 ವರ್ಷಗಳಿಂದ ಜೇಡಗಳ ಬಗ್ಗೆಯೇ ಅಧ್ಯಯನ ಮಾಡುತ್ತಿದ್ದಾನೆ. ಅವನು ಹೇಳಿದ ಜೇಡಗಳ ಬಗೆಗಿನ ಆಸಕ್ತಿಕರ ವಿಚಾರಗಳು ನನ್ನನ್ನು ಹೆಚ್ಚು ಪ್ರಭಾವಿಸಿದವು. ಮೊದಲು ಸಹ ಜೇಡಗಳ ಬಗ್ಗೆ ಕುತೂಹಲ ಇತ್ತು. ಅವರು ಇಲ್ಲಿಗೆ ಬಂದು ಹೋದ ಮೇಲಂತೂ ಜೇಡಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಅವುಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳುತ್ತಿದ್ದೇವೆ” ಎಂದು ಹೇಳಿದರು. ಆ ವಿದೇಶಿಗ ಅಂದೆಂತಹ ಅಗಾಧ ಪರಿಸರ ಪ್ರೇಮಿ ಇರಬೇಕು!? ತನ್ನ ಜೀವಮಾನವಿಡೀ ಜೇಡಗಳ ಅಧ್ಯಯನಕ್ಕೆ ಮುಡುಪಾಗಿಟ್ಟಿದ್ದಾನೆ ಎಂದುಕೊಂಡು ಮನದಲ್ಲೇ ಶಭಾಷ್ಗಿರಿ ಅರ್ಪಿಸಿದೆ.

ನಮ್ಮ ತೋಟದ. ಬದುವಿನ ಹತ್ತಿರವಿದ್ದ ಕೊನೆ ಗಿಡದ ಬುಡದಲ್ಲಿ ಬಿಳಿ ಹತ್ತಿಯ ಬಟ್ಟೆಯಂತೆ ಅರಳಿಕೊಂಡಿದ್ದ ಬಲೆ ಕಾಣಿಸಿತು. ಅದರ ಮಧ್ಯೆ ಒಂದು ದೊಡ್ಡದಾದ ರಂಧ್ರವಿದ್ದು ರಂಧ್ರದೊಳಗೆ ಕಪ್ಪಗೆ ಏನು ಅವಿತು ಕುಳಿತಂತೆ ಭಾಸವಾಯಿತು. ಸ್ವಲ್ಪ ಸಮಯ ಅಲ್ಲೇ ಕುಳಿತು ವೀಕ್ಷಿಸುತ್ತಿದ್ದೆ ತನ್ನ ಕೈಯಿಂದ ಹಗುರವಾದ ಸ್ಪಂಜಿನಂತ ಬಲೆಯನ್ನು ಸ್ಪರ್ಶಿಸಿದ್ದೇ ತಡ ಒಳಗಿಂದ ಉದ್ದನೆಯ ಜೇಡವೊಂದು ರಂಧ್ರದ ಮೂಲಕ ಹೊರಗೆ ಬಂದು ಇಣುಕಿ ನೋಡಿ ಯಾವುದೇ ಮಿಕ ಬಿದ್ದಿಲ್ಲವೆಂದು ನಿರಾಶೆಯಿಂದ ಕ್ಷಣಾರ್ಧದಲ್ಲಿ ಒಳಹೊಕ್ಕಿತು.

ನನಗೆ ಕುತೂಹಲ ಹೆಚ್ಚಾಗಿ ನನ್ನ ಕಾಲ ಮೇಲೆ ಕುಳಿತು ರಕ್ತವನ್ನು ಇರಲು ಹವಣಿಸುತ್ತಿದ್ದ ಸೊಳ್ಳೆಯನ್ನು ಬಡಿದು ಕೈಯಿಂದ ಸತ್ತ ಸೊಳ್ಳೆಯನ್ನು ಎತ್ತಿ ಆ ಸ್ಪಂಜಿನಂತ ಬಲೆಯ ಮೇಲೆ ಹಾಕಿದೆ. ಮತ್ತೆ ಸ್ಪರ್ಶವಾದ ಕ್ಷಣಮಾತ್ರದಲ್ಲಿ ಒಳಗೆ ಅವಿತು ಕುಳಿತ ಜೇಡವು ಹೊರಬಂದು ಸತ್ತ ಸೊಳ್ಳೆಯನ್ನು ನೋಡಿ ತನಗೆ ಬೇಡವಾದ ಆಹಾರ ಎಂಬಂತೆ ನಿರಾಕರಿಸಿ ಮತ್ತೆ ಒಳಹೊಕ್ಕಿ ಜೀವಂತ ಪ್ರಿಯವಾದ ಭೇಟಿಗಾಗಿ ಕಾಯುತ್ತಾ ಕುಳಿತಿತು.

ಎಲ್ಲ ಜಾತಿಯ ಜೇಡಗಳು ಒಂದೇ ರೀತಿಯ ಬಲೆಯನ್ನು ನೇಯುವುದಿಲ್ಲ. ವಿಭಿನ್ನ ರೀತಿಯಲ್ಲಿ ತನ್ನ ಆಹಾರದ ಜೀವಿಗಳನ್ನು ಬಲಿ ಹಾಕುತ್ತವೆ. ನಾನು ಮೇಲೆ ತಿಳಿಸಿದ ಜೇಡದ ಹೆಸರು Hippasa. ಇದು ನಾನು ಗಮನಿಸಿದಂತೆ ಹಗಲು ಮತ್ತು ರಾತ್ರಿ ಸಮಯದಲ್ಲೂ ಹೆಚ್ಚು ಸಕ್ರಿಯವಾಗಿರುತ್ತದೆ.

ಒಮ್ಮೆ ಮನೆಯ ಮುಂದಿನ ಹೂ ಗಿಡಗಳಿಗೆ ಬರುತ್ತಿದ್ದ ಚಿಟ್ಟೆಗಳನ್ನು ಗಮನಿಸುತ್ತಾ ಅವುಗಳು ಮಕರಂದ ಇರಲು ಹೂ ಮೇಲೆ ಕುಳಿತಾಗ ಫೋಟೋ ತೆಗೆಯಲು ಅವುಗಳ ಹಿಂದೆ ಹಿಂದೆ ಮೊಬೈಲ್ ಹಿಡಿದು ಓಡುತ್ತಿದ್ದೆನು. ಮಾಸಲು ಬಣ್ಣದ ಒಂದು ಚಿಟ್ಟೆಯು ಚೆಂಡು ಹೂವಿನ ಆಕರ್ಷಣೆಗೆ ಒಳಗಾಗಿ ‘ಯಾರ ಹಂಗಿಲ್ಲ ನನ್ನ ಹಾರಾಟಕ್ಕೆ’ ಎಂಬಂತೆ ಹಳದಿ ಬಣ್ಣದ ಚೆಂಡು ಹೂವಿನ ಮೇಲೆ ಹೋಗಿ ಕುಳಿತುಕೊಂಡಿತು. ಇದರ ಹಿಂದೆ ಮೊಬೈಲ್ನ ಕ್ಯಾಮೆರಾ ಆನ್ ಮಾಡಿಕೊಂಡು ಫೋಟೋ ಕ್ಲಿಕ್ಕಿಸಲು ಪ್ರಾರಂಭಿಸಿದೆನು.

ಚಿಟ್ಟೆ, ಹತ್ತಿರದಲ್ಲೇ ಇದ್ದ ಮೊಬೈಲ್ಗೂ ಹೆದರದೆ ಸುಮ್ಮನೆ ಕುಳಿತು ಯಾವುದೇ ಚಲನವಲವಿಲ್ಲದೆ ಸ್ತಬ್ಧವಾಯಿತು. ಅಯ್ಯೋ ಇದಕ್ಯಾವ ಗರ ಬಡಿಯಿತೆಂದು ಹೂವಿಗೆ ಇನ್ನೂ ಸ್ವಲ್ಪ ಸನಿಹವಾದೆ. ಆದರೆ ಅಲ್ಲಿ ಒಂದು ಅಚ್ಚರಿಯೇ ಕಾದಿತ್ತು. ಹೂವಿನೊಳಗೆ ಅವಿತು‌ ಬೇಟೆಗಾಗಿ ಕಾಯುತ್ತಿದ್ದ ಜೇಡವೊಂದು ಚಿಟ್ಟೆಯ ತಲೆಯನ್ನೇ ಬಿಗಿಯಾಗಿ ಉಸಿರು ಕಟ್ಟುವಂತೆ ಹಿಡಿದು, ತನ್ನಲ್ಲಿದ್ದ ವಿಷವನ್ನು ಚಿಟ್ಟೆಯ ದೇಹದೊಳಗೆ ಸೇರಿಸಿತ್ತು ! ಅಷ್ಟು ದೊಡ್ಡ ಚಿಟ್ಟೆಯು ಜೇಡದ ಸುಳಿವನ್ನೇ ಅರಿಯದೆ ಮಿಕವಾಗಿ ಹೋಯಿತು.

 ಈ ಜೇಡವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಹೆಸರು ಏಡಿಜೇಡ, ವೈಜ್ಞಾನಿಕ ಹೆಸರು Thomisus. ಈ ಜೇಡಗಳು ಹಗಲಿನಲ್ಲಿ ಸಕ್ರಿಯರಾಗಿದ್ದು, ಹೂವಿಗೆ ಬರುವ ಕೀಟಗಳು ಮತ್ತು ಪರಾಗಸ್ಪರ್ಶ ಮಾಡುವ ಜೀವಿಗಳೇ ಈ ಜೇಡಗಳ ಮುಖ್ಯವಾದ ಆಹಾರ.

ಪರಿಸರ ಕಾರ್ಯಕ್ರಮದಲ್ಲಿ  ಜೇಡಗಳ ಕುರಿತು ಪ್ರಕಟಿಸಿದ್ದ “ಹಿತ್ತಲ ಜೇಡಗಳು”  ಮತ್ತೆ ಅದನ್ನು ಓದಲು ತೆಗೆದುಕೊಂಡೆ.   ಬಹುತೇಕ ಚಿತ್ರಗಳನ್ನು ಒಳಗೊಂಡಿದ್ದ ಪುಸ್ತಕದ ಪುಟಗಳನ್ನು ಸರಸರ ತಿರುವಿ ಹಾಕಲು ಪ್ರಾರಂಭಿಸಿದೆ. ಇದರಿಂದ ಕೆಲಮಟ್ಟಿಗೆ ಮಾಹಿತಿಗಳು ಲಭ್ಯವಾದವು . ಸಕಲ ಜೀವರಾಶಿಗಳ ನಡುವೆ ಜೇಡಗಳು ಸಹ ಬದುಕಲು ವಿಶಿಷ್ಟ ಶಕ್ತಿಗಳನ್ನು ಪ್ರಕೃತಿಯು ನೀಡಿದೆ.

 ಜೇಡಗಳು ಹೊಟ್ಟೆಯಿಂದ ರೇಷ್ಮೆಯಂತ ದಾರವನ್ನು ಸ್ರವಿಸುವ ಮೂಲಕ ಬಲೆ ನಿರ್ಮಾಣಕ್ಕೆ ಶ್ರಮಿಸುತ್ತವೆ. ಹೊಟ್ಟೆಯ ಭಾಗದ ಹಿಂದಿನ ತುದಿಯಿಂದ ಜೇಡವು ತನ್ನ ಆರು ಎಳೆಯನ್ನು ಬಲೆಯನ್ನು ನೇಯುತ್ತದೆ‌. ಪ್ರತಿದಿನವೂ ಜೇಡಗಳು ತನ್ನ ತೂಕದ ಮೂರು ಪಟ್ಟು ಆಹಾರ ತಿಂದು ಹೆಚ್ಚುವರಿಯಾಗಿ ಬಲೆಯಲ್ಲಿ ಇಟ್ಟುಕೊಳ್ಳುತ್ತವೆ. ಜಗತ್ತಿನಲ್ಲಿ ಸುಮಾರು 113 ಜೇಡ ಕುಟುಂಬಗಳಲ್ಲಿ 45,700 ಜೇಡ ಪ್ರಭೇದಗಳನ್ನು ಪತ್ತೆಹಚ್ಚಲಾಗಿದೆ.

ಜೇಡಗಳು ಸಂದಿಪದಿ ವಂಶದ (Arthropoda) ನೆಲವಾಸಿ ವರ್ಗದ (Arachnida) ನೇಕಾರ ಗಣದ (Araneae) ಸದಸ್ಯ. ನಮ್ಮ ಪ್ರದೇಶದಲ್ಲಿ ದಸ್ಕತ್ ಜೇಡ, ಏಡಿಜೇಡ, ಡೇರೆಜೇಡ, ಮುಳ್ಳುಜೇಡ, ಚುಕ್ಕೆಜೇಡ, ತೋಳಜೇಡ, ಪಟ್ಟಿ-ಲಿಂಕ್ಸ್ ಜೇಡ, ಹಸಿರು-ಲಿಂಕ್ಸ್ ಜೇಡ, ಚಾವಣಿ ಜೇಡ, ಹಾರುವ ಜೇಡ, ಬೇಟೆಗಾರ ಜೇಡಗಳನ್ನು ನೋಡಿದ್ದೇನೆ. ಜೇಡಗಳು ಎಂಟು ಕಾಲುಗಳಿಂದ ಕೂಡಿರುತ್ತವೆ. ಬಹುತೇಕ ಜೇಡುಗಳಿಗೆ ಎಂಟು ಕಣ್ಣುಗಳಿದ್ದು, ಆರು, ನಾಲ್ಕು, ಎರಡು ಮತ್ತು ಕಣ್ಣೇ ಇಲ್ಲದ ಜೇಡಗಳೂ ಸಹಇವೆ. ಕೀಟ ಪ್ರಪಂಚದಲ್ಲಿ ಕೀಟಗಳಿಗೆ ದೇಹವು ಮೂರು ಭಾಗಗಳಾಗಿ ವಿಭಜನೆಯಾಗಿದ್ದರೆ ಜೇಡಗಳಲ್ಲಿ ಎರಡೇ ಭಾಗಗಳು ಮಾತ್ರ ಇರುತ್ತವೆ. ತಲೆ ಮತ್ತು ಎದೆ ಜೊತೆ ಸೇರಿದ ಜೇಡ ದೇಹದ ಮುಂಭಾಗಕ್ಕೆ ಸೆಫಲೋಥೋರಾಕ್ಸ್ ಎಂದು ಹೆಸರಿದೆ. ಇವುಗಳಿಗೆ ಮೂಳೆಗಳು ಮತ್ತು ಆಂತರಿಕ ಅಸ್ತಿಪಂಜರ ಇರುವುದಿಲ್ಲ. ಜೇಡುಗಳು ಪರ ಭಕ್ಷಕಗಳಾಗಿದ್ದು ವೈವಿಧ್ಯಮಯ ಜೀವಿಗಳನ್ನು ತಿನ್ನುತ್ತವೆ‌.

ಒಂದು ಅಂದಾಜಿನ ಪ್ರಕಾರ ಗಿಡ-ಮರಗಳಿಂದ ಕೂಡಿರುವ ಒಂದು ಎಕರೆ ಪ್ರದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜೇಡಗಳಿರುತ್ತವೆ. ವಿಶ್ವದಲ್ಲಿನ ಜೇಡಗಳು 400 ರಿಂದ 800 ಮಿಲಿಯನ್ನಷ್ಟು ಪ್ರಮಾಣದ ಕೀಟಗಳನ್ನು ಕೊಂದು ತಿನ್ನುತ್ತವೆ. ಒಂದೇ ವರ್ಷಕ್ಕೆ ಇಷ್ಟೊಂದು ಬೃಹತ್ ಗಾತ್ರದ ಕೀಟಗಳನ್ನು ನಿಯಂತ್ರಿಸಲು ಮಾನವರು ಅದೆಷ್ಟು  ಲೀಟರ್ ಕೀಟನಾಶಗಳನ್ನು ಸುರಿಯುತ್ತಿದ್ದರು ಎಂಬುದು  ಊಹಿಸಲೂ ಅಸಾಧ್ಯ. ಎಲ್ಲ ಪ್ರಭೇದದ ಜೇಡಗಳು ಒಂದೇ ರೀತಿಯ ಜೀವಿತಾವಧಿಯನ್ನು ಹೊಂದಿಲ್ಲವಾಗಿರುತ್ತವೆ. ಪ್ರಭೇದಗಳಿಗೆ ಅನುಗುಣವಾಗಿ ಕೆಲವು ತಿಂಗಳುಗಳಿಂದ ಗರಿಷ್ಠ ಆರು ವರ್ಷಗಳವರೆಗೆ ಜೀವಿತವಾಧಿ ಇರುತ್ತದೆ.

ಬಾಯಿಯ ಮುಂದೆ ಜೋಡಿಯಾದ ಒಂದು ಜೊತೆ ಕೋರೆ ಹಲ್ಲುಗಳಿಂದ ಕೂಡಿರುತ್ತವೆ. ಕೋರೆ ಹಲ್ಲುಗಳು ಬೇಟೆಗೆ ಬಲಿಯಾಗುವ ಜೀವಿಗಳ ದೇಹಕ್ಕೆ ವಿಷವನ್ನು ಚುಚ್ಚುವುದಕ್ಕೆ ಹೈಪೋಡರ್ಮಿಕ್ ಸೂಜಿಗಳಂತೆ ಇರುತ್ತವೆ.

ಹೆಚ್ಚಿನ ಜೇಡಗಳು ಮನುಷ್ಯರಿಗೆ ಹಾನಿಕಾರಕವಲ್ಲ ಮತ್ತು ಅವು ಆತ್ಮರಕ್ಷಣೆಗಾಗಿ ಮಾತ್ರ ಕಚ್ಚುತ್ತವೆ. ಅವುಗಳಲ್ಲಿ ಕೆಲವು ಸೊಳ್ಳೆ ಕಡಿತ ಅಥವಾ ಜೇನುನೊಣ ಕಡಿತಕ್ಕಿಂತ ಸ್ವಲ್ಪ ಹೇಚ್ಚೇ ಪರಿಣಾಮಗಳನ್ನು ಉಂಟುಮಾಡುತ್ತವೆ. ಮತ್ತು ಬೆರಳೆಣಿಕೆಯಷ್ಟು ಪ್ರಭೇದಗಳು ಮಾತ್ರ ಮನುಷ್ಯರಿಗೆ ಅಪಾಯಕಾರಿ. ಅಮೆರಿಕದಲ್ಲಿ ಕಂಡುಬರುವ ಕಪ್ಪು ವಿಧವೆ ಜೇಡ, ಆಸ್ಟ್ರೇಲಿಯಾದಲ್ಲಿ ಕಂಡುಬರುವ ರೆಡ್‌ಬ್ಯಾಕ್ ಜೇಡ, ಉತ್ತರ ಅಮೆರಿಕಾದಲ್ಲಿ ಕಂಡುಬರುವ ಬ್ರೌನ್ ರೆಕ್ಲೂಸ್ ಜೇಡ, ಆಸ್ಟ್ರೇಲಿಯಾದ ಫನಲ್-ವೆಬ್ ಜೇಡ ಮತ್ತು ದಕ್ಷಿಣ ಅಮೇರಿಕನ್ ವಾಂಡರಿಂಗ್ ಜೇಡಗಳು ಮಾತ್ರ ಅಪಾಯಕಾರಿ ಕಡಿತವನ್ನು ಉಂಟುಮಾಡುತ್ತವೆ.

ವಿಭಿನ್ನ ಜೇಡಗಳು ವಿಭಿನ್ನ ಬೇಟೆಯ ತಂತ್ರಗಳನ್ನು ಬಳಸುತ್ತವೆ. ಕೆಲವು ಪ್ರಭೇದಗಳು ಹಾರುವ ಕೀಟಗಳನ್ನು ಬಲೆಗೆ ಬೀಳಿಸಲು ಸಂಕೀರ್ಣವಾದ ಜಾಲಗಳನ್ನು ನಿರ್ಮಿಸುತ್ತವೆ. ತೋಳ ಜೇಡಗಳು ನೆಲದ ಮೇಲೆ ತಮ್ಮ ಬೇಟೆಯನ್ನು ಹುಡುಕುತ್ತವೆ. ಜಿಗಿಯುವ ಜೇಡಗಳು ಬೆಕ್ಕುಗಳಂತೆ ಬೇಟೆಯ ಜೀವಿಗಳ ಮೇಲೆ ಜಿಗಿಯುತ್ತವೆ. ಏಡಿ ಜೇಡಗಳು ಹೂಗಳಿಗೆ ಆಕರ್ಷಿತವಾಗಿ ಬರುವ ಕೀಟಗಳನ್ನು ಹಿಡಿಯಲು ಹೂವುಗಳ ಒಳಗೆ ಅಡಗಿಕೊಳ್ಳುತ್ತವೆ. ಮೀನುಗಾರಿಕೆ ಜೇಡಗಳು ನೀರಿನ ಸಮೀಪ ಧಾವಿಸಿ ಸಣ್ಣ ಮೀನು ಮತ್ತು ಗೊದಮೊಟ್ಟೆಗಳನ್ನು ಹಿಡಿಯುತ್ತವೆ. ಜೇಡಗಳು ದ್ರವ ಆಹಾರವನ್ನು ಮಾತ್ರ ಸೇವಿಸಬಹುದು. ಕೆಲವು ಜೇಡಗಳು ತಮ್ಮ ಮಧ್ಯದ ಕರುಳಿನಿಂದ ಜೀರ್ಣಕಾರಿ ಕಿಣ್ವಗಳನ್ನು ಬೇಟೆಗಾಗಿ ಪಂಪ್ ಮಾಡುತ್ತವೆ ಮತ್ತು ನಂತರ ಬಲಿಯಾದ ಕೀಟಗಳ ದ್ರವ್ಯಾಂಶವನ್ನು ಹೀರುತ್ತವೆ. ಬಲಿಯಾದ ಕೀಟದ ಖಾಲಿ ಅಸ್ಥಿಪಂಜರವನ್ನು ಮಾತ್ರ ಹೊರಗಡೆ ಬಿಡುತ್ತವೆ. ಇತರ ಜೇಡಗಳು ಚೆಲಿಸೆರಾವನ್ನು ಬಳಸಿಕೊಂಡು ಬೇಟೆಯಾದ ಕೀಟವನ್ನು ಜೀರ್ಣಕಾರಿ ಕಿಣ್ವಗಳೊಂದಿಗೆ ಬೆರೆಸುವಾಗ ಪುಡಿಮಾಡಿ ನಂತರ ದ್ರವೀಕೃತ ಅಂಶಗಳನ್ನು ಹೀರುತ್ತವೆ.

ಬಘೀರಾ ಕಿಪ್ಲಿಂಗಿ ಜೇಡ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರವನ್ನು ಭಕ್ಷಿಸುವ ಏಕೈಕ ಜೇಡ. ಇದು ಕೀಟಗಳ ಬದಲಿಗೆ ರಸಭರಿತವಾದ ಅಕೇಶಿಯಾ ಎಲೆಗಳ ತುದಿಯಲ್ಲಿರುವ ವಿಶೇಷ ಪ್ರೋಟೀನ್ ಮತ್ತು ಕೊಬ್ಬಿನಂಶವಿರುವ ನಬ್‌ಗಳನ್ನು ತಿನ್ನುತ್ತದೆ.

ಹೆಚ್ಚಿನ ಜಾತಿಗಳಲ್ಲಿ ಗಂಡು ಜೇಡಗಳು ಸಾಮಾನ್ಯವಾಗಿ ಹೆಣ್ಣು ಜೇಡಗಳಿಗಿಂತ ಚಿಕ್ಕದಾಗಿರುತ್ತವೆ. ಗಂಡು ಜೇಡವು ನಾನು ಮತ್ತು ನೀನು ಒಂದೇ ಜಾತಿಯ ಜೇಡ ಎಂದು ಹೆಣ್ಣಿಗೆ ಸಂಕೇತಿಸಬೇಕು. ಗಂಡು ಜೇಡವು ನೃತ್ಯ, ಸ್ಟ್ರಮ್ಮಿಂಗ್, ಆಹಾರವನ್ನು ಉಡುಗೊರೆಯಾಗಿ ನೀಡುವಂತಹ ವಿಶಿಷ್ಟವಾದ ಪ್ರಣಯದ ಆಚರಣೆಗಳ ಮಾಡುವ ಮೂಲಕ ತನ್ನ ಸಂಯೋಗದ ಉದ್ದೇಶವನ್ನು ಸೂಚಿಸುತ್ತದೆ. ಹೆಣ್ಣು ಜೇಡವು ಗಂಡಿನ ಉದ್ದೇಶವನ್ನು ಗುರುತಿಸಿದ ನಂತರ, ಇದು ಗಂಡಿಗೆ ತಾನು ಗ್ರಹಣಶೀಲಳು ಎಂದು ಸಂಕೇತಿಸುವ ಮೂಲಕ ತನ್ನನ್ನು ತಾನು ಸಂಯೋಗಕ್ಕೆ ಒಳಪಡಿಸಿಕೊಳ್ಳುತ್ತದೆ. ಆಗ ಮಾತ್ರ ಗಂಡು ಹೆಣ್ಣನ್ನು ಸಂಯೋಗಕ್ಕಾಗಿ ಸಂಪರ್ಕಿಸಬೇಕು. ಆದಾಗ್ಯೂ, ಹತಾಶೆಗೆ ಒಳಗಾದ ಕೆಲವು ಗಂಡು ಜೇಡಗಳು ಒಪ್ಪಿಗೆಯಿಲ್ಲದ ಹೆಣ್ಣಿನೊಂದಿಗೆ ಸಂಯೋಗ ಮಾಡಲು ಪ್ರಯತ್ನಿಸುತ್ತವೆ. ಅದು ಸಾಧ್ಯವಾಗದೆ ಹೆಣ್ಣಿಗೇ ಗಂಡು ಜೇಡ ಆಹಾರವಾಗುತ್ತದೆ.

ಬಹುತೇಕ ಜೇಡಗಳು ಫಲವತ್ತಾದ ಮೊಟ್ಟೆಗಳನ್ನು ನೂಲಿನಿಂದ ಸುತ್ತಿಟ್ಟಿರುತ್ತವೆ. ಕೆಲವು ಪ್ರಭೇದದ ಜೇಡಗಳು ತನ್ನ ಮೊಟ್ಟೆಗಳನ್ನು ತಾವೇ ರಕ್ಷಿಸಿಕೊಳ್ಳುವುದಿಲ್ಲ. ಇನ್ನು ಕೆಲವು ಪ್ರಭೇದಗಳು  ಮರಿಗಳು ಹೊರ ಬರುವವರೆಗೂ ಅವುಗಳ ಜೊತೆಯೇ ಇರುತ್ತವೆ. ಅನೇಕ ಜಾತಿಯ ತೋಳ ಜೇಡಗಳು ಮೊಟ್ಟೆಯೊಡೆದು ಅವು ತಮ್ಮನ್ನು ತಾವು ನೋಡಿಕೊಳ್ಳುವಷ್ಟು ಶಕ್ತರಾಗುವವರೆಗೂ ಮರಿಗಳನ್ನು ತಮ್ಮ ಬೆನ್ನಿನ ಮೇಲೆ ಹೊತ್ತುಕೊಂಡು ಹೋಗುತ್ತವೆ.

ಆಧುನಿಕ ಜೀವನಶೈಲಿಗಳಿಂದ ಮತ್ತು ಆಧುನಿಕ ಕೃಷಿಯಿಂದ ಎಷ್ಟೋ ಪರೋಪಕಾರಿ ಕೀಟಗಳು ನಾಶವಾಗುವ ಪಥದಲ್ಲಿವೆ. ಅರಣ್ಯ ನಾಶ ಮತ್ತು ಕೀಟನಾಶಕಗಳ ಬಳಕೆಯಿಂದ ಪ್ರತಿಕ್ಷಣ ಲಕ್ಷಾಂತರ ಜೇಡಗಳನ್ನು ಕಳೆದುಕೊಳ್ಳುತ್ತಿದ್ದೇವೆ. ತನ್ನ ಆಹಾರ ಬೇಟೆಗಾಗಿ ಬಲೆಯನ್ನು ನೇಯುವ ಜೇಡಗಳೇ ಇಂದು ಮಾನವ ಕೇಂದ್ರಿತ ಅಭಿವೃದ್ಧಿಯ ಬಲೆಗೆ ಬಲಿಪಶುಗಳಾಗುತ್ತಿವೆ. ನಮ್ಮ ಸುತ್ತಮುತ್ತಲಿನ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಮೂಲಕ ಸಕಲ ಜೀವರಾಶಿಗಳೊಂದಿಗೆ ಕೂಡಿ ಬಾಳುವುದನ್ನು ಕಲಿಯಬೇಕಿದೆ ಅಲ್ಲವೇ!

LEAVE A REPLY

Please enter your comment!
Please enter your name here