ಇಷ್ಟು ನೀರು ಪೂರೈಕೆಗೆ ಎಷ್ಟು ಪ್ರಮಾಣದ ಡೀಸೆಲ್ ಬೇಕಿತ್ತು ?

0
ಜೋಗಿಬೈಲು ಗ್ರಾಮದಲ್ಲಿ ಮಳೆಯಾಗುತ್ತಿರುವ ಸಂದರ್ಭದ ಚಿತ್ರ
ಲೇಖಕರು: ಗುರುಮೂರ್ತಿ ಜೋಗಿಬೈಲ್, ಕೃಷಿಕರು

ಇವತ್ತು (ಮಾರ್ಚ್ 26, 2025) ಶೃಂಗೇರಿ ಸನಿಹದ ನಮ್ಮೂರು ಜೋಗಿಬೈಲು ಗ್ರಾಮದಲ್ಲಿ 2 ಸೆ.ಮೀ.  ಪ್ರಮಾಣದಒಳ್ಳೆಯ ಮಳೆಯಾಯ್ತು. ಹಿಂದಿನ ವಾರ ಎರಡು ದಿನ ಮತ್ತು ನಿನ್ನೆ ಮಳೆ ಬಂದಿತ್ತಾದರೂ ಅದು ಒಟ್ಟು 1.5 ಸೆ ಮೀ ಆಗಿತ್ತು. ಅಂದರೆ ಒಟ್ಟು 3.5 ಸೆ. ಮೀ. ಮಳೆ ಬಿದ್ದಂತಾಯ್ತು.

ನಮ್ಮದು 2 ಹೆಕ್ಟೇರ್ ತೋಟ. ತೋಟಕ್ಕೆ ಎಷ್ಟು ನೀರು ಸುರಿಯಿತು? 1 ಮಿ ಮೀ ಮಳೆ ಅಂದರೆ 1 ಚದರ ಮೀಟರ್ ನಲ್ಲಿ 1ಲೀ ನೀರು ಸುರಿಯುತ್ತೆ. 35 ಮಿ. ಮೀ. ಅಂದರೆ 1 ಚದರ ಮೀಟರ್ ಜಾಗದಲ್ಲಿ 35 ಲೀಟರ್ ನೀರು ಸುರಿಯುತ್ತೆ.

1 ಹೆಕ್ಟೇರ್ ಅಂದರೆ 100*100=10000 ಚದರ ಮೀಟರ್

1 ಹೆಕ್ಟೇರ್ ಜಾಗದಲ್ಲಿ ಸುರಿದ ನೀರು 10000* 35= 350000 ( ಮೂರು ಲಕ್ಷ ಐವತ್ತು ಸಾವಿರ) ಲೀ ನೀರು.

2 ಹೆಕ್ಟೇರ್ ಜಾಗಕ್ಕೆ ಸುರಿದ ನೀರು 7 ಲಕ್ಷ ಲೀಟರ್.

ನಮ್ಮದು ಅಡಿಕೆ, ಕಾಫಿ ಮತ್ತು ಕಾಳು ಮೆಣಸು ಕೃಷಿ . ಬೇಸಿಗೆಯಲ್ಲಿ ತೋಟಕ್ಕೆ ಸ್ಪಿಂಕ್ಲರ್ ಮೂಲಕ ನೀರುಣಿಸುತ್ತೇವೆ. ಡೀಸೆಲ್‌ ಎಂಜಿನ್ ಪಂಪ್ ಮೂಲಕ ಇಷ್ಟೇ ಪ್ರಮಾಣದ ನೀರು ಕೊಡಲು ಎಷ್ಟು ಡೀಸೆಲ್‌ ಬೇಕಾಗುತ್ತೆ?

ಪಂಪುಗಳು ನೀರೆತ್ತುವ ಪ್ರಮಾಣ ನೀರಿನ ಹೆಡ್ ಅಂದರೆ ನೀರನ್ನು ಎಷ್ಟು ಮೀಟರ್ ಎತ್ತರ ಎತ್ತಬೇಕಾಗಿದೆ ಎಂಬುದರ ಮೇಲೆ ನಿರ್ದಾರವಾಗುತ್ತೆ. ನಮ್ಮದು ಸರಾಸರಿ 20 ಮೀ ಹೆಡ್. ನಮ್ಮ 5 hp ಡೀಸೆಲ್‌ ಎಂಜಿನ್ ಪಂಪ್ ನ ನೀರೆತ್ತುವ ಸಾಮರ್ತ್ಯ 4.5 ಲೀ/ಸೆಕೆಂಡ್ .ಅಂದರೆ ಗಂಟೆಗೆ 4.5 *60 * 60 = 16200 ಲೀಟರ್.

ಮೂರು ಗಂಟೆಗಳಲ್ಲಿ 16200* 3= 48600 ಲೀ. ಅಂದಾಜು 50000 ಲೀ ಅಂತ ಇಟ್ಟುಕೊಳ್ಳೋಣ. 1 ಹೆಕ್ಟೇರ್ ಪ್ರದೇಶಕ್ಕೆ ನೀರು ಹೊಡೆಯಲು ಇಂತಹ 7 ಶಿಫ್ಟ್ ಹೊಡೆಯಬೇಕಾಗುತ್ತೆ. ಅಂದರೆ 50000* 7= 350000 ಲೀಟರ್‌‌ ಅಂದರೆ 3.5 ಸೆ. ಮೀ ಮಳೆ ಬಂದಷ್ಟು. ಬೇಕಾಗುವ ಡೀಸೆಲ್‌ 7* 4 ಲೀ = 28 ಲೀ ಎರಡು ಹೆಕ್ಟೇರ್ ಗೆ 56 ಲೀಟರ್‌‌ ಡೀಸೆಲ್‌ ಬೇಕಾಗುತ್ತದೆ.

ಮಳೆ ಬಂದಾಗ ನಮ್ಮ ತೋಟಕ್ಕೆ ಸುರಿದ ನೀರೆಷ್ಟು ಅಂತ ತಿಳಿದುಕೊಳ್ಳಲು ಎಲ್ಲಾ ರೈತರ ಮನೆಯಂಗಳದಲ್ಲಿ ಮಳೆ ಅಳೆಯುವ ಉಪಕರಣ ಇಟ್ಟುಕೊಳ್ಳುವುದು ಒಳ್ಳೆಯದು. ಹಾಗೆಯೇ ತೋಟಕ್ಕೆ ನೀರು ಕೊಡುವಾಗ ನಮ್ಮ ಪಂಪಿನ ನೀರಿನ ಡೆಲಿವರಿ ಎಷ್ಟು? ತೋಟದ ನೀರಿನ ಅಗತ್ಯವೆಷ್ಟು? ಅದಕ್ಕಾಗಿ ಎಷ್ಟು ಹೊತ್ತು ಪಂಪ್ ಹಾಕಬೇಕು? ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.

LEAVE A REPLY

Please enter your comment!
Please enter your name here